ಚುಂಬನ (ಮುತ್ತು) ಎಂದರೆ ತುಟಿಗಳಿಂದ ಇನ್ನೊಬ್ಬರ ತುಟಿಗಳನ್ನೋ ಕೆನ್ನೆ ಕೈ ಕಪೋಲಾದಿಗಳಲ್ಲೊಂದನ್ನೋ ಸ್ಪರ್ಶಿಸುವುದು (ಕಿಸ್). ಪ್ರೀತಿ, ಉಚ್ಚ ನಾಗರಿಕತೆಗಳಲ್ಲೆಲ್ಲ ಪ್ರಣಯ, ಭಕ್ತಿ, ಗೌರವ ಮುಂತಾದ ಮನೋಭಾವಗಳ ಪ್ರಕಾಶನಕ್ಕೆ ಚುಂಬನ ಒಂದು ಮುಖ್ಯ ಸಾಧನವೆಂದು ಪರಿಗಣಿತವಾಗಿದೆ. ಸಾಮಾನ್ಯ ಬಳಕೆಯಲ್ಲಿ ಕೇವಲ ಸಾಂಕೇತಿಕವಾಗಿದ್ದರೂ ಮಾತೃವಾತ್ಸಲ್ಯ ಹಾಗೂ ಪ್ರಣಯಲೀಲೆಗಳ ಅಂಗವಾಗಿ ಉಪಯುಕ್ತವಾದಾಗ ಇದು ಮನೋವಿಕಾರದ ಆವಿಷ್ಕಾರವಷ್ಟೇ ಆಗಿರದೆ ಕಾಮೋದ್ರೇಕಕಾರಿಯೂ ಆಗುತ್ತದೆ.

ಕಾಮವೇ ಮುಂತಾದ ಮೂಲ ಪ್ರವೃತ್ತಿಗಳ ಮೂಲಕ ಒದಗುವ ಶರೀರಸ್ಪರ್ಶದ ಸುಸಂಸ್ಕøತ ರೂಪವೇ ಚುಂಬನವೆಂದು ಮನೋವಿಜ್ಞಾನಿಗಳ ಮತ. ಅಸಂಸ್ಕøತ ಸಮಾಜಗಳಲ್ಲಿ ಪರಿಷ್ಕøತ ರೂಪದ ಚುಂಬನ ಕಂಡುಬಾರದಿದ್ದರೂ ಉನ್ನತ ಸಾಮಾಜಿಕ ವರ್ಗಗಳಲ್ಲಿ ತುಂಬಾ ಪ್ರಚಾರದಲ್ಲಿರುವುದೇ ಅದು ಮೂಲಭೂತ ಪ್ರವೃತ್ತಿಯೆಂಬುದನ್ನು ಸಿದ್ಧ ಮಾಡುತ್ತದೆ. ಚುಂಬನದ ಬಳಕೆಯುಂಟೇ ಇಲ್ಲವೇ ಎಂಬುದರ ಮೇಲಿಂದಲೇ ನಾಗರಿಕತೆಗಳ ಉಚ್ಚನೀಚ ಭಾವವನ್ನು ಊಹಿಸಬಹುದಾಗಿದೆ. ಉದಾಹರಣೆಗೆ, ಪ್ರಾಚೀನ ಈಚಿಪ್ಟಿನವರಿಗೆ ಚುಂಬನ ಗೊತ್ತಿರಲಿಲ್ಲ; ಪ್ರಾಚೀನ ಗ್ರೀಸ್ ಮತ್ತು ಅಸ್ಸೀರಿಯಗಳಲ್ಲಿ ಅದು ತುಂಬ ಪ್ರಾಮುಖ್ಯವನ್ನು ಪಡೆದಿತ್ತು.; ಭಾರತದಲ್ಲಿ ಕೂಡ ಆರ್ಯರ ಕಾಲಕ್ಕಾಗಲೇ ಬಳಕೆಗೆ ಬಂದಾಗಿತ್ತು.

ಇಂದ್ರಿಯಗಳಲ್ಲೆಲ್ಲ ಸ್ಪರ್ಶ ಪ್ರಧಾನವಾದುದು ಪಶುಪಕ್ಷಿಗಳಲ್ಲಿ ಕೂಡ ಪರಸ್ಪರ ಸ್ಪರ್ಶನವಿರುವ ಚೇಷ್ಟೆಗಳನ್ನು ಇಲ್ಲಿ ನೋಡುತ್ತೇವೆ. ಪ್ರಾಣಿಗಳು ಒಂದನ್ನೊಂದು ಮುದ್ದಿಸುವುದನ್ನು ಇಲ್ಲಿ ಉದಾಹರಿಸಬಹುದು. ಕೋತಿಗಳಂತವು ಮಾನವರಂತೆ ಆಘ್ರಾಣಿಸುತ್ತವೆ, ಚುಂಬಿಸುತ್ತವೆ. ಇದರ ಸಂಕರಣವೇ ಮಾನವನ ಚುಂಬನ.

ಚುಂಬನದ ನೀಚ ಪ್ರಕಾರಗಳಲ್ಲಿ ಮೂಗನ್ನು ಪರಸ್ಪರ ಉಜ್ಜುವ ಅಭ್ಯಾಸ ಸೇರುತ್ತದೆ. ಇದು ಮಲಯ ದ್ವೀಪವಾಸಿಗಳ, ಆಸ್ಟ್ರೇಲಿಯದ ಮೂಲ ನಿವಾಸಿಗಳ, ಎಸ್ಕಿಮೋಗಳ ವ್ಯವಹಾರದಲ್ಲಿ ಕಾಣಸಿಗುತ್ತದೆ. ಕೆನ್ನೆಗೆ ಮೂಗು ಬಾಯಿಗಳನ್ನೊತ್ತಿ ಆಘ್ರಾಣಿಸುವುದು ಇದಕ್ಕಿಂತ ಸ್ವಲ್ಪ ಸುಸಂಸ್ಕøತವಾದ ಚುಂಬನ ಪ್ರಕಾರ. ಇದು ಚೀನೀಯರಲ್ಲೂ ಯೂರೋಪಿನ ಲ್ಯಾಪ್ಟ ಜನರಲ್ಲೂ ಬಳಕೆಯಲ್ಲಿದೆ. ಆದರೆ ಇನ್ನೂ ಪರಿಷ್ಕøತವಾದ ಚುಂಬನ ಪ್ರಕಾರ ಯೂರೋಪಿಯನರದು; ತುಟಿಗಳನ್ನು ಒಬ್ಬನ ಮುಖದ ಅಥವಾ ಶರೀರದ ಯಾವದಾದರೊಂದು ಭಾಗಕ್ಕೆ ಒತ್ತುವುದು ಮತ್ತು ಮೂಗಿನಿಂದ ಆಘ್ರಾಣಿಸದೆ ಇರುವುದೇ ಅದರ ವೈಶಿಷ್ಟ್ಯ. ಇದರಲ್ಲಿ ಹಲ್ಲಿಗೆ ಕಚ್ಚುವ, ನಾಲಗೆಗೆ ರಸಾಸ್ವಾದ ಮಾಡುವ ಯಾವುದೇ ಪಾತ್ರವಿರುವುದಿಲ್ಲ. ಚುಂಬನದ ಸವಿಯೆಲ್ಲ ತುಟಿಗಳಿಗೆ ಮಾತ್ರ ಸಂಬಂಧಿಸಿದ್ದು.

ಪ್ರಣಯದಲ್ಲಿ ಚುಂಬನದ ರೀತಿ ನೀತಿಗಳೇ ಬೇರೆ. ದೇಹದ ಯಾವ ಭಾಗವೂ ಪ್ರಣಯಿಯ ದೃಷ್ಟಿಯಲ್ಲಿ ಚುಂಬನ ಯೋಗ್ಯವೆ. ತುಟಿ ತುಟಿಗೆ ಸೇರಿದಾಗ ಅಧರಾಮೃತ ಪಾನಮಾಡುವುದು, ತುಟಿಗಳನ್ನು ಮೃದುವಾಗಿ ಕಚ್ಚುವುದು, ನಾಲಗೆಯ ತುದಿಯನ್ನು ವದನಾವಕಾಶದಲ್ಲಿ ಇಳಿಸಿ ಸಹಭಾಗಿಯ ನಾಲಗೆಯನ್ನು ಪೀಡಿಸುವುದು-ಇವೆಲ್ಲ ಅಲ್ಲಿ ಉಂಟು.

ಪ್ರಾಚೀನ ರೋಮಿನಲ್ಲಿ ಚುಂಬನದ ನಾನಾ ವಿಧಗಳ ಬಗೆಗೆ ಸ್ಪಷ್ಟ ಕಲ್ಪನೆಗಳು ಬೆಳೆದು ಬಂದಿದ್ದವು; ಮುಖ ಮತ್ತು ಕೆನ್ನೆಗಳ ಚುಂಬನಕ್ಕೆ ಆಸಕ್ಕಿಲಮ್ ಎಂದೂ ತುಟಿತುಟಿಗಳ ಬಾಸಿಯಮ್ ಎಂದೂ ಕೇವಲ ಕಾಮುಕಲೀಲೆಯಾದ ತುಟಿಗಳ ಚುಂಬನಕ್ಕೆ ಸಾವಿಯಮ್ ಎಂದೂ ಬೇರೆ ಬೇರೆ ಹೆಸರುಗಳಿದ್ದುವು. ಈಗಲೂ ಯೂರೋಪಿಯನರು ಕೆನ್ನೆಯ ಚುಂಬನಕ್ಕೂ ವದನಚುಂಬನಕ್ಕೂ ಭೇದವನ್ನು ಕಲ್ಪಿಸುತ್ತಾರೆ.

ಪಾಶ್ಚಾತ್ಯರಲ್ಲಿ ಮಾತಾಪಿತೃಗಳು ಮಕ್ಕಳನ್ನು ಪ್ರೀತಿಗಾಗಿ ಚುಂಬಿಸುವುದು, ಪ್ರಣಯಿಗಳು ಪರಸ್ಪರ ಚುಂಬಿಸುವುದು, ಮಿತ್ರರು ಮಿತ್ರನನ್ನು ಅಥವಾ ಮಿತ್ರೆಯರನ್ನು ಚುಂಬಿಸುವುದು ಹಿಂದಿನಿಂದಲೂ ನಡೆದು ಬಂದ ರೂಢಿ. ಕ್ರಿಶ್ಚನ್ ಧರ್ಮದಲ್ಲಿ ಕೂಡ ಪವಿತ್ರ ಚುಂಬನಕ್ಕೆ ಪ್ರವೇಶ ದೊರೆತಿದೆ. ಯೂಕಾರಿಸ್ಟ್ ಪೂಜಾ ವಿಧಿಗಳಲ್ಲಿ ಚುಂಬನಕ್ಕೂ ಸ್ಥಾನವುಂಟು. ಬರಬರುತ್ತ ಸ್ತ್ರೀಯರು ಪುರುಷರನ್ನೂ ಪುರುಷರು ಸ್ತ್ರೀಯರನ್ನೂ ಪೂಜಾಂಗವಾಗಿ ಚುಂಬಿಸುವ ರೂಢಿ ತಪ್ಪಿತಾದರೂ ಚುಂಬನ ವಿಶ್ವಾಸದ ಕುರುಹಾಗಿ ಸಮಾಜದಲ್ಲಿ ಉಳಿದಿದೆ. ಹಾಗೆಯೇ ರಾಜಾಸ್ಥಾನದ ಮರ್ಯಾದೆಗಳಲ್ಲಿ ಕೂಡ ಚುಂಬನಕ್ಕೆ ವಿಶೇಷ ಸ್ಥಾನವಿದೆ. ಇಬ್ಬರು ರಾಜರು ಸಂದರ್ಶನ ಮಾಡುವಾಗ ಪರಸ್ಪರ ಕಪೋಲವನ್ನು ಚುಂಬಿಸುವರು; ಪ್ರಜೆ ರಾಜನನ್ನು ಗೌರವಿಸುವಾಗ ಹಸ್ತವನ್ನು ಚುಂಬಿಸುತ್ತಾನೆ. ಉಚ್ಚಕುಲದ ಸ್ತ್ರೀಯರನ್ನು ಗೌರವಿಸುವಾಗಲೂ ಹಸ್ತಚುಂಬನದ ಸಂಪ್ರದಾಯವಿದೆ. ಪೋಪ್ ಧರ್ಮಗುರುವಿನ ಪಾದವನ್ನು ಭಕ್ತರು ಚುಂಬಿಸುತ್ತಾರೆ. ದೇವತಾಪೂಜೆಯ ಅಂಗವಾಗಿ ದೇವತಾ ಪ್ರತಿಮೆ ಮುಂತಾದುವನ್ನು ಚುಂಬಿಸುವ ಸಂಪ್ರದಾಯವೂ ಪ್ರಾಚೀನ ಗ್ರೀಕ್, ರೋಮನ್, ಅರೇಬಿಯನ್ ಜನರಲ್ಲಿದ್ದಿತಂತೆ, ಪಾಶ್ಚಾತ್ಯ ಸಾಹಿತ್ಯದಲ್ಲಿ ಸುಪ್ತಸುಂದರಿ ರಮಣನ ಚುಂಬನದಿಂದ ಎಚ್ಚರಗೊಳ್ಳುವ ವಸ್ತು ಕಾಣಸಿಗುತ್ತದೆ. ಫ್ರೆಂಚ್ ಕಲಾಕಾರ ರೋಡಿನ್ (1840-1917) ಮುಂತಾದವರ ಚುಂಬನ ಚಿತ್ರಗಳು ತುಂಬ ರಸಿಕಪ್ರಿಯವಾಗಿವೆ.

ಭಾರತೀಯ ಕಾಮಶಾಸ್ತ್ರದಲ್ಲಿ ಬಾಹ್ಯರತದ ಅಂಗವಾಗಿ ಹತ್ತಾರು ಬಗೆಯ ಚುಂಬನವಿಧಿಗಳನ್ನು ವಾತ್ಸ್ಯಾಯನ ಹೇಳಿದ್ದಾನೆ. ತುಟಿಗಳಲ್ಲದೆ, ಹಣೆ, ಕೆನ್ನೆ, ಕಣ್ಣು, ಸ್ತನಗಳನ್ನೂ ಅವನು ಚುಂಬಸ್ಥಾನಗಳೆಂದಿದ್ದಾನೆ. ಇವುಗಳಲ್ಲಿ ಗಟ್ಟಿತ, ಸಮ, ವಕ್ರ, ಉದ್ಭ್ರಾಂತ, ಆಕೃಷ್ಟ, ಸಂಪುಟಕ, ಜಿಹ್ವಾರೂಢ ಮುಂತಾದ ಪ್ರಕಾರಗಳಿವೆ. ಈ ಪ್ರಕಾರಗಳನ್ನೆಲ್ಲ ಕೋಣಾರ್ಕ, ಖಜುರಾಹೊ ಮುಂತಾದ ದೇವಸ್ಥಾನಗಳ ಶಿಲ್ಪಕಲಾ ಕೃತಿಗಳು ಸುಂದರವಾಗಿ ಚಿತ್ರಿಸಿವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಚುಂಬನ&oldid=894568" ಇಂದ ಪಡೆಯಲ್ಪಟ್ಟಿದೆ
  NODES