ಗೊರಸು (ಖುರ, ಕೊಳಗು) ಅಂಗ್ಯುಲೇಟ ಗುಂಪಿನ ಸಸ್ತನಿಯ ಕಾಲ್ಬೆರಳುಗಳ ತುದಿಯನ್ನು ಆವರಿಸುವ ಇಲ್ಲವೆ ರಕ್ಷಿಸುವ ಕೊಂಬಿನ ಬಾಗಿದ ರಚನೆ (ಹೂಫ್). ಬೇರೆ ಪ್ರಾಣಿಗಳಲ್ಲಿ ಕಂಡುಬರುವ ಉಗುರು ಇಲ್ಲವೆ ನಖಗಳನ್ನು ಹೋಲುವ ರಚನೆಯಿದು.

ಕುದುರೆಯ ಹಿಂಭಾಗದ ಗೊರಸುಗಳು

ರಚನೆ : ಕುದುರೆಯ ಗೊರಸನ್ನು ಪ್ರರೂಪೀ ಉದಾಹರಣೆಯಾಗಿ ವಿವರಿಸಲಾಗಿದೆ. ಇದರಲ್ಲಿ ಗೊರಸಿನ ಗೋಡೆ (ಗೊರಸಿನ ಚಿಪ್ಪು-ವಾಲ್). ಅಂಗಾಲು (ಸೋಲ್). ಅಂಗಾಲಿನ ಮಧ್ಯೆ ಬೆಳೆಯುವ ಸ್ಥಿತಿಸ್ಥಾಪಕ ಗುಣವುಳ್ಳ ಕೊಂಬಿನ ಪದಾರ್ಥದಿಂದ ರಚಿತವಾದ ಕಪ್ಪೆಯಂಥ ಭಾಗ-ಗೊರಸುಗಪ್ಪೆ (ಫ್ರಾಗ್) ಎಂಬ ಮೂರು ಭಾಗಗಳಿವೆ.

ಗೊರಸಿನ ಗೋಡೆ : ಪ್ರಾಣಿ ತನ್ನ ಪಾದವನ್ನು ನೆಲದಮೇಲೆ ಇಟ್ಟಾಗ ಹೊರಗೆ ಕಾಣುವ ಭಾಗ. ಇದು ಗೊರಸಿನ ಮುಂಭಾಗ ಹಾಗೂ ಪಾಶ್ರ್ವಗಳನ್ನು ಆವರಿಸಿದೆ. ಗೊರಸಿನ ಹಿಂಭಾಗದಲ್ಲಿ ಭೂಮಿಗೆ ತಗಲುವ ಭಾಗಗಳಲ್ಲಿ ಸಹ ಗೋಡೆಯನ್ನು ಕಾಣಬಹುದು. ಅಧ್ಯಯನದ ದೃಷ್ಟಿಯಿಂದ ಗೋಡೆಯನ್ನು ಮೂರು ಭಾಗವಾಗಿ ವಿಂಗಡಿಸಬಹುದು. 1. ಮುಂಗೊರಸು (ಟೋ). 2. ಮುಂಗೊರಸಿಗೂ ಹಿಮ್ಮಡಿಗೂ ನಡುವಣ ಭಾಗ (ಕ್ವಾರ್ಟರ್ಸ್). 3. ಹಿಮ್ಮಡಿ. ಗೊರಸಿನ ಹೊರಮೈ ಪಕ್ಕದಿಂದ ಪಕ್ಕಕ್ಕೆ ಉಬ್ಬಿದೆ. ಮೇಲ್ಮೈ ನಯವಾಗಿದೆ. ಗೊರಸಿನ ಮೇಲೆ ಕ್ರಮಬದ್ಧವಾಗಿ ಜೋಡಣೆಗೊಂಡಿರುವ ನಯವಾದ ಕೂಡುಗೆರೆಗಳು ಕಾಣಬರುತ್ತವೆ. ಇವು ಗೊರಸು ಚರ್ಮಕ್ಕೆ ಸೇರುವ ಭಾಗಕ್ಕೆ (ಗೊರಸಿನ ಸುಳಿ) ನೇರವಾಗಿರುತ್ತದೆ. ಗೊರಸಿನ ಒಳಭಾಗದಲ್ಲಿ ಒಂದು ಕುಳಿಯೂ ಅನೇಕ ಪೊರೆಗಳೂ ಇವೆ.

ಅಂಗಾಲು : ಇದು ಅರ್ಧ ಚಂದ್ರಾಕಾರವಾಗಿದೆ. ಇದರಲ್ಲಿ ಎರಡು ಮುಖಗಳೂ ಎರಡು ಅಂಚುಗಳೂ ಇವೆ. ಒಳಮುಖ ಹೊರ ಉಬ್ಬಿದೆ. ಇದರಲ್ಲಿ ನಳಿಕೆಯಾಕಾರದ ತೂತುಗಳಿವೆ. ಇವುಗಳಲ್ಲಿ ಅಂಗಾಲಿನ ಸಣ್ಣ ಸಣ್ಣ ಮೆದು ಗಂಟುಗಳನ್ನು ಕಾಣಬಹುದು. ಅಂಗಾಲಿನ ಹೊರಮುಖವೂ ಸಾಮಾನ್ಯವಾಗಿ ಬಾಗಿದ್ದು ಒಳಮುಖದ ವಿರುದ್ಧ ರೀತಿಯ ರಚನೆಯನ್ನು ಪ್ರದರ್ಶಿಸುತ್ತದೆ. ಹೊರ ಮುಖದ ಹಿಂದಿನ ಭಾಗ ಮುಂದಿನ ಭಾಗಕ್ಕಿಂತ ಬಹಳ ಗಡುಸಾಗಿದೆ.

ಗೊರಸುಗಪ್ಪೆ : ಇದು ಬೆಣೆಯಾಕಾರದಲ್ಲಿದೆ. ತುಂಡುಗಳು ಹಾಗೂ ಅಂಗಾಲಿನ ಮಧ್ಯೆ ಇರುವ ಕೋನವಲಯವನ್ನು ಆವರಿಸಿದೆ. ಗೊರಸು ಗಪ್ಪೆಯಲ್ಲಿ ನಾಲ್ಕು ಮುಖಗಳನ್ನೂ ಒಂದು ಬುಡವನ್ನೂ ಒಂದು ಶೃಂಗವನ್ನೂ ಕಾಣಬಹುದು. ಗೊರಸಿನ ಸೂಕ್ಷ್ಮರಚನೆ: ಯಾವುದೇ ಚರ್ಮದಲ್ಲಿ ಕಾಣಬರುವ ಸ್ಟ್ರಾಟಮ್ ಜರ್ಮಿನೇಟಿವಮ್ ಎಂಬ ಮೃದುಪೊರೆ ಗೊರಸಿನಲ್ಲಿ ಸಹ ಇದೆ. ಪೊರೆಯು ಸುತ್ತ ಕೊಂಬಿನ ಆವರಣ ಉಂಟು. ಕೊಂಬಿನ ಕಣಗಳ ಸಂಖ್ಯೆ ವೃದ್ಧಿಯಾಗುವುದರ ಮೂಲಕ ಗೊರಸಿನ ಬೆಳೆವಣಿಗೆ ಮುಂದುವರಿಯುತ್ತದೆ. ಗೊರಸಿನ ಗೋಡೆಯಲ್ಲಿ ಮೂರು ಸೂಕ್ಷ್ಮ ಪದರಗಳಿವೆ : ಪೆರಿಯೋಪಲ್ ಮತ್ತು ಸ್ಟ್ರಾಟಂ ಟೆಕ್ಟೋರಿಯಂಗಳಿಂದ ಕೂಡಿದ ಹೊರಪದರ, ತುಂಬ ದಪ್ಪವಾದ ಮಧ್ಯ ಪದರ ಮತ್ತು ಸ್ಟ್ರಾಟಂ ಲ್ಯಾಮೆಲೇಟು ಎಂಬ ಒಳಪದರ. ಒಳಪದರದಲ್ಲಿ ಸ್ವಾಭಾವಿಕ ವರ್ಣದ್ರವ್ಯ ಇರುವುದಿಲ್ಲ. ಗೊರಸುಗಪ್ಪೆ ಸಾಮಾನ್ಯವಾಗಿ ನಯವಾದ ಕೊಂಬಿನಂಥ ಅಂಗಾಂಶದಿಂದ ಕೂಡಿದೆ. ಗೊರಸುಗೋಡೆ ಮತ್ತು ಅಂಗಾಲುಗಳಿಗೆ ಹೋಲಿಸಿದರೆ ಗೊರಸುಗಪ್ಪೆಗೆ ಹೆಚ್ಚಿನ ಸ್ಥಿತಿಸ್ಥಾಪಕಶಕ್ತಿ ಉಂಟು. ಗೊರಸಿನಲ್ಲಿ ರಕ್ತನಾಳಗಳಾಗಲಿ ನರಗಳಾಗಲಿ ಇಲ್ಲ.

ಗೊರಸಿನ ರೋಗಗಳು : ಗೊರಸಿಗೆ ಬರುವ ರೋಗಗಳಲ್ಲಿ ಮುಖ್ಯವಾದವನ್ನು ಮುಂದೆ ವಿವರಿಸಲಾಗಿದೆ. ಗೊರಸಿನ ಕೊಳೆತ : ಗೊರಸಿನ ಒಳಗಿನ ಅಂಗಾಂಶದ ಕೊಳೆತಕ್ಕೆ ಈ ಹೆಸರಿದೆ. ಇದು ಸ್ಪೀರೊಫೋರಸ್ ನೆಕ್ರೊಫೋರಸ್ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಚರ್ಮದಲ್ಲಾಗುವ ಗಾಯಗಳ ಮೂಲಕ ಒಳಹೊಗುವ ಈ ಸೂಕ್ಷ್ಮಜೀವಿಗಳು ಕೀಲುಗಳನ್ನೂ ಸ್ನಾಯು ತಂತುಗಳ ಹೊರಪೊರೆಯನ್ನೂ ನಾಶಪಡಿಸುತ್ತವೆ. ಇದರಿಂದ ಕಾಲಿನ ಸ್ಥಿತಿ ಕೆಟ್ಟು ಗೊರಸಿಗೂ ಹರಡಿ ಅದು ಕೊಳೆಯತೊಡಗುತ್ತದೆ. ಕಾಲು ಊದಿಕೊಳ್ಳುವುದು. ಗೊರಸಿನ ಸುಳಿಯ ಸುತ್ತಲೂ ಇರುವ ಚರ್ಮ ಕೆಡುವುದು, ಗೊರಸಿನ ಅಂಗಾಂಶ ಬಾತುಕೊಳ್ಳುವುದು. ರಕ್ತದ ಒತ್ತಡ ಹೆಚ್ಚಿ ಮೈ ಬಿಸಿಯಾಗುವುದು. ಮತ್ತು ಗೊರಸಿನ ಮಧ್ಯೆ ಕೀವು ಹಾಗೂ ಅಂಗಾಂಶದ್ರವ ಸ್ರವಿಸುವುದು- ಇವು ಈ ರೋಗದ ಪ್ರಮುಖ ಲಕ್ಷಣಗಳು. ರೋಗ ಪೀಡಿತ ಪ್ರಾಣಿ ತೀವ್ರರೂಪದ ಕುಂಟಿನಿಂದ ನರಳುತ್ತಿದ್ದು ನಡೆಯಲು ಅಶಕ್ತವಾಗುತ್ತದೆ. ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ. ಮಲಿನ ವಾತಾದವರಣದಲ್ಲಿ ಸದಾಕಾಲ ಇರುವ ಪ್ರಾಣಿಗಳಲ್ಲಿ ಗೊರಸಿನ ಕೊಳೆತ ವಿಶೇಷವಾಗಿರುವುದರಿಂದ ಅಂಥ ಸ್ಥಳಗಳಿಂದ ಪ್ರಾಣಿಯನ್ನು ದೂರವಿರಿಸಿ. ಗೊರಸನ್ನು ಕ್ರಿಮಿನಾಶಕಗಳಿಂದ (2.5% ಕಾಪರ್ ಸಲ್ಫೇಟ್) ತೊಳೆಯಬೇಕು.

ಕುರಿ ಮತ್ತು ಮೇಕೆಗಳ ಗೊರಸು ರೋಗಗಳು : ಕುರಿಗಳಲ್ಲಿ ಸಹ ಮೇಲೆ ಹೇಳಿದ ಬಗೆಯ ಗೊರಸಿನ ಕೊಳೆತವನ್ನು ಕಾಣಬಹುದು. ಇದರಿಂದ ಕೆಲವೊಮ್ಮೆ ಗೊರಸಿನ ಹೊದಿಕೆ ಕಾಲಿನಿಂದ ಬಿದ್ದು ಹೋಗುತ್ತದೆ. ಫ್ಯೂಸಿಫಾರ್ಮಿಸ್ ನೋಡೋಸಸ್, ಸ್ಫೈರೊಕೀಟ ಪೆನಾರ್ತ, ಸ್ಟ್ರಾಂಗಿಲಾಯ್ಡಿಸ್, ಬ್ಯೂನೋಸ್ಟೋಮಮ್ ಇತ್ಯಾದಿ ಕ್ರಿಮಿಗಳಿಂದ ಈ ರೋಗ ಉಂಟಾಗುತ್ತದೆ. ತೇವಪೂರಿತ ನೆಲದಲ್ಲಿ ವಾಸಿಸುವ ರೋಗಾಣುಗಳು ಗೊರಸಿನ ಮಧ್ಯೆ ಇಲ್ಲವೆ ಕಾಲಿನಲ್ಲಿ ಉಂಟಾಗುವ ಗಾಯಗಳ ಮೂಲಕ ಪ್ರಾಣಿದೇಹವನ್ನು ಪ್ರವೇಶಿಸುತ್ತವೆ. ರೊಪ್ಪಗಳನ್ನು ಶುಚಿಯಾಗಿಡುವುದರಿಂದ ಈ ರೋಗವನ್ನು ತಡೆಗಟ್ಟಬಹುದು. ಕಾಲಿನ ಕುರು ಸಹ ಕುರಿಗಳಲ್ಲಿ ಕಂಡು ಬರುವ ಬಲು ಸಾಮಾನ್ಯ ಬೇನೆ. ದನಗಳಲ್ಲಿ ಗೊರಸಿನ ಕೊಳೆತವನ್ನು ಉಂಟು ಮಾಡುವ ಸ್ಪೀರೊಪೋರಸ್ ನೆಕ್ರೋಪೋರಸ್ ಸೂಕ್ಷ್ಮ ಜೀವಿಯೇ ಈ ರೋಗಕ್ಕೂ ಕಾರಣ. ರೋಗಪೀಡಿತ ಪ್ರಾಣಿಗಳ ಗೊರಸಿನ ಹೊರನೋಟದಲ್ಲಿ ಮೊದಲು ಯಾವ ಬದಲಾವಣೆಗಳೂ ಕಂಡುಬರುವುದಿಲ್ಲ. ಆದರೆ ಕಾಲು ಬಿಸಿಯಾಗಿರುತ್ತದೆ. ಕೊಂಚಕಾಲದ ಅನಂತರ ಕಾಲು ಊದಿ ಕೊಳ್ಳುತ್ತದೆ. ಆಗಾಗ್ಗೆ ಹಳದಿಬಣ್ಣದ ಕೀವು ಹೊರ ಸುರಿಯತ್ತದೆ. ಕುರಿ ಕುಂಟ ತೊಡಗುತ್ತದೆ. ಸೀಳ್ಗೊರಸಿನ ಪ್ರಾಣಿಗಳಿಗೆ ಬರುವ ಇನ್ನೊಂದು ರೋಗ ಜರಸಲು ಬೇನೆ. ರೋಗಪೀಡಿತ ಪ್ರಾಣಿಗಳ ಗೊರಸಿನ ಸುತ್ತ ಉರಿಯೂತವುಂಟಾಗಿ ಆಗಾಗ್ಗೆ ಕೀವು ಸ್ರಾವವಾಗುತ್ತದೆ. ಕೀವಿನಿಂದ ಆಕರ್ಷಿತವಾಗುವ ನೊಣಗಳು ಗೊರಸನ್ನು ಮುತ್ತಿ ಅಲ್ಲಿ ಮೊಟ್ಟೆಯಿಡುತ್ತವೆ. ಮೊಟ್ಟೆಯಿಂದ ಹೊರ ಬರುವ ಮರಿಗಳು ಗೊರಸಿನ ಮಧ್ಯೆ ಸೇರಿಕೊಂಡು ಅದನ್ನು ಇನ್ನಷ್ಟು ಹಾಳು ಮಾಡುತ್ತವೆ. ಗೊರಸಿನ ಹೊರಪೊರೆ ಒಮ್ಮೊಮ್ಮೆ ಕಳಚಿ ಬೀಳುತ್ತದೆ.

ಕುದುರೆಗಳ ಗೊರಸು ರೋಗಗಳು: 1. ಗೊರಸಿನ ಪೊರೆಯುರಿಯೂತ: ಸಾಮಾನ್ಯವಾಗಿ ಕುದುರೆಯ ಮುಂಗಾಲುಗಳಿಗೆ ಮಾತ್ರ ಈ ರೋಗ ಬರುತ್ತದೆ. ಆದರೆ ಹಿಂಗಾಲುಗಳಿಗೂ ಹರಡಬಹುದು. ದೇಹದ ಉಷ್ಣತೆಯ ಹಾಗೂ ಉಸಿರಾಟದ ಹೆಚ್ಚಳ, ಬೆವರುವಿಕೆ. ಕಾಲನ್ನು ಸಾಮಾನ್ಯವಾಗಿ ಇಡುವುದಕ್ಕಿಂತ ಹೆಚ್ಚು ಹಿಗ್ಗಲಿಸಿ ಇಡುವುದು- ಇವೆಲ್ಲ ಈ ರೋಗದ ಪ್ರಥಮಲಕ್ಷಣಗಳು ರೋಗ ಹೆಚ್ಚಿದಂತೆಲ್ಲ ಗೊರಸಿನ ಆಕಾರ ಬದಲಾಗುತ್ತದೆ. ಗೊರಸಿನ ಗೋಡೆಯ ಮುಂಭಾಗದಲ್ಲಿ ತಗ್ಗು ಉಂಟಾಗುತ್ತದೆ. ಹಿಮ್ಮಡಿಯ ಎತ್ತರ ಹೆಚ್ಚುತ್ತದೆ. ಗೊರಸಿನ ಹೊರ ಪೊರೆಯ ಮೇಲೆ ಸುಕ್ಕುಗಳು ಉಂಟಾಗುತ್ತವೆ. ಕಾರ್ಟಿಸೋನ್ ಮತ್ತು ಆಂಟಿ ಹಿಸ್ಟಮೈನುಗಳ ಬಳಕೆಯಿಂದ ಪೊರೆಯುರಿಯೂತವನ್ನು ತಡೆಗಟ್ಟಬಹುದು.

2. ಗೊರಸಿನ ಅಂಗಾಲಿನ ಹುಣ್ಣು: ಸ್ಫೀರೊಫೊರಸ್ ನೆಕ್ರೊಫೋರಸ್ ಜೀವಿಯಿಂದ ಉಂಟಾಗುವ ರೋಗ ಇದು. ಬರಿಯ ಅಂಗಾಲು ಮಾತ್ರವಲ್ಲದೆ ಗೊರಸುಗಪ್ಪೆಗೂ ಇದು ಹರಡಬಹುದು. ಗೊರಸಿನಿಂದ ಒಂದು ರೀತಿಯ ದುರ್ವಾಸನೆ ಹೊರಡುವುದು ಮತ್ತು ಕಪ್ಪು ಬಣ್ಣದ ಕೀವು ಸುರಿಯುವುದು ಈ ರೋಗದ ಮುಖ್ಯ ಲಕ್ಷಣಗಳು. ತೇವಪೂರಿತವಾದ ಮತ್ತ ಮಲಮೂತ್ರಗಳಿಂದ ಗಲೀಜಾದ ಲಾಯಗಳಲ್ಲಿ ಈ ರೋಗ ಹೆಚ್ಚಾಗಿರುವುದರಿಂದ ಅಂಥ ಪ್ರದೇಶಗಳನ್ನು ಶುಚಿಯಾಗಿಡುವುದರಿಂದಲೂ ಗೊರಸನ್ನು ಕ್ರಿಮಿನಾಶಕಗಳಿಂದ ತೊಳೆಯುವುದರಿಂದಲೂ ರೋಗವನ್ನು ತಡೆಯಬಹುದು.

3. ಗೊರಸುತ್ತು: ಅತಿ ಹೆಚ್ಚು ಕೆಲಸಮಾಡುವ ಕುದುರೆಗಳಲ್ಲಿ ಈ ರೋಗ ಬಹಳ ಸಾಮಾನ್ಯವಾಗಿ ಕಂಡುಬರುತ್ತದೆ. ಇದರಿಂದ ಅಂಗಾಲು, ಗೊರಸುಗಪ್ಪೆಯನ್ನು ಆವರಿಸುವುದಲ್ಲದೆ ಗೊರಸಿನ ಅಂಗಾಂಶ ಹೆಚ್ಚು ಹೆಚ್ಚು ಬೆಳೆಯುತ್ತ ಹೋಗುತ್ತದೆ. ರೋಗಪೀಡಿತ ಕುದುರೆಗಳ ಬಳೆ ಸಾಮಾನ್ಯವಾಗಿ ಕೆಟ್ಟ ವಾಸನೆ ಇರುತ್ತದೆ. ದಿನಗಳೆದಂತೆ ಗೊರಸಿನ ಮುಚ್ಚಳ ಸಡಿಲವಾಗಿ ಕೋರಿಯಮ್ ಭಾಗ ಎದ್ದು ಕಾಣತೊಡಗುತ್ತದೆ. ಕೋರಿಯಮಿನ ಮೇಲ್ಮೈ ಮುಳ್ಳುಗಳಿಂದ ಕೂಡಿದಂತಿರುತ್ತದೆ. ಒತ್ತಡದ ಬ್ಯಾಂಡೇಜ್ ಕಟ್ಟುವುದರಿಂದ ಈ ರೋಗವನ್ನು ಹತೋಟಿಯಲ್ಲಿಡಬಹುದು. ಇವುಗಳಲ್ಲದೆ ಕುದುರೆಗಳಲ್ಲಿ ಆಣಿ. ಗೊರಸಿನ ಪಾಶ್ರ್ವದ ಮೃದ್ವಸ್ತಿಯ ಉರಿಯೂತ ಮತ್ತು ಗೊರಸೀಳುಗಳು ಉಂಟಾಗಬಹುದು.

ಗೊರಸಿನ ದುರಸ್ತಿ: ಅನೇಕ ಸಾಕುಪ್ರಾಣಿಗಳಲ್ಲಿ ರೋಗಗಳಿಂದ ಆಕಸ್ಮಿಕವಾಗಿ ಬೀಳುವ ಏಟುಗಳಿಂದ, ಇಲ್ಲವೇ ಗೊರಸಿನಲ್ಲಿ ಸ್ವಾಭಾವಿಕವಾಗಿಯೇ ಕಾಣಬರುವ ಊನಗಳಿಂದ ಗೊರಸಿನ ಆಕಾರ ಕೆಟ್ಟು ಹೋಗಬಹುದು. ಆಗ ಪ್ರಾಣಿಗಳು ನಿಷ್ಪ್ರಯೋಜಕವಾಗುತ್ತವೆ. ಇಂಥ ಪ್ರಾಣಿಗಳ ಗೊರಸನ್ನು ರಿಪೇರಿ ಮಾಡಿ ಮೊದಲಿನ ಸ್ಥಿತಿಗೆ ತರಬಹುದು ಮತ್ತು ವಿಕಾರಗಳನ್ನು ಸರಿಪಡಿಸಬಹುದು. ಹೀಗೆ ಗೊರಸನ್ನು ದುರಸ್ತು ಮಾಡಲು ಆಕ್ರಿಲಿಕ್ ಅಂಶವನ್ನುಳ್ಳ ಒಂದು ರೀತಿಯ ಪ್ಲಾಸ್ಟಿಕ್ಕನ್ನು ಬಳಸುವ ರೂಢಿಯಿದೆ. ಇದು ಬಿಳಿಯ ಬಣ್ಣದ್ದೂ ಗಾಳಿಗೆ ಒಡ್ಡಿದಾಗ ಬೇಗ ಗಟ್ಟಿಯಾಗುವ ಗುಣವುಳ್ಳದ್ದೂ ಆಗಿದೆ. ಗಟ್ಟಿಯಾದಾಗ ಗೊರಸಿನ ಅಂಗಾಂಶದಂತೆಯೇ ಶಕ್ತಿಯುತವಾಗುತ್ತದೆ. ಗೊರಸು ಸೀಳುಗೊಂಡಿದ್ದರೆ ಈ ವಸ್ತುವಿನ ಪುಡಿಯನ್ನು ಹಾಕುವಾಗ ಅದರ ಪರಿಮಾಣ ಆಕಸ್ಮಿಕವಾಗಿ ಕೊಂಚ ಹೆಚ್ಚಾಗಬಹುದು. ಹೀಗೆ ಹೆಚ್ಚಾದ ಪ್ಲಾಸ್ಟಿಕ್ಕನ್ನು ಅರದಿಂದ ಉಜ್ಜಿ ಇಲ್ಲವೆ ಚಾಕುವಿನಿಂದ ಕತ್ತರಿಸಿ ತೆಗೆದುಹಾಕಬಹುದು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗೊರಸು&oldid=1228705" ಇಂದ ಪಡೆಯಲ್ಪಟ್ಟಿದೆ
  NODES