ದುಂಬಿಗಳು ಅಥವಾ ಜೀರುಂಡೆಗಳು ಕೋಲಿಯಾಪ್ಟರ ಗಣವನ್ನು ರೂಪಿಸುವ ಕೀಟಗಳ ಒಂದು ಗುಂಪು.

ಒಂದು ಜಾತಿಯ ದುಂಬಿ

ಈ ಗಣವು ಜೀರುಂಡೆ ಮತ್ತು ಸೊಂಡಿಲು ಕೀಟಗಳನ್ನೊಳಗೊಂಡಿದೆ. ಸುಮಾರು 2,50,000ಕ್ಕೂ ಹೆಚ್ಚು ಪ್ರಭೇದಗಳನ್ನೊಳಗೊಂಡ ಇದು ಕೀಟವರ್ಗದ ಇನ್ನಾವುದೇ ಗಣಕ್ಕಿಂತ ಅತ್ಯಂತ ದೊಡ್ಡದು. ಅಷ್ಟು ಮಾತ್ರವಲ್ಲ ಪ್ರಾಣಿಸಾಮ್ರಾಜ್ಯದಲ್ಲೇ ಇದು ಅತ್ಯಂತ ದೊಡ್ಡದು. ಇದುವರೆಗೆ ವಿವರಿಸಲಾಗಿರುವ ಕೀಟಗಳ ಒಟ್ಟು ಸಂಖ್ಯೆಯ 40%ರಷ್ಟು ಇದಕ್ಕೆ ಸೇರಿವೆ. ಇವುಗಳ ಸಂಖ್ಯೆ ಎಷ್ಟು ಅಗಾಧವೊ ಇವುಗಳ ವ್ಯಾಪ್ತಿಯೂ ಅಷ್ಟೇ ವಿಸ್ತಾರ. ಪ್ರಪಂಚದ ಯಾವ ಮೂಲೆಯಲ್ಲಾದರೂ ಈ ಕೀಟಗಳನ್ನು ಕಾಣಬಹುದು. ಸಮುದ್ರವೊಂದನ್ನು ಬಿಟ್ಟು ಉಳಿದೆಲ್ಲ ಪ್ರದೇಶಗಳಲ್ಲೂ ಇವುಗಳ ವ್ಯಾಪ್ತಿಯಿದೆ. ಬಲುಪಾಲು ಪ್ರಭೇದಗಳು ನೆಲವಾಸಿಗಳು. ಕೆಲವು ಬಗೆಗಳು 500 ಸೆಂ.ಉಷ್ಣತೆ ಇರುವ ಬಿಸಿ ನೀರಿನ ಚಿಲುಮೆಗಳಲ್ಲೂ ವಾಸಿಸುತ್ತವೆ. ಹಲವು ರೀತಿಯವು ಬೇರೆ ಬಗೆಯ ಕೀಟಗಳ ಗೂಡುಗಳಲ್ಲಿ ಅತಿಥಿಗಳಾಗಿ ಜೀವಿಸಿದರೆ ಇನ್ನು ಕೆಲವು ಬೇರೆ ಬೇರೆ ಕೀಟಗಳ ಇಲ್ಲವೆ ಸ್ತನಿಗಳ ದೇಹದೊಳಗೊ ಚರ್ಮದ ಮೇಲೊ ಪರಾವಲಂಬಿ ಜೀವನ ನಡೆಸುತ್ತವೆ. ಬಹುಪಾಲು ಬಗೆಗಳು ದವಸಧಾನ್ಯಗಳ ಮತ್ತು ದಿನಬಳಕೆಯ ವಸ್ತುಗಳ ಪಿಡುಗುಗಳೆಂದು ಹೆಸರಾಗಿವೆ.

ದೇಹರಚನೆ

ಬದಲಾಯಿಸಿ

ಕೋಲಿಯಾಪ್ಟರ ಗಣದ ಕೀಟಗಳ ಸ್ವಭಾವ ಮತ್ತು ಇವು ವಾಸಿಸುವ ನೆಲೆಯನ್ನವಲಂಬಿಸಿ ದೇಹರಚನೆ ವ್ಯತ್ಯಾಸವಾಗುತ್ತದೆ. ಗಾತ್ರದಲ್ಲಿ ಅತಿದೊಡ್ಡವೂ ಅತಿಚಿಕ್ಕವೂ ಇವೆ. ಡೈನಾಸ್ಟಸ್ ಹಕ್ರ್ಯೂಲಿಸ್ (ಖಡ್ಗಮೃಗ ಜೀರುಂಡೆ) ಎಂಬುದು 7" ಉದ್ದವಿದೆ. ಇನ್ನು ಕೆಲವು ಬರಿಗಣ್ಣಿಗೆ ಕಾಣದಿರುವಷ್ಟು ಚಿಕ್ಕವಾಗಿವೆ. ಪ್ರೌಢಕೀಟಗಳ ದೇಹವನ್ನು ತಲೆ, ಎದೆ ಮತ್ತು ಉದರ ಎಂಬ ಮೂರು ಭಾಗಗಳಾಗಿ ವಿಂಗಡಿಸಬಹುದು. ಎದೆಭಾಗದಲ್ಲಿ ಮೂರು ಖಂಡಗಳಿವೆ. ಇವುಗಳಲ್ಲಿ ಹಿಂದಿನವೆರಡು ಉದರಭಾಗಕ್ಕೆ ಅಂಟಿಕೊಂಡಿವೆ. ಮುಂದಿನ ಖಂಡ (ಪ್ರೋತೋರ್ಯಾಕ್ಸ್) ಮಾತ್ರ ಬೇರೆಯಾಗಿದ್ದು ಪ್ರೋನೋಟಮ್ ಎಂಬ ಫಲಕದಿಂದ ಆವೃತವಾಗಿದೆ. ದೇಹವನ್ನೆಲ್ಲ ಆವರಿಸಿರುವ ಕೊಂಬಿನ ಕವಚ (ಎಕ್ಸೊಸ್ಕೆಲಿಟಿನ್) ಗಡುಸಾಗಿರಬಹುದು. ಇಲ್ಲವೆ ಮೃದುವಾದುದಾಗಿಯೂ ಸುಲಭವಾಗಿ ಬಾಗುವಂಥದೂ ಆಗಿರಬಹುದು. ಕುಡಿಮೀಸೆಗಳು (ಆಂಟೆನೆ) ತಲಾ ಹನ್ನೊಂದು ಖಂಡಗಳಿಂದ ಕೂಡಿವೆ. ದವಡೆಗಳು ತ್ರಿಕೋಣಾಕಾರದವು. ಆಹಾರವನ್ನು ಕಡಿಯಲು ಇಲ್ಲವೆ ಮೆಲುಕು ಹಾಕಲು ಇವು ಅನುಕೂಲವಾಗಿದೆ. ಕೆಲವು ಜಾತಿಯ ಕೀಟಗಳ ದವಡೆಗಳು ಬಲುದೊಡ್ಡವಾಗಿದ್ದು ದೇಹದಷ್ಟೆ ಉದ್ದವಿರುವುದಾದರೂ ಇನ್ನು ಕೆಲವು ಬಗೆಗಳಲ್ಲಿ ಬಲು ಚಿಕ್ಕವಾಗಿರುತ್ತವೆ. ಸ್ಪರ್ಶಾಂಗಗಳು (ಪ್ಯಾಲ್ವಿ) ಸಾಮಾನ್ಯವಾಗಿ ಚಿಕ್ಕ ಗಾತ್ರದವು. ಆಹಾರವನ್ನು ಹಿಡಿಯಲು, ಸ್ಪರ್ಶಿಸಲು ಮಾತ್ರ ಉಪಯೋಗವಾಗುತ್ತವೆ. ಕಣ್ಣುಗಳು ಸಂಯುಕ್ತ ಮಾದರಿಯವು. ಅಪರೂಪವಾಗಿ ಸರಳ ನೇತ್ರಗಳೂ ಇರುತ್ತವೆ. ಪ್ರೋನೋಟಮ್ ಫಲಕ ಕೆಲವೊಮ್ಮೆ ಹಲವಾರು ಬಗೆಯ ಮುಳ್ಳು, ಕುಳಿ, ತೋಡು ಮುಂತಾದವುಗಳಿಂದ ಅಲಂಕೃತವಾಗಿರುತ್ತದೆ. ಪ್ರೋತೋರ್ಯಾಕ್ಸಿನ ತಳಭಾಗದಿಂದ ಮುಂದಿನ ಜೊತೆ ಕಾಲುಗಳು ಹುಟ್ಟುತ್ತವೆ. ಎದೆಯ ಮಧ್ಯದ ಖಂಡದಿಂದ (ಮೀಸೊತೋರ್ಯಾಕ್ಸ್) ಎಲಿಟ್ರ ಎಂಬ ಮೇಲಿನ ರೆಕ್ಕೆಗಳು ಮತ್ತು ಎರಡನೆಯ ಜೊತೆ ಕಾಲುಗಳು ಹುಟ್ಟುತ್ತವೆ. ಎದೆಯ ಹಿಂಬದಿಯ ಖಂಡದಿಂದ (ಮೆಟತೋರ್ಯಾಕ್ಸ್) ಕೆಳಗಿನ ಜೊತೆರೆಕ್ಕೆಗಳೂ ಮೂರನೆಯ ಜೊತೆ ಕಾಲುಗಳೂ ಉದ್ಭವಿಸುತ್ತವೆ. ಕೆಳಗಿನ ಜೊತೆ ರೆಕ್ಕೆಗಳು ತೆಳುವಾಗಿಯೂ ಪಾರಕವಾಗಿಯೂ ಇದ್ದು ಇವು ಮಾತ್ರ ಹಾರುವಿಕೆಯಲ್ಲಿ ಬಳಕೆಯಾಗುತ್ತವೆ. ಎಲಿಟ್ರಗಳು ಬಹಳ ಗಡುಸು. ಕೀಟ ಹಾರದಿದ್ದಾಗ ಕೆಳಗಿನ ಜೊತೆ ರೆಕ್ಕೆಗಳನ್ನು ಇವು ಆವರಿಸಿ ಕೊಂಡು ಅವನ್ನು ರಕ್ಷಿಸುತ್ತವೆ. ಎಲಿಟ್ರಗಳಿರುವುದು ಕೋಲಿಯಾಪ್ಟರ ಗಣದ ಪ್ರಮುಖ ಹಾಗೂ ವಿಶೇಷ ಲಕ್ಷಣ. ಆದರೆ ಇದಕ್ಕೂ ಅಪವಾದಗಳಿಲ್ಲದೇ ಇಲ್ಲ. ಕೆಲವು ಬಗೆಯ ಜೀರುಂಡೆಗಳಲ್ಲಿ ಎಲಿಟ್ರಗಳಿಲ್ಲ. ಇನ್ನು ಕೆಲವು ಜಾತಿಗಳಲ್ಲಿ ರೆಕ್ಕೆಗಳೇ ಇಲ್ಲ. ಕಾಲುಗಳು ಓಡಲು, ಈಜಲು ನೆಗೆಯಲು, ನೆಲವನ್ನು ತೋಡಲು ಮತ್ತು ಆಸರೆಗಳನ್ನೊ ಆಹಾರವನ್ನೊ ತಬ್ಬಿ ಹಿಡಿಯಲು ಹೀಗೆ ಅನೇಕ ಬಗೆಯ ಕಾರ್ಯಗಳಿಗೆ ಅನುಕೂಲವಾಗುವಂತೆ ಹೊಂದಾಣಿಕೆ ತೋರುತ್ತವೆ. ಉದರಭಾಗದಲ್ಲಿ 10 ಖಂಡಗಳಿವೆ. ಸಾಮಾನ್ಯವಾಗಿ 5-8 ಖಂಡಗಳಷ್ಟೆ ಚೆನ್ನಾಗಿ ರೂಪುಗೊಂಡಿವೆ. ಉಳಿದವು ಬರಿಯ ಮೋಟುಗಳಂತೆ ಕಾಣುತ್ತವೆ. ಪ್ರತಿಯೊಂದು ಖಂಡದಲ್ಲೂ ಒಂದು ಜೊತೆ ಸ್ಪೈರಕಲ್ಲುಗಳಿವೆ. ಇವೇ ಉಸಿರಾಟದ ಅಂಗವ್ಯವಸ್ಥೆಯ ಬಾಹ್ಯ ರಂಧ್ರಗಳು. ಜನನಾಂಗಗಳು ದೇಹದ ಹಿಂತುದಿಯಲ್ಲಿ ಅನುಬಂಧಗಳಂತೆ ಕಾಣುತ್ತವೆ. ಗಂಡಿನ ಜನನಾಂಗದಲ್ಲಿ ಶಿಶ್ನ ಮತ್ತು ಟಗ್ಮೆನ್ ಎಂಬ ಎರಡು ಭಾಗಗಳಿವೆ. ಹೆಣ್ಣಿನ ಜನನಾಂಗದಲ್ಲಿ ಪ್ಯಾರಪ್ರಾಕ್ಟ್ಸ್, ಪ್ರಾಕ್ಟಿಜರ್, ಪಾಲ್ಪಿಫರ್, ಕಾಕ್ಸೈಟ್ ಮತ್ತು ಸ್ಟೈಲೈ ಎಂಬ 5 ಭಾಗಗಳಿವೆ.

ದೇಹದ ಒಳರಚನೆ

ಬದಲಾಯಿಸಿ

ಆಹಾರಕ್ರಮವನ್ನು ಅನುಸರಿಸಿ ಆಹಾರನಾಳದ ಉದ್ದ ವ್ಯತ್ಯಾಸವಾಗುತ್ತವೆ. ಇದನ್ನು ಸ್ಟೋಮೋಡಿಯಂ, ಮೀಸೆಂಟರಾನ್ ಅಥವಾ ಜಠರ, ಮತ್ತು ಪ್ರೋಕ್ಟೋಡಿಯಮ್ ಅಥವಾ ಕರುಳು ಎಂದು ಮೂರು ಭಾಗಗಳಾಗಿ ವಿಂಗಡಿಸಬಹುದು. ಸ್ಟೋಮೋಡಿಯಮಿನಲ್ಲಿ ಬಾಯಿ ಗಂಟಲ ಕುಹರ ಅನ್ನನಾಳವೂ ಇವೆ. ಇದಕ್ಕೆ ಮುಂದೆ ಪ್ರೊವೆಂಟ್ರಿಕ್ಯುಲಸ್ ಎಂಬ ಭಾಗವಿದೆ. ಆಹಾರವನ್ನು ಅರೆಯಲು ಅನುಕೂಲವಾಗುವಂಥ ಹಲ್ಲುಗಳು ಇದರ ಭಿತ್ತಿಯ ಮೇಲೆ ಜೋಡಣೆಗೊಂಡಿವೆ. ಜಠರ ಭಾಗದಲ್ಲಿ ಒಂದು ತುದಿಮುಚ್ಚಿದ ಹಲವಾರು ಕೊಳವೆಗಳು (ಸೀಕೆ) ಅಂಟಿಕೊಂಡಿವೆ. ಪ್ರೋಕ್ಟೋಡಿಯಮ್ ಭಾಗ ಹಲವಾರು ಮಾಲ್ಪೀಘಿಯನ್ ಕೊಳವೆಗಳನ್ನೂ ಗುದನಾಳವನ್ನೂ ಒಳಗೊಂಡಿದೆ. ಆಹಾರವನ್ನು ಜೀರ್ಣಿಸಲು ನೆರವಾಗುವಂಥ ಅನೇಕ ಬಗೆಯ ಗ್ರಂಥಿಗಳೂ ರಚನೆಗಳೂ ಆಹಾರನಾಳದೊಂದಿಗೆ ಸೇರಿಕೊಂಡಿವೆ.

ಉಸಿರಾಟ

ಬದಲಾಯಿಸಿ

ಬೇರೆ ಕೀಟಗಳಲ್ಲಿರುವಂತೆ ಜೀರುಂಡೆಗಳಲ್ಲೂ ಉಸಿರಾಟ ದೇಹದಾದ್ಯಂತ ಹರಡಿರುವ ಶ್ವಾಸನಾಳ ವ್ಯವಸ್ಥೆಯ ನೆರವಿನಿಂದ ನಡೆಯುತ್ತದೆ. ಸ್ಪೈರಕಲ್ಲುಗಳೆಂಬ ಬಾಹ್ಯರಂಧ್ರಗಳ ಮುಚ್ಚುವಿಕೆ ತೆರೆಯುವಿಕೆಗಳಿಂದ ದೇಹದಿಂದ ಹೊರಕ್ಕೆ ಮತ್ತು ದೇಹದೊಳಕ್ಕೆ ಗಾಳಿಯ ವಿನಿಮಯ ನಡೆಯುತ್ತದೆ. ಅತ್ಯಂತ ಚಟುವಟಿಕೆಯನ್ನು ಪ್ರದರ್ಶಿಸುವ ಕೆಲವು ಬಗೆಯ ಜೀರುಂಡೆಗಳಲ್ಲಿ ದೇಹದೊಳಗೆ ಅಲ್ಲಲ್ಲಿ ಗಾಳಿಚೀಲಗಳೂ ಇದ್ದು ಇವು ಗಾಳಿಯ ಸಂಗ್ರಹಣೆಯಲ್ಲಿ ನೆರವಾಗುತ್ತವೆ. ಜಲವಾಸಿ ಜೀರುಂಡೆಗಳಲ್ಲೂ ಅನೇಕ ಬಗೆಯ ಆನುಷಂಗಿಕ ರಚನೆಗಳನ್ನು ಕಾಣಬಹುದು. ಇವುಗಳ ಸಹಾಯದಿಂದ ಕೀಟಗಳು ನೀರಿನೊಳಗೆ ಮುಳುಗಿದ್ದರೂ ಉಸಿರಾಡಬಹುದು. ಸ್ಪೈರಕಲ್ಲುಗಳ ಚಲನೆ ರಕ್ತದಲ್ಲಿನ ಲ್ಯಾಕ್ಟಿಕ್ ಆಮ್ಲದ ಮೊತ್ತದಿಂದ ಪ್ರಭಾವಿತವಾಗಿದೆಯೆಂದು ಕಂಡುಬಂದಿದೆ. ಆಮ್ಲಜನಕದ ಮಟ್ಟ ಇಳಿದಾಗ ಲ್ಯಾಕ್ಟಿಕ್ ಆಮ್ಲದ ಮಟ್ಟ ಹೆಚ್ಚಾಗಿ ಉದರಭಾಗದ ನರಗ್ರಂಥಿಗಳಲ್ಲಿರುವ ಕೆಲವು ನರಕೇಂದ್ರಗಳು ಪ್ರಚೋದಿತವಾಗುತ್ತವೆ. ಇವು ಸ್ಪೈರಕಲ್ಲುಗಳ ಮೇಲೆ ಪ್ರಭಾವ ಬೀರಿ ಅವು ತೆರೆಯುವಂತೆ ಮಾಡುತ್ತವೆ. ಆಗ ಗಾಳಿಯಲ್ಲಿನ ಆಮ್ಲಜನಕ ಸುಲಭವಾಗಿ ಒಳಹೋಗುತ್ತದೆ. ಲ್ಯಾಂಪೈರಿಡೀ, ಇಲ್ಯಾಟೆರಿಡೀ ಮತ್ತು ಫೆಂಗೋಡಿಡೀ ಕುಟುಂಬಗಳ ಜೀರುಂಡೆಗಳಲ್ಲಿ ಬೆಳಕನ್ನು ಉತ್ಪಾದಿಸುವ ಅಂಗಗಳಿವೆ. ಈ ಅಂಗಗಳಿಗೂ ಉಸಿರಾಟದ ವ್ಯವಸ್ಥೆಗೂ ನಿಕಟಸಂಬಂಧವಿದೆ. ಮಿಣುಕುಹುಳಗಳಿಂದ ಉತ್ಪತ್ತಿಯಾಗುವ ಬೆಳಕು ಈ ಅಂಗಗಳ ಚಟುವಟಿಕೆಯಿಂದ ಉಂಟಾಗುವ ಕ್ರಿಯಾವಿಶೇಷ.

ರಕ್ತ ಪರಿಚಲನೆ

ಬದಲಾಯಿಸಿ

ಚೆನ್ನಾಗಿ ರೂಪುಗೊಂಡ ರಕ್ತಪರಿಚಲನಾ ವ್ಯವಸ್ಥೆಯನ್ನು ಜೀರುಂಡೆಗಳಲ್ಲಿ ಕಾಣಬಹುದು. ದೇಹದ ವಿವಿಧ ಅಂಗಾಶಗಳಿಗೆ ಆಹಾರವನ್ನು ಸಾಗಿಸುವುದೇ ಇದರ ಮುಖ್ಯ ಕಾರ್ಯ. ಉಳಿದೆಲ್ಲ ಸಂಧಿಪದಿಗಳಲ್ಲಿರುವಂತೆ ಜೀರುಂಡೆಗಳಲ್ಲೂ ಇದೊಂದು ತೆರೆದ ವ್ಯವಸ್ಥೆ; ಅಂದರೆ ರಕ್ತ ರಕ್ತನಾಳಗಳಲ್ಲಿ ಮಾತ್ರವೆ ಪ್ರವಹಿಸದೆ ವಿವಿಧ ಬಗೆಯ ಪೊಳ್ಳು ಇಲ್ಲವೆ ತೆರಪುಗಳಲ್ಲೂ ಸಾಗುತ್ತದೆ. ರಕ್ತಪರಿಚಲನಾವ್ಯವಸ್ಥೆಗೆ ಕೇಂದ್ರವಾಗಿ ಹೃದಯವೊಂದಿದೆ. ಇದರ ನಿಯಮಿತ ತುಡಿತದಿಂದ ಒತ್ತಲ್ಪಟ್ಟ ರಕ್ತ ಒಂದು ದೊಡ್ಡ ಕೊಳವೆಯ ಮೂಲಕ ಮಿದುಳಿನ ಭಾಗದೆಡೆಗೆ ಹರಿಯುತ್ತದೆ. ಅಲ್ಲಿಂದ ದೇಹದ ಉಳಿದೆಲ್ಲ ಭಾಗಕ್ಕೂ ರಕ್ತದ ಪೂರೈಕೆಯಾಗುತ್ತದೆ. ರಕ್ತದಲ್ಲಿ ಹೀಮೊಸೈಟ್‍ಗಳೆಂಬ ಜೀವಕೋಶಗಳನ್ನೊಳಗೊಂಡ ದುಗ್ಧರಸವೂ ಹಳದಿ ಇಲ್ಲವೆ ಹಸಿರು ಅಥವಾ ಕೆಂಪುಬಣ್ಣದ ವರ್ಣಕಗಳೂ ಇವೆ.

ಕೋಲಿಯಾಪ್ಟರದ ಕೀಟಗಳ ನರವ್ಯೂಹ ದೇಹದ ತಳಭಾಗದಲ್ಲಿನ ಹಲವಾರು ನರಗ್ರಂಥಿಗಳಿಂದ ಕೂಡಿದೆ. ಇವುಗಳಿಗೆ ಪರಸ್ಪರ ಸಂಪರ್ಕ ಕಲ್ಪಿಸುವ ನರಸಂಬಂಧಗಳೂ ಇವೆ.

ಜೀರುಂಡೆಗಳಲ್ಲಿ ಲಿಂಗಭೇದವನ್ನು ಕಾಣಬಹುದು. ಗಂಡಿನ ಜನನಾಂಗದ ಪ್ರಮುಖ ಭಾಗಗಳು-ಒಂದು ಜೊತೆ ವೃಷಣಗಳು, ಒಂದು ಜೊತೆ ಪಾಶ್ರ್ವ ಕೊಳವೆಗಳು, ಒಂದು ವೀರ್ಯಕೋಶ ಮತ್ತು ವೀರ್ಯವನ್ನು ಹೊರಚೆಲ್ಲುವ ಒಂದು ಕಾಲುವೆ. ಹೆಣ್ಣಿನಲ್ಲಿ ಒಂದು ಜೊತೆ ಅಂಡಾಶಯಗಳು, ಇವುಗಳಿಂದ ಹೊರಡುವ ಒಂದೊಂದು ಅಂಡನಾಳ ಇವೆರಡೂ ಕೂಡಿ ಉಂಟಾಗಿರುವ ಸಾಮಾನ್ಯ ಕೊಳವೆ ಮತ್ತು ಯೋನಿ. ಎಲ್ಲ ಜೀರುಂಡೆಗಳಲ್ಲೂ ಸಂಪೂರ್ಣ ಬಗೆಯ ರೂಪಪರಿವರ್ತನೆಯನ್ನು ಕಾಣಬಹುದು. ಮೊಟ್ಟೆಗಳನ್ನು ಗುಂಪುಗಳಲ್ಲಿಯೊ ಒಂಟೊಂಟಿಯಾಗಿಯೊ ಮರೆಯಾದ ಸ್ಥಳಗಳಲ್ಲಿ ಇಡುತ್ತವೆ. ಕೆಲವು ದಿನಗಳಿಂದ ಹಿಡಿದು ಕೆಲವು ತಿಂಗಳುಗಳ ಅನಂತರ ಮೊಟ್ಟೆಯೊಡೆದು ಡಿಂಬಗಳು ಹೊರಬರುತ್ತವೆ. ಡಿಂಬಗಳು ಪ್ರೌಢಕೀಟಗಳಂತೆಯೇ ಸಸ್ಯಾಹಾರಿಗಳಾಗಬಹುದು ಇಲ್ಲವೆ ಮಾಂಸಾಹಾರಿಗಳಾಗಿರಬಹುದು. ಕೆಲವು ಬಗೆಯವು ಪರಾವಲಂಬಿ ಜೀವನ ನಡೆಸುತ್ತವೆ. ನಿರ್ದಿಷ್ಟವಾದ ತಲೆ, 3 ಖಂಡಗಳುಳ್ಳ ಎದೆ ಮತ್ತು 9 ಭಾಗಗಳುಳ್ಳ ಉದರ ಭಾಗಗಳನ್ನು ಇವುಗಳ ದೇಹದಲ್ಲಿ ಗುರುತಿಸಬಹುದು. ರೆಕ್ಕೆಗಳಿಲ್ಲ. ಈ ಹಂತದಲ್ಲಿ ಡಿಂಬದ ಬೆಳೆವಣಿಗೆಯ ಗತಿ ತೀವ್ರವಾಗಿದ್ದು ಅದು ಗಾತ್ರದಲ್ಲೂ ತೂಕದಲ್ಲೂ ಹಲವಾರು ಪಟ್ಟು ಹೆಚ್ಚುತ್ತದೆ. ಗಾತ್ರ ಬೆಳೆದಂತೆ ಮೈಮೇಲಿನ ಚರ್ಮವನ್ನು ಆಗಿಂದಾಗ್ಗೆ ಕಳಚಿ ಹೊಸ ಚರ್ಮವನ್ನು ಬೆಳಸಿಕೊಳ್ಳುವುದುಂಟು. ಈ ಪೊರೆಕಳಚುವಕ್ರಿಯೆ ಸಾಮಾನ್ಯವಾಗಿ 3 ಬಾರಿಯಾಗುವುದಾದರೂ ಕೆಲವು ಬಗೆಗಳಲ್ಲಿ 10-15 ಬಾರಿ ನಡೆಯುವುದೂ ಉಂಟು. ತನ್ನ ಗಾತ್ರದ ಗರಿಷ್ಟ ಮಿತಿಯನ್ನು ತಲಪಿದ ಮೇಲೆ ಡಿಂಬ ಕೋಶಾವಸ್ಥೆಯನ್ನು ಸೇರುತ್ತದೆ. ಈ ಹಂತವನ್ನು ಸೇರುವ ಮುನ್ನ ತನ್ನ ಚಟುವಟಿಕೆಗಳನ್ನು ಸ್ಥಗಿತಗೊಳ್ಳುವುದಲ್ಲದೆ ಕೊಂಚ ಉಬ್ಬಿಕೊಳ್ಳುತ್ತದೆ. ಕೋಶಾವಸ್ಥೆಯಲ್ಲಿ ಜನನಾಂಗಗಳ ರೂಪುಗೊಳ್ಳುವಿಕೆ, ಕುಡಿಮೀಸೆ ಹಾಗೂ ಸಂಯುಕ್ತಾಕ್ಷುಗಳು ಮೂಡುವುದು ಮುಂತಾದ ಮುಖ್ಯ ಬದಲಾವಣೆಗಳು ನಡೆಯುತ್ತವೆ. ಈ ಬದಲಾವಣೆಗಳಿಗೆ ಬೇಕಾಗುವ ಅವಧಿ ಕೆಲವು ಗಂಟೆಗಳಿಂದ ಹಿಡಿದು ಹಲವಾರು ದಿವಸಗಳು. ಕ್ರಮೇಣ ಕೋಶಾವಸ್ಥೆ ಕೊನೆಗೊಂಡು ಪ್ರೌಢಕೀಟ ಹೊರಬರುತ್ತದೆ. ಬಲುಪಾಲು ಜೀರುಂಡೆಗಳಲ್ಲಿ ಮೇಲೆ ವಿವರಿಸಿದ ರೂಪ ಪರಿವರ್ತನೆ ನಡೆಯುವುದಾದರೂ ಕೆಲವು ಬಗೆಗಳಲ್ಲಿ ತಾಯಿ ಕೀಟದಿಂದ ನೇರವಾಗಿ ಸಣ್ಣ ಮರಿಯೇ ಹೊರಬರಬಹುದು. ಇನ್ನೂ ಕೆಲವು ಬಗೆಗಳಲ್ಲಿ ಡಿಂಬವೇ ಲೈಂಗಿಕ ಪ್ರಬುದ್ಧತೆಯನ್ನು ಪಡೆದು ಮೊಟ್ಟೆಯಿಡಬಹುದು. (ಉದಾ: ಮೈಕ್ರೊಮ್ಯಾಲ್ತಸ್). ಡೈಟಿಸ್ಕಿಡೀ ಮತ್ತು ಬ್ರೂಕಿಡೀ ಕುಟುಂಬದ ಜೀರುಂಡೆಗಳಲ್ಲಿ ಡಿಂಬಾವಸ್ಥೆಗೂ ಪ್ರೌಢಾವಸ್ಥೆಗೂ ನಡುವೆ ಹಲವಾರು ಮಧ್ಯವರ್ತಿ ಹಂತಗಳಿರುತ್ತವೆ.

ಕೋಲಿಯಾಪ್ಟರ ಗಣವನ್ನು ಸ್ಟ್ರೆಪ್ಸಿಪ್ಟರ (ಅರ್ಕೊಸ್ಟಮ್ಯಾಟ), ಏಡಿಫ್ಯಾಗ ಮತ್ತು ಪಾಲಿಫೇಗ ಎಂಬ ಮೂರು ಉಪಗಣಗಳಾಗಿ ವಿಂಗಡಿಸಲಾಗಿದೆ. ಮೊದಲ ಉಪಗಣದಲ್ಲಿ ಕ್ಯೂಪಿನಾಯ್ಡಿಯ, ಕ್ಯಾರಬೀಯಾಯ್ಡಿಯ ಮತ್ತು ಗೈರಿನಾಯಿಡಿಯ ಎಂಬ ಅಧಿ ಕುಟುಂಬಗಳೂ ಪಾಲಿಫೇಗ ಉಪಗಣದಲ್ಲಿ ಲೈಮೆಕ್ಸಿಲಾನಾಯ್ಡಿಯ ಎಂಬ ಅಧಿಕುಟುಂಬಗಳೂ ಪಾಲಿಫೇಗ ಉಪಗಣದಲ್ಲಿ ಲೈಮೆಕ್ಸಿಲಾನಾಯ್ಡಿಯ, ಹೈಡ್ರೊಫಿಲಾಯ್ಡಿಯ, ಸ್ಟಾಫಿಲಿನಾಯ್ಡಿಯ, ಕ್ಯಾಂತರಾಯ್ಡಿಯ, ಕ್ಲೀರಾಯ್ಡಿಯ, ಇಲ್ಯಾಟರಾಯ್ಡಿಯ, ಡ್ಯಾಸ್ಕಿಲಾಯ್ಡಿಯ, ಬಿರಾಯ್ಡಿಯ, ಡ್ರಯೋಪಾಯ್ಡಿಯ, ಕ್ಯುಕ್ಯುಜಾಯ್ಡಿಯ, ಮೆಲಾಯ್ಡಿಯ, ಟೆನಿಬ್ರಯಾನಾಯ್ಡಿಯ, ಬಾಸ್ಟ್ರಿಕಾಯ್ಡಿಯ, ಸ್ಕ್ಯಾರಬಿಯಾಯ್ಡಿಯ, ಸೆರ್ಯಾಮ್‍ಬೈಕಾಯ್ಡಿಯ, ಕ್ರೈಸೊಮೆಲಾಯ್ಡಿಯ ಮತ್ತು ಕಕ್ರ್ಯೂಲಿಯೊನಾಯ್ಡಿಯ ಎಂಬ ಅಧಿಕುಟುಂಬಗಳಿವೆ.

ಆರ್ಥಿಕ ಪ್ರಾಮುಖ್ಯ

ಬದಲಾಯಿಸಿ

ಜೀರುಂಡೆಗಳಲ್ಲಿ ಮರಿಗಳೂ ಪ್ರೌಢ ಕೀಟಗಳೂ ಉಪದ್ರವಕಾರಿಗಳು, ಉದಾಹರಣೆಗೆ ತಂತಿಹುಳು, ಫ್ಲೀಬೀಟ್ಸ್, ಕಾಲರಾಡೊ ಆಲೂಗೆಡ್ಡೆ ಹುಳು, ಜಪಾನೀಸ್ ಜೀರುಂಡೆ, ಕಾಕ್‍ಷೇಫರ್ ಜೀರುಂಡೆಗಳು; ಕುಟ್ಟೆಹುಳುಗಳು ಇತ್ಯಾದಿ. ಆದರೆ ಉಪಕಾರಿಗಳೂ ಇಲ್ಲದಿಲ್ಲ. ಉದಾಹರಣೆಗೆ ಗುಲಗಂಜಿ ಹುಳುಗಳು, ಕ್ಯಾರಾಬಿಡಿ. ಆಸ್ಟ್ರೇಲಿಯದ ರೊಡೋಲಿಯ ಕಾರ್ಡಿನಾಲಿಸ್ ಎಂಬ ಗುಲಗಂಜಿ ಹುಳದ ಸಹಾಯದಿಂದ ಕ್ಯಾಲಿಫೋರ್ನಿಯದಲ್ಲಿ ಕಿತ್ತಳೆ ಹಣ್ಣಿನ ಪಿಡುಗಾದ ಐಸಿರಿಯ ಪರ್ಚೇಸ್ ಎಂಬ ಕೀಟಗಳನ್ನು ಹತೋಟಿಗೆ ತರಲಾಯಿತು. ಇಂಥದೇ ಇನ್ನೊಂದು ಉಪಕಾರಿ ಕ್ರಿಪ್ಟೋಲೀಮಸ್ ಮಾಂಟ್ರೋಜಿಯರಿ ಮತ್ತು ಕ್ಯಾಲೊಸೋಮ ಸೈಕೋಫಾಂಟ.

ಕೆಲವು ಜೀರುಂಡೆಗಳು ವೈದ್ಯಕೀಯ ಪ್ರಾಮುಖ್ಯವನ್ನು ಪಡೆದಿವೆ. ಪೀಡೆರೆಸ್ ಎಂಬ ರೋಟ್ ಜೀರುಂಡೆ ಮತ್ತು ಬ್ಲಿಸ್ಟರ್ ಜೀರುಂಡೆ ಚರ್ಮದ ಮೇಲೆ ಬೊಬ್ಬೆಗಳನ್ನು ಮಾಡುತ್ತವೆ. ಕೆಲವು ದೇಶಗಳಲ್ಲಿ ಇಂಥ ಜೀರುಂಡೆಗಳು ಹೆಚ್ಚಿದಾಗ, ಚರ್ಮದ ಬೊಬ್ಬೆರೋಗ ಸಾಂಕ್ರಾಮಿಕವಾಗುತ್ತದೆ. ಲಿಟ್ಟವೆಸಿಕ ಟೋರಿಯ ಎಂಬ ಜೀರುಂಡೆಯಿಂದ ಕ್ಯಾಂಥಾರಿಡಿನ್ ಎಂಬ ಗುಳ್ಳೆಗಳೆಬ್ಬಿಸುವ ರಾಸಾಯನಿಕವನ್ನು ಮಾಡುತ್ತಾರೆ. ಇನ್ನೂ ಕೆಲವು ಜೀರುಂಡೆಗಳು ಮಕ್ಕಳಲ್ಲಿ ಮತ್ತು ಸಸ್ಯಗಳಲ್ಲಿ ರೋಗಗಳನ್ನು ಹರಡುತ್ತವೆ.

ಆರ್ಥೋಪ್ಟೆರ ಗಣ ಜೀವ ವಿಕಾಸದಲ್ಲೇ ಅತ್ಯಂತ ಹಿಂದಿನ ವಿಶ್ವದಾದ್ಯಂತ ಕಂಡುಬರುವ ಕೀಟಗಳನ್ನೊಳಗೊಂಡ ಗಣಗಲ್ಲೊಂದು. ಈ ಗಣವನ್ನು ಎನ್ಸಿಫೆರಾ (ಜೀರುಂಡೆಗಳು-ಕ್ರಿಕೆಟ್ಸ್) ಮತ್ತು ಸೇಲಿಫೆರಾ (ಮಿಡತೆಗಳು) ಎಂಬ ಎರಡು ಉಪ ಗುಂಪುಗಳಾಗಿ ವಿಭಾಗಿಸಬಹುದಾಗಿದೆ. ಜೀರುಂಡೆಗಳು ಶಬ್ದಾತ್ಮಕವಾದ ಸಂವಹನವನ್ನು ಪ್ರದರ್ಶಿಸುತ್ತದೆ. ಈ ಸಂವಹನ ಹೆಣ್ಣಿನ ಗಮನಸೆಳೆಯಲು ಗಂಡು ಹೊರಡಿಸುವ ಶಬ್ದ. ಪ್ರತಿಯೊಂದು ಜೀರುಂಡೆ ಪ್ರಭೇದವೂ ತನಗೇ ವಿಶಿಷ್ಟವಾದ ಶಬ್ದವನ್ನು ಹೊರಡಿಸುತ್ತದೆ. ಆದರೆ, ಇದೇ ಗಣದ ಸೀಲಿಫೆರಾ ಉಪ ಗುಂಪಿಗೆ ಸೇರಿದ ಮಿಡತೆಗಳು ಯಾವುದೇ ರೀತಿಯ ಶಬ್ದ ಹೊರಡಿಸದಿರುವುದು ಗಮನಾರ್ಹ.

ಈ ಜೀರುಂಡೆಗಳನ್ನೊಳಗೊಂಡ ಎನ್ಸಿಫೆರಾ ಗಣವನ್ನು ಗ್ರಿಲ್ಲಿಡೇ (ನಿಜ ಜೀರುಂಡೆಗಳು - ಟ್ರೂ ಕ್ರಿಕೆಟ್ಸ್) ಮತ್ತು ಟೆಟ್ಟಿಗೊನಿಡೇ (ಪೊದೆ ಜೀರುಂಡೆಗಳು - ಬುಶ್ ಕ್ರಿಕೆಟ್ಸ್) ಎಂಬ ಎರಡು ಕುಟುಂಬಗಳನ್ನಾಗಿ ವಿಭಾಗಿಸಬಹುದು. ಇವು ತಮ್ಮ ಮುಂದಿನ ರೆಕ್ಕೆಗಳನ್ನು ಪರಸ್ಪರ ಉಜ್ಜುವುದರ ಮೂಲಕ ಧ್ವನಿಯನ್ನು ಹೊರಡಿಸುತ್ತವೆ. ಇವಕ್ಕೆ ಕಿವಿಗಳು ಮುಂಗಾಲುಗಳ ಮೇಲಿರುತ್ತದೆ.

ಹೊಲದ ಜೀರುಂಡೆಗಳು

ಬದಲಾಯಿಸಿ

ಇವು ಗ್ರಿಲ್ಲಿನೇ ಉಪ ಕುಟುಂಬಕ್ಕೆ ಸೇರಿದ ಜೀರುಂಡೆಗಳು. ಕಾಡುಗಳು, ತೋಟಗಳಿಂದ ತೊಡಗಿ ಬಯಲು ಪ್ರದೇಶ ಹಾಗೂ ರಸ್ತೆ ಬದಿಯಲ್ಲಿನ ಹಸುರು ಕಸದಲ್ಲಿ, ನೆಲದ ಬಿರುಕುUಳಲ್ಲಿÀ ಸಹ ಕಂಡುಬರುತ್ತವೆ. ಸಾಮಾನ್ಯವಾಗಿ ಇವು 0.5 - 2.00 ಸೆ.ಮೀ.ವರೆಗೆ ಬೆಳೆಯುವ ಇವು ಕಡು ಕಂದು ಬಣ್ಣದಿಂದ ಕಪ್ಪು ಬಣ್ಣದವರೆಗಿನ ಛಾಯೆಯ ಬಣ್ಣವನ್ನು ಹೊಂದಿರುತ್ತವೆ. ನಿಶಾಚರಿಗಳಾದ ಇವು ಸಂಜೆಯವೇಳೇಗೆ ಹೊರಬಂದು ಸುಶ್ರಾವ್ಯವಾದ ಕರೆಯನ್ನು ಉಲಿಯುತ್ತವೆ. ಪ್ರತಿ ಪ್ರಭೇದಕ್ಕೂ ತನ್ನದೇ ಆದ ಆವೃತ್ತಿ ಹಾಗೂ ಹಾಡಿನ ಸ್ವರೂಪವಿರುತ್ತದೆ. ಇವು ಪ್ರಾರ್ಥಿಸುವ ಕೀಟ, ಕಪ್ಪೆ, ಹಲ್ಲಿ ಹಾಗೂ ಸಣ್ಣಗಾತ್ರದ ಸ್ತನಿಗಳಿಗೆ ಆಹಾರವಾಗುವುದೂ ಉಂಟು.

ಮರ ಜೀರುಂಡೆಗಳು

ಬದಲಾಯಿಸಿ

ಇವು ಒಕಾನ್‍ಥಿನೇ ಉಪ ಕುಟುಂಬಕ್ಕೆ ಸೇರಿದ ಜೀರುಂಡೆಗಳು. ಹುಲ್ಲುಗಾವಲುಗಳು, ಗುಂಡಿಗಳು, ಪೊದೆ, ಮರಗಳಲ್ಲಿ ಕಂಡುಬರುವ ಇವುಗಳು ತೆಳುವಾದ, ಸೂಕ್ಷ್ಮ ಶರೀರ ಹೊಂದಿರುವ ಇವುಗಳ ಮೈ ಬಣ್ಣ ಹಸುರು ಅಥವಾ ತಿಳಿ ಕಂದು. ಇವುಗಳ ನಾಡಿ ಮಿಡಿತ ಮತ್ತು ಹಾಡು ಪರಿಸರದ ತಾಪಮಾನದೊಂದಿಗೆ ನಿರೀಕ್ಷಿಸಬಹುದಾದಷ್ಟು ಬದಲಾಗುವುದರಿಂದ ಇವನ್ನು ತಾಪ ಮಾಪಕ ಜೀರುಂಡೆಗಳು ಎನ್ನುತ್ತಾರೆ (ಥರ್ಮಾಮೀಟರ್ ಕ್ರಿಕೆಟ್ಸ್) ಸಂಭೋಗ ಸಮಯದಲ್ಲಿ ಹೆಣ್ಣು ಗಂಡಿನ ದೇಹದ ಬೆನ್ನುಭಾಗದಲ್ಲಿನ ಗ್ರಂಥೀಯಿಂದ ಒಸರುವ ದ್ರವವನ್ನು ಸೇವಿಸುತ್ತದೆ.

ಪೊದೆಜೀರುಂಡೆಗಳು

ಬದಲಾಯಿಸಿ

ಹಸುರು ಅಥವಾ ಕಂದು ಬಣ್ಣದ ಇವುಗಳನ್ನು ಸಹುರು ಕಸದಿಂದ ಹಿಡಿದು ಮರಗಳ ಮೇಲ್ತದಿಯವರೆಗೆ ಎಲ್ಲೆಂದರಲ್ಲಿ ಕಾಣಬಹುದು. ನಗರ ಹಾಗೂ ವನ್ಯ ಆವಾಸಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತದೆ. ನಿಜ ಜೀರುಂಡೆಗಳಿಗೆ ಹೋಲಿಸಿದರೆ ಕರ್ಕಶವಾದ ಧ್ವನಿಯನ್ನು ಹೊರಡಿಸುತ್ತವೆ. ಈ ಕುಟುಂಬದ ಜೀರುಂಡೆಗಳು ಎಲೆಗಳಂತೆಯೇ ಕಾಣುತ್ತವೆ. ಇದನ್ನು ಚೆನ್ನಾಗಿಯೇ ಬಳಸಿಕೊಳ್ಳುವ ಇವು ದಿನವಿಡೀ ವಿಶ್ರಾಂತಿಪಡೆಯುತ್ತವೆ. ಅದಾಗ್ಗೂ, ಬಾವಲಿ ಮತ್ತು ಮಂಗಗಳು ಸೇರಿದಂತೆ ಹಲವಾರು ಪ್ರಾಣಿಗಳಿಗೆ ಇವು ಆಹಾರವಾಗುತ್ತವೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ದುಂಬಿ&oldid=1224412" ಇಂದ ಪಡೆಯಲ್ಪಟ್ಟಿದೆ
  NODES
Project 1