ಯಾವುದಾದರು ವ್ಯಸನಕ್ಕೊಳಪಡುವುದಕ್ಕೆ ಚಟ ಎಂದು ಹೇಳುವುದು ವಾಡಿಕೆ. ಉದಾ : ಸಿಗರೇಟಿನ ಚಟ, ಹೆಣ್ಣಿನ ಚಟ ಇತ್ಯಾದಿ. ಪಾರಿಭಾಷಿಕ ಅರ್ಥದಲ್ಲಿ, ವಿಧಿವತ್ತಾಗಿ, ಮಾಡಿದ್ದನ್ನೇ ಮಾಡಬೇಕೆಂಬ ಒಂದು ಬಗೆಯ ಕಾರ್ಯಒತ್ತಡವೇ ಚಟ (ಕಂಪಲ್ಷನ್). ಚಟಗಳು ವಿಲಕ್ಷಣವಾದ, ಅಸಂವೇದ್ಯವಾದ ರೀತಿ ನೀತಿಗಳನ್ನೂ ನಡವಳಿಕೆಗಳನ್ನೂ ಒಳಗೊಂಡಿರುತ್ತವೆ, ಪದೇ ಪದೇ ಕೈ ತೊಳೆದುಕೊಳ್ಳುವುದು; ರಸ್ತೆಯಲ್ಲಿ ಹೋಗುವಾಗ ಪ್ರತಿಯೊಂದು ವಿದ್ಯುತ್ ಕಂಬವನ್ನೂ ಮುಟ್ಟುವುದು ಅಥವಾ ರಸ್ತೆಯಲ್ಲಿ ಕಾಣುವ ಪ್ರತಿಯೊಂದು ಬೋರ್ಡನ್ನೂ ಓದುವುದು, ಯಾವುದೋ ಕಂಬವನ್ನೂ ಮುಟ್ಟದೆ ಅಥವಾ ಬೋರ್ಡನ್ನು ಓದದೆ ಮುಂದೆ ಹೋದರೆ ಪುನಃ ಹಿಂದಕ್ಕೆ ಬಂದು ಆ ಕಂಬವನ್ನು ಮುಟ್ಟಿಯೆ ಅಥವಾ ಬೋರ್ಡನ್ನು ಓದಿಯೇ ಮುಂದೆ ಹೋಗುವುದು; ಮೆಟ್ಟಿಲುಗಳನ್ನು ಏರುವಾಗಲ್ಲೆಲ್ಲಾ ಅವುಗಳನ್ನು ಎಣಿಸುತ್ತಾ ಹೋಗುವುದು, ವಿಧಿವತ್ತಾಗಿ ಬಟ್ಟೆಯನ್ನು ತೊಡುವುದು ಮತ್ತು ಕಳಚುವುದು-ಈ ಮೊದಲಾದ ಉದ್ದೇಶರಹಿತ ಮತ್ತು ಅರ್ಥವಿಲ್ಲದ ನಡವಳಿಕೆಗಳು ಚಟದ ನಿದರ್ಶನಗಳಾಗಿವೆ. ಚಟಕ್ಕೆ ಬಲಿಯಾದ ವ್ಯಕ್ತಿ ತನ್ನ ನಡವಳಿಕೆ ಅಸಂಬದ್ಧ ಎಂಬುದನ್ನು ಸಂಪೂರ್ಣ ಬಲ್ಲ. ಆದರೂ ಅವುಗಳಲ್ಲಿ ತೊಡಗದೆ ಇರಲಾರ. ಅವನ್ನು ಹತ್ತಿಕ್ಕುವಲ್ಲಿ ಆತ ಪೂರ್ಣ ಅಸಮರ್ಥನಾಗಿರುತ್ತಾನೆ. ಅವನ ನಡುವಳಿಕೆಗಳು ಅವನ ಇಚ್ಛೆಗೆ ವಿರುದ್ಧವಾಗಿಯೇ ಇರುತ್ತವೆ.

ಈ ಬಗೆಯ ನಡವಳಿಕೆಗಳು ಸಾಮಾನ್ಯರಲ್ಲಿ ತೋರಿಬಂದರೂ ಅವು ವಿಪರೀತಕ್ಕೆ ಹೋದಾಗ ಮನೋರೋಗದ ರೂಪವನ್ನು ತಾಳುತ್ತವೆ. ಚಟಗಳು ವ್ಯಕ್ತಿಯ ಕಾರ್ಯದಕ್ಷತೆಯನ್ನು ಕುಂಠಿತಗೊಳಿಸುತ್ತವೆ; ವಾಸ್ತವ ಪ್ರಪಂಚದೊಡನೆ ಅವನಿಗರಿಬೇಕಾದ ಹೊಂದಾಣಿಕೆಗೆ ಅಡ್ಡಿ ಬರುತ್ತವೆ. ಚಟಕ್ಕೆ ಬಲಿಯಾದ ವ್ಯಕ್ತಿ ಯಾವಾಗಲೂ ಕೈ ತೊಳೆದುಕೊಳ್ಳಲು ಹಾತೊರೆಯುತ್ತಿರುತ್ತಾನೆ; ಯಾವುದೇ ಕಾರ್ಯದಲ್ಲಿ ಅವನು ನಿರತನಾಗಿದ್ದರೂ ಅವನ ಗಮನವೆಲ್ಲ ಕೈ ಚೊಕ್ಕಟ ಮಾಡಿಕೊಳ್ಳುವತ್ತಲೇ ಕೇಂದ್ರಿಕೃತವಾಗಿರುತ್ತದೆ. ಕೈತೊಳೆದುಕೊಂಡ ಗಳಿಗೆಯಲ್ಲಿ ಉದ್ವಿಗ್ನತೆಗೆ ತಾತ್ಕಾಲಿಕ ಬಿಡುಗಡೆ ದೊರೆತರೂ ಮರುಕ್ಷಣದಲ್ಲಿಯೇ ಪುನಃ ಕೈತೊಳೆದುಕೊಳ್ಳುವ ಯೋಚನೆ ತಲೆಗೆ ಏರುತ್ತದೆ. ಬೇರೆಲ್ಲ ವಿಚಾರಗಳೂ ಬದಿಗೆ ಸರಿದು ನಿಲ್ಲುತ್ತವೆ. ಅವನ ಶಕ್ತಿ ಮತ್ತು ಕಾಲಗಳೆರಡೂ ಈ ಚಟದಲ್ಲಿಯೇ ವ್ಯಯವಾಗಿ ಹೋಗುತ್ತವೆ.

ವಿಶಿಷ್ಟ ಬಗೆಯ ಸಮಾಜಘಾತಕ ಚಟಗಳನ್ನು ಕೆಲವರು ಪ್ರದರ್ಶಿಸುತ್ತಾರೆ. ಇವುಗಳಿಗೆ ನಿದರ್ಶನವಾಗಿ ಕೆಲವರಲ್ಲಿ ಕಾಣಬರುವ ಕದಿಯುವ ಚಟ (ಕ್ಲೆಪ್ಟೊಮೇನಿಯ) ಇಲ್ಲವೆ ಬೆಂಕಿಯಿಡುವ ಚಟಗಳನ್ನು (ಪೈರೊಮೆನಿಯ)ಇಲ್ಲಿ ಹೆಸರಿಸಬಹುದು. ಕದ್ದ ವಸ್ತುಗಳನ್ನು ವ್ಯಕ್ತಿ ಬಳಸುವುದೂ ಇಲ್ಲ, ಅವುಗಳಿಂದ ಲಾಭ ಪಡೆಯುವುದೂ ಇಲ್ಲ. ಆದರೆ ಕದಿಯುವುದರಿಂದ ಯಾವುದೋ ಬಗೆಯ ಸಾಂಕೇತಿಕ ತೃಪ್ತಿಯನ್ನ ಮಾತ್ರ ಅನುಭವಿಸುತ್ತಾನೆ. ಅಂತೆಯೇ ಬೆಂಕಿ ಹಚ್ಚುವವನಿಗೆ ಯಾವ ದುರುದ್ಧೇಶವೂ ಇರುವುದಿಲ್ಲ. ಬೆಂಕಿ ಹಚ್ಚುವಿಕೆಗೆ ಇಲ್ಲಿ ಸಾಂಕೇತಿಕ ರೀತಿಯಲ್ಲಿ ಪಡೆದುಕೊಳ್ಳುವ ಮೈಥುನ ತೃಪ್ತಿ-ಎಂಬ ವಿವರಣೆ ಕೊಡುವುದುಂಟು. ಕದಿಯುವಿಕೆ ಅಥವಾ ಬೆಂಕಿಯಿಡುವಿಕೆ ಯಾವುದೋ ಆಂತರಿಕ ಒತ್ತಡದಿಂದ ಬಿಡುಗಡೆ ಪಡೆಯಲು ವ್ಯಕ್ತಿ ಅವಲಂಬಿಸುವ ನಡವಳಿಕೆಗಳಾಗುತ್ತವೆ.

ಗೀಳುಗಳಿಗೂ (ಅಬ್‍ಸೆಷನ್ಸ್) ಚಟಗಳಿಗೂ ಅನೋನ್ಯ ಸಂಬಂಧವಿದೆ. ಕೆಲವು ಗೀಳುಗಳು ಚಟಕ್ಕೆ ಎಡೆಮಾಡಿಕೊಡದೆ ಗೀಳುಗಳಾಗಿಯೇ ಉಳಿದುಕೊಳ್ಳಬಹುದಾದರೂ ಸಾಮಾನ್ಯವಾಗಿ ಎಲ್ಲ ಚಟಗಳಿಗೂ ಗೀಳೊಂದು ಮೂಲವಾಗಿರುತ್ತದೆ. ಗೀಳುಗಳಂತೆ ಚಟಗಳೂ ಆಂತರಿಕ ಘರ್ಷಣೆಯಿಂದುಂಟಾಗುವ ಉದ್ವಿಗ್ನತೆಯನ್ನು ಕಡಿಮೆ ಮಾಡಿಕೊಳ್ಳಲು ಅಥವಾ ಕಳೆದುಕೊಳ್ಳಲು ಬಳಸುವ ರಕ್ಷಣಾ ತಂತ್ರಗಳು. ಇನ್ನೊಂದು ವಿವರಣೆಯೆಂದರೆ, ಚಟಗಳು ಇನ್ನೂ ಹೆಚ್ಚು ಆತಂಕಕಾರಿ ವಿಚಾರಗಳಿಂದ ವ್ಯಕ್ತಿಯನ್ನು ವಿಮುಕ್ತಗೊಳಿಸುವ ಬದಲಿ ಚಟುವಟಿಕೆಗಳು. ಈ ಬದಲಿಕಾರ್ಯಗಳಲ್ಲಿ ಮನಸ್ಸನ್ನು ಹರಿಯ ಬಿಡುವ ಮೂಲಕ ಹೆಚ್ಚು ಆತಂಕಕಾರಿ ವಿಚಾರಗಳಿಂದ ವ್ಯಕ್ತಿ ಬಿಡುಗಡೆ ಪಡೆಯುತ್ತಾನೆ.

ಚಟಗಳಿಗೆ ಬಲಿಯಾದ ವ್ಯಕ್ತಿಗಳ ಬೆಳವಣಿಗೆಯ ಹಿನ್ನಲೆಯಲ್ಲಿ ಕೆಲವು ಸಾಮಾನ್ಯ ವಿಚಾರಗಳನ್ನು ಗಮನಿಸಬಹುದು. ಅವರ ಮನೆಯ ವಾತಾವರಣದಲ್ಲಿ ಸುವ್ಯವಸ್ಥೆ ಮತ್ತು ನೈರ್ಮಲ್ಯಗಳಿಗೆ ಅತಿಯಾದ ಪ್ರಾಧಾನ್ಯ ಇರುತ್ತದೆ. ಮನೋವಿಶ್ಲೇಷಣೆಯ ಸಿದ್ಧಾಂತಗಳ ಪ್ರಕಾರ ಬಾಲ್ಯಾವಸ್ಥೆಯಲ್ಲಿ, ಪ್ರಸಾಧನ ತರಬೇತಿಯ ಅವಧಿಯಲ್ಲಿ ತಂದೆತಾಯಿಗಳು ಹೇರುವ ಕಟ್ಟುನಿಟ್ಟಿನ ಮತ್ತು ದಮನಕಾರಿ ಕ್ರಮಗಳೇ ಗೀಳು ಮತ್ತು ಚಟಗಳಿಗೆ ಕಾರಣವಾಗಿರುತ್ತವೆ. ಈ ಅವಧಿಯ ಸಮಸ್ಯೆಗಳ ಪರಿಣಾಮವಾಗಿ ರೂಪಿತವಾಗುವ 'ಗುದ ವ್ಯಕ್ತಿತ್ವ (ಏನಲ್ ಪರ್ಸನ್ಯಾಲಿಟಿ) ಇವರದ್ದಾಗಿರುತ್ತದೆ. ಈ ವ್ಯಕ್ತಿತ್ವದ ಲಕ್ಷಣಗಳಾಗಿರುವ ಕೃಷಣತ್ವ ಮತ್ತು ಹಟಮಾರಿತನವನ್ನು ಇವರಲ್ಲಿ ಕಾಣಬಹುದು. ಜೊತೆಗೆ ಇವರ ವ್ಯಕ್ತಿತ್ವದಲ್ಲಿ ಕಾರ್ಯನಿಷ್ಠೆ ಮತ್ತು ಆದರ್ಶತ್ವಗಳನ್ನೂ ಗುರುತಿಸಬಹುದಾಗಿದೆ.

ಚಟಕ್ಕೆ ಬಲಿಯಾದ ವ್ಯಕ್ತಿಯೊಬ್ಬನ ಬಗ್ಗೆ ಸ್ಟ್ರೈಕರ್ ಹೀಗೆ ವರದಿ ಮಾಡಿದ್ದಾನೆ; 45 ವಯಸ್ಸಿನ ಎ.ಬಿ. ಎಂಬ ವ್ಯಾಪಾರಿ ಪರಿಶುದ್ಧ ಜೀವನ ನಡೆಸುವ ಒತ್ತಡಕ್ಕೆ ಒಳಗಾಗಿದ್ದ. ಒಂದು ದಿನದಲ್ಲಿ ಆತ 15 ಬಾರಿಯಾದರೂ ಸ್ನಾನಮಾಡುತ್ತಿದ್ದ. ಅಲ್ಲದೆ ತನ್ನ ಆ ನಡತೆಗೆ ಏನಾದರೊಂದು ಕುಂಟುನೆಪ ಹುಡುಕುತ್ತಿದ್ದ; ಮೈಯೆಲ್ಲಾ ಬೆವತು ಹೋಗಿದೆ; ತನ್ನ ಉಗ್ರಾಣ ಕೊಳೆ, ದೂಳುಗಳಿಂದ ತುಂಬಿಹೋಗಿದೆ-ಹೀಗೆ, ನೀರು, ಸಾಬೂನು ಮುಂತಾದವನ್ನು ಧಾರಾಳವಾಗಿ ಉಪಯೋಗಿಸುತ್ತಿದ್ದ. ಒಮ್ಮೆ ತನ್ನ ಹಾಸಿಗೆಯ ಮೇಲೆ ಬಿದ್ದ ನೆರಳಿನ ಗುರುತನ್ನು ಯಾವುದೋ ಕೊಳೆಯ ಕಲೆಯೆಂದು ಭಾವಿಸಿ ಅದನ್ನು ತೊಳೆಯಲು ಯತ್ನಿಸಿದ್ದೂ ಉಂಟು. ತನ್ನ ನಡತೆ ಅಸಂಬದ್ಧ ಎಂದು ತಿಳಿದಿದ್ದರೂ ಅದನ್ನು ತಿದ್ದಿಕೊಳ್ಳುವಲ್ಲಿ ಆತ ಅಸಹಾಯಕನಾಗಿದ್ದ. ಅವನ ವರ್ತನೆಗೆ ಹಿನ್ನೆಲೆಯಾಗಿದ್ದ ನಿಗೂಢ ರಹಸ್ಯಗಳು ಬೆಳಕಿಗೆ ಬರುವ ತನಕವೂ ಅವನ ನಡುವಳಿಕೆಯಲ್ಲಿ ಮಾರ್ಪಾಡು ಉಂಟಾಗಲಿಲ್ಲ. ಎ.ಬಿ. ಎಂಟು ವರ್ಷ ವಯಸ್ಸಿನವನಾಗಿದ್ದಾಗ ಒಮ್ಮೆ ಮುಷ್ಟಿ ಮೈಥುನದಲ್ಲಿ ತೊಡಗಿರುವುದನ್ನು ಅವನ ಅಣ್ಣಕಂಡು, ಕೊಳಕ, ಹೇಸಿಗೆಯವನು- ಎಂದೆಲ್ಲ ಛೀಮಾರಿ ಹಾಕಿದ; ಗುಟ್ಟನ್ನು ರಟ್ಟು ಮಾಡುವುದಾಗಿ ಬೆದರಿಕೆ ಹಾಕಿದ. ತಮ್ಮನನ್ನು ಕಾಲಮೇಲೆ ಬೀಳುವಂತೆ ಮಾಡಿ, ಪರಿಶುದ್ಧವಾದ ಜೀವನ ನಡೆಸುವಂತೆ ಅವನಿಂದ ವಚನ ಪಡೆದುಕೊಂಡ. ಮುಂದೆಯೂ ಅಣ್ಣ ಪದೇ ಪದೇ ತಮ್ಮನನ್ನು ಬೆದರಿಸುತ್ತಲೇ ಇದ್ದ. ಅಣ್ಣ ಕಾಲೇಜು ಓದಲು ಬೇರೆಯ ಊರಿಗೆ ಹೋದ ಅನಂತರ, ಎ.ಬಿ. ಆ ಘಟನೆಯನ್ನು ಮರೆತನಾದರೂ ಅವನ ಉದ್ವಿಗ್ನತೆ ಮಡಿಯ ಚಟವಾಗಿ ಕಾಣಿಸಿಕೊಂಡಿತು. ಮಾನಸಿಕ ಚಿಕಿತ್ಸೆಯ ಸಹಾಯದಿಂದ ಎ.ಬಿ. ತನ್ನ ಚಟವನ್ನು ಗೆದ್ದು ಸುಖವನ್ನು ಪಡೆದುಕೊಳ್ಳಲು ಸಾಧ್ಯವಾಯಿತು.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
  • "The Science of Addiction: Genetics and the Brain". learn.genetics.utah.edu. Learn.Genetics – University of Utah.
  • Why do our brains get addicted? – a TEDMED 2014 talk by Nora Volkow, the director of the National Institute on Drug Abuse at NIH.
  • Laterality of Brain Activation for Risk Factors of Addiction

Kyoto Encyclopedia of Genes and Genomes (KEGG) signal transduction pathways:

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಚಟ&oldid=915600" ಇಂದ ಪಡೆಯಲ್ಪಟ್ಟಿದೆ
  NODES
Done 1