ಉಗ್ಗು: ಮಾತಿನ ದೋಷಗಳಲ್ಲಿ ಒಂದು (ಸ್ಟಟರಿಂಗ್, ಸ್ಟ್ಯಾಮರಿಂಗ್). ಮಾತಿನ ದೋಷಗಳಲ್ಲೇ ಬಹುಶಃ, ಹೆಚ್ಚು ಪರಿಚಿತವಾದದ್ದು, ಗಮನ ಸೆಳೆಯುವಂಥದು. ಬಿಕ್ಕಲು ಎಂದೂ ಇದನ್ನು ಕರೆಯುತ್ತಾರೆ. ಕೆಲವು ಕಡೆ ತೊದಲು ಎಂಬ ಶಬ್ದವೂ ವಾಡಿಕೆಯಲ್ಲಿದೆ. ಆದರೆ ತೊದಲು ಶಬ್ದವನ್ನು ಅಕ್ಷರಗಳನ್ನು ಅಸ್ಪಷ್ಟವಾಗಿ ಉಚ್ಚರಿಸುವ ಅಥವಾ ಒಂದು ಅಕ್ಷರದ ಬದಲು ಇನ್ನೊಂದನ್ನು ಉಚ್ಚರಿಸುವ ದೋಷಕ್ಕೆ ಮಾತ್ರ ಬಳಸುವುದು ಯುಕ್ತ. ಉಗ್ಗು ಪ್ರಾಚೀನ ಕಾಲದಿಂದಲೂ ಜನರಿಗೆ ಗೊತ್ತಿರುವ ಮಾತಿನ ದೋಷ. ಆದರೆ ಇದರ ವೈಜ್ಞಾನಿಕ ಅಧ್ಯಯನ ಮಾತ್ರ ಇತ್ತೀಚಿನದು. ಈಗಲೂ ಉಗ್ಗು ಎಂದರೇನು ಎಂಬ ಪ್ರಶ್ನೆಗೆ ಸೂತ್ರರೂಪದಲ್ಲಿ ಉತ್ತರಕೊಡುವುದು ಕಷ್ಟ. ಒಟ್ಟಿನಲ್ಲಿ ಉಗ್ಗಿನ ಮುಖ್ಯಲಕ್ಷಣ ಮಾತಿನಲ್ಲಿ ಸಹಜವಾದ ನಿರರ್ಗಳತೆ ಇಲ್ಲದೆ ಮಾತಿನ ಪ್ರವಾಹ ತುಂಡು ತುಂಡಾಗಿ ಹರಿಯುವುದೇ ಆಗಿದೆ; ಬಿಕ್ಕಲು ಎಂಬ ಶಬ್ದ ಇದನ್ನು ಚೆನ್ನಾಗಿ ವ್ಯಕ್ತಪಡಿಸುತ್ತದೆ ಬಿಕ್ಕಿ ಬಿಕ್ಕಿ ಅಳುತ್ತಿರುವವರು ಅದೇ ವೇಳೆ ಮಾತನಾಡಲೂ ಪ್ರಯತ್ನಿಸಿದರೆ ಏನಾಗುತ್ತದೆಂಬುದು ಬಹುಶಃ ಎಲ್ಲರಿಗೂ ಗೊತ್ತು. ಉಗ್ಗಿನ ಲಕ್ಷಣಗಳಲ್ಲಿ ಅನೇಕ ಬಗೆ. ಯಾವೊಬ್ಬ ರೋಗಿಯಲ್ಲೂ ಎಲ್ಲ ಲಕ್ಷಣಗಳೂ ಕಾಣಿಸದೆ ಇರಬಹುದು. ಆದರೆ ಉಗ್ಗಿನ ಸರ್ವಸಾಮಾನ್ಯ ಲಕ್ಷಣವೆಂದರೆ ಶಬ್ದಗಳ ಮೊದಲ ಅಕ್ಷರವನ್ನು ಪುನರುಚ್ಚರಿಸುವುದು: ಬರುತ್ತೇನೆ ಎಂದು ಹೇಳಹೊರಟ ವ್ಯಕ್ತಿಯೊಬ್ಬ ಬ-ಬ-ಬ-ಬರುತ್ತೇನೆ ಎನ್ನಬಹುದು; ಅಷ್ಟೇ ಸಾಮಾನ್ಯವಾದ ಇನ್ನೊಂದು ಲಕ್ಷಣವೆಂದರೆ ಅಕ್ಷರವನ್ನು (ಹೆಚ್ಚುಬಾರಿ ಶಬ್ದದ ಮೊದಲ ಅಕ್ಷರವನ್ನು) ಅನಾವಶ್ಯಕವಾಗಿ ದೀರ್ಘಗೊಳಿಸುವುದು: ವ್ಯಕ್ತಿಯೊಬ್ಬ ಬಅಅಅಅರುತ್ತೇನೆ ಎನ್ನಬಹುದು. ಶಬ್ದಗಳ, ವಾಕ್ಯಗಳ ಯಾವುದೇ ಭಾಗವನ್ನು ಹೀಗೆ ಎಳೆದೆಳೆದು ಹೇಳಬಹುದು. ಮಾತನ್ನು ಪ್ರಾರಂಭಿಸಲು ಕಷ್ಟವಾಗುವುದು ಇನ್ನೊಂದು ಲಕ್ಷಣ; ಪ್ರಾರಂಭಿಸಿದ ಮೇಲೆ ಕೆಲವು ಉಗ್ಗರಂತೂ ಚೆನ್ನಾಗಿಯೇ ಮಾತನಾಡಿಕೊಂಡು ಹೋಗಬಲ್ಲರು. ಮಧ್ಯೆ ಮಧ್ಯೆ ಶಬ್ದಗಳು ಹಿಡಿದುಕೊಂಡು ಮಾತೇ ಇಲ್ಲದೆ ಮೌನ ಉಂಟಾಗುವುದು ಮತ್ತೊಂದು ಲಕ್ಷಣ. ಹಲವು ವರ್ಷಗಳಿಂದ ಉಗ್ಗುತ್ತಿದ್ದು ಈ ದೋಷ ಹೆಚ್ಚಾಗಿರುವವರಲ್ಲಿ ಇನ್ನೂ ಕೆಲವು ಲಕ್ಷಣಗಳನ್ನು ಕಾಣಬಹುದು. ಶಬ್ದವೊಂದು ಗಂಟಲಲ್ಲಿ ಸಿಕ್ಕಿಹಾಕಿಕೊಂಡಾಗ ಅವರು ಹುಬ್ಬು ಗಂಟಿಕ್ಕಬಹುದು, ಹುಬ್ಬನ್ನು ಮೇಲೇರಿಸಬಹುದು; ಕಣ್ಣಗಳನ್ನು ಮಿಟಿಮಿಟಿ ಮಿಟಿಕಿಸಬಹುದು; ತುಟಿಗಳನ್ನು ಅಸಹಾಯಕವಾಗಿ ನಡುಗಿಸಬಹುದು; ನಾಲಗೆ ಹೊರಚಾಚಬಹುದು; ಬಾಯಿ ದೊಡ್ಡದಾಗಿ ತೆರೆಯಬಹುದು; ಕೆಲವೊಮ್ಮೆ ಬಾಯಿಂದ ತರತರದ ಶಬ್ದಗಳನ್ನು ಹೊರಡಿಸಬಹುದು; ಮುಖದಲ್ಲಿ ನಾನಾ ಬಗೆಯ ಹಾವಭಾವಗಳನ್ನು ತೋರಿಸಬಹುದು; ಅಂಗೈಯನ್ನು ಹಿಸುಕಿಕೊಳ್ಳಬಹುದು; ಪಾದದಿಂದ ನೆಲವನ್ನು ಕುಟ್ಟಬಹುದು ಮತ್ತು ಮೈ ಎಲ್ಲ ಬೆವರಬಹುದು. ಕೆಲವು ಉಗ್ಗರಲ್ಲಿ ಕಾಣಬಹುದಾದ ಇನ್ನೂ ಒಂದು ಲಕ್ಷಣವೆಂದರೆ ಕಷ್ಟದ ಶಬ್ದವೊಂದನ್ನು ಹೇಳುವಾಗ ಅದರ ಹಿಂದೆ ಯಾವುದೋ ಒಂದು ಅಕ್ಷರವನ್ನು ಸೇರಿಸಿಬಿಡುವುದು; ಬರುತ್ತೇನೆ ಎನ್ನುವುದು ಹಿಡಿದುಕೊಳ್ಳುವ ಶಬ್ದವಾದರೆ ಅ, ಬರುತ್ತೇನೆ ಎನ್ನಬಹುದು. ಮಾತನಾಡುವಾಗ ಉಸಿರನ್ನು ಜೋರಾಗಿ ಎಳೆದುಕೊಳ್ಳಲು ಪ್ರಯತ್ನಿಸಬಹುದು ಅಥವಾ ಉಸಿರನ್ನು ಬಿಗಿಹಿಡಿದು ಕೊಳ್ಳುವುದು ಕೂಡ ಆಗಾಗ ಕಂಡುಬರುವ ಒಂದು ಲಕ್ಷಣ. ಅಕ್ಷರಗಳನ್ನು ಎಳೆಯುವುದು ಮತ್ತು ಪುನರುಚ್ಚರಿಸುವುದು-ಇವೆರಡನ್ನು ಉಗ್ಗಿನ ಸರ್ವಸಾಮಾನ್ಯ ಲಕ್ಷಣಗಳೆಂದು ಇತ್ತೀಚೆಗೆ ಪರಿಗಣಿಸಲಾಗಿದೆ. ಉಗ್ಗು ಪ್ರಾರಂಭವಾಗುವುದು ಸಾಮಾನ್ಯವಾಗಿ ಚಿಕ್ಕವಯಸ್ಸಿನಲ್ಲಿ 4-7 ವರ್ಷಗಳ ಒಳಗೆ. ಅಪರೂಪವಾಗಿ ಇದು ದೊಡ್ಡವರಲ್ಲಿ (ಪ್ರಥಮ ಬಾರಿಗೆ) ಕಾಣಿಸಿಕೊಳ್ಳಬಹುದು. ಉಗ್ಗುವವರಲ್ಲಿ ಎಲ್ಲ ಸಾಮಾಜಿಕ ವರ್ಗದವರನ್ನೂ ಎಲ್ಲ ಮಟ್ಟದ ಬುದ್ಧಿಶಕ್ತಿಯವರನ್ನೂ ಕಾಣಬಹುದು. ಆದರೆ ಈ ದೋಷ ಹೆಂಗಸರಿಗಿಂತ ಗಂಡಸರಲ್ಲಿ ಹೆಚ್ಚು. ಮಕ್ಕಳಲ್ಲಾಗಲಿ, ದೊಡ್ಡವರಲ್ಲಾಗಲಿ ಉಗ್ಗು ಎಲ್ಲ ಸನ್ನಿವೇಶಗಳಲ್ಲೂ ಎಲ್ಲ ಶಬ್ದಗಳ ವಿಷಯದಲ್ಲೂ ಕಾಣಿಸಿ ಕೊಳ್ಳದು. ಉಗ್ಗರು ಸಾಮಾನ್ಯವಾಗಿ ಹೊಸಬರೊಡನೆ, ದೊಡ್ಡವರೊಡನೆ, ಮೇಲಧಿಕಾರಿಗ ಳೊಡನೆ, ಅಧ್ಯಾಪಕರೊಡನೆ ಮತ್ತು ಒಂದಲ್ಲ ಒಂದು ರೀತಿಯಲ್ಲಿ ಹಿರಿಯರು ಎನಿಸಿಕೊಂಡವ ರೊಡನೆ ಮಾತನಾಡುವಾಗ ಹೆಚ್ಚು ಕಷ್ಟಪಡುತ್ತಾರೆ. ಹಾಗೆಯೇ ಉದ್ವಿಗ್ನತೆಯನ್ನು ಕೆರಳಿಸುವ, ಭಯ ಹುಟ್ಟಿಸುವ ಸನ್ನಿವೇಶದಲ್ಲೂ ಉಗ್ಗು ಜಾಸ್ತಿಯಾಗುತ್ತದೆ. ಉಗ್ಗುವವರೆಲ್ಲರೂ ಅಷ್ಟೇಮಟ್ಟಿಗೆ, ಮಕ್ಕಳೊಡನೆ, ತಮ್ಮ ಕೈ ಕೆಳಗಿನವರೊಡನೆ, ಆತ್ಮೀಯರಾದವರೊಡನೆ ಮಾತನಾಡುವಾಗ ತುಂಬ ಕಡಿಮೆ ಉಗ್ಗುತ್ತಾರೆ. ಉಗ್ಗಲು ತೊಡಗಿದ ಮಕ್ಕಳೆಲ್ಲರೂ ಜೀವಮಾನವಿಡೀ ಹಾಗೇ ಉಳಿಯಬೇಕಾಗಿಲ್ಲ. ಚಿಕ್ಕವಯಸ್ಸಿನಲ್ಲಿ ಉಗ್ಗಲು ಬಂದವರಲ್ಲಿ ಬಹುಮಂದಿ ಕ್ರಮೇಣ ಈ ದೋಷವನ್ನು ತಾವಾಗಿಯೇ ಕಳೆದುಕೊಳ್ಳುತ್ತಾರೆ. ಆದರೆ ಕೆಲವರಲ್ಲಿ ಮಾತ್ರ ಇದು ಕೊನೆಯವರೆಗೂ ಉಳಿಯಬಹುದು. ಹಾಗೆ ಉಳಿದು ಅತಿ ಹೆಚ್ಚು ಉಗ್ಗುವವರ ವರ್ತನೆಯಲ್ಲಿ ಕೆಲವೊಂದು ಬದಲಾವಣೆಗಳಾಗಬಹುದು. ಕೆಲವರು ಸಾಧ್ಯವಾದಷ್ಟೂ ಮಾತನ್ನು ಕಡಿಮೆ ಮಾಡಬಹುದು. ಹೊಸಬರ ಭೇಟಿ, ದೊಡ್ಡವರೊಡನೆ ಮಾತು ಮತ್ತು ಹೊಸ ಸನ್ನಿವೇಶಗಳಿಂದ ವಿಶೇಷವಾಗಿ ದೂರವಿರಬಹುದು. ಈ ದೋಷ ದಿಂದಾಗಿ ಕೀಳರಿಮೆ, ಸಂಕೋಚ ಮತ್ತು ನಿರುತ್ಸಾಹವನ್ನು ಕೆಲವರು ಅನುಭವಿಸಬಹುದು. ಮೇಲೆ ವಿವರಿಸಿದ ಕೈಕಾಲು ಮುಖಗಳ ಚೇಷ್ಟೆಗಳು ಈ ವ್ಯಕ್ತಿಗಳಲ್ಲಿ ಹೆಚ್ಚಿನಮಟ್ಟಿಗೆ ಕಾಣಿಸಿಕೊಳ್ಳುತ್ತವೆ. ಅಕ್ಷರಗಳನ್ನು ಎಳೆಯುವುದು ಮತ್ತು ಪುನರುಚ್ಚರಿಸುವುದು ಉಗ್ಗಿನ ಪ್ರಧಾನಲಕ್ಷಣಗಳಾದರೆ, ಮಾತಿನ ಸನ್ನಿವೇಶಗಳಿಂದ ದೂರ ಸರಿಯುವುದು ಮತ್ತು ಅಂಗಚೇಷ್ಟೆಗಳನ್ನು ಮಾಡುವುದು ಉಗ್ಗು ಉಲ್ಬಣಿಸಿದ್ದರ ಸೂಚನೆಯೆಂದು ಅನೇಕ ಸಂಶೋಧಕರು ಹೇಳುತ್ತಾರೆ. ಉಗ್ಗು ಏಕೆ ಮತ್ತು ಹೇಗೆ ಹುಟ್ಟಿಕೊಳ್ಳುತ್ತದೆ ಎಂಬ ಬಗ್ಗೆ ಒಮ್ಮತಕ್ಕಿಂತ ಭಿನ್ನಾಭಿಪ್ರಾಯ ಗಳೇ ಹೆಚ್ಚು. ಹಾಗಿದ್ದರೂ ವೈಜ್ಙಾನಿಕ ಸಿದ್ಧಾಂತಗಳನ್ನು ಎರಡು ಪಂಗಡಗಳಾಗಿ ವಿಂಗಡಿಸ ಬಹುದು. ಒಂದು ಪಂಗಡದ ತಜ್ಞರು ಉಗ್ಗು ಒಂದು ಶಾರೀರಿಕ ರೋಗದ ಬಾಹ್ಯ ಚಿಹ್ನೆ ಎಂದೂ ಇನ್ನೊಂದು ಪಂಗಡದವರು ಉಗ್ಗು ಮುಖ್ಯವಾಗಿ ಮಾನಸಿಕ ಸಮಸ್ಯೆ ಎಂದೂ ವಾದಿಸಿದ್ದಾರೆ. ಉಗ್ಗು ಯಾವ ದೈಹಿಕ ದೋಷದಿಂದ ಬರುತ್ತದೆಂಬುದನ್ನು ಕಂಡುಹಿಡಿಯಲು ಅನೇಕ ಪ್ರಯೋಗಗಳನ್ನು ಮಾಡಲಾಗಿದೆ. ಬಹುತೇಕ ಉಗ್ಗರಲ್ಲಿ ಗಂಟಲು, ನಾಲಗೆ, ಧ್ವನಿಪೆಟ್ಟಿಗೆ, ಅಂಗುಳ ಇವೆಲ್ಲ ಚೆನ್ನಾಗಿಯೇ ಇರುವುದನ್ನು ನೋಡಿದರೆ ಆಂಗಿಕ ದೋಷ ಉಗ್ಗಿಗೆ ಕಾರಣವೆನ್ನುವಂತಿಲ್ಲ. ಉಗ್ಗು ಮಾನಸಿಕ ತೊಂದರೆ ಎಂಬ ದೃಷ್ಟಿಕೋನವನ್ನೇ ಅನೇಕ ತಜ್ಞರು ಅನುಮೋದಿಸುತ್ತಾರೆ. ಉಗ್ಗು ಮಾನಸಿಕವೇ ಆದರೂ ಅದು ಆರಂಭವಾಗುವುದು ಹೇಗೆ ಎಂಬ ಬಗ್ಗೆ ಮತ್ತೆ ಭಿನ್ನಾಭಿಪ್ರಾಯಗಳಿವೆ. ಚಿಕ್ಕವಯಸ್ಸಿನ ಎಲ್ಲ ಮಕ್ಕಳ ಮಾತಿನಲ್ಲೂ ಅಕ್ಷರಗಳನ್ನು ಎಳೆಯುವುದು, ಪುನರುಚ್ಚರಿಸುವುದು, ಆ ಊ ಎನ್ನುವುದು ಇತ್ಯಾದಿ ದೋಷಗಳು ಇದ್ದೇ ಇರುತ್ತವೆ: ವಾಸ್ತವವಾಗಿ ಇವು ದೋಷಗಳೇ ಅಲ್ಲ: ಆದರೆ ಈ ದೋಷಗಳಿಂದ ಗಾಬರಿಗೊಂಡು ಹಲವು ತಂದೆ ತಾಯಿಯರು ಮಗುವಿನ ಮಾತನ್ನು ತಿದ್ದಲು ಹೋಗುತ್ತಾರೆ; ಮಗು ಉಗ್ಗುತ್ತದೆ ಎಂಬ ಹಣೆಪಟ್ಟಿ ಹಚ್ಚಿ ಮಗುವಿನಲ್ಲೂ ಭಯವನ್ನು ಹುಟ್ಟಿಸುತ್ತಾರೆ; ಕ್ರಮೇಣ ಮಗು ತನ್ನ ಮಾತಿನಲ್ಲಿ ಏನೋ ತೊಂದರೆ ಇದೆ ಎಂದು ನಂಬಿಕೊಂಡು ಆ ತೊಂದರೆಯಿಂದ ತಪ್ಪಿಸಿಕೊಳ್ಳಲು ಮಾತನಾಡುವಾಗ ಹೆಣಗತೊಡಗುತ್ತದೆ; ಈ ಹೆಣಗಾಟವೇ ಉಗ್ಗು ಎಂಬುದು ಒಂದು ಸಿದ್ಧಾಂತದ ತಿರುಳು. ಉದ್ವಿಗ್ನತೆ ಮತ್ತು ಈ ರೀತಿಯ ಅಹಿತಕರವಾದ ತೀವ್ರಭಾವಗಳು ಸಾಮಾನ್ಯವಾಗಿ ಮಾತಿನ ನಿರರ್ಗಳತೆಯನ್ನು ಕೆಡಿಸುತ್ತವೆ (ವಿಪರೀತ ಭಯದಲ್ಲಿ, ಕೋಪದಲ್ಲಿ ಮಾತನಾಡಲು ಹೊರಟರೆ ಎಲ್ಲರೂ ಉಗ್ಗುತ್ತಾರೆ). ಕೆಲವು ವ್ಯಕ್ತಿಗಳು ಕೆಲವೊಂದು ಸನ್ನಿವೇಶಗಳಲ್ಲಿ ಉದ್ವಿಗ್ನತೆಯನ್ನು ಅನುಭವಿಸಿ ಆಮೇಲೆ ಅದೇ ಮತ್ತು ಅಂಥದೇ ಸನ್ನಿವೇಶಗಳಲ್ಲಿ ಉದ್ವಿಗ್ನರಾಗಲು ಕಲಿತುಕೊಂಡುಬಿಡುತ್ತಾರೆ; ಈ ಕಲಿತ ಉದ್ವಿಗ್ನತೆಯ ಪರಿಣಾಮವಾಗಿ ಅವರು ಆಯಾ ಸನ್ನಿವೇಶಗಳಲ್ಲಿ ಮಾತಿನ ನಿರರ್ಗಳತೆಯನ್ನು ಕಳೆದುಕೊಳ್ಳುತ್ತಾರೆ, ಉಗ್ಗುತ್ತಾರೆ - ಎಂಬುದು ಇನ್ನೊಂದು ಸಿದ್ಧಾಂತದ ತಿರುಳು. ಈ ದೃಷ್ಟಿಯಿಂದ ಉಗ್ಗು ಕೆಲವೊಂದು ಅಹಿತಕರ ಸನ್ನಿವೇಶಗಳಲ್ಲಿ ವ್ಯಕ್ತಿ ಕಲಿತುಕೊಂಡ ಅನನುಕೂಲಕರವಾದ ಅಭ್ಯಾಸ. ಇದನ್ನು ಪುಷ್ಟೀಕರಿಸುವ ಹಲವು ಪ್ರಾಯೋಗಿಕ ನಿದರ್ಶನಗಳಿವೆ. ಉಗ್ಗು ಒಂದು ರೋಗವಲ್ಲ; ಆದ್ದರಿಂದ ಇದಕ್ಕೆ ಔಷಧಿ ಅಥವಾ ಶಸ್ತ್ರಕ್ರಿಯೆಗಳಿಲ್ಲ; ಹಾಗೆಯೇ ಜನಬಳಕೆಯಲ್ಲಿರುವ ಕೆಲವು ಕ್ರಮಗಳಿಂದ–ಉದಾಹರಣೆಗೆ, ಬಾಯಲ್ಲಿ ಬೆಣಚುಕಲ್ಲಿಟ್ಟುಕೊಂಡು ಮಾತಾಡಲು ಪ್ರಯತ್ನಿಸುವುದು, ನಾಲಗೆಯನ್ನು ಜೇನುತುಪ್ಪ ಹಾಕಿ ಉಜ್ಜುವುದು, ಬಯಲು ಅಥವಾ ಸಮುದ್ರ ತೀರಕ್ಕೆ ಹೋಗಿ ಅರಚುವುದು -ಇತ್ಯಾದಿ ಕ್ರಮಗಳಿಂದ ಯಾವುದೇ ಪ್ರಯೋಜನವಿಲ್ಲವೆಂಬುದು ಸ್ಪಷ್ಟವಾಗಿದೆ. ಇದನ್ನು ಈಗ ಮಾನಸಿಕ ವಿಧಾನಗಳಿಂದ ನಿವಾರಿಸುವುದು ಸಾಧ್ಯವಿದೆ. ಕ್ರಮೇಣ ತಾವಾಗಿ ಗುಣಹೊಂದಬಹುದಾದವರೂ ಕೂಡ ಚಿಕಿತ್ಸೆ ಪಡೆದು ಮೊದಲೇ ಇದರಿಂದ ಮುಕ್ತರಾಗ ಬಹುದು. ಚಿಕಿತ್ಸೆಯಲ್ಲಿ ಮುಖ್ಯವಾಗಿ ಬೇರೆ ಬೇರೆ ಸನ್ನಿವೇಶಗಳಲ್ಲಿ ವ್ಯಕ್ತಿ ಉದ್ವಿಗ್ನನಾಗದೆ ಪ್ರಶಾಂತವಾಗಿರುವುದನ್ನು ವಿಶೇಷ ವಿಧಾನಗಳ ಮೂಲಕ ಕಲಿಸಬೇಕಾಗುತ್ತದೆ. ಹಾಗೆಯೇ ಕಲಿಕೆಯ ಸೂತ್ರಗಳನ್ನು ಉಪಯೋಗಿಸಿ ಅಂಗಚೇಷ್ಟೆಗಳನ್ನು ನಿಲ್ಲಿಸಬಹುದು. ಇತ್ತೀಚೆಗೆ ಕಲಿಕೆಯ ಸೂತ್ರಗಳನ್ನು (ಪ್ರಿನ್ಸಿಪಲ್ಸ್‌ ಆಫ್ ಲರ್ನಿಂಗ್) ಆಧರಿಸಿದ ವರ್ತನೆ ಚಿಕಿತ್ಸೆಯ (ಬಿಹೇವಿಯರ್ ಥೆರಪಿ) ಕ್ರಮಗಳು ಉಗ್ಗನ್ನು ಹತೋಟಿಗೆ ತರುವುದರಲ್ಲಿ ಸಾಕಷ್ಟು ಯಶಸ್ವಿಯಾಗಿವೆ. ವಾಕ್ ಮತ್ತು ಶ್ರವಣ ತಜ್ಞರನ್ನು ಕಾಣಬೇಕು. ಇದಕ್ಕೆ ಅಗತ್ಯ ಬಿದ್ದರೆ ಮನೋವೈದ್ಯರ ನೆರವೂ ಬೇಕಾದೀತು. ಉಗ್ಗಿನ ಬಗೆಗಿನ ಹೆಚ್ಚಿನ ವಿವರಗಳೂ ಮಾತಿನ ಇತರ ದೋಷಗಳಿಗೂ (ನೋಡಿ -ಮಾತಿನ ತೊಡಕುಗಳು). (ಎಂ.ಎನ್.ಎಚ್.;ಆರ್.ಎ.ಎನ್.)

"https://kn.wikipedia.org/w/index.php?title=ಉಗ್ಗು&oldid=609577" ಇಂದ ಪಡೆಯಲ್ಪಟ್ಟಿದೆ
  NODES
Done 1