ಹಿಮನದಿ ಒಂದು ಬೃಹತ್ ಗಾತ್ರದ ನಿಧಾನವಾಗಿ ಚಲಿಸುವ ಹಿಮಗಡ್ಡೆಯ ರಾಶಿ. ಹಿಮನದಿಯ ರಚನೆಯು ಪದರ ಪದರವಾಗಿ ಸಂಗ್ರಹವಾಗುವ ಹಿಮಪಾತದ ಸಂಕೋಚನದಿಂದ ಉಂಟಾಗುತ್ತದೆ. ಕ್ರಮೇಣ ಈ ಹಿಮರಾಶಿಯು ಬಿರಿದು ಭೂಮಿಯ ಗುರುತ್ವಾಕರ್ಷಣೆ ಮತ್ತು ಅತಿ ಒತ್ತಡದ ಕಾರಣದಿಂದ ಸರಿದು ನೀರಾಗಿ ಹರಿಯತೊಡಗುತ್ತದೆ. ಹಿಮನದಿಯ ಆಂಗ್ಲ ಹೆಸರಾದ ಗ್ಲೇಸಿಯರ್ ಲ್ಯಾಟಿನ್ ಭಾಷೆಯ ಹಿಮ ಎಂಬರ್ಥ ಕೊಡುವ ಗ್ಲೇಸಿಯಾ ಪದದಿಂದ ಬಂದಿದೆ.

ಹಿಮನದಿ ವಿಶ್ವದಲ್ಲಿ ಸಿಹಿನೀರಿನ ಅತಿ ದೊಡ್ಡ ಆಕರವಾಗಿದೆ. ಮಹಾಸಾಗರಗಳ ನಂತರ ಹಿಮನದಿಗಳು ಜಗತ್ತಿನ ಎರಡನೆಯ ಅತಿ ದೊಡ್ಡ ಜಲಸಮೂಹಗಳಾಗಿವೆ. ಧ್ರುವ ಪ್ರದೇಶಗಳ ಬಹುಪಾಲು ಪ್ರದೇಶವನ್ನು ಹಿಮನದಿಗಳು ಆವರಿಸಿವೆ. ಇದಲ್ಲದೆ ಜಗತ್ತಿನ ಎಲ್ಲಾ ಭೂಖಂಡಗಳ ಉನ್ನತ ಪರ್ವತಪ್ರಾಂತ್ಯಗಳಲ್ಲಿ ಸಹ ಹಿಮನದಿಗಳಿವೆ. ಉಷ್ಣವಲಯದಲ್ಲಿ ಮಾತ್ರ ಹಿಮನದಿಗಳು ಅತ್ಯುನ್ನತ ಪರ್ವತ ಪ್ರದೇಶಗಳಿಗೆ ಸೀಮಿತವಾಗಿವೆ. ಹಿಮನದಿಗಳು ಜಗತ್ತಿನ ವಾತಾವರಣ ಮತ್ತು ಹವಾಮಾನದ ಅತಿ ಸೂಕ್ಷ್ಮ ಪರಿವೀಕ್ಷಕಗಳಾಗಿದ್ದು ಸಾಗರಗಳ ನೀರಿನ ಮಟ್ಟದಲ್ಲಿನ ಏರುಪೇರಿನ ನಿಖರ ಸೂಚಕಗಳು ಸಹ ಆಗಿವೆ. ಇಂದು ಜಾಗತಿಕ ತಾಪಮಾನದಲ್ಲಿ ಉಂಟಾಗಿರುವ ಹೆಚ್ಚಳದಿಂದಾಗಿ ಹಿಮನದಿಗಳು ಒಂದೇಸಮನೆ ಕುಗ್ಗುತ್ತಿವೆ. ಒಂದು ಅಧ್ಯಯನದ ಪ್ರಕಾರ ಇನ್ನು ಕೆಲ ದಶಕಗಳಲ್ಲಿ ಹಿಮಾಲಯದ ಎಲ್ಲಾ ಹಿಮನದಿಗಳು ಮಾಯವಾಗಲಿವೆ. ಭಾರತದ ಹಿಮಾಲಯ ಪರ್ವತಪ್ರದೇಶಗಳಲ್ಲಿ ದೊಡ್ಡ ಸಂಖ್ಯೆಯ ಹಿಮನದಿಗಳಿವೆ. ಗಂಗೋತ್ರಿ ಹಿಮನದಿ, ಸಿಯಾಚೆನ್ ಹಿಮನದಿ, ಪಿಂಡಾರಿ ಹಿಮನದಿ ಇವುಗಳಲ್ಲಿ ಹೆಸರಾದವು.

ಅರ್ಜೆಂಟೀನಾದ ಪೆಟಿರೋ ಮೊರೆನೋ ಹಿಮನದಿಯ ಒಂದು ನೋಟ

ಹಿಮನದಿಯ ವಿಧಗಳು

ಬದಲಾಯಿಸಿ
 
ಕರಾಕೋರಂ ಪರ್ವತಶ್ರೇಣಿಯ ಬಾಲ್ಟೋರೋ ಹಿಮನದಿ
 
ಯುರೋಪ್‌ನ ಅತಿ ದೊಡ್ಡ ಹಿಮನದಿ ಆಲ್ಟೆಷ್‌
 
ಗ್ರೀನ್‌ಲ್ಯಾಂಡ್‌ನ ಹಿಮನದಿಯೊಂದರಿಂದ ಬಿರಿದುಹೋಗುತ್ತಿರುವ ಹಿಮಬಂಡೆಗಳು
 
ಆಸ್ಟ್ರಿಯಾದ ಷಾಲ್ಟೆನ್‌ಕೀಸ್ ಹಿಮನದಿಯ ತಳದ ನೋಟ.

ಹಿಮನದಿಗಳಲ್ಲಿ ಕಣಿವೆಯ ಹಿಮನದಿಗಳು ಮತ್ತು ಭೂಖಂಡದ ಹಿಮದ ಹಾಳೆಗಳೆಂಬ ಎರಡು ಮುಖ್ಯ ವಿಧಗಳಿವೆ. ಕಣಿವೆಯ ಹಿಮನದಿಗಳು ಉನ್ನತ ಪ್ರದೇಶಗಳಲ್ಲಿ ಉಗಮಿಸಿ ಪರ್ವತ ನಡುವಿನ ಕಣಿವೆಗಳ ಮೂಲಕ ಅತಿ ನಿಧಾನವಾಗಿ ಕೆಳಸರಿಯತೊಡಗುತ್ತವೆ. ಇವುಗಳ ಕೆಳಗಿನ ಅಂಚಿನಲ್ಲಿ ಹರಿವು ಸಂಪುರ್ಣವಾಗಿ ನೀರಿನ ರೂಪದಲ್ಲಿರುವುದು. ಭೂಖಂಡಗಳ ಹಿಮನದಿಗಳು ಅತಿ ವಿಶಾಲ ಪ್ರದೇಶವನ್ನು ವ್ಯಾಪಿಸಿರುತ್ತವೆ. ದಕ್ಷಿಣ ಧ್ರುವಪ್ರದೇಶದ ಹಿಮನದಿಗಳು ಈ ಬಗೆಯ ಹಿಮನದಿಯ ಉದಾಹರಣೆಗಳು.

ಹಿಮದ ಹಾಳೆಗಳು ಹಿಮನದಿಗಳಲ್ಲಿ ಅತ್ಯಂತ ದೊಡ್ಡವು. ಇವು ಹಿಮಗಡ್ಡೆಯ ಬೃಹತ್ ಹಾಳೆಗಳಾಗಿದ್ದು ತಮ್ಮಡಿಯ ಭೂಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಿ ಹಾಕುತ್ತವೆ. ಹೀಗಾಗಿ ಅಡಿಯ ಭೂರಚನೆಯು ಇಂತಹ ಹಿಮನದಿಗಳ ರಚನೆ ಯಾ ಚಲನೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇಂದು ಅಂಟಾರ್ಕಟಿಕಾ ಮತ್ತು ಗ್ರೀನ್‌ಲ್ಯಾಂಡ್‌ಗಳಲ್ಲಿ ಮಾತ್ರ ಇಂತಹ ಹಿಮದ ಹಾಳೆಗಳು ಕಾಣಬರುತ್ತವೆ. ಇವು ತಮ್ಮಲ್ಲಿ ಭಾರೀ ಪ್ರಮಾಣದ ಸಿಹಿನೀರನ್ನು ಅಡಗಿಸಿಟ್ಟುಕೊಂಡಿವೆ. ಇವುಗಳಲ್ಲಿನ ಹಿಮದ ಪ್ರಮಾಣವು ಅತಿ ಅಗಾಧವಾಗಿದೆ. ಒಂದು ಅಂದಾಜಿನ ಪ್ರಕಾರ ಗ್ರೀನ್‌ಲ್ಯಾಂಡ್‌ನ ಎಲ್ಲಾ ಹಿಮವು ಕರಗಿಹೋದಲ್ಲಿ ಜಗತ್ತಿನಾದ್ಯಂತ ಸಾಗರದ ನೀರಿನ ಮಟ್ಟವು ೨೦ ಅಡಿಗಳಷ್ಟು ಹೆಚ್ಚುವುದು ಮತ್ತು ಅಂಟಾರ್ಕಟಿಕಾದ ಎಲ್ಲಾ ಹಿಮವು ಕರಗಿಹೋದಲ್ಲಿ ಜಗತ್ತಿನಾದ್ಯಂತ ಸಾಗರದ ನೀರಿನ ಮಟ್ಟವು ೨೧೦ ಅಡಿಗಳಷ್ಟು ಹೆಚ್ಚುವುದು. ಹಿಮದ ಹಾಳೆಗಳ ಅಂಚಿನಲ್ಲಿ ಐಸ್ ಶೆಲ್ಫ್ ಎಂದು ಕರೆಯಲ್ಪಡುವ ತೇಲುವ ದೊಡ್ಡ ಗಾತ್ರದ ಹಿಮದ ರಾಶಿಯಿರುತ್ತದೆ. ಹಿಮದ ಹಾಳೆಗಳ ರಭಸವಾಗಿ ಸರಿಯುವ ಭಾಗವನ್ನು ಹಿಮತೊರೆ ಎಂದು ಕರೆಯಲಾಗುತ್ತದೆ. ಈ ಹಿಮತೊರೆಗಳು ೧೦೦ ಕಿ.ಮೀ.ಗಳಷ್ಟು ಉದ್ದವಾಗಿರುವುದು ಸಹ ಇದೆ. ಇವುಗಳ ಅಗಲವು ಸಾಮಾನ್ಯವಾಗಿ ಕಿರಿದಾಗಿದ್ದು ಹರಿವು ಸಹ ಕಡಿಮೆ ಪ್ರಮಾಣದಲ್ಲಿರುತ್ತದೆ. ಹೆಚ್ಚಿನ ಹಿಮತೊರೆಗಳು ಕೊನೆಯಲ್ಲಿ ಐಸ್ ಶೆಲ್ಫ್‌ಗೆ ಹರಿದು ಸೇರುತ್ತವೆ. ಕೆಲವೊಮ್ಮೆ ಇವು ನೇರ ಸಮುದ್ರಕ್ಕೆ ಹರಿಯುವುದು ಸಹ ಇದೆ. ಭೂಮಿಯ ಉನ್ನತ ಪ್ರದೇಶಗಳಲ್ಲಿರುವ ಹಿಮನದಿಗಳು ಕಣಿವೆಗಳ ಮಾರ್ಗವಾಗಿ ಕೆಳಭಾಗಕ್ಕೆ ಹರಿಯತೊಡಗುತ್ತವೆ. ಇವುಗಳ ಅಗಲ ಕಿರಿದಾದ ಹರಿವಿನ ರಚನೆಯು ನಾಲಗೆ ಅಥವಾ ಸೊಂಡಿಲನ್ನು ಹೋಲುತ್ತದೆ.

ಹಿಮನದಿಗಳ ಉಗಮ

ಬದಲಾಯಿಸಿ

ಭೂಮಿಯ ಯಾವ ಭಾಗದಲ್ಲಿ ಹಿಮ ಮತ್ತು ಮಂಜಿನ ಸಂಗ್ರಹದ ಗತಿಯು ಅವುಗಳ ಕರಗುವಿಕೆಯ ಗತಿಗಿಂತ ಹೆಚ್ಚಾಗಿರುವುದೋ ಅಂತಹ ಸ್ಥಾನದಲ್ಲಿ ಹಿಮನದಿಯ ಉಗಮವಾಗುತ್ತದೆ. ಇಲ್ಲಿ ಹಿಮದ ಪದರದ ದಪ್ಪವು ಹೆಚ್ಚುತ್ತಾ ಹೋಗಿ ಕ್ರಮೇಣ ತನ್ನ ಒತ್ತಡ ಹಾಗೂ ತೂಕ ಮತ್ತು ಕೆಳಗಿನ ನೆಲದ ಇಳಿಜಾರಿನ ಕಾರಣಗಳಿಂದ ಈ ಹಿಮದ ರಾಶಿಯು ನಿಧಾನವಾಗಿ ಕೆಳಸರಿಯತೊಡಗುತ್ತದೆ. ಸಮಶೀತೋಷ್ಣವಲಯದ ಹಿಮನದಿಗಳಲ್ಲಿ ಈ ಹಿಮವು ಪದೇ ಪದೇ ಗಟ್ಟಿಯಾಗುವಿಕೆ ಮತ್ತು ಬಿರಿಯುವಿಕೆಗಳ ಪ್ರಕ್ರಿಯೆಗಳಿಗೆ ಒಳಪಡುವುದರಿಂದಾಗಿ ಕ್ರಮೇಣ ಹಿಮದ ಸಣ್ಣ ಸಣ್ಣ ಕಾಳುಗಳು ರೂಪುಗೊಳ್ಳುತ್ತವೆ. ಇಂತಹ ಕಾಳುಗಳು ಒಗ್ಗೂಡಿ ಹಿಮನದಿಯ ಗಟ್ಟಿ ಹಿಮ ಉಂಟಾಗುವುದು. ಹಿಮನದಿಯ ಹಿಮದ ಬಣ್ಣ ತೆಳು ನೀಲಿಯಾಗಿ ಕಾಣುವುದು.

 
ಬೈರ್ಡ್ ಹಿಮನದಿಯ ಚಿತ್ರಗಳು

.

ಹಿಮನದಿಯ ಭೌತಿಕ ರಚನೆ

ಬದಲಾಯಿಸಿ

ಹಿಮನದಿಯ ಉಗಮಪ್ರದೇಶದಲ್ಲಿ ಹಿಮಪಾತದ ಪ್ರಮಾಣ ಅಧಿಕವಾಗಿದ್ದು ತಳ ಅಥವಾ ಪಾದದ ಸ್ಥಾನದಲ್ಲಿ ಹಿಮದ ಸಂಚಯಕ್ಕಿಂತ ಕರಗುವಿಕೆಯು ಅಧಿಕವಾಗಿರುತ್ತದೆ. ಈ ಕಾರಣದಿಂದ ಇಲ್ಲಿ ಹಿಮ ಕರಗಿ ನೀರಾಗಿ ಹರಿಯತೊಡಗುತ್ತದೆ. ಉಷ್ಣವಲಯ ಮತ್ತು ಸಮಶೀತೋಷ್ಣವಲಯದ ಹಿಮನದಿಗಳ ವರ್ಷಪೂರ್ತಿ ಕರಗುವಿಕೆಯ ಮಟ್ಟದಲ್ಲಿದ್ದರೆ ಧ್ರುವಪ್ರದೇಶದಲ್ಲಿನ ಹಿಮನದಿಗಳ ತಾಪಮಾನ ಸದಾ ಹೆಪ್ಪುಗಟ್ಟುವ ಮಟ್ಟಕ್ಕಿಂತ ಕೆಳಗೆಯೇ ಇರುವುದು. ಸಂಚಯವಾಗಿರುವ ಹಿಮದ ಪ್ರಮಾಣ ಮತ್ತು ಕರಗುವಿಕೆಯ ಪ್ರಮಾಣಗಳ ಮೇರೆಗೆ ವೈಜ್ಞಾನಿಕವಾಗಿ ಹಿಮನದಿಯನ್ನು ಅನೇಕ ವಲಯಗಳಾಗಿ ವಿಭಾಗಿಸಲಾಗಿದೆ. ಎಲ್ಲಿ ಕರಗುವಿಕೆ ಅಧಿಕವಾಗಿದ್ದು ಹಿಮನದಿಯ ಗಟ್ಟಿ ಹಿಮದ ಹಾಸು ಹೊರಕಾಣುವುದೋ ಅಂತಹ ವಲಯವು ಅಬ್ಲೇಷನ್ ವಲಯ ಎಂದೆನಿಸಿಕೊಳ್ಳುವುದು. ಇದು ಸಾಮಾನ್ಯವಾಗಿ ಹಿಮನದಿಯ ತಳಭಾಗದಲ್ಲಿರುತ್ತದೆ. ಎಲ್ಲಿ ಹಿಮದ ಸಂಚಯವು ಸದಾ ನಡೆಯುತ್ತಿರುವುದೋ ಅದು ಸಂಚಯ ವಲಯ ಎನಿಸುವುದು. ಒಣ ಹಿಮವಲಯದಲ್ಲಿ ಹಿಮದ ಕರಗುವಿಕೆ ಎಂದೂ ಉಂಟಾಗದು. ಬೇಸಿಗೆಯ ಸಮಯದಲ್ಲಿ ಸಹ ಈ ವಲಯದ ಹಿಮರಾಶಿ ಕರಗದೆ ಒಣರೂಪದಲ್ಲಿಯೇ ಇರುತ್ತದೆ. ಪರ್ಕೊಲೇಷನ್ ವಲಯದಲ್ಲಿ ಕೊಂಚ ಮಟ್ಟದ ಹಿಮ ಕರಗಿ ಆ ನೀರು ಕೆಳ ಹರಿಯದೆ ಹಿಮದ ರಾಶಿಯ ಬಿರುಕುಗಳಲ್ಲಿ ಸೋರಿಹೋಗಿ ಮತ್ತೆ ಗಟ್ಟಿಯಾಗುತ್ತದೆ. ಆದ್ದರಿಂದ ಇಲ್ಲಿನ ಹಿಮದ ಕರಗುವಿಕೆಯಿಂದ ಹಿಮನದಿಯಲ್ಲಿ ನೀರಿನ ಹರಿವು ಸಾಧ್ಯವಿಲ್ಲ. ಹಿಮನದಿಯ ಸ್ವಾಸ್ಥ್ಯವನ್ನು ಅದರ ಸಂಚಯ ವಲಯದ ವ್ಯಾಪ್ತಿ ಮತ್ತು ಕರಗುವಿಕೆಯ ಪ್ರಮಾಣದ ಮೇಲೆ ನಿರ್ಧರಿಸಲಾಗುತ್ತದೆ. ಒಂದು ಸ್ವಸ್ಥ ಹಿಮನದಿಯಲ್ಲಿ ಬೇಸಿಗೆಯ ಕೊನೆಯಲ್ಲಿ ಅಂದರೆ ಕರಗುವಿಕೆಯ ಋತುವಿನ ಅಂತ್ಯದಲ್ಲಿ ಸಹ ೬೦% ಹಿಮವು ಉಳಿದಿರುತ್ತದೆ ಮತ್ತು ಪಾದದ ಭಾಗದಲ್ಲಿ ನೀರಿನ ಹರಿವು ರಭಸವಾಗಿರುತ್ತದೆ.

ಸರಿಯುವಿಕೆ

ಬದಲಾಯಿಸಿ

ಸೀಳು ವಲಯ

ಬದಲಾಯಿಸಿ
 
ಟಿಟ್ಲಿಸ್ ಹಿಮನದಿಯಲ್ಲಿ ಕಾಣುತ್ತಿರುವ ಸೀಳುಗಳು

ಹಿಮನದಿಗಳು ಸರಿಯುವ ಅಥವಾ ಹರಿಯುವ ಸ್ವಭಾವವನ್ನು ಹೊಂದಿವೆ. ಸಾಮಾನ್ಯವಾಗಿ ಒಟ್ಟಾರೆ ಹಿಮನದಿಯು ಕೆಳಮುಖವಾಗಿ ಚಲಿಸಿದರೂ ಸಹ ಹಿಮನದಿಯ ಬೇರೆ ಬೇರೆ ಭಾಗಗಳ ಸರಿಯುವಿಕೆಯ ವೇಗ ಮತ್ತು ದಿಕ್ಕು ವಿಭಿನ್ನವಾಗಿರುತ್ತದೆ. ಹಿಮನದಿಯ ಸರಿಯುವಿಕೆಯಲ್ಲಿ ಎರಡು ವಿಧ. ಒಂದರಲ್ಲಿ ಹಿಮನದಿಯ ಪದರಗಳು ಮಾತ್ರ ಬೇರೆಯಾಗಿ ಕೆಳಸರಿದರೆ ಇನ್ನೊಂದರಲ್ಲಿ ಇಡೀ ಹಿಮನದಿಯು ಬುಡಮಟ್ಟದಿಂದಲೇ ಸರಿಯುವುದು. ಹಿಮನದಿಯ ಮೇಲಿನ ೫೦ ಮೀಟರ್‌ಗಳಷ್ಟು ದಪ್ಪದ ಹಿಮವು ಕಡೀಮೆ ಒತ್ತಡವಿರುವ ಕಾರಣದಿಂದಾಗಿ ಹೆಚ್ಚು ಗಡುಸಾಗಿರುತ್ತದೆ. ಈ ಭಾಗವು ಸೀಳು ವಲಯ ( ಫ್ರಾಕ್ಚರ್ ವಲಯ) ಎಂದು ಕರೆಯಲ್ಪಡುತ್ತದೆ. ಈ ಭಾಗವು ಸಾಮಾನ್ಯವಾಗಿ ಒಂದೇ ತುಣುಕಾಗಿ ಕೆಳಸರಿಯುತ್ತದೆ. ಇದು ಮಟ್ಟಸವಲ್ಲದ ಅಡಿಪಾಯದ ಮೇಲೆ ಚಲಿಸುವಾಗ ಇದರಲ್ಲಿ ೫೦ ಮೀ. ಗಳಷ್ಟು ಆಳವಾದ ಸೀಳುಗಳು ಉಂಟಾಗುವುದಿದೆ. ಹಿಮನದಿಯ ಅಡಿಯ ಭಾಗವು ಭಾರೀ ಒತ್ತಡದ ಕಾರಣದಿಂದಾಗಿ ಆಕಾರಗೆಟ್ಟು ಪ್ಲಾಸ್ಟಿಕ್‌ನಂತಾಗಿ ಒಂದು ಅತಿ ಮಂದದ್ರವದಂತೆ ಚಲಿಸುವುದು.

ಚಲನೆಯ ವೇಗ

ಬದಲಾಯಿಸಿ
 
ಈಸ್ಟನ್ ಹಿಮನದಿಯ ಒಂದು ಬಿರುಕನ್ನು ದಾಟುತ್ತಿರುವ ಸಾಹಸಿಗರು

ಹಿಮನದಿಯ ಚಲಿಸುವಿಕೆಯ ವೇಗವು ಕೆಳಗಿನ ನೆಲದೊಂದಿಗಿನ ಘರ್ಷಣೆಯನ್ನು ಅವಲಂಬಿಸಿದೆ. ಅತಿ ಅಡಿಭಾಗದಲ್ಲಿನ ಹಿಮವು ಭೂಮಿಯ ಘರ್ಷಣೆಯಿಂದಾಗಿ ಬಲು ಮಂದ ಗತಿಯಲ್ಲಿ ಸರಿಯುವುದು. ಆದರೆ ಮೇಲ್ಭಾಗದ ಸೀಳು ವಲಯದ ಹಿಮವು ತನ್ನಡಿಯ ಗಟ್ಟಿಹಿಮದ ಮೇಲೆ ಸಲೀಸಾಗಿ ಜಾರುತ್ತಾ ಹೋಗುವುದು. ಆದರೆ ಇಲ್ಲಿ ಸಹ ಕಣಿವೆಯ ಬದಿಯ ಗೋಡೆಗಳು ಈ ಸರಿಯುವಿಕೆಗೆ ಸಾಕಷ್ಟು ಪ್ರತಿರೋಧವುಂಟುಮಾಡುವುದರಿಂದಾಗಿ ಒಟ್ಟಾರೆ ಹಿಮನದಿಯ ಚಲನೆಯ ವೇಗ ಬಲು ಕಡಿಮೆಯೇ ಆಗಿರುತ್ತದೆ. ಕೆಲ ಹಿಮನದಿಗಳು ಚಲಿಸದೆಯೇ ಇರಬಹುದು. ದೊಡ್ಡ ಮರಗಳು ಇವುಗಳ ಚಲನೆಯ ಹಾದಿಯಲ್ಲಿ ತಡೆಯನ್ನೊಡ್ಡುವುದರಿಂದಾಗಿ ಹೀಗಾಗುವುದು. ಅತಿ ಹೆಚ್ಚಿನ ವೇಗ ದಿನಕ್ಕೆ ೨೦ ರಿಂದ ೩೦ ಮೀಟರ್‌ಗಳಷ್ಟು ಸಹ ಇರುವುದಿದೆ. ಅಂಟಾರ್ಕಟಿಕಾದ ಬೈರ್ಡ್ ಹಿಮನದಿಯು ದಿನಕ್ಕೆ ೨ ರಿಂದ ೩ ಮೀ. ವರೆಗೆ ಸರಿಯುತ್ತದೆ. ಹಿಮಪದರದ ದಪ್ಪ ಹೆಚ್ಚಿದಲ್ಲಿ , ಇಳಿಜಾರು ಹೆಚ್ಚಿದಲ್ಲಿ, ಅಡಿಯ ನೆಲದ ತಾಪ ಹೆಚ್ಚಾದಲ್ಲಿ ಅಥವಾ ಹಿಮದಿಂದ ಕರಗಿದ ನೀರಿನ ಪ್ರಮಾಣ ಹೆಚ್ಚಾದಲ್ಲಿ ಹಿಮನದಿಯ ಸರಿಯುವಿಕೆಯ ವೇಗ ಹೆಚ್ಚುವುದು. ನಿಧಾನವಾಗಿ ಸರಿಯುವ ಹಿಮನದಿಯು ಒಮ್ಮೊಮ್ಮೆ ಕೊಂಚಕಾಲ ತೀವ್ರಗತಿಯಲ್ಲಿ ಚಲಿಸಿ ಮತ್ತೆ ಮೊದಲಿನ ನಿಧಾನಗತಿಗೆ ಮರಳುವ ವಿದ್ಯಮಾನವನ್ನು ಸಹ ದಾಖಲಿಸಲಾಗಿದೆ.

ಹಿಮನದಿಗಳು ಎಲ್ಲೆಲ್ಲಿ?

ಬದಲಾಯಿಸಿ
 
ಮಂಗಳಗ್ರಹದ ಧ್ರುವಪ್ರದೇಶದಲ್ಲಿ ಹಿಮದ ಹೊದಿಕೆ

ವಿಶ್ವದ ೪೭ ರಾಷ್ಟ್ರಗಳಲ್ಲಿ ಹಿಮನದಿಗಳಿವೆ. ಅಂಟಾರ್ಕಟಿಕಾ, ಪೆಟಗೋನಿಯಾ, ಅಲಾಸ್ಕಾ, ಕೆನಡಾ, ಗ್ರೀನ್‌ಲ್ಯಾಂಡ್ ಮತ್ತು ಐಸ್‌ಲ್ಯಾಂಡ್‌ಗಳಲ್ಲಿ ಅಗಾಧ ಸಂಖ್ಯೆಯ ಹಿಮನದಿಗಳಿವೆ. ಪರ್ವತ ಪ್ರದೇಶದ ಕಣಿವೆ ಹಿಮನದಿಗಳನ್ನು ಹಿಮಾಲಯ, ಆಂಡೆಸ್, ರಾಕಿ , ಕಾಕಸಸ್ ಮತ್ತು ಆಲ್ಪ್ಸ್ ಪರ್ವತಶ್ರೇಣಿಗಳಲ್ಲಿ ಕಾಣಬಹುದು. ಆಸ್ಟ್ರೇಲಿಯಾದಲ್ಲಿ ಹಿಮನದಿಗಳಿಲ್ಲ. ಆಫ್ರಿಕಾದಲ್ಲಿ ಕಿಲಿಮಂಜಾರೋ ಪರ್ವತ, ಕೆನ್ಯಾ ಪರ್ವತ ಮತ್ತು ರುವೆಂಜೋರಿ ಪರ್ವತಶ್ರೇಣಿಗಳಲ್ಲಿ ಹಿಮನದಿಗಳಿವೆ. ಮಂಗಳಗ್ರಹದಲ್ಲಿ ಸಹ ಹಿಮನದಿಗಳನ್ನು ಗುರುತಿಸಲಾಗಿದೆ. ಅಲ್ಲಿನ ಉತ್ತರ ಮತ್ತು ದಕ್ಷಿಣಧ್ರುವ ಪ್ರದೇಶಗಳಲ್ಲಿ ಅಗಾಧವ್ಯಾಪ್ತಿಯ ಹಿಮನದಿಗಳಿವೆಯೆಂದು ಸಂಶೋಧನೆಗಳು ತಿಳಿಸುತ್ತವೆ.

ಬಾಹ್ಯ ಸಂಪರ್ಕಕೊಂಡಿಗಳು

ಬದಲಾಯಿಸಿ
"https://kn.wikipedia.org/w/index.php?title=ಹಿಮನದಿ&oldid=1168523" ಇಂದ ಪಡೆಯಲ್ಪಟ್ಟಿದೆ
  NODES