ಅಂಗ ರಾಜ್ಯ

(ಅಂಗರು ಇಂದ ಪುನರ್ನಿರ್ದೇಶಿತ)

ಅಂಗ ರಾಜ್ಯ ಕ್ರಿ.ಪೂ. ೬ನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದ ಒಂದು ರಾಜ್ಯವಾಗಿದ್ದು, ಸ್ಥೂಲವಾಗಿ ಈಗಿನ ಬಿಹಾರ ರಾಜ್ಯದಲ್ಲಿನ ಭಾಗಲಪುರ, ಮಾಂಘೀರ್ ಜಿಲ್ಲೆಗಳನ್ನೊಳಗೊಂಡಿತ್ತು. ಅದೇ ಶತಮಾನದಲ್ಲಿ ಮಗಧ ರಾಜ್ಯ ಇದನ್ನು ವಶಪಡಿಸಿಕೊಂಡಿತು.

The "16 Great Nations"; Anga is the easternmost, south of Vrijji and east of Magadha
Map of Anga[]

ಇಲ್ಲಿನ ನಿವಾಸಿಗಳನ್ನು ಅಂಗರು ಎಂದು ಕರೆಯುತ್ತಾರೆ. ಅಂಗರ ಉಲ್ಲೇಖ ಮೊಟ್ಟಮೊದಲಿಗೆ ಅಥರ್ವವೇದದಲ್ಲಿ ಸಿಗುತ್ತದೆ. ಆ ಪ್ರಕಾರ ಇವರು ಆರ್ಯಜನಾಂಗಕ್ಕೆ ಸೇರದೆ, ಅಲ್ಲಿಯ ಮೂಲನಿವಾಸಿಗಳಾಗಿರಬೇಕೆಂದು ಊಹಿಸಲಾಗಿದೆ. ಸಂತಾಲ ಜನರಲ್ಲಿ ಪ್ರಚುರವಿದ್ದ ಐತಿಹ್ಯಗಳಿಂದಲೂ ಇದು ಸಮರ್ಥನೆಗೊಂಡಿದೆ. ಬೌಧಾಯನ ಧರ್ಮಸೂತ್ರದಲ್ಲಿ ಅಂಗರು ಮಿಶ್ರಜನಾಂಗ (ಸಂಕೀರ್ಣಯೋನಯಃ) ಎಂದು ಹೇಳಿರುವುದಲ್ಲದೆ ಈ ದೇಶಕ್ಕೆ ಹೋಗಿ ಬಂದವರು ಶುದ್ಧಿಗಾಗಿ ಪುನಸ್ತೋಮ ಮತ್ತು ಸರ್ವಪೃಷ್ಠಗಳೆಂಬ ಯಜ್ಞಗಳನ್ನು ಮಾಡಬೇಕೆಂದು ವಿಧಿಸಲಾಗಿದೆ. ಈ ಜನಾಂಗದಲ್ಲಿ ಮೃತದೇಹಗಳನ್ನು ತ್ಯಜಿಸುವ ಮತ್ತು ಹೆಂಡತಿ ಮಕ್ಕಳನ್ನು ಮಾರಿಕೊಳ್ಳುವ ಪದ್ಧತಿ ಪ್ರಚಲಿತವಿತ್ತೆಂದು ಮಹಾಭಾರತದಿಂದ ತಿಳಿದುಬರುತ್ತದೆ. ಕೆಲವರು ಅಂಗ ಜನರನ್ನು ಸಮ್ಮಿಶ್ರ ಮೂಲದ ಜನರ ಜೊತೆಗೆ ಗುಂಪು ಮಾಡಲಾಯಿತೆಂದು ನಿರ್ದೇಶಿಸುತ್ತಾರೆ, ಸಾಮಾನ್ಯವಾಗಿ ನಂತರದ ಶತಮಾನಗಳಲ್ಲಿ.[]

ಪುರಾಣಗಳಲ್ಲಿ, ಕಾವ್ಯಗಳಲ್ಲಿ

ಬದಲಾಯಿಸಿ

ಪರಶಿವನ ಕೋಪಕ್ಕೆ ಅಂಜಿ ಕಾಮ ಓಡಿಹೋಗಿ ಈ ದೇಶದಲ್ಲಿ ದೇಹ (ಅಂಗ)ವನ್ನು ವಿಸರ್ಜಿಸಿದುದರಿಂದ ಈ ದೇಶಕ್ಕೆ ಅಂಗವೆಂಬ ಹೆಸರು ಬಂದಿತೆಂಬ ಕಥೆ ರಾಮಾಯಣದಲ್ಲಿದೆ. ಆದರೆ ಯಯಾತಿಯ ವಂಶಜನಾದ ಬಲಿಗೂ ಮತ್ತು ಅವನ ಪತ್ನಿ ಸುದೇಷ್ಣೆಗೂ ಅಂಗ, ವಂಗ, ಕಳಿಂಗ, ಪುಂಡ್ರ, ಸುಹ್ಮ ಎಂಬ ಐವರು ಮಕ್ಕಳಿದ್ದು ಅವರು ತಮ್ಮ ತಮ್ಮ ಹೆಸರಿನಲ್ಲಿ ರಾಜ್ಯಗಳನ್ನು ಸ್ಥಾಪಿಸಿದರೆಂಬ ಐತಿಹ್ಯ ಮಹಾಭಾರತ ಮತ್ತು ಪುರಾಣಗಳಲ್ಲಿ ದೊರಕುತ್ತದೆ. ರೋಮಪಾದನೆಂಬುವನು ಈ ದೇಶದ ಅರಸನಾಗಿದ್ದನೆಂದು ರಾಮಾಯಣದಲ್ಲಿ ಹೇಳಿದೆ. ಮಹಾಭಾರತದ ಕಾಲಕ್ಕೆ ಇದು ಕೌರವರ ರಾಜ್ಯದಲ್ಲಿ ಸೇರಿದ್ದು, ಕರ್ಣ ಇದರ ಅಧಿಪತಿಯಾಗಿದ್ದ. ಅಂಗುತ್ತರ ನಿಕಾಯದಂತಹ ಬೌದ್ಧ ಪಠ್ಯಗಳಲ್ಲಿ ಹದಿನಾರು ಮಹಾಜನಪದಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ಅಂಗ ರಾಜ್ಯವು ಜೈನ ವ್ಯಾಖ್ಯಾಪ್ರಜ್ಞಪ್ತಿಯ ಪ್ರಾಚೀನ ಜನಪದಗಳ ಪಟ್ಟಿಯಲ್ಲಿ ಸಹ ಪ್ರಸ್ತಾಪಿಸಲ್ಪಟ್ಟಿದೆ.

ಇತಿಹಾಸ

ಬದಲಾಯಿಸಿ

ಪ್ರ.ಶ.ಪು. 6ನೆಯ ಶತಮಾನದಲ್ಲಿ ಅಂಗವು 16 ಮಹಾರಾಷ್ಟ್ರ (ಮಹಾಜನಪದ)ಗಳಲ್ಲಿ ಒಂದಾಗಿದ್ದಿತು. ಮುಂದೆ ಇದರ ನೆರೆಯ ರಾಜ್ಯವಾದ ಮಗಧದೇಶದ ಅರಸು ಬಿಂಬಸಾರ ಇದನ್ನು ಗೆದ್ದ. ಆಮೇಲೆ ಇದು ಮೌರ್ಯಸಾಮ್ರಾಜ್ಯದ ಭಾಗವಾಯಿತು. ಬಾದಾಮಿಯ ಚಳುಕ್ಯರು, ಸೇವುಣರು, ಹೊಯ್ಸಳರು ಮುಂತಾದ ಅರಸರ ಶಾಸನಗಳಲ್ಲಿ ಇವರು ಇತರ ದೇಶಗಳ ಜೊತೆಗೆ ಅಂಗದೇಶವನ್ನು ಜಯಿಸಿದ ಉಲ್ಲೇಖಗಳು ಹೇರಳವಾಗಿ ದೊರೆಯುತ್ತವೆ. ಇದರಿಂದ ಅಂಗವು ಬಹು ಪೂರ್ವಕಾಲದಿಂದ ಮಧ್ಯಯುಗದವರೆಗೂ ಪ್ರಸಿದ್ಧವಾದ ದೇಶವಾಗಿದ್ದಿತು. ಚಂಪಾನಗರ ಇದರ ರಾಜಧಾನಿ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಬಾಹ್ಯ ಸಂಪರ್ಕಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Millard Fuller. "(अंगिका) Language : The Voice of Anga Desh". Angika. Retrieved 2012-08-03.
  2. Encyclopaedia of the Hindu World, Volume 1 ,year-1992 author-Gaṅgā Rām Garg
  NODES
languages 1
os 1