ಗುಲಾಮಿ ಸಂತತಿಯ ದೆಹಲಿಯ ಸುಲ್ತಾನರಲ್ಲಿ ಪ್ರಮುಖ 1210-1235. ದೆಹಲಿಯ ಮೊದಲನೆಯ ಸುಲ್ತಾನನಾದ ಕುತುಬುದ್ದೀನ ಐಬಕ್ ನ ಗುಲಾಮ ಮತ್ತು ಅಳಿಯ.

ಅಲ್ತಮಷ್ ನ ಸಮಾಧಿ

ಸುಲ್ತಾನನಾದದದ್ದು

ಬದಲಾಯಿಸಿ

ಅಲ್ತಮಷ್ [ಇಲ್ತಿಮಷ]ಧೈರ್ಯಸ್ಥೈರ್ಯಕ್ಕೆ ಮೆಚ್ಚಿದ ಕುತುಬುದ್ದೀನ ಸುಲ್ತಾನ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದ. ಯುದ್ಧಗಳಲ್ಲಿ, ರಾಜ್ಯಾಡಳಿತದಲ್ಲಿ ಪರಾಕ್ರಮ ಹಾಗೂ ಚಾಕಚಕ್ಯತೆಯನ್ನು ಪ್ರದರ್ಶಿಸಿ ಅಲ್ತಮಷ್ ರಾಜ್ಯದ ಪ್ರಮುಖ ಅಧಿಕಾರಿಗಳಲ್ಲೊಬ್ಬನಾದ. ಕುತುಬುದ್ದೀನನ ಮರಣಾನಂತರ ದತ್ತುಪುತ್ರ ಆರಾಮ್‌ಶಹ ದೆಹಲಿಯ ಸಿಂಹಾಸನವನ್ನೇರಿದ (1210). ಅವನು ಅಸಮರ್ಥನಾಗಿದ್ದುದರಿಂದ ಕೇವಲ ಒಂದು ವರ್ಷದೊಳಗಾಗಿ ದೆಹಲಿಯ ಸಾಮಂತರು ಮತ್ತು ಶ್ರೀಮಂತ ವರ್ಗದವರು ಪ್ರಾಂತ್ಯಾಧಿಕಾರಿಯಾಗಿದ್ದ ಅಲ್ತಮಷ್‌ನನ್ನು ಬರಮಾಡಿಕೊಂಡು ಸುಲ್ತಾನನಾಗಬೇಕೆಂದು ಕೇಳಿಕೊಂಡರು. ಆತ ಆರಾಮ್‌ಶಹನನ್ನು ಯುದ್ಧದಲ್ಲಿ ಸೋಲಿಸಿ ಸುಲ್ತಾನನಾದ. ( ಇವನ ಅನಂತರ ಮಗಳು ರಜಿಯಾ ಉತ್ತರಾಧಿಕಾರಿಯಾದಳು.)

ಯುದ್ಧಗಳು

ಬದಲಾಯಿಸಿ

ಅಧಿಕಾರವನ್ನು ವಹಿಸಿಕೊಂಡಕೂಡಲೇ ಅನೇಕ ದಂಗೆ ಮತ್ತು ದಾಳಿಗಳನ್ನು ಎದುರಿಸಬೇಕಾಯಿತು. ಇಲ್ಡಸ್ ಮತ್ತು ಖುಬೇಚ ಎಂಬುವರು ಅವನ ಪರಮ ವಿರೋಧಿಗಳು. ಅಲ್ಲದೆ ಮಹಮ್ಮದೀಯರ ಆಳ್ವಿಕೆಯನ್ನು ತಡೆಗಟ್ಟಲು ಅನೇಕ ಹಿಂದೂ ರಾಜರೂ ಹೋರಾಟ ಪ್ರಾರಂಭಿಸಿದರು. ಮಂಗೋಲರ ದಾಳಿಯ ಭೀತಿ ಪ್ರಬಲವಾಗಿತ್ತು. ಅಲ್ತಮಷ್ [ಇಲ್ತಿಮಷ ]ಅಧಿಕಾರವನ್ನು ಕ್ರಮೇಣ ಬಲಪಡಿಸಿಕೊಂಡು ವಿರೋಧಿಗಳನ್ನು ಒಬ್ಬೊಬ್ಬರನ್ನಾಗಿ ನಿರ್ನಾಮ ಮಾಡಿದ. 1215ರಲ್ಲಿ ಇಲ್ಡಸ್ ಸೋತು ಸಾವನ್ನಪ್ಪಿದ. ಖುಬೇಚ ಯುದ್ಧದಲ್ಲಿ ಸೋತು ತಲೆ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಸಿಂಧೂನದಿಯಲ್ಲಿ ಮುಳುಗಿ ಸತ್ತ. 1221ರಲ್ಲಿ ಚಂಗೇಸ್‌ಖಾನ್‌ನ ನಾಯಕತ್ವದಲ್ಲಿ ಮಂಗೋಲರ ದಾಳಿಯ ಭೀಕರ ಕುತ್ತನ್ನು ಭಾರತ ಅನುಭವಿಸುವ ಸಂಭವ ಹೆಚ್ಚಾಗಿತ್ತು. ಆದರೆ ಅನೇಕ ಕಾರಣಗಳಿಂದ ಮಂಗೋಲರು ಭಾರತವನ್ನು ಪ್ರವೇಶಿಸಲಿಲ್ಲ. ಅದೃಷ್ಟವಶಾತ್ ದೇಶದಂತೆ ಸುಲ್ತಾನನೂ ಈ ಸಂಕಟದಿಂದ ಪಾರಾದ. 1228ರಲ್ಲಿ ಇಸ್ಲಾಂ ಮತದ ಅತ್ಯುಚ್ಚ ಅಧಿಕಾರಿಯಾದ ಬಾಗ್ದಾದಿನ ಕಲೀಫ ಅಲ್ತಮಷ್‌ನ ಅಧಿಕಾರವನ್ನು ಮನ್ನಿಸಿ, ಸುಲ್ತಾನ್ ಇ ಅಜ಼ಮ್ ಎಂಬ ಬಿರುದನ್ನು ಕೊಟ್ಟ. ದಂಗೆ ದಾಳಿಗಳಿಂದ ಪಾರಾಗಿ, ಕಲೀಫನ ಮನ್ನಣೆಗೆ ಪಾತ್ರನಾದ ಅಲ್ತಮಷ್ ತನ್ನ ಅಧಿಕಾರ ಬಲಪಡಿಸಿಕೊಂಡು ರಾಜ್ಯವಿಸ್ತರಣೆಗೆ ಗಮನಹರಿಸಿದ. 1231ರಲ್ಲಿ ಬಂಗಾಳವನ್ನು ಸ್ವಾಧೀನಪಡಿಸಿಕೊಂಡ. 1232ರಲ್ಲಿ ಗ್ವಾಲಿಯರ್ ರಾಜ್ಯವನ್ನು ಮುತ್ತಿ ಅಲ್ಲಿನ ರಾಜ ಮಂಗಳದೇವನನ್ನು ಸೋಲಿಸಿ ತನ್ನ ಅಧಿಕಾರವನ್ನು ಸ್ಥಾಪಿಸಿದ. ಮಾಳವ ಮತ್ತು ಉಜ್ಜಯಿನಿ ಪ್ರದೇಶಗಳನ್ನು ಗೆದ್ದ. ಉಜ್ಜಯಿನಿಯ ಪ್ರಸಿದ್ಧ ಮಹಾಕಾಳಿ ದೇವಾಲಯವನ್ನು ನೆಲಸಮ ಮಾಡಿದ. ಅನಾರೋಗ್ಯ ನಿಮಿತ್ತ ಅಲ್ತಮಷ್ ದಾಳಿಯನ್ನು ಮುಂದುವರಿಸಲಾಗಲಿಲ್ಲ.

ಸಾಧನೆಗಳು

ಬದಲಾಯಿಸಿ

ಅಲ್ತಮಷ್ ಗುಲಾಮೀ ಸಂತತಿಯ ಸಂಸ್ಥಾಪಕನೆಂದೂ ಹಿಂದೂಸ್ಥಾನದಲ್ಲಿ ಮಹಮ್ಮದೀಯರ ಆಡಳಿತವನ್ನು ಭದ್ರಪಡಿಸಿದವನೆಂದೂ ಚರಿತ್ರೆಯಲ್ಲಿ ಹೆಸರಾಗಿದ್ದಾನೆ. ಇವನು ಅರಬ್ ನಾಣ್ಯ ಪದ್ಧತಿಯನ್ನು ಭಾರತದಲ್ಲಿ ಮೊಟ್ಟ ಮೊದಲು ಜಾರಿಗೆ ತಂದ. ಈತ ನಿಷ್ಠಾವಂತ ಮಹಮ್ಮದೀಯ. ಕಲೆ ಮತ್ತು ಸಾಹಿತ್ಯವನ್ನು ಪ್ರೋತ್ಸಾಹಿಸಿದ. ಮೀನಾಜ್ ಉಸ್ ಸಿರಾಜ್ ಎಂಬ ಇತಿಹಾಸಕಾರ ಈತನ ಆಸ್ಥಾನದಲ್ಲಿದ್ದ. 1231-32ರ ಸುಮಾರಿನಲ್ಲಿ ಅಲ್ತಮಷ್ನೇ ಕುತುಬ್ಮಿನಾರ್ ಕಟ್ಟಡವನ್ನು ಕಟ್ಟಿಸಿದನೆಂದು ಕೆಲವು ವಿದ್ವಾಂಸರ ಮತ. ಈ ವಿಷಯದಲ್ಲಿ ಭಿನ್ನಾಭಿಪ್ರಾಯವಿದೆ.

 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಅಲ್ತಮಷ್&oldid=1194845" ಇಂದ ಪಡೆಯಲ್ಪಟ್ಟಿದೆ
  NODES
languages 1