ಕೋತಿ
ಕಾಲಮಾನದ ವ್ಯಾಪ್ತಿ:
ತಡವಾದ ಇಯೋಸಿನ್‌ - ಇಂದಿನ ವರೆಗೆ
lll
ಬಾನೆಟ್ ಕೋತಿ
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: ಪ್ರಾಣಿ
ವಂಶ: ಕಾರ್ಡೇಟ
ವರ್ಗ: ಸಸ್ತನಿ
ಗಣ: ಪ್ರೈಮೇಟ್
ಉಪಗಣ: ಹ್ಯಾಪ್ಲೋರ್ಹಿನಿ
ಇಂಫ್ರಾಗಣ ಸೆಮಿಫೋರ್ಮೆ
(ಅರ್ನೆಸ್ಟ್ ಹೆಕಲ್, ೧೮೬೬)
ಸೇರಿಸಲಾದ ಗುಂಪುಗಳು
ಕಾಲ್ಟ್ರಚಿಡೆ, ಸೆಬಿಡೆ, ಅಯೊಟಿಡೆ
ಪಿತೆಸಿಡೆ, ಅಟೆಲಿಡೆ, ಸರ್ಕೊಪಿತೆಸಿಡೆ, †ಪಾರಪಿತೆಸಿಡೆ (ಅಳಿದಿದೆ)-
(ಕುಟುಂಬಗಳು)
ಹೊರಗಿಟ್ಟ ಗುಂಪುಗಳು
ಹೊಲೊಬಟಿಡೆ, ಹೋಮಿನಿಡೆ- (ಕುಟುಂಬಗಳು)

ಕೋತಿಯು ಹಾಪ್ಲೋರಿನಿ ಉಪಗಣ ಹಾಗೂ ಸಿಮಿಯನ್ ಅಡಿಗಣದ ಒಂದು ಪ್ರೈಮೇಟ್, ಪ್ರಾಚೀನ ವಿಶ್ವದ ಕೋತಿ ಅಥವಾ ನೂತನ ವಿಶ್ವದ ಕೋತಿಯಾಗಿರಬಹುದು, ಆದರೆ ಏಪ್‍ಗಳನ್ನು ಹೊರತುಪಡಿಸಿ (ಮಾನವರನ್ನು ಒಳಗೊಂಡಂತೆ). ಕೋತಿಯ ಸುಮಾರು ೨೬೦ ಪರಿಚಿತ ಜೀವಂತ ಪ್ರಜಾತಿಗಳಿವೆ. ಇದರಲ್ಲಿ ಬಹಳಷ್ಟು ವೃಕ್ಷವಾಸಿಗಳಾಗಿದ್ದರೂ ಬಬೂನ್‍ಗಳಂತಹ ಪ್ರಧಾನವಾಗಿ ನೆಲದ ಮೇಲೆ ವಾಸಿಸುವ ಪ್ರಜಾತಿಗಳಿವೆ.

ಸಾಮಾನ್ಯವಾಗಿ ಕೋತಿಗಳು[] ಎಂದು ನಾವು ಯಾವುವನ್ನೂ ಕರೆಯುತ್ತೇವೆಯೋ ಆ ಗುಂಪು ಎರಡು ದೊಡ್ಡ ಗುಂಪುಗಳನ್ನು, ಹಳೆಯ ಪ್ರಪಂಚದ ಕೋತಿಗಳು ಮತ್ತು ಹೊಸ ಪ್ರಪಂಚದ ಕೋತಿಗಳನ್ನು, ಒಳಗೊಳ್ಳುತ್ತದೆ. ವಾನರಗಳು ಮತ್ತು ಮಾನವರೂ ಇದೇ ಗುಂಪಿನಲ್ಲಿ ಬರುವ ಹೊಸ ಪ್ರಪಂಚದ ಕೋತಿಗಳಿಗಿಂತ ಹಳೆಯ ಪ್ರಪಂಚದ ಕೋತಿಗಳಿಗೆ ಹೆಚ್ಚು ಹತ್ತಿರದ ಸಂಬಂಧಿಗಳು.

ಗಣ ಪ್ರೈಮೇಟ್‌ನ ಎರಡು ಉಪಗಣಗಳಲ್ಲಿ ಒಣ ಮೂಗಿರುವ ಹಾಪ್ಲೊಹರ್ನಿ ಉಪಗಣದಲ್ಲಿ ಕೋತಿಗಳು ಅಥವಾ ಮಂಗಗಳು ಇವೆ. ಈ ಉಪಗಳದ ಕೆಳಗೆ ಬರುವ ಟಾರ್ಸಿಫೊರ್ಮೆ ಇಂಫ್ರಾಗಣ (ಟಾರ್ಸಿಯರ್‌ಗಳು ಇದರಲ್ಲಿ ಬರುತ್ತವೆ) ಮತ್ತು ಹೋಮಿನಿಡೆ ಮಹಾಕುಟುಂಬ (ಇದರಲ್ಲಿ ವಾನರಗಳು ಮತ್ತು ಮಾನವರು ಬರುತ್ತಾರೆ) ಇದರಡಿ ಬರುವುದಿಲ್ಲ. ಹೀಗಾಗಿ ಈ ಗುಂಪು ಒಂದೇ ಮೂಲದ ಎಲ್ಲಾ ಜೀವಿಗಳನ್ನೂ ಒಳಗೊಳ್ಳುವುದಿಲ್ಲ. ಹೀಗಾಗಿ ಇದು ಜೀವ ವರ್ಗೀಕರಣದ ವಿಭಜನೆಯಲ್ಲ.

ವಿವರಗಳು

ಬದಲಾಯಿಸಿ
 
ಗೊಯಲ್ಡಿಯ ಮಾರ್ಮೊಸೆಟ್

ಕೋತಿಗಳು ಗಾತ್ರದಲ್ಲಿ ಭಿನ್ನವಾಗಿವೆ. ಉದಾಹರಣೆಗೆ ಪಿಗ್ಮಿ ಮಾರ್ಮೊಸೆಟ್ ೧೧೭ ಮಿಮೀನಷ್ಟು (೪.೬ ಇಂಚು) ಸಣ್ಣದು ಮತ್ತು ಅದರ ಬಾಲವು ೧೭೨ ಮಿಮೀ (೬.೮ ಇಂಚು) ಉದ್ದವಿರುತ್ತದೆ, ತೂಕ ೧೦೦ ಗ್ರಾಂಗಳಿಗೂ ತುಸು ಹೆಚ್ಚು.[] ಗಂಡು ಮಾಂಡ್ರಿಲ್ ಬಹುತೇಕ ಒಂದು ಮೀಟರ್ ಉದ್ದವಿದ್ದು (೩.೩ ಅಡಿ ಉದ್ದ), ಅದರ ತೂಕ ೩೬ ಕಿಲೊಗ್ರಾಂ ವರೆಗೂ ಇರುತ್ತದೆ.[] ಕೆಲವು ಮರಗಳಲ್ಲಿ ವಾಸಿಸಿದರೆ ಇನ್ನೂ ಕೆಲವು ಸವನ್ನಾದಲ್ಲಿ ವಾಸಿಸುತ್ತವೆ. ಆಹಾರವು ಸಹ ಬೇರೆ ಬೇರೆ ಪ್ರಭೇದಗಳಲ್ಲಿ ಬೇರೆ ಬೇರೆಯಾಗಿದ್ದು ಇವುಗಳಲ್ಲಿ ಕೆಲವನ್ನು ಹೊಂದಿರ ಬಹುದು: ಹಣ್ಣುಗಳು, ಎಲೆಗಳು, ಬೀಜಗಳು, ಕರಟಕಾಯಿ (ಚಿಪ್ಪಿನೊಳಗೆ ತಿರುಳಿರುವ ಕಾಯಿ), ಹೂವು, ಮೊಟ್ಟೆ ಮತ್ತು ಸಣ್ಣ ಪ್ರಾಣಿಗಳು (ಕೀಟಗಳು ಮತ್ತು ಜೇಡರಗಳು).[]

ಹೊಸ ಪ್ರಪಂಚದ ಕೋತಿಗಳಲ್ಲಿ (ದಕ್ಷಿಣ ಅಮೆರಿಕ ಮತ್ತು ಕೇಂದ್ರ ಅಮೆರಿಕಗಳಲ್ಲಿರುವ ಕೋತಿಗಳು) ಗ್ರಾಹಕ ಬಾಲ (ಪ್ರಿಹೆನ್ಸೈಲ್ ಟೇಲ್) ಇರುವುದು ವಿಶೇಷವಾಗಿದ್ದು ಇದು ಐದನೆಯ ಕೈ ಯಾ ಕಾಲಿನಂತೆ ಕೆಲಸಮಾಡಬಲ್ಲದು ಇದಕ್ಕೆ ಭಿನ್ನವಾಗಿ ಹಳೆಯ ಪ್ರಪಂಚದಲ್ಲಿನ ಕೋತಿಗಳಲ್ಲಿ ಗ್ರಾಹಕ ಶಕ್ತಿಯಿಲ್ಲದ ಬಾಲವಿರುತ್ತದೆ ಮತ್ತೆ ಕೆಲವು ಕೋತಿಗಳಲ್ಲಿ ಬಾಲ ಕಾಣಬರುವುದಿಲ್ಲ. ಹೊಸ ಪ್ರಪಂಚ ಮತ್ತು ಹಳೆಯ ಪ್ರಪಂಚದ ಕೋತಿಗಳ ನಡುವೆ ಎದ್ದು ಕಾಣುವ ಗುಣಗಳಲ್ಲಿ ಮೂಗು ಮುಖ್ಯವಾದುದು. ಹೊಸ ಪ್ರಪಂಚದ ಕೋತಿಗಳಲ್ಲಿ ಮೂಗಿನ ಹೊಳ್ಳೆಗಳು ಪಕ್ಕಕ್ಕೆ ಮುಖಮಾಡಿರುತ್ತವೆ ಇದಕ್ಕೆ ಭಿನ್ನವಾಗಿ ಹಳೆಯ ಪ್ರಪಂಚದ ಕೋತಿಗಳಲ್ಲಿ ಹೊಳ್ಳೆಗಳು ಕೆಳ ಮುಖವಾಗಿರುತ್ತವೆ.[]

ಮಾನವರು ಮತ್ತು ಇತರ ಕಶೇರುಕಗಳಲ್ಲಿನ (ಹಳೆಯ ಪ್ರಪಂಚದ ಕೋತಿಗಳನ್ನೂ ಒಳಗೊಂಡು) ಬಣ್ಣದ ದೃಷ್ಟಿಗೆ ತ್ರಿವರ್ಣಿ (ಟ್ರೈಕೊಮೆಸಿ –ಮೂರು ಭಿನ್ನ ಕೋನ್‌ಗಳು ಅಥವಾ ಬಣ್ಣವನ್ನು ಗ್ರಹಿಸುವ ಕಣ್ಣಿನ ರೆಟಿನದಲ್ಲಿರುವ ಜೀವಿಕೋಶಗಳು ಇರುತ್ತವೆ) ಎಂದು ಕರೆಯಲಾಗಿದೆ. ಇದಕ್ಕೆ ಭಿನ್ನವಾಗಿ ಹೊಸ ಪ್ರಪಂಚದ ಕೋತಿಗಳು ತಿವರ್ಣಿಗಳಿರ ಬಹುದು, ದ್ವಿವರ್ಣಿಗಳಿರ ಬಹುದು ಮತ್ತು ಗೂಬೆ ಕೋತಿ ಮತ್ತು ದೊಡ್ಡ ಗಲಗೊಗಳಲ್ಲಿ ಇದ್ದಂತೆ ಏಕವರ್ಣಿಗಳೂ ಆಗಿರ ಬಹುದು.[] ಹಳೆಯ ಪ್ರಪಂಚದ ಕೋತಿ ಹಾಗೂ ಹೊಸ ಪ್ರಪಂಚದ ಕೋತಿಗಳ ನಡುವೆ ಹಲ್ಲುಗಳಲ್ಲಿಯೂ ವ್ಯತ್ಯಾಸವಿದೆ. ಹೊಸ ಪ್ರಪಂಚದ ಕೋತಿಗಳ ಹಲ್ಲಿನ ಸೂತ್ರವು ೨.೧.೩.೩೨.೧.೩.೩ ಅಥವಾ ೨.೧.೩.೨೨.೧.೩.೨ (ಎರಡು ಬಾಚಿಹಲ್ಲುಗಳು ಅಥವಾ ಇಂಸಿಸರ್, ಒಂದು ಕೋರೆಹಲ್ಲು ಅಥವಾ ಕ್ಯಾನೈನ್, ಮೂರು ಪೂರ್ವಅರೆಯುವ ಹಲ್ಲು ಮತ್ತು ಎರಡು ಅಥವಾ ಮೂರು ಅರೆಯು ಹಲ್ಲುಗಳು ಅಥವಾ ಮೊಲಾರ್‌ಗಳು). ಹಳೆಯ ಪ್ರಪಂಚದ ಕೋತಿಗಳು ಮತ್ತು ಮಾನವನನ್ನೂ ಒಳಗೊಂಡು ಗೊರಿಲ್ಲ, ಚಿಂಪಾಜಿ, ಬೊನೊಬೊ, ಸಿಯಮಾಂಗ್, ಗಿಬ್ಬಾನ್ ಮತ್ತು ಒರುಂಗುಟನ್‌ಗಳಲ್ಲಿನ ಹಲ್ಲಿನ ಸೂತ್ರ ೨.೧.೨.೩೨.೧.೨.೩.[]

ಹಳೆ ಪ್ರಪಂಚದ ಕೋತಿಗಳು ಮತ್ತು ಹೊಸ ಪ್ರಪಂಚದ ಕೋತಿಗಳು ಯಾವಾಗ ಕವಲೊಡೆದವು ಎಂದು ಅಂದಾಜಿಸಲು ಹಲವು ಸಮಸ್ಯೆಗಳಿವೆ. ಮೂಲ ಸಮಸ್ಯೆ ಹೊಸ ಪ್ರಪಂಚದ ಕೋತಿಗಳು ಹೇಗೆ ಒಮ್ಮೆಂದೊಮ್ಮೆಲೆ ದಕ್ಷಿಣ ಅಮೆರಿಕಕ್ಕೆ ಬಂದವು ಎಂಬುದು ಒಂದು ಸಮಸ್ಯೆಯಾಗಿದೆ. ಒಮ್ಮಿಂದೊಮ್ಮೆಲೆ ಅವುಗಳ ಪಳಿಯುಳಿಕೆಗಳು ಸುಮಾರು ೨೬ ದಶಲಕ್ಷ ವರುಷಗಳ ಹಿಂದೆ ಕಾಣಿಸಿಕೊಳ್ಳುತ್ತವೆ. ಆಫ್ರಿಕಾ ಮತ್ತು ಏಶಿಯದಲ್ಲಿ ಕೆಲವು ಪಳಿಯುಳಿಕೆಗಳು ಎಲ್ಲಾ ಕೋತಿಗಳಿಗಳಿಗೂ ಮೂಲವೆಂದು ಸೂಚಿಸುತ್ತವೆ. ಆದರೆ ಅಂತಹ ಯಾವುದೇ ಪಳಿಯುಳಿಕೆ ದಕ್ಷಿಣ ಅಮೆರಿಕದಲ್ಲಿ ದೊರೆತಿಲ್ಲ. ಈ ಕಾಲಕ್ಕಾಗಲೇ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಗಳು ಬೇರೆಬೇರೆಯಾಗಿದ್ದವು. ಹೀಗಾಗಿ ಯಾರೂ ಈ ವಿಕಾಸವನ್ನು ಈ ಎರಡೂ ಖಂಡಗಳು ಸೇರಿದಾಗ ಆದ ಘಟನೆ ಎಂದು ವ್ಯಾಖ್ಯಾನಿಸುವುದಿಲ್ಲ.[]: page 211-212 ಹೀಗಾಗಿ ದಕ್ಷಿಣ ಅಮೆರಿಕದಲ್ಲಿನ ಹೊಸ ಪ್ರಪಂಚದ ಮೂಲ ಜೀವಿಗಳು ಆಫ್ರಿಕಾದಿಂದ ಅಂದಿನ ಕಾಲಮಾನದಲ್ಲಿ ಇದ್ದ ಒಂದೂ ಅಥವಾ ಹೆಚ್ಚು ಭೂಸೇತುವೆಗಳ ಮೂಲಕ ವಲಸೆ ಹೋದವು ಎಂಬ ಊಹನವನ್ನು (ಹೈಪೊತಿಸಿಸ್) ವಿವರಣೆಗೆ ಬಳಸಲಾಗುತ್ತಿದೆ.[] ಈ ಹಿನ್ನೆಲೆಯಲ್ಲಿ ಹಳೆ ಮತ್ತು ಹೊಸ ಪ್ರಪಂಚದ ಕೋತಿಗಳ ಕವಲೊಡೆಯುವಿಕೆಯನ್ನು ೨೬ ರಿಂದ ೫೧ ದಶಲಕ್ಷ ವರುಷಗಳ ಹಿಂದೆ ಇರಿಸಲಾಗಿದೆ.[]: page 215 ಇನ್ನೊಂದು ಮೂಲದ ಇದನ್ನು ೪೦ ದಶಲಕ್ಷ ವರುಷಗಳ ಹಿಂದೆ ಎನ್ನುತ್ತದೆ.[] ಹೀಗೆ ಕಲವೊಡೆದ ಹೊಸ ಪ್ರಪಂಚದ ಕೋತಿಗಳು ನಂತರ ವೈವಿಧ್ಯತೆಯನ್ನು ಮೈಗೂಡಿಸಿಕೊಂಡವು.

ವೈಜ್ಞಾನಿಕ ವರ್ಗೀಕರಣ

ಬದಲಾಯಿಸಿ
ಕೋತಿಗಳು ಮತ್ತು ಪ್ರೈಮೇಟ್‌ಗಳು


  ಪ್ರೈಮೇಟ್ 
 ಹಾಪ್ಲೊರ್ಹಿನಿ 
 ಸಿಮಿಫೋರಮೆ 
 ಕಾಟರ್ಹಿನಿ 

 ಹೊಮಿನೊಯಿಡೆ 



 ಸೆರ್ಕೊಪಿತೆಕೊಯಿಡ- ಹಳೆ ಪ್ರಂಪಚದ ಕೋತಿಗಳು 




 ಪ್ಲಾಟಿರ್ರಿಹಿನಿ- ಹೊಸ ಪ್ರಂಪಚದ ಕೋತಿಗಳು 




ಟಾರ್ಸಿಫೋರ್ಮೆ




ಸ್ಟ್ರೆಪ್ಸಿರ್ಹಿನಿ



  ಕೋತಿಗಳು
  ವಾನರ ಮತ್ತು ಮಾನವರು

(ಗಮನಿಸಿ ಹಳೆಯ ಪ್ರಪಂಚದ ಕೋತಿಗಳಿಗೆ ಹೊಸ ಪ್ರಪಂಚದ ಕೋತಿಗಿಂತ ಹೊಮಿನೊಯಿಡೆ ಹತ್ತಿರದ ಸಂಬಂಧಿ)

 
  • ಗಣ (ಆರ್ಡರ್): ಪ್ರೈಮೇಟ್
    • ಉಪಗಣ ಸ್ಟ್ರೆಪ್ಸಿರ್ಹಿನಿ: ಲೆಮುರ್, ಲೋರಿಸ್ ಮತ್ತು ಗಾಲಗೊಗಳು.
    • ಉಪಗಣ ಹಾಪ್ಲೊರ್ಹಿನಿ: ಟಾರ್ಸಿಯರ್, ಕೋತಿ ಮತ್ತು ವಾನರಗಳು.
      • ಇಂಫ್ರಾಗಣ ಟ್ರಾನ್ಸಿಫಾರ್ಮೆa
        • ಕುಟುಂಬ ಟಾರ್ಸಿಡೆ: ಟಾರ್ಸಿಯರ್.
      • ಇಂಫ್ರಾಗಣ ಸಿಮಿಫಾರ್ಮೆb: ಸಿಮಿಯನ್‌ಗಳು
        • ಪಾರ್ವಗಣ ಪ್ಲಾಟಿರ್ಹಿನಿ: ಹೊಸ ಪ್ರಪಂಚದ ಕೋತಿಗಳು.
          • ಕುಟುಂಬ ಕಾಲ್ಟ್ರಿಚಿಡೆ: ಮಾರ್ಮೊಸೆಟ್ ಮತ್ತು ಟಾಮರಿನ್‌ಗಳು (೪೨ ಪ್ರಭೇದಗಳು)
          • ಕುಟುಂಬ ಸೆಬಿಡೆc: ಕಾಪುಚಿನ್ ಮತ್ತು ಅಳಿಲು ಕೋತಿಗಳು (೧೪ ಪ್ರಭೇದಗಳು)
          • ಕುಟುಂಬ ಅಯಟಿಡೆ: ರಾತ್ರಿ ಕೋತಿಗಳು (೧೧ ಪ್ರಭೇದಗಳು)
          • ಕುಟುಂಬ ಪಿತೆಸಿಡೆ: ಟಿಟಿ, ಸಾಕಿ ಮತ್ತು ಯುಕಾರಿಗಳು (೪೧ ಪ್ರಭೇದಗಳು)
          • ಕುಟುಂಬ ಅಟೆಲಿಡೆ: ಊಳು ಕಪಿ, ಜೇಡಕೋತಿ, ಉಣ್ಣೆ ಕೋತಿ (೨೪ ಪ್ರಭೇದಗಳು)
        • ಪಾರ್ವಗಣ ಕಾಟರ್ಹಿನಿ
          • ಮಹಾಕುಟುಂಬ ಸೆರ್ಕೊಪಿತೆಕೊಯಿಡೆ
            • ಕುಟುಂಬ ಸೆರ್ಕೊಪಿತೆಸಿಡೆ: ಹಳೆ ಪ್ರಪಂಚದ ಕೋತಿಗಳು (೧೩೫ ಪ್ರಭೇದಗಳು)
          • ಮಹಾಕುಟುಂಬ ಹೊಮಿನೊಯಿಡೆ: ವಾನರಗಳು
            • ಕುಟುಂಬ ಹೈಲೊಬಟಿಡೆ: ಗಿಬ್ಬಾನ್‌ (“ಸಣ್ಣ ವಾನರ”) (೧೭ ಪ್ರಭೇದಗಳು)
            • ಕುಟುಂಬ ಹೋಮಿನಿಡೆ: ಮಹಾ ವಾನರಗಳು ಮತ್ತು ಮಾನವರು (೭ ಪ್ರಭೇದಗಳು)
ಟಿಪ್ಪಣಿ: a ಕೆಲವೊಂದು ವರ್ಗೀಕಣದಲ್ಲಿ ಪ್ರತ್ಯೇಕ ಉಪಗಣ ಟಾರ್ಸಿಯಾಯಿಡೆ ಎಂದು ವಿಭಜಿಸಲಾಗುತ್ತದೆ. b ಇದರ ಹಳೆಯ ಹೆಸರು ಆಂತ್ರೊಪಾಯಿಡ್ ಕೆಲವೊಮ್ಮೆ ಬಳಸಲಾಗುತ್ತದೆ. c ಕೆಲವೊಂದು ವರ್ಗೀಕಣದಲ್ಲಿ ಹೊಸ ಪ್ರಪಂಚದ ಕೋತಿಗಳನ್ನು (ಪ್ಲಾಟಿರ್ಹಿನಿ ಪಾರ್ವಗಣವನ್ನು) ಕಾಲ್ಟ್ರಿಚಿಡೆ ಮತ್ತು ಸಿಬೆಡೆ ಕುಟುಂಬಗಳು ಎಂದು ಎರಡೇ ವಿಭಜನೆಯನ್ನು ಮಾಡಿ ಸಿಬೆಡೆಯನ್ನು ನಾಲ್ಕು ಉಪಕುಟುಂಬಗಳಾಗಿ ವಿಭಜಿಸುತ್ತಾರೆ.

ಮಾನವನೊಂದಿಗಿನ ಸಂಬಂಧ

ಬದಲಾಯಿಸಿ

ಕೋತಿಗಳನ್ನು ಮಾನವನು ಸಾಕುಪ್ರಾಣಿಯಾಗಿ ಉಳಿಸಿಕೊಳ್ಳ ಬಹುದು, ಪ್ರಯೋಗಶಾಲೆಗಳಲ್ಲಿ ಮತ್ತು ಆಕಾಶಯಾನದಲ್ಲಿ ಮಾದರಿ ಪ್ರಾಣಿಗಳಾಗಿ ಬಳಸಬಹುದು. ಕೆಲವೆಡೆ ಕೋತಿಯನ್ನು, ಬೆಳೆಯನ್ನು ಹಾಳುಮಾಡುವಾಗ[] ಅಥವಾ ಪ್ರವಾಸಿಗಳಿಗಳ ಮೇಲೆ ದಾಳಿಮಾಡುವಾಗ ಪೀಡೆಯಾಗಿ ಪರಿಗಣಿಸಲಾಗುತ್ತದೆ. ಕೋತಿಗಳನ್ನು ವಿಕಲಾಂಗರಿಗೆ ಸಹಾಯಕ ಪ್ರಾಣಿಗಳಾಗಿಯೂ ತರಬೇತಿ ನೀಡಲಾಗುತ್ತದೆ.

 
ರೆಸಸ್ ಕೋತಿ

ಕೆಲವು ಸಂಘಟನೆಗಳು ಕಾಪುಚಿನ್ ಕೋತಿಗಳನ್ನು ಸೇವೆಯ ಪ್ರಾಣಿಗಳಾಗಿ ತರಬೇತಿ ನೀಡುತ್ತಾರೆ. ಕೈ ಹಾಗೂ ಕಾಲುಗಳು ಲಕ್ವ ಹೊಡೆದವರ ಸೇವೆಗೆ ಇವನ್ನು ಬಳಸಲಾಗುತ್ತದೆ. ಅವು ಮನೆಯಲ್ಲಿ ಆಹಾರ ಸೇವನೆ, ಸಾಮಾನು ತೆಗೆದುಕೊಂಡು ಬರುವುದು, ವೈಯಕ್ತಿಕ ಕೆಲಸಗಳಿಗೆ ಮುಂತಾದವಕ್ಕೆ ಸಹಾಯ ಮಾಡುತ್ತವೆ.[] ಗ್ರಿವೆಟ್ (ಆಫ್ರಿಕಾದ ಹಸಿರು ಕೋತಿ) ರೆಸಸ್ ಕೋತಿ, ಏಡಿ ತಿನ್ನುವ ಕೋತಿಗಳನ್ನು (ಏಡಿಗಳನ್ನು ಮಾತ್ರವಲ್ಲದೆ ಹಣ್ಣು, ಇತರ ಪ್ರಾಣಿಗಳು ಮುಂತಾದವನ್ನು ತಿನ್ನುವ ಇದು ಸರ್ವಭಕ್ಷಿ) ಹೆಚ್ಚಾಗಿ ಪ್ರಾಣಿಗಳ ಮೇಲಿನ ಸಂಶೋಧನೆಗೆ ಬಳಸಲಾಗುತ್ತದೆ. ಬಳಕೆಗೆ ಸಾಮಾನ್ಯವಾಗಿ ವನ್ಯ ಜೀವಿಯನ್ನು ಹಿಡಿಯಲಾಗುತ್ತದೆ ಅಥವಾ ಅದೇ ಕೆಲಸಕ್ಕೆಂದು ಸಾಕಲಾಗುತ್ತದೆ.[೧೦][೧೧] ಸಾಕ್ಷೇಪಿಕವಾಗಿ ಸುಲಭವಾಗಿ ಇವುಗಳನ್ನು ಅಂಕೆಯಲ್ಲಿಟ್ಟು ಕೊಂಡು ಬಳಸುವ ಸಲೀಸು, ಸಾಕ್ಷೇಪಿಕವಾಗಿ ವೇಗವಾದ ಸಂತಾನೋತ್ಪತ್ತಿ (ವಾನರಗಳಿಗೆ ಹೋಲಿಸಿದರೆ) ಮತ್ತು ಭೌತಿಕವಾಗಿ, ಮಾನಸೀಕವಾಗಿ ಅವುಗಳ ಮಾನವನೊಂದಿಗಿನ ಸಾಮ್ಯತೆ ಇವುಗಳ ಬಳಕೆಯ ಪ್ರಮುಖ ಕಾರಣಗಳು. ಜಗತ್ತಿನಾದ್ಯಂತ ಒಂದರಿಂದ ಎರಡು ಲಕ್ಷ ಮಾನವೇತರ ಪ್ರೈಮೇಟ್‌ಗಳನ್ನು ಪ್ರತಿ ವರುಷ ಸಂಶೋಧನೆಯಲ್ಲಿ ಬಳಸಲಾಗುತ್ತಿದೆ ಎಂದು ಭಾವಿಸಲಾಗಿದ್ದು[೧೧] ಇವುಗಳಲ್ಲಿ ಶೇ ೬೪.೭ ಹಳೆಯ ಪ್ರಪಂಚದ ಕೋತಿಗಳಾದರೆ, ಶೇ ೫.೫ ಹೊಸ ಪ್ರಪಂಚದ ಕೋತಿಗಳು.[೧೨] ಈ ಸಂಖ್ಯೆಯು ಒಟ್ಟು ಸಂಶೋಧನೆಗೆ ಬಳಸುವ ಪ್ರಾಣಿಗಳ ಸಣ್ಣ ಭಾಗ ಮಾತ್ರ.[೧೧] ಪ್ರಯೋಗಕ್ಕೆ ಕೋತಿಗಳ ಬಳಕೆ ವಿವಾದಾತ್ಮಕವಾಗಿದೆ. ಅಮೆರಿಕ ಸಂಯಕ್ತ ಸಂಸ್ಥಾನ ಮತ್ತು ಫ್ರಾನ್ಸ್‌ನ್ನೂ ಒಳಗೊಂಡು ಹಲವು ದೇಶಗಳು ತಮ್ಮ ಬಾಹ್ಯಾಕಾಶ ಕಾರ್ಯಕ್ರಮಗಳಲ್ಲಿ ಕೋತಿಗಳನ್ನು ಬಳಸಿವೆ. ಅಮೆರಿಕ ಜೂನ್‌ ೧೪, ೧೯೪೯ರಲ್ಲಿ ಉಡಾಯಿಸಿದ ವಿ-೨ ರಾಕೆಟ್‌ನಲ್ಲಿ ಬಾಹ್ಯಾಕಾಶಕ್ಕೆ ಹಾರಿದ ಮೊದಲ ಕೋತಿ ಆಲ್ಬರ್ಟ್ II.[೧೩]

ಆಹಾರವಾಗಿ

ಬದಲಾಯಿಸಿ

ದಕ್ಷಿಣ ಏಶಿಯಾದ ಕೆಲವು ಭಾಗಗಳಲ್ಲಿ, ಆಫ್ರಿಕಾ ಮತ್ತು ಚೀನದಲ್ಲಿ ಕೋತಿಗಳ ಮೆದುಳನ್ನು ವಿಶಿಷ್ಟ ಭಕ್ಷವಾಗಿ ಬಳಸಲಾಗುತ್ತದೆ.[೧೪] ಇಸ್ಲಾಂನ ಸಂಪ್ರದಾಯಿಕ ಆಹಾರ ಪದ್ಧತಿಯಲ್ಲಿ ಕೋತಿಗಳನ್ನು ಆಹಾರವಾಗಿ ಬಳಸಲು ನಿಷೇದವಿದೆ. ಕೋತಿಯನ್ನು ಆಫ್ರಿಕಾದ ಕೆಲವು ಭಾಗಗಳಲ್ಲಿ “ಬುಶ್‌ಮೀಟ್” ಹೆಸರಿನಲ್ಲಿ ಬಳಸಲಾಗುತ್ತದೆ.[೧೫]

ಸಾಹಿತ್ಯದಲ್ಲಿ

ಬದಲಾಯಿಸಿ

ರಾಮಾಯಣವು ವಾನರರನ್ನು ಮಾತು, ಬಟ್ಟೆ, ವಾಸ, ಅಂತ್ಯಸಂಸ್ಕಾರ ಮುಂತಾದವುಗಳಲ್ಲಿ ಮಾನವರಂತೆಯೂ ಜೊತೆಗೆ ಹಾರುವುದು, ಕೂದಲು, ಚರ್ಮ, ಬಾಲ ಮುಂತಾದ ಗುಣಗಳಲ್ಲಿ ಕೋತಿಗಳಂತೆಯೂ ಚಿತ್ರಿಸುತ್ತದೆ.[೧೬] ಚೀನದ ಪುರಾಣಗಳಲ್ಲಿ ಸನ್ ವುಕೊಂಗ್ (ಕಪಿ ದೊರೆ) ಪ್ರಮುಖವಾದ ಪಾತ್ರ. ಜಪಾನಿನ ಜಾನಪದ ಸಂಸ್ಕತಿಯಲ್ಲಿ ಸಂಜರು ಅಥವಾ ಮೂರು ಬುದ್ಧಿವಂತ ಕೋತಿಗಳು “ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಕೇಳಬೇಡ, ಕೆಟ್ಟ ಮಾತನಾಡಬೇಡ” ಎನ್ನುವ ನಾಣ್ಣುಡಿಯನ್ನು ಪ್ರತಿನಿಧಿಸುತ್ತವೆ. ಚೀನದ ಪಂಚಾಗದಲ್ಲಿ ಹನ್ನೆರಡು ಪ್ರಾಣಿಗಳ ಚಕ್ರದಲ್ಲಿ ಒಂಬತ್ತನೆಯ ವರುಷ ಕೋತಿಯದು.[೧೭]

ಧಾರ್ಮಿಕ ಸಂಕೇತವಾಗಿ

ಬದಲಾಯಿಸಿ

ಭಾರತೀಯ ಧರ್ಮದಲ್ಲಿ ಹನುಮಂತ ಕೋತಿಯ ಮುಖವನ್ನು ಹೋಲುವ ಮುಖದ ಮಾನವ ದೈವ. ರಾಮಾಯಣದಲ್ಲಿ ಹನುಮಾನ್ ಅಥವಾ ಹನುಮಂತ ಸೀತೆಯನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವಹಿಸುತ್ತಾನೆ. ಹಲವು ದೇವಾಲಯಗಳಲ್ಲಿ ಪ್ರತಿಮೆಯ ರೂಪದಲ್ಲಿ ಪೂಜಿಸಲ್ಪಡುವ ಹನುಮಾನ್ ದೈರ್ಯ, ಶಕ್ತಿ ಮತ್ತು ದೀರ್ಘಾಯುಶ್ಯ ಕೊಡುತ್ತಾನೆ ಎಂದು ನಂಬಲಾಗಿದೆ.

ಬೌದ್ಧ ಧರ್ಮದಲ್ಲಿ ಕೋತಿ ಬುದ್ಧನ ಆರಂಭಿಕ ಅವತಾರಗಳಲ್ಲಿ ಒಂದು. ಇದರೊಂದಿಗೆ ಕೋತಿಯು ಮೋಸಗಾರಿಕೆ ಮತ್ತು ಕುರೂಪವನ್ನು ಪ್ರತಿನಿಧಿಸುತ್ತಿದ್ದಿರ ಬಹುದು. ಪ್ರಕೃತಿಯನ್ನು ಆರಾಧಿಸುವ ಪ್ರಾಚೀನ ಪೆರುವಿನಲ್ಲಿ[೧೮] ಪ್ರಾಣಿಗಳ ಮೇಲೆ ಒತ್ತು ನೀಡಲಾಗುತ್ತಿತ್ತು ಮತ್ತು ಅಲ್ಲಿನ ಕಲೆಯಲ್ಲಿ ಕೋತಿಯನ್ನು ಪ್ರತಿನಿಧಿಸಲಾಗಿದೆ.[೧೯]

ಉಲ್ಲೇಖಗಳು

ಬದಲಾಯಿಸಿ
  1. ಈ ಭಾಗವು ಇಂಗ್ಲೀಶ್ ವಿಕಿಪೀಡಿಯ “Monkey” ಪುಟದ ಭಾಗಶ ಅನುವಾದ
  2. Nowak, R. M. (1999). Walker's Mammals of the World (6th ed.). Baltimore and London: The Johns Hopkins University Press. ISBN 978-0801857898.
  3. "Mandrill". ARKive. 2005. Retrieved 2013-04-10.
  4. Fleagle, J. G. (1998). Primate Adaptation and Evolution (2nd ed.). Academic Press. pp. 25–26. ISBN 978-0-12-260341-9
  5. ೫.೦ ೫.೧ ೫.೨ ೫.೩ ಇಂಗ್ಲೀಶ್ ವಿಕಿಪೀಡಿಯ “New World monkey”, ಪ್ರಾಪ್ತಿ ದಿನಾಂಕ 2016-08-22
  6. ಇಂಗ್ಲೀಶ್ ವಿಕಿಪೀಡಿಯ “Trichromacy”, ಪ್ರಾಪ್ತಿ ದಿನಾಂಕ 2016-08-22
  7. ೭.೦ ೭.೧ Queiroz, Alan de, "The Monkey's Voyage: How Improbable Journeys Shaped the History of Life", Basic Books, 2014,
  8. Hill, C. M. (2000). "Conflict of Interest Between People and Baboons: Crop Raiding in Uganda". International Journal of Primatology. 21 (2): 299–315. doi:10.1023/A:1005481605637.
  9. Sheredos, S. J. (1991). "An evaluation of capuchin monkeys trained to help severely disabled individuals" (PDF). The Journal of Rehabilitation Research and Development. 28 (2): 91–96. doi:10.1682/JRRD.1991.04.0091.
  10. "The supply and use of primates in the EU". European Biomedical Research Association. 1996. Archived from the original on 2012-01-17.
  11. ೧೧.೦ ೧೧.೧ ೧೧.೨ Carlsson, H. E.; Schapiro, S. J.; Farah, I.; Hau, J. (2004). "Use of primates in research: A global overview". American Journal of Primatology. 63 (4): 225–237. doi:10.1002/ajp.20054. PMID 15300710.
  12. Weatherall, D., et al., (The Weatherall Committee) (2006). The use of non-human primates in research (PDF) (Report). London, UK: Academy of Medical Sciences.
  13. Bushnell, D. (1958). "The beginnings of research in space biology at the Air Force Missile Development Center, 1946-1952". History of Research in Space Biology and Biodynamics. NASA. Archived from the original on 2013-04-10. Retrieved 2013-04-10.
  14. Bonné, J. (2005-10-28). "Some bravery as a side dish". msnbc.com. Retrieved 2009-08-15.
  15. Institut De Recherche Pour Le Développement (2002). "Primate Bushmeat : Populations Exposed To Simian Immunodeficiency Viruses". ScienceDaily. Retrieved 2009-08-15.
  16. ಇಂಗ್ಲೀಶ್ ವಿಕಿಪೀಡಿಯ "Hanuman", ಪ್ರಾಪ್ತಿ ದಿನಾಂಕ 2016-08-22
  17. Lau, T. (2005). The Handbook of Chinese Horoscopes (5th ed.). New York: Souvenir Press. pp. 238–244. ISBN 978-0060777777.
  18. Benson, E. (1972). The Mochica: A Culture of Peru. New York: Praeger Press. ISBN 978-0-500-72001-1.
  19. Berrin, K. & Museo Arqueológico Rafael Larco Herrera (1997). The Spirit of Ancient Peru: Treasures from the Museo Arqueológico Rafael Larco Herrera. New York: Thames & Hudson. ISBN 978-0-500-01802-6.


"https://kn.wikipedia.org/w/index.php?title=ಕೋತಿ&oldid=1144289" ಇಂದ ಪಡೆಯಲ್ಪಟ್ಟಿದೆ
  NODES
Association 1
INTERN 1