ಜಡ್ಡು ಎಂದರೆ ಸಸ್ಯಕಾಂಡದ ಮೇಲೆ ಉಂಟಾಗುವ ಗಾಯದ ಮೇಲೆ ಇಲ್ಲವೆ ಕತ್ತರಿಸಿದ ಜಾಗದ ಮೇಲೆ ಬೆಳೆಯುವ ಮೃದುವಾದ ಪರೆಂಕಿಮ ಕೋಶಗಳಿಂದ ಕೂಡಿದ ಊತಕ (ಕ್ಯಾಲಸ್). ಚರ್ಮದ ಎಪಿಡರ್ಮಿಸಿನ ಕೊಂಬು ಪದರ ಮಂದವಾಗುವುದರಿಂದ ಉಂಟಾಗುವ ದಪ್ಪವಾದ ಮತ್ತು ಗಡುಸಾದ ಭಾಗ ; ಮೂಳೆ ಮುರಿದಾಗ ಅವುಗಳ ತುದಿಗಳ ಸುತ್ತ ರೂಪುಗೊಂಡು ಕೊನೆಗೆ ಮೂಳೆಯಾಗಿ ಪರಿವರ್ತಿತವಾಗುವ ಒಂದು ವಿಧದ ವಸ್ತು ; ಸಸ್ಯಗಳ ಫ್ಲೋಯೆಮ್ ಊತಕದ ಜರಡಿ ತಟ್ಟೆಗಳ ರಂಧ್ರಗಳಲ್ಲಿ ಸಂಚಯವಾಗಿ ಅವು ಮುಚ್ಚಿಹೋಗುವಂತೆ ಮಾಡುವ ಕ್ಯಾಲೋಸ್ ಎಂಬ ರಾಸಾಯನಿಕದ ಪದರ ; ಮತ್ತು ಗ್ಯಾಸ್ಟ್ರಾಪೊಡ ಪ್ರಾಣಿಗಳ ಚಿಪ್ಪಿನ ನಾಭಿಯ ಸುತ್ತ ಇಲ್ಲವೆ ಒಳಗೆ ರೂಪಗೊಳ್ಳುವ ಚಿಪ್ಪಿನ ವಸ್ತು-ಇವೆಲ್ಲವಕ್ಕೂ ಜಡ್ಡು ಎಂಬ ಹೆಸರು ಅನ್ವಯವಾಗುತ್ತದೆ. ಸಸ್ಯಕಾಂಡಗಳಲ್ಲಿ ಗಾಯವಾದಾಗ ಗಾಯದ ಸುತ್ತ ಇರುವ ಪರೆಂಕಿಮ ಕೋಶಗಳು ಚುರುಕಾಗಿ ವಿಭಾಗವಾಗಲು ಪ್ರಾರಂಭಿಸುತ್ತವೆ. ಪರಿಣಾಮವಾಗಿ ಜಡ್ಡು ರೂಪುಗೊಳ್ಳುತ್ತದೆ. ಗಾಯವಾದ ಭಾಗದ ಸುತ್ತ ಇದು ಒಂದು ಕವಚವನ್ನು ಸೃಷ್ಟಿಸಿ ಬ್ಯಾಕ್ಟೀರಿಯ, ವೈರಸ್ ಮುಂತಾದ ರೋಗಕಾರಕ ಸೂಕ್ಷ್ಮಜೀವಿಗಳು ಒಳಹೋಗದಂತೆ ತಡೆದು ರಕ್ಷಿಸುತ್ತದೆ.

ಗಿಡಗಳನ್ನು ಕಸಿ ಮಾಡುವಾಗಿ ಕಸಿತಾಳು ಮತ್ತು ಕಸಿಕೊಂಬೆಗಳನ್ನು ಸೇರಿಸಿ ಕಟ್ಟಿದಾಗ ಅಲ್ಲಿ ಜಡ್ಡು ಉತ್ಪತ್ತಿಯಾಗುವುದುಂಟು. ಇದೇ ರೀತಿ ಅಂಗಾಂಶ ವ್ಯವಸಾಯದಲ್ಲಿ ಕಾಂಡ, ಬೇರು ಅಥವಾ ಬೇರಾವುದೇ ಅಂಗದ ತುಂಡುಗಳನ್ನು ಕೃತಕ ವರ್ಧನ ಮಾಧ್ಯಮಗಳಲ್ಲಿ ಬೆಳೆಸುವಾಗಲೂ ಅವು ಅನೇಕ ಸಲ ಅವಿಭೇದೀ ಕೃತ ಅಂಗಾಂಶ ರಾಶಿಗಳಾಗಿ ಬೆಳೆಯುವುವು. ಇವಕ್ಕೂ ಜಡ್ಡು ಎಂಬ ಹೆಸರೇ ಇದೆ. ಪೂತಿರಹಿತ ಪರಿಸ್ಥಿತಿಗಳಲ್ಲಿ ಇವನ್ನು ವಿಭಾಗಿಸಿ ಸಕ್ಕರೆ, ಖನಿಜಗಳು ಮತ್ತು ಆಕ್ಸಿನುಗಳನ್ನು ಒಳಗೊಂಡ ಮಾದ್ಯಮಗಳಲ್ಲಿ ಬೆಳೆಸಿದಾಗ, ಒಂದೊಂದು ವಿಭಾಗವೂ ಒಂದು ಜಡ್ಡು ಅಂಗಾಂಶವಾಗಿ ಬೆಳೆಯುತ್ತ ಹೋಗುತ್ತದೆ. ಜಡ್ಡಿನ ಬೆಳೆವಣಿಗೆಗೆ ಸಾಮಾನ್ಯವಾಗಿ ಆಕ್ಸಿನ್ ಕೂಡ ಆವಶ್ಯಕವಾದರೂ ಕೆಲವೊಮ್ಮೆ ಬರೆಯ ಖನಿಜ ಮತ್ತು ಸಕ್ಕರೆಯನ್ನುಳ್ಳ ಮಾಧ್ಯಮದಲ್ಲಿ ಅನಿರ್ದಿಷ್ಟ ಕಾಲ ಬೆಳೆಯುತ್ತ ಹೋಗಬಲ್ಲದು. ಈ ಪ್ರಕ್ರಿಯೆಗೆ ಒಗ್ಗುವಿಕೆ (ಹ್ಯಾಬಿಟುಯೇಷನ್) ಎಂದು ಹೆಸರು. ಇದರಿಂದಾಗಿ ಜಡ್ಡು ಅಂಗಾಂಶ ತನ್ನ ಬೆಳೆವಣಿಗೆಗೆ ಪರಿಸರದ ಮೇಲೆ ಹೆಚ್ಚಾಗಿ ಅವಲಂಬಿಸಬೇಕಾಗಿಲ್ಲ. ಅನೇಕ ರಾಸಾಯನಿಕಗಳು ಜಡ್ಡು ಅಂಗಾಂಶದ ಬೆಳೆವಣಿಗೆಯನ್ನು ವೃದ್ಧಿಸಬಲ್ಲವು ಎಂದು ತಿಳಿದಿದೆ. ಇವುಗಳಲ್ಲಿ ಎಳನೀರಿನಲ್ಲಿರುವ ಕೆಲವು ರಾಸಾಯನಿಕಗಳು ಮುಖ್ಯವಾಗಿವೆ. ಉದಾಹರಣೆಗೆ : 6-ಫರ್‍ಫರೈಲ್-ಆಮೈನೋ-ಪ್ಯೂರೀನ್.

ಒಂದು ಜಡ್ಡು ಅಂಗಾಂಶದಿಂದ ಕೇವಲ ಒಂದೇ ಒಂದು ಜೀವಕೋಶವನ್ನು ಬೇರ್ಪಡಿಸಿ, ಕೃತಕ ಮಾಧ್ಯಮದಲ್ಲಿ ಬೆಳೆಸಿ, ಅದು ಮತ್ತೆ ಜಡ್ಡು ಅಂಗಾಂಶ ಬೆಳೆಯುವಂತೆ, ಈ ಅಂಗಾಂಶ ಪ್ರಕಾಂಡ, ಬೇರು ವ್ಯವಸ್ಥೆಗಳಾಗಿಯೂ ಕೊನೆಗೆ ಒಂದು ಸಂಪೂರ್ಣ ಸಸ್ಯವಾಗಿಯೂ ಬೆಳೆಯುವಂತೆ ಮಾಡುವ ಕುತೂಹಲಕಾರಿ ಪ್ರಯೋಗಗಳು ಇತ್ತೀಚೆಗೆ ನಡೆಯುತ್ತಿವೆ. ಸಾಮಾನ್ಯವಾಗಿ ಜಡ್ಡು ಅಂಗ ಇಲ್ಲವೆ ಬೇರೆ ಅಂಗಾಂಶಗಳಾಗಿ ವಿಭೇದೀಕರಣವಾಗದಾದರೂ ಬೇರೊಂದು ಅಂಗಾಂಶವನ್ನು ಇದರಲ್ಲಿ ನಾಟಿ ಮಾಡಿದಾಗ ಜಡ್ಡು ಕೂಡ ವಿವಿಧ ರೀತಿಯ ಅಂಗಗಳಾಗಿ ವರ್ಧಿಸುತ್ತದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜಡ್ಡು&oldid=909708" ಇಂದ ಪಡೆಯಲ್ಪಟ್ಟಿದೆ
  NODES