ಇಯೊಸೀನ್ ಭೂವಿಜ್ಞಾನದಲ್ಲಿ ಟರ್ಷಿಯರಿ ಯುಗದ ಎರಡನೆಯ ಕಲ್ಪ 60 ದಶಲಕ್ಷವರ್ಷ ಪ್ರಾಚೀನದಿಂದ 40 ದಶಲಕ್ಷ ವರ್ಷ ಪ್ರಾಚೀನದವರೆಗಿನ ಅವಧಿ. ಎಂದರೆ ವಿಕಾಸಶ್ರೇಣಿಯಲ್ಲಿ ಈಚಿನ ಜೀವಿಗಳ ಪ್ರಾರಂಭಕಾಲವನ್ನು ಇಯೊಸೀನ್ ಪದ ಸೂಚಿಸುತ್ತದೆ. ನೋಡಿರಿಆಲಿಗೊಸೀನ್

ಇಯೊಸೀನ್ ಸ್ತೋಮ: ಇಯೊಸೀನ್ ಕಲ್ಪದಲ್ಲಿ ರೂಪುಗೊಂಡ ಶಿಲಾಸ್ತೋಮಗಳಿಗೆ ಈ ಹೆಸರಿದೆ. ಭೂಮಿಯ ಬೇರೆ ಬೇರೆ ಖಂಡಗಳಲ್ಲಿ ಇವನ್ನು ಗುರುತಿಸಲಾಗಿದೆ.


ಭಾರತ ಪರ್ಯಾಯ ದ್ವೀಪ

ಬದಲಾಯಿಸಿ

ಪಾಕಿಸ್ತಾನದ ಸಿಂಧ್‍ನಲ್ಲಿ ಈ ಸ್ತೋಮ ಶ್ರೇಷ್ಠ ರೀತಿಯಲ್ಲಿ ನಿಕ್ಷೇಪಗೊಂಡಿದೆ. ಇದನ್ನು ಮೂರು ಮುಖ್ಯಭಾಗಗಳನ್ನಾಗಿ ವಿಭಾಗಿಸಬಹುದು. ಕೆಳಭಾಗದ ಹೆಸರು ರಾಣಿಕೋಟ್ ಶಿಲಾಶ್ರೇಣಿ. ಇದು ಭಾರತದ ವಾಯುವ್ಯ ಭಾಗದಲ್ಲಿಯೂ ಅಸ್ಸಾಂ, ಬರ್ಮಾ ಮತ್ತು ಟಿಬೆಟ್ ಪ್ರದೇಶಗಳಲ್ಲಿಯೂ ರೂಪುಗೊಂಡಿದೆ. ಮಧ್ಯಭಾಗದ ಹೆಸರು ಲಾಕಿ ಶಿಲಾಶ್ರೇಣಿ. ಇದು ಹೇರಳವಾದ ನಮ್ಮುಲೈಟುಗಳ ಅವಶೇಷಗಳನ್ನೊಳಗೊಂಡ ಸುಣ್ಣಶಿಲೆ, ಸುಣ್ಣಮಿಶ್ರ ಜೇಡು ಮತ್ತು ಜೇಡು ಶಿಲೆಗಳಿಂದ ಕೂಡಿದೆ. ಮೇಲ್ಭಾಗದ ಹೆಸರು ಕರ್ತಾರ್ ಶಿಲಾ ಶ್ರೇಣಿ. ನಮ್ಮುಲಿಟಿಕ್ ಶಿಲಾಶ್ರೇಣಿಯ ಬಹುಭಾಗ ಈ ಗುಂಪಿಗೆ ಸೇರಿದೆ. ರಾಣಿ ಕೋಟ್, ಲಾಕಿ ಮತ್ತು ಕಿರ್ತಾರ್ ಎಂಬ ಹೆಸರುಗಳು ಸಿಂಧ್‍ನಲ್ಲಿರುವ ಪರ್ವತ ಶ್ರೇಣಿಗಳಿಂದ ಬಂದಿವೆ. ಸಾಲ್ಟ್‍ರೇಂಜ್ ಪ್ರದೇಶದಲ್ಲಿ ರಾಣಿ ಕೋಟ್ ಮತ್ತು ಲಾಕಿ ಶಿಲಾಶ್ರೇಣಿಗಳು ಉತ್ತಮರೀತಿಯಲ್ಲಿ ರೂಪುಗೊಂಡಿವೆ. ಈ ಶಿಲೆಗಳು ಜುರಾಸಿಕ್ ಕಲ್ಪದ ಶಿಲೆಗಳ ಮೇಲೆ ನಿಕ್ಷೇಪಗೊಂಡಿವೆ. ರಾಣಿಕೋಟ್ ಭಾಗದ ವಿಶಿಷ್ಟ ಜೀವಾವಶೇಷಗಳು ಮಿಸ್ಸಲೇನಿಯ ಮಿಸ್ಸೆಲ್ಲಾ, ಒಪರ್ಕುಲೈನ ಕೆನಾಲಿಪೆರೆ ಮತ್ತು ಲೊಕಾರ್ಟಿಯಂ ಕಾಂಡಿಟಿ. ಲಾಕಿ ಶಿಲಾಶ್ರೇಣಿಯಲ್ಲಿ ಸಾಕೆಸಾರ್ ಸುಣ್ಣಶಿಲೆ ವಿಶಿಷ್ಟ ಭಾಗವಾಗಿದೆ. ಕೆಲವು ಕಡೆ ಇದು ಜಿಪ್ಸಂ ಖನಿಜಕ್ಕೆ ರೂಪಾಂತರವಾಗಿದೆ. ಕಿರ್ತಾರ್ ಶಿಲಾಶ್ರೇಣಿ ಸಾಲ್ಟ್‍ರೇಂಜ್ ಪ್ರದೇಶದಲ್ಲಿ ನಿಕ್ಷೇಪಗೊಂಡಿಲ್ಲ. ಇಲ್ಲಿಗೆ ಹತ್ತಿರವಿರುವ ಕೊಹಟ್ ಎಂಬಲ್ಲಿ ಈ ಕಾಲದ ಲವಣ ಮತ್ತು ಜಿಪ್ಸಂ ಲಾಕಿ ಶಿಲೆಗಳಿಂದ ಬಂದಿದೆ. ಇವೇ ಅಲ್ಲದೆ ನಮ್ಮುಲೈಟಿಸ್ ಮತ್ತು ಅಲ್ವಿಯೋಲೈನ ಮೊದಲಾದ ಜೀವಾವಶೇಷಗಳಿಂದ ಕೂಡಿದ ಸುಣ್ಣಶಿಲೆಯೂ ಇದೆ. ಇದು ಕಿರ್ತಾರ್ ಕಾಲಕ್ಕೆ ಸೇರಿದುದು. ಅಸ್ಸಾಂ ಪ್ರಾಂತ್ಯದ ದಕ್ಷಿಣ ಮತ್ತು ಮಧ್ಯಕಾಲದ ನಿಕ್ಷೇಪಗಳಿವೆ. ಇವನ್ನು ದಿಸಂಗ್ ಶಿಲಾಶ್ರೇಣಿಗಳೆಂದು ಕರೆಯುವರು. ಷಿಲೆಟ್ ಮೈದಾನದ ದಕ್ಷಿಣ ಗಡಿಯಲ್ಲಿ ಕೆಲವು ನಿಕ್ಷೇಪಗಳಿವೆ. ಇದರ ಕೆಳಭಾಗ ನಮ್ಮುಲಿಟಿಕ್ ಸುಣ್ಣಶಿಲೆ ಮತ್ತು ಮರಳುಶಿಲೆಗಳಿಂದಲೂ ಮೇಲ್ಭಾಗ ಮರಳು ಶಿಲೆ. ಇಂಗಾಲಾಂಶದಿಂದ ಕೂಡಿದ ಜೇಡುಶಿಲೆ ಮತ್ತು ಸುಣ್ಣಶಿಲೆಗಳಿಂದಲೂ ಕೂಡಿದೆ. ಕೆಳಭಾಗಕ್ಕೆ ಷಿಲೆಟ್ ಸುಣ್ಣಶಿಲಾವರ್ಗ ಎಂದೂ ಮೇಲ್ಭಾಗಕ್ಕೆ ಕೊಪಿಲಿ ಶಿಲಾವರ್ಗ ಎಂದೂ ಹೆಸರಿದೆ. ಈ ಎಲ್ಲ ಶಿಲೆಗಳ ಒಟ್ಟು ಸಮುದಾಯದ ಹೆಸರು ಜಯಂತಿಯಾ ಶಿಲಾಶ್ರೇಣಿ. ಇವು ಲಾಕಿ ಮತ್ತು ಕಿರ್ತಾರ್ ಶಿಲೆಗಳ ಕೆಳಭಾಗಕ್ಕೆ ಸಮಕಾಲೀನವಾದವು. []

ಲಂಡನ್ ತಗ್ಗು ಪ್ರದೇಶದಲ್ಲಿ ಪೇಲಿಯೊಸೀನ್ ಸ್ತೋಮಗಳ ಮೇಲೆ ಇಯೊಸೀನ್ ಸ್ತೋಮಗಳು ನಿಕ್ಷೇಪಗೊಂಡಿವೆ. ಇಲ್ಲಿ ಇಯೊಸೀನ್ ಸ್ತೋಮಗಳನ್ನು ಎಪ್ರೆಸಿಯನ್, ಲುಟೆಟಿಯನ್, ಲುಡಿಯನ್ ಮತ್ತು ಬಾರ್ಟೋನಿಯನ್ ಎಂಬ ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಎಪ್ರೆಸಿಯನ್ ಶಿಲಾವರ್ಗದಲ್ಲಿ ಸಾಗರ ಮತ್ತು ಭೂನಿಕ್ಷೇಪಗಳೆರಡೂ ಇವೆ. ಸಾಗರ ನಿಕ್ಷೇಪದ ಬಹುಭಾಗ ಜೇಡು. ಇದನ್ನು ಲಂಡನ್ ಜೇಡು ಎನ್ನುವರು. ಇದರ ತಳದಲ್ಲಿ ಗುಂಡಾದ ಕರಿಯ ಬೆಣಚುಗಳಿವೆ. ಇವುಗಳನ್ನೊಳಗೊಂಡ ಪದರಗಳಿಗೆ ಪಶ್ಚಿಮದಲ್ಲಿ ಕಹೀತ್ ಪದರಗಳೆಂದೂ ಪೂರ್ವದಲ್ಲಿ ಓಲ್ಟ್‍ಹ್ಯಾವನ್ ಪದರಗಳೆಂದೂ ಹೆಸರು. ಲಂಡನ್ ಜೇಡು ಪಶ್ಚಿಮದಲ್ಲಿ 15' ದಪ್ಪವಿದ್ದು ಪೂರ್ವಕ್ಕೆ ಹೋದಂತೆಲ್ಲ ಹೆಚ್ಚು ದಪ್ಪವಾಗುತ್ತದೆ. ಪೂರ್ವದ ಕೊನೆಯಲ್ಲಿ ಇದರ ದಪ್ಪ 500'. ಈ ಶಿಲೆಗಳಲ್ಲಿ ಜೀವಾವಶೇಷಗಳು ಹೇರಳವಾಗಿವೆ. ಅವುಗಳಲ್ಲಿ ಪಲೊಡೋಮಿಯ, ಮೋಡಿಯೋಲ, ಪೆಕ್ಟೆನ್, ಪ್ರೋಟೊಕಾಡಿರ್ಯ ಸಿಪ್ರಿನ ಮತ್ತು ಶಂಖಗಳು ಮುಖ್ಯವಾದುವು. ಇವುಗಳ ಜೊತೆಯಲ್ಲಿ ತೆಂಗುಜಾತಿಯ ಕಾಯಿಗಳೂ ಆಮೆಗಳ ಚಿಪ್ಪುಗಳೂ ಇವೆ. ಇವೆಲ್ಲ ಭೂಮಿ ನಿಕ್ಷೇಪಪ್ರದೇಶದ ಹತ್ತಿರವಿದ್ದುದನ್ನು ಸೂಚಿಸುತ್ತವೆ. ಲಂಡನ್ ಜೇಡು ನಿಕ್ಷೇಪ ಮೇಲಿರುವ ಭೂನಿಕ್ಷೇಪಗಳೊಂದಿಗೆ ಬೆರೆಯುತ್ತದೆ. ಭೂನಿಕ್ಷೇಪಗಳು ಜೀವಾವಶೇಷರಹಿತ. ಅವನ್ನು ಬಾಗ್‍ಷಾಟ್ ಪದರಗಳೆಂದು ಕರೆದಿದೆ.[]

ಪ್ಯಾರಿಸ್

ಬದಲಾಯಿಸಿ

ಲಂಡನ್ ಪ್ರದೇಶದ ಎಪ್ರಿಸಿಯನ್ ಶಿಲಾವರ್ಗದ ಎಲ್ಲ ಪಾದಗಳನ್ನೂ ಪ್ಯಾರಿಸ್ ಪ್ರದೇಶದಲ್ಲಿ ಗುರುತಿಸಬಹುದು. ಸೆನ್ಸೆನಿ ಪದರಗಳು ಬ್ಲಾಕ್‍ಹೀತ್ ಪದರಗಳನ್ನು ಹೋಲುತ್ತವೆ. ಈ ಶಿಲೆಗಳಲ್ಲಿ ಆಸಕ್ತಿ ಹುಟ್ಟಿಸುವ ಜೀವಾವಶೇಷಗಳು ಇವೆ. ನಮ್ಮುಲೈಟಿಸ್ ಪ್ಲಾನುಲೇಟಗಳಿಂದ ಕೂಡಿದ ಮರಳು ಮತ್ತು ಪಲೋಡೋಮಿಯ ಮಾರ್ಗರಿಟೇಸಿಯಗಳಿಂದ ಕೂಡಿದ ಜೇಡುಪದರಗಳ ಪುನರಾವೃತ್ತ ಶಿಲೆಗಳು ಲಂಡನ್ ಜೇಡು ನಿಕ್ಷೇಪವನ್ನು ಪ್ರತಿನಿಧಿಸುತ್ತವೆ. ಈ ಪ್ರದೇಶದಲ್ಲಿ ಭೂನಿಕ್ಷೇಪ ಹೆಚ್ಚಾಗಿಲ್ಲ. ಬೆಲ್ಜಿಯಂನಲ್ಲಿ ಲಂಡನ್ ಜೇಡುನಿಕ್ಷೇಪಕ್ಕೆ ಸರಿದೂಗುವ ಶಿಲೆಗಳನ್ನು ಎಪ್ರಿಸಿಯನ್ ಎಂದು ಕರೆದಿದೆ. ಈ ಶಿಲೆಗಳಲ್ಲಿ ಜೀವಾವಶೇಷಗಳು ವಿರಳ. ಒಪ್ರಿಸಿಯನ್ ಮೇಲ್ಭಾಗವನ್ನು ಪ್ಯಾನಿಸೇಲಿಯನ್ ಶಿಲಾಪಾದ ಎಂದು ಕರೆದಿದೆ. ಪ್ಯಾರಿಸಿನ ಹಳೆಯ ಹೆಸರಾದ ಲುಟೆಟಿಯದಿಂದ ಈ ಶಿಲಾಶ್ರೇಣಿಗೆ ಲುಟೇಟಿಯನ್ ಎಂಬ ಹೆಸರು ಬಂದಿದೆ. ಪ್ಯಾರಿಸ್ ಪ್ರದೇಶದಲ್ಲಿ ಇದರ ಪ್ರತಿನಿಧಿ ಕ್ಯಾಲ್ಕರೆ ಗೋಸಿಯರ್ ನಿಕ್ಷೇಪಗಳು. ಇವನ್ನು ಮೂರು ಭಾಗಗಳನ್ನಾಗಿ ವಿಂಗಡಿಸಿದೆ. ಕೆಳ ಮತ್ತು ಮೇಲ್ಭಾಗಗಳು ಭೂನಿಕ್ಷೇಪಗಳಿಂದಲೂ ಮಧ್ಯಭಾಗ ಸಾಗರ ನಿಕ್ಷೇಪಗಳಿಂದಲೂ ಆಗಿವೆ. ಇವುಗಳಲ್ಲಿ ಕೆಲವು ಶಿಲೆಗಳ ರಚನೆ ಸಂಪೂರ್ಣವಾಗಿ ನಮ್ಮುಲೈಟಿಸ್ ಲ್ಯಾವಿಗೇಟಸುಗಳಿಂದ ಆಗಿದೆ. ಲಂಡನ್ ಮತ್ತು ಹ್ಯಾಂಪ್‍ಷೈರಿನ ಬ್ರ್ಯಾಕಲ್ ಶ್ಯಾಮ್ ಪದರಗಳು ಮತ್ತು ಬಾರ್ನೆಮೌತ್ ಸಾಗರ ನಿಕ್ಷೇಪಗಳು ಈ ಶಿಲೆಗಳಿಗೆ ಸರಿದೂಗಬಹುದು. ಭೂನಿಕ್ಷೇಪಗಳನ್ನು ಬಾಸ್‍ಕೂಂ ಪದರಗಳೆಂದು ಕರೆದಿದೆ. ಇವುಗಳಲ್ಲಿ ಲಿಗ್ನೈಟ್ ಪದರಗಳಿವೆ. ಈ ಪದರಗಳು ನೀಪಡೈಟಿಸುಗಳನ್ನು ಹೊಂದಿವೆ. ಬೆಲ್ಜಿಯಂನ ಶಿಲೆಗಳು ಇಂಗ್ಲೆಂಡಿನ ಶಿಲೆಗಳನ್ನೇ ಹೋಲುತ್ತವೆ. []

ಇತರ ಸ್ಥಳಗಳು

ಬದಲಾಯಿಸಿ

ಲುಡಿಯನ್ ಶ್ರೇಣಿ ಎಂಬ ಹೆಸರು ಬ್ರಸಲ್ಸ್‍ಗೆ ಉತ್ತರ ವಾಯುವ್ಯದಲ್ಲಿರುವ ಲುಡೆ ಎಂಬ ಸ್ಥಳದಿಂದ ಬಂದಿದೆ. ಇದಕ್ಕೆ ಸರಿದೂಗುವ ಶಿಲೆಗಳನ್ನು ಪ್ಯಾರಿಸ್ ಪ್ರದೇಶದಲ್ಲಿ ಔವೆರಿಯನ್ ಶ್ರೇಣಿ ಎಂದು ಕರೆದಿದೆ. ಎರಡು ಪ್ರದೇಶಗಳ ಶಿಲೆಗಳಲ್ಲಿಯೂ ನಮ್ಮುಲೈಟಿಸ್ ವೇರಿಯೋಲಸ್ ಎಂಬ ವಿಶಿಷ್ಟ ಅವಶೇಷಗಳಿವೆ. ಇಂಗ್ಲೆಂಡಿನ ಬಾಗ್‍ಷಾಟ್ ಪದರಗಳು ಇವುಗಳಿಗೆ ಸಮನಾದ ಶಿಲೆಗಳು. ಇವೇ ಇಲ್ಲಿನ ಇಯೊಸೀನ್ ಸ್ತೋಮದ ಅತ್ಯಂತ ಕಿರಿಯ ಶಿಲೆಗಳು. ಇವುಗಳಲ್ಲಿ ನಮ್ಮುಲೈಟಿಸ್ ವೇರಿಯೋಲಸ್ ಮಾತ್ರವಲ್ಲದೆ ಅನೇಕ ಸಾಗರವಾಸಿ ಪ್ರಾಣಿಗಳ ಅವಶೇಷಗಳೂ ಇವೆ. ಹ್ಯಾಂಪ್‍ಷೈರಿನ ಬ್ರ್ಯಾಕಲ್‍ಶ್ಯಾಮ್ ಶ್ರೇಣಿಯ ಮೇಲ್ಪದರಗಳು ಈ ಕಾಲದವುಗಳೇ ಆಗಿವೆ. ಇಂಗ್ಲೆಂಡಿನಲ್ಲಿ ಬಾರ್ಟೋನಿಯನ್ ಭಾಗ ಹ್ಯಾಂಪ್‍ಷೈರಿನಲ್ಲಿ ಮಾತ್ರ ಸಂಚಯನಗೊಂಡಿದೆ. ಇವು ಬಾರ್ಟನ್ ಜೇಡು ಮತ್ತು ಮರಳು, ಹೀಡನ್ ಶಿಲೆಗಳ ಕೆಳಭಾಗವನ್ನು ಒಳಗೊಂಡಿವೆ. ನಮ್ಮುಲೈಟಿಸ್ ವಿಮ್ಮೆಲೆನ್ಸಿಸ್ ಎಂಬ ವಿಶಿಷ್ಟ ಅವಶೇಷವೂ ವಲ್ಮುಟ, ಅತ್ಲೆಟ, ಕ್ಯಾಸಿಯ ಅಂಬ್ಯುಗುವ, ಪ್ಯೂಜಸ್ ಲಾಂಗೆವಸ್, ಕ್ರಾಸೆಟೆಲ್ಲ ಸಲ್ಕಟಗಳೇ ಮೊದಲಾದ ಅವಶೇಷಗಳೂ ಇವೆ. ಮರಳುಗಳಲ್ಲಿ ಚಾಮ ಮತ್ತು ಸೆರೆತಿಯಂಗಳು ಇವೆ. ಹೀಡನ್ ಪದರಗಳು ಭೂನಿಕ್ಷೇಪಗಳು ಲಿಗ್ನೈಟ್ ಮರಳು, ಪ್ಲೆನಾರ್ಬಿಸ್ ಮತ್ತು ಲಿಮ್ನಿಯಗಳಿಂದ ಕೂಡಿದ ಸುಣ್ಣ ಶಿಲೆಗಳಿಂದ ಆಗಿವೆ. ಈ ನಿಕ್ಷೇಪಗಳು ಸರೀಸೃಪ ಮತ್ತು ಸಸ್ತನಿಗಳ ಅವಶೇಷಗಳನ್ನು ಹೊಂದಿದೆ. ಇಲ್ಲಿ ಶಿಲೆಗಳು ನಿಕ್ಷೇಪಗೊಳ್ಳುತ್ತಿರುವ ವೇಳೆಗೆ ಪ್ಯಾರಿಸ್ ಪ್ರದೇಶ ಸಾಗರದಿಂದ ಬೇರ್ಪಟ್ಟಂತೆ ತೋರುವುದು. ಅಲ್ಲಿ ಜಿಪ್ಸಂ ಮತ್ತು ಜಿಪ್ಸಂಗಳಿಂದ ಕೂಡಿದ ಮಾರಲ್ ಶಿಲೆಗಳು ನಿಕ್ಷೇಪಗೊಂಡಿವೆ. ಆದರೆ ಇಯೋಸೀನ್ ಕಲ್ಪದ ಕೊನೆಯಲ್ಲಿ ಈ ಪ್ರದೇಶ ಸ್ವಲ್ಪಕಾಲ ಸಮುದ್ರಸಂಪರ್ಕವನ್ನು ಹೊಂದಿದ್ದಂತೆ ತೋರುವುದು. ಇದು ಪಲೊಡೋಮಿಯಗಳಿಂದ ಕೂಡಿದ ಮಾರಲ್ ಶಿಲೆಗಳಿಂದ ವ್ಯಕ್ತವಾಗಿದೆ. ಬೆಲ್ಜಿಯಂನಲ್ಲಿ ಬಾರ್ಟೋನಿಯನ್ ಶ್ರೇಣಿಯ ಪ್ರತಿನಿಧಿ ಮರಳುನಿಕ್ಷೇಪ. ಈ ಮರಳಿನಲ್ಲಿ ನಮ್ಮಲೈಟಿಸ್ ಎಮ್ಮೆಲೆನ್ನಿಸುಗಳ ಅವಶೇಷಗಳಿವೆ.

ಯೂರೋಪಿನ ದಕ್ಷಿಣದಲ್ಲಿ ಟೆತಿಸ್ ಸಾಗರದ ಉದ್ದಕ್ಕೂ ಘನತರ ಸುಣ್ಣಶಿಲೆಗಳ ನಿಕ್ಷೇಪವಿದೆ. ಈ ಸುಣ್ಣಶಿಲೆಯಲ್ಲಿ ಪೊರಮಿನಿಫೆರಗಳು, ಅದರಲ್ಲೂ ನಮ್ಮ ಲೈಟಿಸ್‍ಗಳು ಹೇರಳವಾಗಿರುವುದು ಒಂದು ವೈಶಿಷ್ಟ್ಯ. ಆದ್ದರಿಂದ ಇದನ್ನು ನಮ್ಮುಲಿಟಿಕ್ ಸುಣ್ಣಶಿಲೆ ಎಂದು ಕರೆದಿದೆ. ಇದು ಬಹಳ ಗಡಸು ಮತ್ತು ಅನೇಕ ಕಡೆಗಳಲ್ಲಿ ಅಮೃತಶಿಲೆಗಳಾಗಿ ಮಾರ್ಪಟ್ಟಿದೆ. ಈ ಶಿಲೆಗಳ ಮೇಲಿರುವ ಮರಳುಶಿಲೆಗಳು ನಮ್ಮುಲೈಟುಗಳಿವೆ. ವಿಯನ್ನ ಪ್ರದೇಶದ ಇಯೊಸೀನ್ ಸ್ತೋಮ ಸಂಪೂರ್ಣವಾಗಿ ಜೀವಾವಶೇಷರಹಿತ.

ಉತ್ತರ ಅಮೆರಿಕದಲ್ಲಿ

ಬದಲಾಯಿಸಿ

ಪೀಲಿಯೊಸೀನ್ ಸ್ತೋಮದ ಮೇಲೆ ಇಯೊಸೀನ್ ಯುಗದ ಆದಿಕಾಲದ ನದೀನಿಕ್ಷೇಪಗಳು ಸಂಚಯನಗೊಂಡಿವೆ. ಇವನ್ನು ವಾಸಾಚ್ ಶಿಲೆಗಳೆಂದು ಕರೆದಿದೆ. ವಾಸಾಚ್ ಶಿಲೆಗಳು ಉತ್ತರವ್ಯೋಮಿಂಗ್ ಪ್ರಾಂತ್ಯದ ಬಿಗ್ ಹಾರನ್ ಪ್ರದೇಶ ಮತ್ತು ಮಾಂಟಾನಗಳಲ್ಲಿ ಉತ್ತಮವಾಗಿ ರೂಪುಗೊಂಡಿವೆ. ಇವುಗಳಲ್ಲಿ ಸಸ್ತನಿಗಳ ಅವಶೇಷಭಂಡಾರವೇ ಇದೆ. ಇವುಗಳಲ್ಲಿ ಅತ್ಯಂತ ಪ್ರಸಿದ್ಧವಾದುದು ಆದಿಕುದುರೆ (ಇಯೊಹಿಪ್ಟಸ್). ಈ ಶ್ರೇಣಿ ಯೂಟಾ ಪ್ರಾಂತ್ಯದ ದಕ್ಷಿಣದಲ್ಲಿ ನದಿಗಳ ಕೊರೆತಕ್ಕೆ ಸಿಕ್ಕಿ ಪ್ರಪಂಚದ ಅತ್ಯಂತ ಮೋಹಕ ದೃಶ್ಯಗಳಲ್ಲೊಂದಾದ ಬ್ರೈಸ್ ಪ್ರಪಾತ ಉಂಟಾಗಿದೆ. ಇಯೊಸೀನ್ ಮಧ್ಯಕಾಲದಲ್ಲಿ ಯೂಟಾ, ಕೊಲರ್ಯಾಡೊ ಮತ್ತು ವಯೋಮಿಂಗ್ ಪ್ರಾಂತ್ಯಗಳಲ್ಲಿ ಸುಮಾರು 40,000 ಚ. ಮೈಗಳ ವಿಸ್ತಾರದ ಒಂದು ಸರೋವರವಿತ್ತು. ಇದರಲ್ಲಿ ಸುಮಾರು 2,000' ದಪ್ಪದ ಸೂಕ್ಷ್ಮಕಣ ಜೇಡುಶಿಲೆಗಳು ಸಂಚಯನಗೊಂಡಿವೆ. ಈ ಶಿಲೆಗಳನ್ನು ಗ್ರೀನ್ ರಿವರ್ ಲೇಕ್ ಶಿಲಾಶ್ರೇಣಿ ಎಂದು ಕರೆದಿದೆ. ಇಲ್ಲಿ ಪ್ರಪಂಚದಲ್ಲೇ ಅತ್ಯಂತ ಭಾರೀ ತೈಲಾಶಯಗಳಿವೆ. ಈ ಶಿಲೆಗಳಲ್ಲಿ ಮತ್ಸ್ಯ, ಕೀಟ, ಸಸ್ಯಗಳ ಎಲೆಗಳು ಮುಂತಾದ ಅವಶೇಷಗಳೂ ಇವೆ. ಗ್ರೀನ್ ರಿವರ್ ಲೇಕ್ ಶ್ರೇಣಿಗಿಂತ ಸ್ವಲ್ಪ ಕಿರಿಯ ಶಿಲೆಗಳು ವಯೋಮಿಂಗ್ ಪ್ರಾಂತ್ಯದ ಆಗ್ನೇಯ ಮತ್ತು ಯೂಟಾ ಪ್ರಾಂತ್ಯದ ಈಶಾನ್ಯ ಪ್ರದೇಶಗಳಲ್ಲಿ ನಿಕ್ಷೇಪಗೊಂಡಿವೆ. ಇವು ಪೋರ್ಟ್‍ಬ್ರಿಡ್ಜರ್ ಪ್ರದೇಶದಲ್ಲಿ ಅತ್ಯುತ್ತಮವಾಗಿ ರೂಪುಗೊಂಡಿರುವುದರಿಂದ ಇವುಗಳಿಗೆ ಬ್ರಿಡ್ಜರ್ ಶ್ರೇಣಿ ಎಂದು ಹೆಸರು ಬಂದಿದೆ. ಇವು ಸಿಹಿನೀರು ನಿಕ್ಷೇಪಗಳಾಗಿದ್ದು ಮುಖ್ಯವಾಗಿ ಮರಳು ಮತ್ತು ಜೇಡುಶಿಲೆಗಳಿಂದ ಕೂಡಿವೆ. ಇವುಗಳಲ್ಲಿ ವಿವಿಧ ಸಸ್ತನಿಗಳ ಅಮೂಲ್ಯ ಅವಶೇಷ ಸಂಗ್ರಹವಿದೆ. ಇವುಗಳಲ್ಲಿ ಲೆಮೂರ್ ಕಪಿಗಳ ಅವಶೇಷಗಳು ಬಹುಮುಖ್ಯ.

ಇಯೋಸಿನ್ ಸ್ತೋಮದ ಅತ್ಯಂತ ಮೇಲ್ಪದರುಗಳು ಯೂಟಾ ಮತ್ತು ಕೊಲರ್ಯಾಡೊ ಪ್ರಾಂತ್ಯಗಳಲ್ಲಿರುವ ಯೂಂಟ ಪರ್ವತಗಳ ದಕ್ಷಿಣ ತಪ್ಪಲುಗಳಲ್ಲಿ ಇವೆ. ಇವನ್ನು ಯೂಂಟ ಶಿಲೆಗಳೆಂದು ಕರೆದಿದೆ. ಇವು ಬ್ರಿಡ್ಜರ್ ಶಿಲೆಗಳ ಮೇಲೆ ಅನನ್ಯರೂಪ್ಯತೆ ಹೊಂದಿ ನಿಕ್ಷೇಪಗೊಂಡಿವೆ. ಇಲ್ಲಿ ಸಸ್ತನಿಗಳ ಅವಶೇಷರಾಶಿಯೇ ಇದೆ. ಇವುಗಳಲ್ಲಿ ಯೂರಿಟತೀರಿಯಂ ಮತ್ತು ಟಿಲ್ಮಟೋತೀರಿಯಂ ಮುಖ್ಯವಾದುವು. []

ಇಯೊಸೀನ್ ಯುಗದ ಜೀವರಾಶಿ

ಬದಲಾಯಿಸಿ

ಈ ಯುಗದಲ್ಲಿ ಅನೇಕ ಪ್ರಗತಿಪರ ಸಸ್ತನಿಗಳ ಉದಯವಾಯಿತು. ಇವು ಈಗಿನ ಸಸ್ತನಿಗಳ ಪೂರ್ವಜರು. ಈ ಪ್ರಗತಿಪರ ಸಸ್ತನಿಗಳೂ ಪ್ರಾಚೀನ ಸಸ್ತನಿಗಳೂ ಒಟ್ಟಿಗೆ ಸಹಬಾಳ್ವೆ ನಡೆಸಿದವು. ಕ್ರಿಯೊಡಾಂಟಗಳೇ ಈ ಕಾಲದ ಮುಖ್ಯ ಮಾಂಸಾಹಾರಿಗಳು. ಅವು ನಾಯಿ, ಚಿರತೆ, ಬೆಕ್ಕು ಮೊದಲಾದವುಗಳ ರೂಪವನ್ನು ಹೋಲುತ್ತಿದ್ದುವು. ಈ ಕಾಲದ ಮತ್ತೊಂದು ಮಾಂಸಾಹಾರಿ ಸಸ್ತನಿಶಾಖೆಯೆಂದರೆ ವಂಶನಷ್ಟ ಹೊಂದಿರುವ ಮಿಯಾಸಿಡುಗಳು. ಕುದುರೆಗಳು, ಒಂಟೆಗಳು, ಖಡ್ಗಮೃಗಗಳು ಪ್ರಗತಿಪರ ಸಸ್ತನಿಗಳಲ್ಲಿ ಮುಖ್ಯವಾದುವು. ಆದಿಕುದುರೆ ಇಯೊಹಿಪ್ಪಸ್, ಓರೊಹಿಪ್ಪಸ್ ಮತ್ತು ಎಪಿಹಿಪ್ಪಸುಗಳು ಈ ಕಾಲದ ಕುದುರೆಗಳು. ಖಡ್ಗಮೃಗಗಳು ಚಿಕ್ಕವಾಗಿದ್ದುವು. ಕೊಂಬುಗಳಿರಲಿಲ್ಲ. ಟಿಟನೋತೀರುಗಳು ಮತ್ತು ಓರಿಯೊಡಾನುಗಳು ಈ ಕಾಲದ ಇತರ ಸಸ್ತನಿಗಳು. ಮೊದಲನೆಯವಕ್ಕೂ ಖಡ್ಗಮೃಗ ಮತ್ತು ಕುದುರೆ ಶಾಖೆಗಳಿಗೂ ಅಸ್ಪಷ್ಟ ಸಂಬಂಧ ಇದೆ. ಓರಿಯೊಡಾನುಗಳೇನೋ ಒಂಟೆಗಳನ್ನು ಹೋಲುತ್ತವೆ ಆದರೆ ಅವುಗಳ ದೇಹ ಉದ್ದ ಮತ್ತು ಕಾಲುಗಳು ತುಂಡು.

ಉತ್ತರಾರ್ಧಗೋಳದಲ್ಲಿ ಇಯೊಸೀನ್ ಯುಗದ ಸಸ್ಯವರ್ಗ ಈಗಿನದಕ್ಕಿಂತ ಹೇರಳವಾಗಿಯೂ ವೈವಿಧ್ಯಮಯವಾಗಿಯೂ ಇತ್ತು. ಇದು ಉಷ್ಣವಲಯದ ಸಸ್ಯವರ್ಗವನ್ನು ಹೋಲುತ್ತದೆ. ಹೂಬಿಡುವ ಸಸ್ಯಗಳಲ್ಲಿ ಏಕದಳ ಮತ್ತು ದ್ವಿದಳ ಸಸ್ಯಗಳೆರಡೂ ಇದ್ದುವು. ತಾಳೆ, ಈಚಲು ತೆಂಗು ಜಾತಿಯ ಗಿಡಗಳು ಬಲು ಹೆಚ್ಚಾಗಿದ್ದುವು. ಮ್ಯಾಗ್ನೋಲಿಯ ಗಿಡಗಳೂ ಇದ್ದುವು. ತಾವರೆ, ದಾಲ್ಚಿನಿ, ಪ್ರೊಟಿಯ, ಕ್ಯಾಸಿಯ, ಪ್ಲಟನಸ್ ಮೊದಲಾದ ಉಷ್ಣವಲಯದ ಗಿಡಗಳನ್ನು ಕಾಣಬಹುದಾಗಿತ್ತು. ಆದರೂ ಬರ್ಚ್, ಆಲ್ಡರ್ ಮತ್ತು ಓಕ್ ಮರಗಳೇ ಹೇರಳವಾಗಿದ್ದುವು. ಈ ಉಷ್ಣವಲಯದ ಗಿಡ ಮರಗಳ ಜೊತೆಯಲ್ಲಿ, ಗತವಂಶಿಗಳಾದ ಡ್ರಯೊಫಿಲ್ಲಂ ಮೊದಲಾದ ಸಸ್ಯಗಳಿರುವುದು ಇಯೊಸೀನ್ ಕಾಲದ ವೈಶಿಷ್ಟ್ಯಗಳಲ್ಲೊಂದು.

ಆಧುನಿಕ ಜೀವಯುಗದ ಸಾಗರಗಳಲ್ಲಿ ನಾನಾ ವರ್ಗದ ಬೆನ್ನೆಲುಬಿಲ್ಲದ ಪ್ರಾಣಿಗಳಲ್ಲಿ ಪೊರಮಿನಿಫೆರಗಳಲ್ಲೂ ಹಿಂದೆಂದೂ ಇರದಷ್ಟು ಹೇರಳವಾಗಿದ್ದುವು. ಅವುಗಳಲ್ಲಿ ಅನೇಕ ಪ್ರಕಾರಗಳೂ ಇದ್ದುವು. ಅವುಗಳಲ್ಲೆಲ್ಲ ಚಪ್ಪಟೆಯಾದ ಮತ್ತು ವೃತ್ತಾಕಾರದ ನಮ್ಮುಲೈಟುಗಳು ಬಲು ಮುಖ್ಯವಾದುವು. ಸಿಂಧ್ ಪ್ರದೇಶದ ಇಯೊಸೀನ್ ಶಿಲೆಗಳಲ್ಲಿ ನಮ್ಮುಲೈಟಿಸ್ ಆನ್ಸಿಲೈನ, ಅಲ್ವಿಯೊಲೈನ, ಡಿಸ್ಕೊಸೈಕ್ಲೈನ, ಡಿಕ್ಟಿಯೊ ಕೊನಾಯಿಡ್ಸ್, ಲೊಕಾರ್ಟಿಯ, ಒಪರ್ಕುಲೈನ, ಅರ್ಬಿಟೊಲೈಟಿಸ್ ಮೊದಲಾದ ನಾನಾಜಾತಿಯ ಪೊರಮಿನಿಫೆರಗಳಿವೆ. ರಾಣಿಕೋಟ್ ಶಿಲೆಯಲ್ಲಿ ನಾನಾ ಜಾತಿಯ ಷಡ್‍ಭಿತ್ತಿ ಹವಳಗಳಿವೆ. ಅವುಗಳಲ್ಲಿ ಟ್ರೊಕೊಸ್ಮಿಲಿಯ, ಸೈಕ್ಲೊಲೈಟಿಸ್, ಸ್ಟೈಲಿನ, ಫೆಡ್ಡಿನ, ಐಸಾಸ್ಟ್ರಯ, ತ್ಯಾಮ್ನಾಸ್ಪಿಯ ಮತ್ತು ಮಾಂಟ್ಲಿವಾಲ್ಸಿಯಗಳು ಬಲು ಹೇರಳವಾಗಿವೆ. ಅಲ್ಲದೆ ಸಿಡಾರಿಸ್, ಸೆಲೇನಿಯ, ಕೋನೊಕ್ಲಿಪಿಯಸ್, ಡಿಕ್ಟಿಯೊ ಪ್ಲೊರಸ್, ಎಕೈನೊ ಲ್ಯಾಪಸ್, ಮೆಟಾಲಿಯ, ಹೆಮಿಯಾಸ್ಪರ್, ಸ್ಕೈಜಾಸ್ಟರ್ ಮತ್ತು ಮೈಕ್ರಾಸ್ಟರೆಗಳೇ ಮೊದಲಾದ ಪಂಚಸಮಸೂತ್ರಿ ಮತ್ತು ದ್ವಿಸಮಸೂತ್ರಿ ಎಕಿನಾಯಿಡುಗಳೂ ಹೇರಳವಾಗಿವೆ. ಲೆಮಿಲಿಬ್ರ್ಯಂಕ್, ಶಂಖಗಳು ಮತ್ತು ನಾಟಿಲಸುಗಳ ಅನೇಕ ಮೃದ್ವಂಗಿಗಳ ಪ್ರತಿನಿಧಿಗಳು. ಬೆಲೆಮ್ನೈಟು ಮತ್ತು ಕಟಲ್ ಫಿಷುಗಳ ಸಂಯೋಜಿತಜೀವಿಯಾದ ಬೆಲಸಿಪಿಯ, ಕ್ಯಾಲಪ್ಟ್ರೊಪೊರಸ್ ಎಂಬ ಶಂಖಗಳು ರಾಣಿಕೋಟೆ ಶಿಲೆಗಳ ವಿಶಿಷ್ಟ ಮೃದ್ವಂಗಿಗಳು, ಆಸ್ಟ್ರಿಯ, ಸ್ಪಾಂಡೈಲಿಸ್, ಕಾರ್ಬುಲ, ವೆನರಿಕಾರ್ಡಿಯ ಮತ್ತು ಪೊಲಡೋಮಿಯಗಳು ಇಯೊಸೀನ್ ಯುಗದಲ್ಲಿ ಹೆಚ್ಚು ಸಂಖ್ಯೆಯಲ್ಲಿದ್ದ ಲೆಮಲಿಬ್ರ್ಯಾಂಕುಗಳು.

ಉಲ್ಲೇಖಗಳು

ಬದಲಾಯಿಸಿ


"https://kn.wikipedia.org/w/index.php?title=ಇಯೊಸೀನ್&oldid=1249525" ಇಂದ ಪಡೆಯಲ್ಪಟ್ಟಿದೆ
  NODES