ಸಂಸ್ಕೃತ, ಕನ್ನಡಗಳಲ್ಲಿಯೂ ಇತರ ಕೆಲವು ಭಾರತೀಯ ಭಾಷೆಗಳಲ್ಲಿಯೂ ಚಂಪೂ (ಚಂಪು) ಎಂಬುದು ಗದ್ಯ ಮತ್ತು ಪದ್ಯಗಳೆರಡರನ್ನು ಒಳಗೊಂಡ , ಪ್ರಾಚೀನವೂ ಪ್ರಸಿದ್ಧವೂ ಆದ ಒಂದು ಸಾಹಿತ್ಯ ಪ್ರಕಾರ, ವಿಶಿಷ್ಟವಾದ ಕಾವ್ಯ ಪ್ರಕಾರ. ಬಹುತೇಕ ಪ್ರಾಚೀನ ಕನ್ನಡ ಕೃತಿಗಳು ಚಂಪೂ ರೂಪದಲ್ಲಿವೆ.


ಸಾವಿರ ವರ್ಷಗಳಿಗೆ ಮೇಲ್ಪಟ್ಟ ಇತಿಹಾಸ ಚಂಪೂವಿಗಿದೆ. ಈ ಪ್ರಕಾರದಲ್ಲಿ ಆಯಾ ಭಾಷೆಯಲ್ಲಿ ಬಹುಕಾಲ ನಿಲ್ಲುವ ಉತ್ಕೃಷ್ಟವಾದ ಸಾಹಿತ್ಯ ನಿರ್ಮಿತವಾಗಿದೆ. ಕನ್ನಡದ ಮಟ್ಟಿಗೆ ಹೇಳುವುದಾದರೆ, ಮೊದಮೊದಲಿನ ಶ್ರೇಷ್ಠಕವಿಗಳು ಈ ಪ್ರಕಾರವನ್ನು ಯಶಸ್ವಿಯಾಗಿ ಬಳಸಿಕೊಂಡು ಉತ್ತಮ ಸಾಹಿತ್ಯವನ್ನು ನಿರ್ಮಾಣ ಮಾಡಿದ್ದು, ಮುಂದೆ ಅದು ವಿಶೇಷವಾಗಿ ಪ್ರಬಲಿಸಿ ಕನ್ನಡ ಸಾಹಿತ್ಯದಲ್ಲಿ ಗಣ್ಯವೂ ಸುಸ್ಥಿರವೂ ಆದ ನೆಲೆಯನ್ನು ಗಳಿಸಿಕೊಳ್ಳುವಂತಾಯಿತು.



ಚಂಪೂವಿನ ಲಕ್ಷಣಗಳು

ಬದಲಾಯಿಸಿ

ಚಂಪೂವಿನ ಲಕ್ಷಣವನ್ನು ದಂಡಿಯ (ಸು. 650) ಕಾವ್ಯಾದರ್ಶವೆಂಬ ಸಂಸ್ಕೃತ ಭಾಷೆಯ ಲಕ್ಷಣಗ್ರಂಥದಲ್ಲಿ ಮೊದಲು ನಿರೂಪಿಸಿದೆ. ಅನಂತರದಲ್ಲಿ ಹೇಮಚಂದ್ರ (1088-1172), ವಿಶ್ವನಾಥ (14ನೆಯ ಶ.), ವಿದ್ಯಾನಾಥ (14ನೆಯ ಶ.) ಮುಂತಾದವರು ತಮ್ಮ ಅಲಂಕಾರಗ್ರಂಥಗಳಲ್ಲಿ ಹೇಳಿದ್ದಾರೆ. ಹಾಗೆಯೇ ಕನ್ನಡದಲ್ಲಿಯೂ ನಾಗವರ್ಮ , ಉದಯಾದಿತ್ಯ ಇವರ ಅಲಂಕಾರಗ್ರಂಥಗಳಲ್ಲಿ ಆ ವಿಷಯದ ಉಲ್ಲೇಖವಿದೆ. ದಂಡಿ ಚಂಪೂವಿನ ಲಕ್ಷಣವನ್ನು "ಗದ್ಯಪದ್ಯಮಯಂ ಕಾವ್ಯಂ ಚಂಪೂರಿತ್ಯ ಭಿಧೀಯತೇ"-ಎಂದು ಹೇಳಿದ್ದಾನೆ. ಹೆಚ್ಚಿನ ವಿವರಗಳಾಗಲಿ ವ್ಯತ್ಯಾಸವಾಗಲಿ ಇಲ್ಲದೆ ಇದೇ ಲಕ್ಷಣವನ್ನು ಈಚಿನವರು ಅನುವಾದ ಮಾಡಿದ್ದಾರೆ.

ಚಂಪೂವಿನಲ್ಲಿ ಗದ್ಯಕ್ಕಿಂತ ಪದ್ಯವೇ ಹೆಚ್ಚಾಗಿರುತ್ತದೆ. ಚಂಪೂವಿನಲ್ಲಿ ಆರು ವೃತ್ತಗಳು ಹೆಚ್ಚಾಗಿ ಬಳಕೆಯಾಗಿದ್ದು. ತ್ರಿಪದಿ, ಅಕ್ಕರ, ರಗಳೆಗಳೂ ಪ್ರಯೋಗಗೊಂಡಿವೆ.

ಹರಿಶ್ಚಂದ್ರ ತನ್ನ ಜೀವಂಧರ ಚಂಪೂ ಎಂಬ ಕಾವ್ಯದಲ್ಲಿ ಗದ್ಯಾವಲೀಃ ಪದ್ಯಪರಂಪರಾ ಚ ಪ್ರತ್ಯೇಕಮಸ್ಸಾವಹತಿಪ್ರಮೋದಮ್| ಹರ್ಷಪ್ರಕರ್ಷ ತನುತೇ ಮಿಲಿತ್ವಾ ದ್ರಾಗ್ಬಾಲ್ಯ ತಾರುಣ್ಯವತೀವ ಕಾಂತ ||- ಎಂಬುದಾಗಿ ಹೇಳಿದ್ದಾನೆ. (ಗದ್ಯಪದ್ಯಗಳು ಪ್ರತ್ಯೇಕವಾಗಿ ಪ್ರಮೋದಕರಗಳು ; ಆದರೆ ಈ ನಮ್ಮ ರಚನೆ ಎರಡರಿಂದಲೂ ಕೂಡಿದ್ದು, ಬಾಲ್ಯ ತಾರುಣ್ಯಗಳೆರಡರ ಸೇರಿಕೆಯಿಂದ ಆಹ್ಲಾದ ಉಂಟುಮಾಡುವ ಕಾಂತೆಯಂತೆ ಇದೆ) .

ವ್ಯುತ್ಪತ್ತಿ

ಬದಲಾಯಿಸಿ

ಚಂಪೂ (ಚಂಪು) ಎಂಬ ಪದದ ಮೂಲ ಅನಿರ್ದಿಷ್ಟವಾದುದು. ಅದರ ನಿಷ್ಪತ್ತಿಯನ್ನು ಬೇರೆ ಬೇರೆ ರೀತಿಯಲ್ಲಿ ವಿದ್ವಾಂಸರು ವಿವರಿಸಿದ್ದಾರೆ. ಈ ಸಾಹಿತ್ಯಪ್ರಕಾರ ಸಂಸ್ಕೃತಮೂಲವಾದುದು ಎಂದು ಗ್ರಹಿಸುವವರು ಒಂದು ರೀತಿಯಾಗಿಯೂ ಕನ್ನಡ ಮೂಲವಾದುದು ಎಂದು ಗ್ರಹಿಸುವವರು ಇನ್ನೊಂದು ರೀತಿಯಾಗಿಯೂ ಹೇಳುವುದು ಕಾಣುತ್ತದೆ. ಸಂಸ್ಕೃತ ವಿದ್ವಾಂಸರ ಅಭಿಪ್ರಾಯ ಹೀಗೆ : ಸಂಸ್ಕೃತ ನಳಚಂಪುವಿನ ಉಪೋದ್ಘಾತದಲ್ಲಿ, ನಂದಿಕಿಶೋರ ಶರ್ಮ ಅವರು ಗತ್ಯರ್ಥದ ಚಪಿ ಧಾತುವಿನಿಂದ ಚಂಪಯತಿ ಚಂಪತಿ ಇತಿ ಚಂಪೂ (ಗತಿಯನ್ನುಳ್ಳದ್ದು ಚಂಪೂ) ಎಂದಿದ್ದಾರೆ. ಅದೇ ಗ್ರಂಥದ ಅಡಿಟಿಪ್ಪಣಿಯಲ್ಲಿ ಚಮತ್ಕೃತ್ಯ ಪುನಾತಿ ಸಹೃದಯಾನ್ ವಿಸ್ಮøತಿಕೃತ್ಯ ಪ್ರಸಾದಯತೀತಿ ಚಂಪೂ-ಎಂಬುದಾಗಿ ಹರಿದಾಸ ಭಟ್ಟಾಚಾರ್ಯರೆಂಬವರ ಅಭಿಪ್ರಾಯವನ್ನು ಉಲ್ಲೇಖಿಸಿದೆ. ಸಂಸ್ಕೃತದ ಧಾತುಪಾಠದಲ್ಲಿ ಗತ್ಯರ್ಥಕದ ಚಪ್(ಚಂಪ್ ಧಾತುವಿದೆ. ಇದರ ರೂಪವನ್ನು ಚಂಪತಿ, ಚಂಪಯತಿ ಎಂದು ಮುಂತಾಗಿ ಸಿದ್ಧಾಂತ ಕೌಮುದಿ (ಕೃತಿಯ ಕರ್ತೃ ಭಟ್ಟೋಜಿ ದೀಕ್ಷಿತ್)ಯಲ್ಲಿ ತೋರಿಸಿದೆ. ವಚನಾರ್ಥದ ಎಂಬ ಧಾತುಗಳಿಂದ ಗದ್ಯ, ಪದ್ಯ ಎಂಬ ರೂಪಗಳ ನಿರ್ವಚನ ಸಾಧ್ಯವಿರುವಂತೆಯೇ ಧಾತುವಿನಿಂದ ಚಂಪೂ ಅಥವಾ ಚಂಪು ಎಂಬ ರೂಪಗಳನ್ನು ಸಾಧಿಸಲು ಸಾಧ್ಯವಿದೆ. ಗದ್ಯ ಪದ್ಯಗಳೆರಡರ ಕೂಡಿಸುವಿಕೆಯನ್ನು ಮಾತ್ರ ತೋರಿಸುವ ಮೂರನೆಯ ಶಬ್ಧ ಬೇಕಾದ್ದರಿಂದ, ಸಂಸ್ಕೃತ ಪಂಡಿತರು ವಚನಾರ್ಥದ ಧಾತುವಿನ ಬದಲು ಗತ್ಯರ್ಥಕ ಧಾತುವೊಂದನ್ನು ಉದ್ದೇಶಪೂರ್ವಕವಾಗಿಯೇ ಆರಿಸಿಕೊಂಡರೆಂದೂ ಹೇಳಲವಕಾಶವಿದೆ, ಎಂಬುದಾಗಿ ಕೆ. ಕೃಷ್ಣಮೂರ್ತಿ ಹೇಳಿದ್ದಾರೆ. ಒಟ್ಟಿನಲ್ಲಿ ನಂದಕಿಶೋರ ಶರ್ಮರ ನಿಷ್ಪತ್ತಿಯನ್ನೇ ಇಲ್ಲಿ ಎತ್ತಿಹಿಡಿದಿದೆ.

ಕನ್ನಡ ವಿದ್ವಾಂಸರ ಅಭಿಪ್ರಾಯ ಹೀಗೆ : ಕೆನ್, ಚೆನ್ ಎಂಬ ಮೂಲಶಬ್ದಗಳಿಂದಾದ ಕೆಂಪು, ಚೆಂಪು ಎಂಬ ಪದಗಳು ಸುಂದರ, ಮನೋಹರ ಎಂಬ ಅರ್ಥವನ್ನು ಕೊಡುತ್ತವೆ. ಗದ್ಯಪದ್ಯಮಿಶ್ರವಾದ ಕಾವ್ಯವಿಶೇಷವೊಂದನ್ನು ಕೇಳಿ ಅದು ಸುಂದರವಾಗಿದೆ, ಮನೋಹರವಾಗಿದೆ ಎಂಬ ಉದ್ಗಾರವಾಚಿಯಾಗಿ ಚೆಂಪು ಎಂಬುದು ಮೊದಲು ಹುಟ್ಟಿ ಮುಂದೆ ರೂಢಿ ಬಲದಿಂದ ಆ ಕಾವ್ಯರೂಪಕ್ಕೆ ಚೆಂಪು, ಚಂಪು ಎಂಬ ಹೆಸರು ನೆಲೆಗೊಂಡಿರಬೇಕು. ಇದು ರಂ. ಶ್ರೀ. ಮುಗಳಿಯವರ ಅಭಿಪ್ರಾಯ. ಅವರ ಈ ಅಭಿಪ್ರಾಯವನ್ನು ಉಲ್ಲೇಖಿಸುವ ಚಂಪುವಿನ ಮೂಲ ಎಂಬ ಲೇಖನದಲ್ಲಿಯೇ ಕನ್ನಡ ಮತ್ತು ತುಳು ಭಾಷೆಗಳಲ್ಲಿ ಸಂಪು ಮತ್ತು ಚಂಪೆ ಜಂಪೆ ಎಂಬ ಶಬ್ಧಗಳಿದ್ದು ಅವುಗಳಿಗೆ ಸುಂದರ ಮತ್ತು ಮಿಶ್ರ ಎಂಬ ಅರ್ಥಗಳಿವೆ ; ಅವುಗಳಿಂದ ಚಂಪೂ ಪದವು ನಿಷ್ಪನ್ನವಾಗಿರಬಹುದು-ಎಂಬ ದ.ರಾ.ಬೇಂದ್ರೆಯವರ ಅಭಿಪ್ರಾಯವನ್ನೂ ಕೊಟ್ಟಿದೆ.

ಚಂಪೂವಿನ ಉಗಮ

ಬದಲಾಯಿಸಿ

ಇನ್ನು ಚಂಪೂ ಯಾವ ಭಾಷೆಯಲ್ಲಿ ಮೊದಲು ಕಾಣಿಸಿಕೊಂಡಿತು ಎನ್ನುವ ವಿಷಯದಲ್ಲಿಯೂ ಹೀಗೆಯೇ ಭಿನ್ನಮತವಿದೆ. ಸಂಸ್ಕೃತ ಮೂಲವನ್ನು ಹೇಳುವವರ ಅಭಿಪ್ರಾಯ ಹೀಗೆ ; ಸಂಸ್ಕೃತ ಸಾಹಿತ್ಯದಲ್ಲಿ ಪ್ರಾಚೀನವಾದ ಜಾತಕಕಥೆಗಳು, ಪಂಚತಂತ್ರ ಮುಂತಾದವುಗಳಲ್ಲಿ ಗದ್ಯಪದ್ಯಗಳ ಸಮ್ಮಿಶ್ರಣವಿದೆ. ಆದರೆ ಅವುಗಳಲ್ಲಿ ಕಾವ್ಯದೃಷ್ಟಿಗಿಂತ ಇತರ ದೃಷ್ಟಿಗಳೇ ಹೆಚ್ಚು. ಆದ್ದರಿಂದ ಅವು ಚಂಪೂ ಎನ್ನಿಸಲಾರವು. ಹರಿಷೇಣನ ಸಮುದ್ರಗುಪ್ತನ ಪ್ರಶಸ್ತಿ (ಕ್ರಿ.ಶ. 350) ಲಾಕ್ಷಣಿಕರ ಕಾವ್ಯವಿಭಾಗದ ಪ್ರಕಾರ ಚಂಪೂ ಆಗಬಹುದು. ದಂಡಿ ಚಂಪೂವನ್ನು ಪ್ರತ್ಯೇಕವಾಗಿ ಹೇಳಿರುವುದರಿಂದ ಆತನಿಗೆ ಪೂರ್ವದಲ್ಲಿ, ಎಂದರೆ ಕ್ರಿ.ಶ. 7ನೆಯ ಶತಮಾನಕ್ಕೆ ಮೊದಲು ಆ ಸಾಹಿತ್ಯ ಪ್ರಕಾರದ ಕೃತಿಗಳು ಸಂಸ್ಕೃತದಲ್ಲಿ ಇದ್ದಿರಬೇಕು. ಅವು ಕಾಲಧರ್ಮದಿಂದಾಗಿ ನಷ್ಟವಾಗಿರಬಹುದು. ಸಂಸ್ಕೃತ ಗದ್ಯಕಾವ್ಯಕಾರರು ಪ್ರಾಯಿಕವಾಗಿ ಕಲ್ಪಿತ ಕಥೆಗಳನ್ನೂ ಪದ್ಯಕಾವ್ಯಕಾರರು ಪೂರ್ವ ಪುರಾಣೇತಿಹಾಸಪ್ರಸಿದ್ಧವಾದ ವಸ್ತುಗಳನ್ನೋ ಐತಿಹಾಸಿಕ ರಾಜವೃತ್ತಾಂತಗಳನ್ನೋ ಆಶ್ರಯಿಸಿ ಮಹಾಕಾವ್ಯಗಳನ್ನು ಬರೆಯುತ್ತಿದ್ದರು. ಈ ಪರಿಹಾರವನ್ನು ಬದಲಾಯಿಸಿ ಪ್ರಸಿದ್ಧ ಹಾಗೂ ಪ್ರಶಸ್ತಿಪರ ವೃತ್ತಾಂತಗಳನ್ನು ಚಂಪೂಮಾರ್ಗದಿಂದ ಹೇಳುವ ಪದ್ಧತಿ ಹೊಸದಾದ ಚಂಪೂ ಶೈಲಿಗೆ ಪ್ರೇರಕವಾಯಿತೆಂದು ಹೇಳಬಹುದು. ಕಾಳಿದಾಸಾದಿ ಪದ್ಯಕವಿಗಳೂ ಬಾಣಾದಿ ಗದ್ಯಕವಿಗಳೂ ಬರೆದ ಮೇಲೆ ಈಚಿನವರಿಗೆ ವಸ್ತುವಿನ ಆಯ್ಕೆಯಲ್ಲಿ ಮತ್ತು ಶೈಲಿಯಲ್ಲಿ ಆ ಪ್ರಸಿದ್ಧರೊಡನೆ ಸ್ಪರ್ಧಿಸುವುದು ಕಷ್ಟವಾಗಿ, ಹಳೆಯ ವಸ್ತುವನ್ನು ಹೊಸದಾದ ಶೈಲಿಯಲ್ಲಿ ಹೇಳುವ ಪ್ರಯತ್ನ ನಡೆದಂತೆ ಕಾಣುತ್ತದೆ. ಚಂಪೂ ಶೈಲಿ ಪಂಡಿತಪ್ರಿಯವಾಗಿ ಪರಿಣಮಿಸಿದ ಮೇಲೆ ಆಸ್ಥಾನಕವಿಗಳೂ ರಾಜ ಪ್ರಶಸ್ತಿ, ಆಚಾರ್ಯ ದಿಗ್ವಿಜಯ ಮುಂತಾದವುಗಳಿಗೂ ಅವನ್ನು ಬಳಸಿಕೊಂಡರು. ಇದು ವಿದ್ವಾಂಸರ ವಿಚಾರಸರಣಿ.

ಕನ್ನಡ ಮೂಲವನ್ನು ಹೇಳುವವರ ಅಭಿಪ್ರಾಯ ಹೀಗೆ: ಪ್ರಾಚೀನವಾದ ಸಂಸ್ಕೃತ ವಾಙ್ಮಯದಲ್ಲಿ ಚಂಪೂ ಸಾಹಿತ್ಯಪ್ರಕಾರ ಅಷ್ಟೇನೂ ಪ್ರಾಚೀನವಾದುದಲ್ಲ, ಈಚೆಗೆ ಕಾಣಿಸಿಕೊಂಡದ್ದು. ಆ ಭಾಷೆಯಲ್ಲಿ ಆ ರೀತಿಯ ಸಾಹಿತ್ಯ ಕಣ್ಣಿಗೆ ಬೀಳುವುದು ಕ್ರಿ.ಶ. 10ನೆಯ ಶತಮಾನದಿಂದ. ತ್ರಿವಿಕ್ರಮಭಟ್ಟನ (ಕ್ರಿ..ಶ. ಸು. 915) ದಮಯಂತೀ ಕಥೆ ಅಥವಾ ನಳಚಂಪೂ ಮತ್ತು ಸೋಮದೇವನ ಯಶಸ್ತಿಲಕ ಚಂಪೂ (ಕ್ರಿ.ಶ. 959) ಇವು ಈಗ ತಿಳಿದಮಟ್ಟಿಗೆ ಆ ಭಾಷೆಯಲ್ಲಿಯ ಆದ್ಯ ಚಂಪೂ ಕೃತಿಗಳು. ಇವು ರಚನೆಯಾದದ್ದು ಕರ್ಣಾಟಕದಲ್ಲಿ, ಹಾಗೂ ಕನ್ನಡ ರಾಜರ ಆಶ್ರಯದಲ್ಲಿದ್ದ ಕವಿಗಳಿಂದ. ಇವರು ಆ ವೇಳೆಗಾಗಲೇ ಕನ್ನಡನಾಡಿನ ಕನ್ನಡ ಜೈನ ಕವಿಗಳು ಕಲ್ಪಿಸಿ ರೂಢಿಸಿದ್ದ ಚಂಪೂ ಮಾರ್ಗವನ್ನು ಅನುಸರಿಸಿದರೆಂದು ತೋರುತ್ತದೆ. ಕನ್ನಡದಲ್ಲಿ ಚಂಪೂ ಗ್ರಂಥಗಳು 8-9 ಶತಮಾನಗಳಲ್ಲಿಯೇ ಕಾಣಿಸಿಕೊಂಡಿದ್ದವೆಂದು ತಿಳಿಯುವುದಕ್ಕೆ ಆಧಾರಗಳಿವೆ. ಆದರ ಕ್ರಿ.ಶ. ಸು. 7ನೆಯ ಶತಮಾನದ ದಂಡಿ ಚಂಪೂವಿನ ಲಕ್ಷಣವನ್ನು ಹೇಳಿದ್ದಾನಲ್ಲದೆ, ಆತನ ಕಾಲದಲ್ಲಿಯೂ ಅದಕ್ಕೆ ಮೊದಲಲ್ಲಿಯೂ ಸಂಸ್ಕೃತ ಚಂಪೂಗ್ರಂಥಗಳು ಇಲ್ಲದೆ ಹೀಗೆ ಹೇಳಿರುವುದು ಸಾಧ್ಯವೇ ಎಂಬ ಪ್ರಶ್ನೆ ಸಹಜವಾಗಿ ಹುಟ್ಟುತ್ತದೆ. ದಂಡಿಗೆ ಪರಿಚಿತವಾಗಿದ್ದ ಚಂಪೂ ಸಾಹಿತ್ಯ ಪೂರ್ತಿಯಾಗಿ ನಷ್ಟವಾಗಿದೆ ಎಂಬುದು ತೃಪ್ತಿಕರವಾದ ಉತ್ತರವಲ್ಲ. ಆತ ದಾಕ್ಷಿಣಾತ್ಯನಾದುದರಿಂದ, ಆ ಕಾಲಕ್ಕೆ ದಕ್ಷಿಣದಲ್ಲಿ ಪ್ರಚಲಿತವಾಗಿದ್ದ ಕನ್ನಡ ತಮಿಳು ಭಾಷೆಗಳಲ್ಲಿಯ ಚಂಪೂಕೃತಿಗಳನ್ನು ನೋಡಿದ್ದಿರಬಹುದು. ಒಂದು ಪಕ್ಷ ಮೂಲತಃ ಸಂಸ್ಕೃತವೆಂದು ತಿಳಿದರೂ ಅದು ಕನ್ನಡ ಸಾಹಿತ್ಯದಲ್ಲಿ ಪಡೆದ ರೂಪ ಸಂಸ್ಕೃತದ ಅನುಕರಣೆಯ ಫಲವಲ್ಲ. ವೈಶಿಷ್ಟ್ಯಪೂರ್ಣವಾದುದು-ಇದಿಷ್ಟೂ ಒಟ್ಟಿನಲ್ಲಿ ಒಬ್ಬ ವಿದ್ವಾಂಸರ ವಿಚಾರಸರಣಿ.

ಇನ್ನೊಬ್ಬ ವಿದ್ವಾಂಸರು ಹೀಗೆಯೇ, ಸಂಸ್ಕೃತಸಾಹಿತ್ಯದಲ್ಲಿ ಚಂಪೂ ಸಾಹಿತ್ಯದ ಅರ್ವಾಚೀನತೆ ಸಂಸ್ಕೃತದ ಪ್ರಾಚೀನ ಲಾಕ್ಷಣಿಕರಲ್ಲಿ ದಾಕ್ಷಿಣಾತ್ಯನಾದ ದಂಡಿಯೊಬ್ಬನೇ ಅದನ್ನು ಹೆಸರಿಸತಕ್ಕವನು ಎಂಬ ಸಾಕ್ಷ, ಚಂಪೂ ಶಬ್ದಕ್ಕೆ ಸಂಸ್ಕೃತದಲ್ಲಿ ಸ್ವರಸವಾದ ರೂಪನಿಷ್ಪತ್ತಿಯನ್ನು ಹೇಳುವುದರ ಅಶಕ್ಯತೆ, ತಮಿಳು ಭಾಷೆಯ ಪ್ರಾಚೀನಕಾವ್ಯವಾದ ಶಿಲಪ್ಪದಿಕಾರದ ಅನೇಕ ಸರ್ಗಗಳು ಗದ್ಯಪದ್ಯಾತ್ಮಕಗಳಾಗಿರುವುದು-ಇವನ್ನು ಗಮನಿಸಿ, ಚಂಪೂಕಾವ್ಯರೂಪ ಭಾರತೀಯ ಸಾಹಿತ್ಯಕ್ಕೆ ದಕ್ಷಿಣ ಭಾರತದ ಕೊಡುಗೆಯಾಗಿರಬೇಕೆಂದು ಭಾವಿಸಬಹುದು-ಎಂದಿದ್ದಾರೆ. ಅಲ್ಲದೆ ಕನ್ನಡದ ಮಟ್ಟಿಗೆ ಹೇಳುವುದಾದರೆ, ಹಿಂದಿನಿಂದ ಪ್ರಚಾರವಾಗಿದ್ದ ಚತ್ತಾಣದಲ್ಲಿ ಗದ್ಯಖಂಡಗಳು (ವಚನಗಳು) ನಡುನಡುವೆ ಸೇರಿ ಚಂಪು ತಲೆಯೆತ್ತಿರಬಹುದು ಎಂಬುದಾಗಿ ಕನ್ನಡದಲ್ಲಿ ಚಂಪುವಿನ ಉಗಮವನ್ನು ಗುರುತಿಸಲು ಯತ್ನಿಸಿದ್ದಾರೆ. (ಚತ್ತಾಣ ಎಂಬುದರ ಸ್ವರೂಪವನ್ನು ಅವರು ಹೀಗೆ ಹೀಗೆ ಹೇಳಿದ್ದಾರೆ ; ಕವಿರಾಜ ಮಾರ್ಗದಲ್ಲಿ ಉಕ್ತವಾದ, ಅದಕ್ಕೆ ಹಿಂದಿನ ಕಾಲದಿಂದಲೂ ಕನ್ನಡದಲ್ಲಿ ಪ್ರಚಲಿತವಾಗಿದ್ದ ಕಾವ್ಯರೂಪ. ಇದು ಬಾಜನೆಗಬ್ಬ ; ವಾಚಿಸತಕ್ಕದ್ದು ; ಇದರಲ್ಲಿ ಕಂದ, ಹಲವು ಬಗೆ ಸಂಸ್ಕೃತ ವೃತ್ತಗಳು-ಇವೆಲ್ಲ ಬರುತ್ತವೆ ; ಪದ್ದಳಿಯೂ ಬರಬಹುದು ; ಇದು ಅಖಿಲ ವರ್ಣನೆಗಳಿಂದ ಕೂಡಿದ ಕಾವ್ಯ ; ಆದಕಾರಣವೇ ಬಹುಶಃ ದೀರ್ಘವಾಗಿರುತ್ತದೆ.)

ಅಂತೂ ಚಂಪೂವಿನ ಉಗಮದ ವಿಷಯದಲ್ಲಿ ಭಿನ್ನಮತವಿರುವುದೂ ಅನಿರ್ದಿಷ್ಟತೆ ಇರುವುದೂ ಇದರಿಂದ ಸ್ಪಷ್ಟವಾಗಿ ತೋರುತ್ತದೆ. ಸಂಸ್ಕೃತ ಶಾಸನಸಾಹಿತ್ಯದಲ್ಲಿಯ ಹರಿಷೇಣಕೃತವಾದ ಸಮುದ್ರಗುಪ್ತನ ಅಲಹಾಬಾದ್ ಸ್ತಂಭಶಾಸನದಂಥ (ಸು. 350) ಪ್ರಶಸ್ತಿ ಶಾಸನಗಳ ಗದ್ಯಪದ್ಯಾತ್ಮಕ ಸ್ವರೂಪವೂ ಪ್ರಾಕೃತಸಾಹಿತ್ಯದಲ್ಲಿ ಉದ್ಯೋತನಸೂರಿಕೃತ ಕುವಲಯಮಾಲಾ ಕಹಾದಂಥ (ಕ್ರಿ.ಶ. 779) ಗದ್ಯಪದ್ಯಗಳು ಅನುಸ್ಯೂತ ಬೆರೆತ ಕಥಾನಿರೂಪಣೆಯೂ ವರ್ಣನೆಗಳು ಚಂಪೂವಿನ ಉಗಮವನ್ನು 10ನೆಯ ಶತಮಾನಕ್ಕಿಂತ ಹಿಂದಕ್ಕೆ ಒಯ್ಯಲು ತಕ್ಕ ಸಾಕ್ಷ್ಯಗಳಾಗಿರುವಂತೆ ತೋರುತ್ತದೆ. ಈ ಗ್ರಂಥದ ಸಂಪಾದಕರು ಇದನ್ನು ಚಂಪುವೆಂದೇ ಕರೆಯಬಹುದು-ಎಂದು ಸೂಚಿಸಿದ್ದಾರೆ. ಸಂಶೋಧನೆಯಿಂದ ಹೊಸ ಸಂಗತಿಗಳು ಬೆಳಕಿಗೆ ಬಂದ ಹೊರತು ಈ ವಿಷಯದಲ್ಲಿ ಯಾವ ನಿರ್ಣಯಕ್ಕೂ ಬರುವುದು ಸರಿಯಾಗದು.

ಸಂಸ್ಕೃತದಲ್ಲಿ ಚಂಪೂ ಸಾಹಿತ್ಯ

ಬದಲಾಯಿಸಿ

ಪ್ರಾಚೀನ ಗ್ರಂಥಗಳಾದ ಜಾತಕಮಾಲ, ಪಂಚತಂತ್ರ ಮುಂತಾದವಲ್ಲಿ ಗದ್ಯಪದ್ಯ ಮಿಶ್ರಣ ಕಂಡುಬರುತ್ತದೆ. ಅವುಗಳಲ್ಲಿ, ಗದ್ಯದಲ್ಲಿ ವಿವರಿಸಿದ ವಿಷಯದ ಸಾರವನ್ನು ಸಂಗ್ರಹಿಸಿ ನೆನಪಿನಲ್ಲಿ ನೆಲೆಗೊಳಿಸಲು ಪದ್ಯಗಳು ವಿರಳವಾಗಿ ಬರುತ್ತವೆ ; ಇಲ್ಲವೆ ನೀತಿಬೋಧಕ ಸುಭಾಷಿತಗಳಂತೆ ಬರುತ್ತವೆ. ಹರಿಷೇಣನಿಂದ ರಚಿತವಾದ ಸಮುದ್ರಗುಪ್ತ ಪ್ರಶಸ್ತಿಯಲ್ಲೂ (ಕ್ರಿ.ಶ. 345) ಗದ್ಯಪದ್ಯಮಿಶ್ರಣವಿದೆ ; ವಿಶೇಷವಾಗಿ ಕಾವ್ಯಾಂಶವಿಲ್ಲದಿರುವುದರಿಂದ ಇವನ್ನು ಚಂಪೂ ಕಾವ್ಯಗಳೆಂದು ಪರಿಗಣಿಸಲಾಗಿಲ್ಲ.

ದಂಡಿಯಿಂದ ಲಕ್ಷಿತವಾದ ಚಂಪೂ ಕಾವ್ಯ ಅವನಿಗಿಂತ ಹಳೆಯದಿರಬೇಕು. ಆದರೂ ಅವನಿಗಿಂತ ಹಿಂದಿನ ಇಲ್ಲವೆ ಅವನ ಕಾಲದ ಚಂಪೂಕಾವ್ಯಗಳು ನಮಗೆ ದೊರೆತಿಲ್ಲ. ಉಪಲಬ್ಧವಿರುವ ಕಾವ್ಯಗಳಲ್ಲಿ ಪ್ರಾಚೀನವೆಂದೆನ್ನಿಸಿಕೊಂಡವು ಕ್ರಿ.ಶ. 10ನೆಯ ಶತಮಾನದಲ್ಲಿ ರಚಿತವಾದವು. ರಾಷ್ಟ್ರಕೂಟ ರಾಜ ಮೂರನೆಯ ಇಂದ್ರನ ನೌಸರಿ ಶಾಸನ ರಚಿಸಿದ ತ್ರಿವಿಕ್ರಮಭಟ್ಟ (ಕ್ರಿ.ಶ. ಸು. 915) ದಮಯಂತೀ ಕಥಾ ಅಥವಾ ನಲಚಂಪೂ ಎಂಬ ಕಾವ್ಯವನ್ನು ರಚಿಸಿದ. ಮಹಾಭಾರತದಲ್ಲಿ ಸರಳ ಹಾಗೂ ಸುಂದರವಾಗಿ ನಿರೂಪಿತವಾಗಿರುವ ಪ್ರಸಿದ್ಧ ನಲಚರಿತವನ್ನು ಈ ಕವಿ ಶ್ಲೇಷಯಮಕಾದ್ಯಲಂಕಾರಗಳಿಂದ ಕೂಡಿದ ಪ್ರೌಢಶೈಲಿಯಲ್ಲಿ ಬೆಳೆಸಿದ್ದಾನೆ. ಈತನ ಮತ್ತೊಂದು ಕೃತಿ ಮದಾಲಸಾಚಂಪೂ. ಇದೇ ಶತಮಾನಕ್ಕೆ ಸೇರಿದ ಇನ್ನೊಂದು ಚಂಪೂಕಾವ್ಯ ಯಶಸ್ತಿಲಕ. ರಾಷ್ಟ್ರಕೂಟರಾಜ ಕೃಷ್ಣನ ಸಾಮಂತನಾಗಿದ್ದ ಎರಡನೆಯ ಅರಿಕೇಸರಿಯ ಮಗನ ಆಶ್ರಯ ಪಡೆದಿದ್ದ ದಿಗಂಬರ ಜೈನ ಸೋಮದೇವ (ಸೋಮಪ್ರಭಸೂರಿ ಕ್ರಿ.ಶ. 959) ಇದನ್ನು ಬರೆದ. 8 ಆಶ್ವಾಸಗಳುಳ್ಳ ಈ ಕಾವ್ಯ ತ್ರಿವಿಕ್ರಮನ ಕೃತಿಗಿಂತ ವಿಸ್ತಾರವೂ ಉತ್ತಮವೂ ಆಗಿದೆ. ಜೈನರ ಕಥೆಗಳಲ್ಲಿ ಪ್ರಸಿದ್ಧವಾದ ಯಶೋಧರಚರಿತವೇ ಇದರ ಕಥಾ ವಸ್ತು. ಯೋಧೇಯ ದೇಶದ ರಾಜ ಮಾರಿದತ್ತ ತನ್ನ ಕುಲಪುರೋಹಿತನ ಉಪದೇಶದಂತೆ ಯಾಗವೊಂದನ್ನು ಕೈಗೊಂಡಾಗ ಚಂಡಮಾರಿದೇವತೆಗೆ ಎಲ್ಲ ಪ್ರಾಣಿಗಳ ಜೋಡಿಗಳನ್ನೂ ಬಲಿಕೊಡಬೇಕಾಗುತ್ತದೆ. ಆ ಜೋಡಿಗಳಲ್ಲಿ ಮನುಷ್ಯ ಜೋಡಿಯೂ ಸೇರಿದೆ. ರಾಜಭಟರು ಮುನಿವೃತ್ತಿಯನ್ನು ಸ್ವೀಕರಿಸಿದ್ದ ಅಣ್ಣತಂಗಿಯರ ಜೋಡಿಯನ್ನು ವಧಸ್ಥಾನಕ್ಕೆ ಕರೆತರುತ್ತಾರೆ. ಅವರ ದರ್ಶನದಿಂದ ರಾಜನ ಅಜ್ಞಾನಾಂಧಕಾರ ಕಳೆಯುತ್ತದೆ. ನಿಜವಾಗಿಯೂ ಆ ಸೋದರ ಸೋದರಿಯರು ರಾಜನ ಸೋದರಿಯ ಅವಳಿಮಕ್ಕಳು, ಜಾತಿಸ್ಮರನಾದ ಆ ಸೋದರ ಪೂರ್ವಜನ್ಮವೃತ್ತಾಂತವನ್ನು ವಿವರಿಸುತ್ತಾನೆ. ಅವನೇ ಹಿಂದಿನ ಒಂದು ಜನ್ಮದಲ್ಲಿ ಯಶೋಧರನಾಗಿದ್ದವ. ರಾಜ ತಾನು ಮಾಡಲಿದ್ದ ಘೋರವಾದ ಪಾಪಕೃತ್ಯವನ್ನರಿತು ಜೈನಧರ್ಮವನ್ನವಲಂಬಿಸುತ್ತಾನೆ. ಸೋಮದೇವ ಈ ಕೃತಿಯಲ್ಲಿ, ಬಾಣನ ಕಾದಂಬರಿಯಲ್ಲಿ ಬರುವಂತೆ, ಕಥೆಯೊಳಗೆ ಕಥೆಯನ್ನು ಅಡಕಮಾಡಿ ಅನೇಕ ಜನ್ಮಗಳ ವೃತ್ತಾಂತವನ್ನು ಹೇಳಿದ್ದಾನೆ. ಕವಿಗಿದ್ದ ವಿವಿಧ ಶಾಸ್ತ್ರಗಳ ಪರಿಚಯ ಇಲ್ಲಿ ಪ್ರದರ್ಶಿತವಾಗಿದೆ. ಕವಿಯ ಧರ್ಮಶ್ರದ್ಧೆಯ ಫಲವಾಗಿ ಜೈನಧರ್ಮೋಪದೇಶ ಕೊನೆಯ ಮೂರು ಆಶ್ವಾಸಗಳಲ್ಲಿ ತುಂಬಿದೆ. ಪ್ರಾಯಶಃ ಇದೇ ಶತಮಾನದಲ್ಲಿ ರಚಿತವಾದ ಮತ್ತೊಂದು ಜೈನಚಂಪೂಕಾವ್ಯ ಜೀವಂಧರಚಂಪೂ. ಇದರಲ್ಲಿ 11 ಲಂಬಕಗಳಿವೆ. ಗುಣಭದ್ರನ ಉತ್ತರಪುರಾಣದ ಆಧಾರದ ಮೇಲೆ ಹರಿಚಂದ್ರ ಈ ಕಾವ್ಯವನ್ನು ರಚಿಸಿದ್ದಾನೆ.

ಕೊಂಕಣದ ಮುಮ್ಮುನಿರಾಜನ ಆಶ್ರಯ ಪಡೆದಿದ್ದ ವಾಲಭಕಾಯಸ್ಥ ಸೊಡ್ಡಲ (ಸು. 1000) ಉದಯಸುಂದರೀಕಥಾ ಎಂಬ ಚಂಪೂವನ್ನು ರಚಿಸಿದ. ಇದರಲ್ಲಿ 6 ಉಚ್ಛ್ವಾಸಗಳಿವೆ. ಕವಿ ನಾಗಲೋಕದ ರಾಜಕನ್ಯೆ ಉದಯಸುಂದರೀ ಮತ್ತು ಪ್ರತಿಷ್ಠಾನದ ರಾಜಕುಮಾರ ಮಲಯವಾಹನ-ಇವರ ಪ್ರೇಮದ ಕಥೆಯೊಡನೆ ತಾರಾವಳಿ ಮತ್ತು ಕುಮಾರಕೇಸರಿಯರ ಪ್ರಣಯವೃತ್ತಾಂತವನ್ನು ಹೆಣೆದು ಬಾಣನ ಕಾದಂಬರಿಯನ್ನು ನೆನಪಿಗೆ ತರುತ್ತಾನೆ, ಮತ್ತು ಬಾಣನ ಹರ್ಷಚರಿತದಲ್ಲಿರುವಂತೆ ತನ್ನ ಹಿಂದಿ;ನ ಕವಿಗಳ ಮೇಲೆ ಸುಮಾರು 25 ಪದ್ಯಗಳನ್ನೂ ಬರೆದಿರುವುದಲ್ಲದೆ ತನ್ನ ವಂಶಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನೂ ತಿಳಿಸಿದ್ದಾನೆ. ಚಂಪೂರಾಮಾಯಣ ಭೋಜರಾಜನಿಂದ ವಿರಚಿತವಾದುದೆಂದು ಹೇಳಲಾಗಿದೆ. ಈ ಕಾವ್ಯಕರ್ತೃ ಧಾರಾನಗರದಲ್ಲಿ ಆಳುತ್ತಿದ್ದ ಪ್ರಖ್ಯಾತನಾದ ಭೋಜರಾಜನೇ (1018-1063) ಇರಬೇಕೆಂಬ ಇನ್ನೊಂದು ನಂಬಿಕೆ ಇದೆ. ಪ್ರತಿಕಾಂಡದ ಸಮಾಪ್ತಿವಾಕ್ಯದಲ್ಲಿ ವಿದರ್ಭ ರಾಜ ವಿರಚಿತವೆಂಬ ಮಾತು ಬರುತ್ತದೆಯಾದರೂ ಕರ್ತೃವಿನ ಹೆಸರಿಲ್ಲ. ಸುಂದರ ಕಾಂಡದಲ್ಲಿ ಮುಗಿದ ಈ ಕಾವ್ಯಕ್ಕೆ ಯುದ್ಧಕಾಂಡವನ್ನು ರಚಿಸಿ ಸೇರಿಸಿದ ಲಕ್ಷ್ಮಣ ಕಾವ್ಯದ ಕರ್ತೃ ಭೋಜನೆಂದೇ ಹೆಸರಿಸುತ್ತಾನೆ. ಕವಿ ಇಲ್ಲಿ ಮೂಲರಾಮಾಯಣದ ಕಥೆಯನ್ನು ಏನೂ ವ್ಯತ್ಯಾಸಮಾಡದೆ ಸುಂದರವಾಗಿ ಚಂಪೂಶೈಲಿಯಲ್ಲಿ ಸಂಗ್ರಹಿಸಿಕೊಟ್ಟಿದ್ದಾನೆ. ಗದ್ಯವೂ ಪದ್ಯವೂ ಬಹುಮಟ್ಟಿಗೆ ಚೆನ್ನಾಗಿದ್ದ ಕಾವ್ಯ ಪ್ರಿಯವಾಗಿದೆ.

ಉತ್ತರಕಾಂಡದ ಕಥೆಯನ್ನು ಚಂಪೂಶೈಲಿಯಲ್ಲಿ ಅನೇಕರ ರಚಿಸಿರುತ್ತಾರೆ. ಸು. 1050ರಲ್ಲಿ ಅಭಿನವಕಾಳಿದಾಸ 6 ಉಚ್ಛ್ವಾಸಗಳಲ್ಲಿ ಭಾಗವತ ಚಂಪೂವನ್ನು ಬರೆದ. ಸೋಮೇಶ್ವರದೇವ (1240) ವೀರಧವಲನ ಮಂತ್ರಿ ವಸ್ತುಪಾಲನ ಚರಿತೆಯನ್ನು ಕೀರ್ತಿಕೌಮುದೀ ಎಂಬ ಚಂಪೂಕಾವ್ಯದಲ್ಲಿ ಹೇಳಿದ್ದಾನೆ. ಕಳಿಂಗದೇಶವನ್ನಾಳಿದ ಗಂಗರನ್ನು ಕುರಿತ ಗಂಗವಂಶಾನುಚರಿತಂ ಎಂಬ ಚಂಪೂವನ್ನು ವಾಸುದೇವ ರಥ ಸು. 1420ರಲ್ಲಿ ರಚಿಸಿದ. ಭಾರತ ಚಂಪೂವನ್ನು ರಚಿಸಿದ ಅನಂತಭಟ್ಟನ ಕಾಲ ಖಚಿತವಾಗಿ ತಿಳಿದಿಲ್ಲ. ನಾರಾಯಣೀಯದ ಕರ್ತೃ ಮಲಬಾರಿನ ನಾರಾಯಣ ಭಟ್ಟಾತಿರಿ (1560-1646) ಅನಂತಭಟ್ಟನ ಚಂಪೂಕೃತಿಗಳಿಂದ ಅನೇಕ ವಾಕ್ಯಗಳನ್ನು ಉದಾಹರಿಸಿದ್ದಾನೆ. ಆದ್ದರಿಂದ ಭಾರತ ಚಂಪೂ 16ನೆಯ ಶತಮಾನಕ್ಕಿಂತ ಮುಂಚೆ ರಚಿತವಾಗಿರಬೇಕು. ಇದರಲ್ಲಿ 12 ಸ್ತಬಕಗಳಿವೆ. ಶಬ್ದಸಂಪತ್ತಿನಿಂದಲೂ ನಾನಾ ಅಲಂಕಾರಗಳಿಂದಲೂ ಪದ್ಯಗಳ ವೃತ್ತವೈವಿಧ್ಯದಿಂದಲೂ ಆಕರ್ಷಕವೂ ಪ್ರಿಯವೂ ಆಗಿರುವ ಚಂಪೂಭಾರತದಲ್ಲಿ ಮಹಾಭಾರತದ ಕಥೆಯ ಸುಂದರಸಂಗ್ರಹವಿದೆ. ಅನಂತಭಟ್ಟ ಒಂದು ಭಾಗವತ ಚಂಪೂವನ್ನೂ ಬರೆದಿದ್ದಾನೆ.

16 ಮತ್ತು 17ನೆಯ ಶತಮಾನಗಳಲ್ಲಿ ಚಂಪೂಕೃತಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಚಿತವಾದುವು. ವಿಜಯನಗರದ ಅಚ್ಯುತರಾಯನ ರಾಣಿ ತಿರುಮಲಾಂಬೆ ಕ್ರಿ.ಶ. ಸು. 1550ರಲ್ಲಿ ವರದಾಂಬಿಕಾಪರಿಣಯ ಚಂಪೂವನ್ನು ಬರೆದಳು. ಅಚ್ಯುತರಾಯ ಮತ್ತು ರಾಜಕುಮಾರಿ ವರದಾಂಬಿಕೆಯರ ವಿವಾಹವೇ ಇದರ ವಸ್ತು. ರಾಮಾನುಜಾಚಾರ್ಯರ (11ನೆಯ ಶತಮಾನ) ಜೀವನಚರಿತ್ರೆಯನ್ನೂ ಹಿರಿಮೆಯನ್ನೂ ವರ್ಣಿಸುವ ರಾಮಾನುಜ ಚಂಪೂವನ್ನು 16ನೆಯ ಶತಮಾನದಲ್ಲಿ ರಾಮನುಜಾಚಾರ್ಯ ರಚಿಸಿದ. ಚಿದಂಬರ ಕವಿ ಇದೇ ಶತಮಾನದಲ್ಲಿ ಪಂಚಕಲ್ಯಾಣ ಚಂಪೂವನ್ನು ರಚಿಸಿದ. ಇದರಲ್ಲಿ ರಾಮ, ಕೃಷ್ಣ, ವಿಷ್ಣು, ಶಿವ, ಸ್ಕಂದ-ಈ ಐವರ ವಿವಾಹವೃತ್ತಾಂತಗಳನ್ನೂ ಒಮ್ಮೆಲೆ ಹೇಳುವ ಕೌಶಲವನ್ನು ಪ್ರದರ್ಶಿಸಿದ್ದಾನೆ. ಅಲ್ಲದೆ ಒಂದು ಭಾಗವತ ಚಂಪೂವನ್ನು ಬರೆದಿದ್ದಾನೆ. ಅಂತೆಯೇ ರಾಮಭದ್ರ, ರಾಜನಾಥ ಇವರೂ ಭಾಗವತ ಚಂಪೂವನ್ನು ಬರೆದಿದ್ದಾರೆ. ಭಾಗವತ ಚಂಪೂವನ್ನು ಬರೆದಂತೆಯೇ ಹಲವರು ಪ್ರಹ್ಲಾದನ ಕಥೆಯನ್ನು ಕುರಿತು ಚಂಪೂಕಾವ್ಯಗಳನ್ನು ರಚಿಸಿದ್ದಾರೆ. ಕೇಶವಭಟ್ಟ 6 ಸ್ತಬಕಗಳಲ್ಲೂ ದೈವಜ್ಞಸೂರ್ಯ 5 ಉಚ್ಛ್ವಾಸಗಳಲ್ಲೂ ಸಂಕರ್ಷಣ 4 ಉಲ್ಲಾಸಗಳಲ್ಲೂ ನೃಸಿಂಹಚಂಪೂವನ್ನು ರಚಿಸಿರುತ್ತಾರೆ. 16ನೆಯ ಶತಮಾನದ ಉತ್ತರಾರ್ಧದಲ್ಲಿ ಶೇಷಕೃಷ್ಣನೆಂಬಾತ ಪಾರಿಜಾತಹರಣಚಂಪೂವನ್ನು ರಚಿಸಿದ. ಇದೇ ಕಾಲದಲ್ಲಿ ಸಮರಪುಂಗಮದೀಕ್ಷಿತ (ತೀರ್ಥ) ಯಾತ್ರಾಪ್ರಬಂಧದಲ್ಲಿ ತನ್ನ ಅಣ್ಣನೊಡನೆ ತಾನು ಮಾಡಿದ ತೀರ್ಥಯಾತ್ರೆಯನ್ನು ಕುರಿತು ಬರೆಯುತ್ತ ಋತುಗಳು, ಸೂರ್ಯೋದಯ, ಸೂರ್ಯಸ್ತ ಮುಂತಾದವನ್ನು ವರ್ಣಿಸಿದ್ದಾನೆ. ನಾರಾಯಣಭಟ್ಟ (ಸು. 1620) ಕೃಷ್ಣನ ಬಾಲಚರಿತವನ್ನು ವರ್ಣಿಸುವ ಆನಂದಕಂದ ಚಂಪೂವನ್ನೂ ಚಕ್ರಕವಿ (1650) ದ್ರೌಪದೀಪರಿಣಯ ಚಂಪೂವನ್ನೂ ರಚಿಸಿದ್ದಾರೆ. ನೀಲಕಂಠದೀಕ್ಷಿತ (1637) ನೀಲಕಂಠವಿಜಯ ಚಂಪೂವನ್ನು ರಚಿಸಿದ. ದೇವದಾನವರು ಕ್ಷೀರಸಾಗರವನ್ನು ಅಮೃತಕ್ಕಾಗಿ ಕಡೆದಾಗ ಉದ್ಭವಿಸಿದ ಹಾಲಾಹಲವನ್ನು ಲೋಕಕಲ್ಯಾಣಕ್ಕಾಗಿ ತಾನೇ ಕುಡಿದು ನೀಲಕಂಠನಾದ ಶಿವನ ಕಥೆಯೇ ಈ ಕಾವ್ಯದ ವಸ್ತು. ಕವಿಪ್ರತಿಭೆಯಿಂದ ಮೂಡಿದ ತಿಳಿಹಾಸ್ಯ, ಲಲಿತೋತ್ಪ್ರೇಕ್ಷೆಗಳಿಂದ ಕೂಡಿರುವ ಈ ಕಾವ್ಯದಲ್ಲಿ ಸುಂದರವಾದ ವರ್ಣನೆ, ಚತುರೋಕ್ತಿಗಳಿದ್ದು ಕೃತಿ ಮನೋಹರವಾಗಿದೆ. ಇದೇ ಶತಮಾನದ ಉತ್ತರಾರ್ಧದಲ್ಲಿ ವೆಂಕಟಾಧ್ವರಿ ಎಂಬಾತ ವರದಾಭ್ಯುದಯ (ಹಸ್ತಿಗಿರಿ ಚಂಪೂ), ಶ್ರೀನಿವಾಸಚಂಪೂ, ಉತ್ತರಚಂಪೂ, ವಿಶ್ವಗುಣಾದರ್ಶಚಂಪೂ- ಇವನ್ನು ರಚಿಸಿದ. ಇವುಗಳಲ್ಲಿ ವಿಶ್ವಗುಣಾದರ್ಶ ಆಕರ್ಷಕವಾಗಿದೆ. ಆಕಾಶದಲ್ಲಿ ಸಂಚರಿಸುತ್ತಿರುವ ಗುಣಗ್ರಾಹಿಯಾದ ವಿಶ್ವಾವಸು ಮತ್ತು ದೋಷವನ್ನೇ ಕಂಡು ಖಂಡಿಸುವ ಕೃಶಾನು ಎಂಬ ಗಂಧರ್ವರಿಬ್ಬರ ಸಂಭಾಷಣೆಯಲ್ಲಿ ಕವಿ ಇಲ್ಲಿ ಅನೇಕ ದೇಶಗಳ ವೃತ್ತಿಪ್ರವೃತ್ತಿಗಳನ್ನೂ ಆಚಾರವ್ಯವಹಾರಗಳನ್ನೂ ವಿಡಂಬನಾತ್ಮಕವಾಗಿ ಚಿತ್ರಿಸಿದ್ದಾನೆ. ನಾರಾಯಣನ ಸ್ವಾಹಾಸುಧಾಕರ ಚಂಪೂ ಕೃತಿ ಅಗ್ನಿಯ ಪತ್ನಿ ಸ್ವಾಹಾ ಮತ್ತು ಚಂದ್ರ-ಇವರ ಪ್ರಣಯವನ್ನು ಕುರಿತದ್ದಾಗಿದೆ. ವಿಶ್ವಗುಣಾದರ್ಶದ ಧಾಟಿಯನ್ನೇ ಅನುಸರಿಸಿ ಅನ್ನಯಾರ್ಯ ತನ್ನ ತತ್ತ್ವಗುಣಾದರ್ಶದಲ್ಲಿ ಶೈವನಾದ ಜಯ ಮತ್ತು ವೈಷ್ಣವನಾದ ವಿಜಯ-ಇವರಿಬ್ಬರ ಸಂಭಾಷಣೆಯಲ್ಲಿ ಶೈವ, ವೈಷ್ಣವ ಮತಗಳ ತಾರತಾಮ್ಯವನ್ನು ವರ್ಣಿಸಿದ್ದಾನೆ.

ಜೈನಕವಿಗಳು ಚಂಪೂಕಾವ್ಯಪದ್ಧತಿಯನ್ನು ಸ್ವಧರ್ಮಪ್ರಚಾರಕ್ಕಾಗಿ ಹೇಗೆ ಉಪಯೋಗಿಸಿಕೊಂಡರೊ ಹಾಗೆಯೇ ಬಂಗಾಳದ ವೈಷ್ಣವಪಂಥದವರೂ ಬಳಸಿಕೊಂಡರು. ಚೈತನ್ಯನ ಅನುಯಾಯಿ ರಘುನಾಥದಾಸ ಮುಕ್ತಾಚರಿತ್ರದಲ್ಲಿ ಹಾಲೆರೆದು ಮುತ್ತಿನಬೆಳೆಯನ್ನು ಬೆಳೆಯಬಹುದೆಂದು ಕೃಷ್ಣ ತೋರ್ಪಡಿಸಿದ ಕಥೆಯನ್ನು ಹೇಳುತ್ತಾನೆ. ಜೀವಗೋಸ್ವಾಮಿಯ ಗೋಪಾಲಚಂಪೂ ಮತ್ತು ಪರಮಾನಂದದಾಸಸೇನಕವಿಕರ್ಣಪೂರನ ಆನಂದವೃಂದಾವನ ಚಂಪೂ ಕಾವ್ಯಗಳು ಹರಿವಂಶ ಮತ್ತು ಭಾಗವನ್ನನುಸರಿಸಿ ಕೃಷ್ಣಚರಿತ್ರವನ್ನೇ ಹೇಳುತ್ತವೆ.

ತಂಜಾವೂರು ರಾಜಾ ಸರ್ಫೋಜಿಯಿಂದ 18ನೆಯ ಶತಮಾನದ ಪೂರ್ವಾರ್ಧದಲ್ಲಿ ಕುಮಾರಸಂಭವ ಚಂಪೂ ರಚಿತವಾಯಿತು. ಇದೇ ಶತಮಾನದ ಉತ್ತರಾರ್ಧದಲ್ಲಿ ಬಾಣೇಶ್ವರ ಬರ್ದವಾನರಾಜ ಚಿತ್ರಸೇನನನ್ನು ಕುರಿತ ಚಿತ್ರ ಚಂಪೂವನ್ನು ರಚಿಸಿದ. ಶಂಕರಕವಿ ಚೇತಸಿಂಹನನ್ನು ಕುರಿತು ಶಂಕರಚೇತೋವಿಲಾಸ ಚಂಪೂವನ್ನು ಬರೆದ. ಕೃಷ್ಣಕವಿಯ ಮಂದಾರಮರಂದಚಂಪೂವಿನಲ್ಲಿ ಕಾವ್ಯಾಂಶಕ್ಕಿಂತ ಹೆಚ್ಚಾಗಿ ಕಾವ್ಯಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ವಿಷಯಗಳೂ ವೃತ್ತಗಳ ವಿಚಾರವೂ ಇವೆ. ಚಂಪೂ ಕಾವ್ಯ ರಚನೆ ಕರ್ಣಾಟಕದ ಹಲವೆಡೆಗಳಲ್ಲಿ ಇತ್ತೀಚಿನವರೆಗೂ ಮುಂದುವರಿದಿದೆ. ಉದಾಹರಣೆಗೆ, ಇತ್ತೀಚಿನ ಕಾಲದ ಸೀತಾರಾಮಕವಿ, ಗರಳಪುರಿಶಾಸ್ತ್ರಿ ಮೊದಲಾದ ಚಂಪೂಕಾವ್ಯಕರ್ತೃಗಳನ್ನು ಇಲ್ಲಿ ಹೆಸರಿಸಬಹುದು.

ರಾಮಾಯಣ, ಮಹಾಭಾರತ ಪುರಾಣೇತಿಹಾಸಗಳು ದೃಶ್ಯಕಾವ್ಯಗಳಿಗೂ ಮಹಾಕಾವ್ಯಗಳಿಗೂ ಕಥಾವಸ್ತುವನ್ನೊದಗಿಸಿ ಸ್ಪೂರ್ತಿನೀಡಿರುವಂತೆ ಚಂಪೂ ಕಾವ್ಯಕ್ಕೂ ಸ್ಪೂರ್ತಿದಾಯಕವಾಗಿವೆ. ಒಂದೇ ಕಥೆಯನ್ನು ಕುರಿತ ಹಲವು ಚಂಪೂಗಳಿರುವುದು ಮೇಲಿನ ನಿರೂಪಣೆಯಿಂದ ಸ್ಪಷ್ಟವಾಗುತ್ತದೆ ; ಹಾಗೆಯೇ ಚಂಪೂ ಕಾವ್ಯಗಳ ವಸ್ತುವೈವಿಧ್ಯವೂ ಅಷ್ಟೇ ಸ್ಪಷ್ಟವಾಗಿ ಮನವರಿಕೆಯಾಗುತ್ತದೆ. ರಾಮಾಯಣ, ಭಾರತ, ಭಾಗವತಗಳು, ಅವುಗಳಲ್ಲಿ ಬರುವ ಕಥೆಗಳು, ಜೈನರ ಪುರಾಣಕಥೆಗಳು, ಧರ್ಮಪ್ರಚಾರ, ಮತವಿಚಾರ, ಐತಿಹಾಸಿಕ ಘಟನೆಗಳು, ಸಮಾಜದ ಲೋಪದೋಷಗಳ ಟೀಕೆ-ಇವೆಲ್ಲವೂ ಚಂಪೂಕಾವ್ಯಗಳಿಗೆ ವಿಷಯವಾಗಿ, ಇತರ ಸಾಹಿತ್ಯಪ್ರಕಾರಗಳಂತೆ ಈ ಕಾವ್ಯಶೈಲಿಯೂ ಮಾನ್ಯವಾಗಿದೆ. ಚಂಪೂ ಪ್ರಕಾರಕ್ಕೆ ಏನಿಲ್ಲೆಂದರೂ ಒಂದು ಸಾವಿರ ವರ್ಷಗಳ ದೀರ್ಘ ಪರಂಪರೆ ಇದೆ.

(ನೋಡಿ- ಕನ್ನಡ-ಚಂಪೂಸಾಹಿತ್ಯ)


 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಚಂಪೂ&oldid=1218075" ಇಂದ ಪಡೆಯಲ್ಪಟ್ಟಿದೆ
  NODES
languages 1