ನೈಸರ್ಗಿಕ ರಬ್ಬರ್ ಒಂದು ಎಲಾಸ್ಟೋಮರ್ (ಸ್ಥಿತಿಸ್ಥಾಪಕ ಹೈಡ್ರೋಕಾರ್ಬನ್ ಪಾಲಿಮರ್) ಆಗಿದೆ. ಮೂಲತಃ ಇದನ್ನು ಕೆಲವು ಗಿಡಗಳ ಸಸ್ಯರಸದಲ್ಲಿ ಕಂಡುಬರುವ ಹಾಲಿನಂಥ ಕಲಿಲವಾದ ಲೇಟೆಕ್ಸ್‌‌ನಿಂದ ಪಡೆದುಕೊಳ್ಳಲಾಗಿತ್ತು. ಸಸ್ಯಗಳಿಂದ ದ್ರವವನ್ನು ಹೊರತೆಗೆಯಲಾಗುತ್ತಿತ್ತು, ಅಂದರೆ ಮರದ ತೊಗಟೆಯೊಳಗೆ ಕಚ್ಚು ಮಾಡಿ, ಲೇಟೆಕ್ಸ್ ರಸವನ್ನು ಸಂಗ್ರಹಿಸಿ ಬಳಕೆಯ ರಬ್ಬರ್ ಆಗಿ ಸಂಸ್ಕರಿಸಲಾಗುತ್ತಿತ್ತು. ಶುದ್ಧೀಕರಿಸಲಾದ ನೈಸರ್ಗಿಕ ರಬ್ಬರ್ ರಾಸಾಯನಿಕ ಪಾಲಿಐಸೊಪ್ರೀನ್ ಆಗಿದೆ, ಇದನ್ನು ಕೃತಕವಾಗಿಯೂ ತಯಾರಿಸಬಹುದು. ನೈಸರ್ಗಿಕ ರಬ್ಬರ್ ಅನ್ನು ಹಲವಾರು ಬಳಕೆಗಳಲ್ಲಿ ಮತ್ತು ಉತ್ಪನ್ನಗಳಲ್ಲಿ ವ್ಯಾಪಕವಾಗಿ ಕೃತಕ ರಬ್ಬರ್‌ನಂತೆಯೇ ಬಳಸಲಾಗುತ್ತದೆ.

ಬಗೆಗಳು

ಬದಲಾಯಿಸಿ

ನೈಸರ್ಗಿಕ ರಬ್ಬರ್ ಲೇಟೆಕ್ಸ್‌ನ ವಾಣಿಜ್ಯಿಕ ಮೂಲವೆಂದರೆ ಪ್ಯಾರಾ ರಬ್ಬರ್ ಮರ (ಹೀವಿಯಾ ಬ್ರೆಸಿಲಿಯೆನ್ಸಿಸ್ ).[] ಇದು ಸ್ಪರ್ಜ್ ಕುಟುಂಬವಾದ ಯೂಫೋರ್ಬಿಯೇಸೀಯ ಸದಸ್ಯ. ಇದು ಮುಖ್ಯ ಮೂಲ ಏಕೆಂದರೆ ಇದು ಕಚ್ಚುಮಾಡಿದ್ದಕ್ಕೆ ಹೆಚ್ಚಿನ ಲೇಟೆಕ್ಸ್ ತಯಾರಿಸುವ ಮೂಲಕ ಸ್ಪಂದಿಸುತ್ತದೆ.

ಲೇಟೆಕ್ಸ್ ಹೊಂದಿರುವ ಇತರ ಸಸ್ಯಗಳೆಂದರೆ ಗುಟ್ಟಾ-ಪೆರ್ಚಾ (ಪಲಾಕ್ಯುಮ್ ಗುಟ್ಟಾ),[] ರಬ್ಬರ್ ಫಿಗ್ (ಫೈಕಸ್ ಎಲ್ಯಾಸ್ಟಿಕಾ), ಪನಾಮಾ ರಬ್ಬರ್ ಮರ (ಕ್ಯಾಸ್ಟಿಲಾ ಎಲ್ಯಾಸ್ಟಿಕಾ ), ಸ್ಪರ್ಜ್‌ಗಳು (ಯೂಫೋರ್ಬಿಯಾ ಎಸ್‌ಪಿಪಿ.), ಲೆಟಿಸ್, ಸಾಮಾನ್ಯ ಕಾಡುಸೇವಂತಿಗೆ (ಟೆರಾಕ್ಸಾಕಮ್ ಅಫಿಸಿನಲೆ), ರಷ್ಯನ್ ಕಾಡುಸೇವಂತಿಗೆ (ಟೆರಾಕ್ಸಾಕಮ್ ಕೊಕ್-ಸಾಗ್ಸ್ ), ಸ್ಕಾರ್ಜೊನೆರಾ (ತಾವ್-ಸಾಗ್ಯಾ), ಮತ್ತು ಗ್ವಯೂಲಿ (ಪಾರ್ಥೇನಿಯಮ್ ಅರ್ಜೆಂಟಾಟಮ್ ). ಇವುಗಳಲ್ಲೆವೂ ರಬ್ಬರ್‌ನ ಮುಖ್ಯ ಮೂಲಗಳಾಗಿಲ್ಲದಿದ್ದರೂ, ಜರ್ಮನಿ ವಿಶ್ವ ಯುದ್ಧ IIದ ಸಮಯದಲ್ಲಿ ರಬ್ಬರ್ ಪೂರೈಕೆಯಲ್ಲಿ ವ್ಯತ್ಯಯಕಂಡುಬಂದ ಕಾರಣ ಇವುಗಳಲ್ಲಿ ಕೆಲವನ್ನು ಬಳಕೆ ಮಾಡಲು ಪ್ರಯತ್ನಿಸಿತು. ಈ ಪ್ರಯತ್ನಗಳು ಕೃತಕ ರಬ್ಬರ್‌ಗಳ ಅಭಿವೃದ್ಧಿಯ ನಂತರ ಆಕ್ರಮಿಸಲ್ಪಟ್ಟವು. ಮರದಿಂದ ಪಡೆದುಕೊಂಡ ನೈಸರ್ಗಿಕ ರಬ್ಬರ್‌ನ ಆವೃತ್ತಿಯನ್ನು ಕೃತಕ ಆವೃತ್ತಿಯಿಂದ ವ್ಯತ್ಯಾಸಮಾಡಲು, ಗಮ್ ರಬ್ಬರ್ ಪದವನ್ನು ಕೆಲವು ಬಾರಿ ಬಳಸಲಾಗುತ್ತದೆ.[]

ವಾಣಿಜ್ಯಿಕ ಸಂಭಾವ್ಯತೆಯನ್ನು ಕಂಡುಹಿಡಿದಿದ್ದು

ಬದಲಾಯಿಸಿ

ಪ್ಯಾರಾ ರಬ್ಬರ್ ಮರವು ಪ್ರಾರಂಭದಲ್ಲಿ ದಕ್ಷಿಣ ಅಮೆರಿಕದಲ್ಲಿ ಬೆಳೆಯುತ್ತಿತ್ತು. ೧೭೩೬ ರಲ್ಲಿ ಅಕ್ಯಾಡೆಮಿ ರಾಯಲ್ ಡೆಸ್ ಸೈನ್ಸಸ್‍ಗೆ ರಬ್ಬರ್‌ನ ನಮೂನೆಗಳನ್ನು ಪರಿಚಯಿಸುವಲ್ಲಿ ಚಾರ್ಲಿಸ್ ಮರೀ ಡೆ ಲಾ ಕಾಂಡಮೈನ್ ಮುಖ್ಯ ಪಾತ್ರವಹಿಸಿದರು.[] ೧೭೫೧ ರಲ್ಲಿ, ಅವರು ಫ್ರಾಂಕೊಸ್ ಫ್ರೆಸ್‌ನ್ಯೂ ಬರೆದ, ರಬ್ಬರ್‌ನ ಹಲವಾರು ಗುಣಲಕ್ಷಣಗಳನ್ನು ವಿವರಿಸುವಂತಹ, ಒಂದು ಪ್ರಬಂಧವನ್ನು ಅಕ್ಯಾಡೆಮಿಗೆ (ಅಂತಿಮವಾಗಿ ೧೭೫೫ ರಲ್ಲಿ ಪ್ರಕಟವಾಯಿತು) ಪ್ರಸ್ತುತಪಡಿಸಿದರು. ಇದನ್ನು ರಬ್ಬರ್ ಕುರಿತ ಮೊದಲ ವೈಜ್ಞಾನಿಕ ಪ್ರಬಂಧ ಎಂದು ಉಲ್ಲೇಖಿಸಲಾಗಿದೆ.[]

ಮೊದಲ ಬಾರಿಗೆ ರಬ್ಬರ್‌ನ ನಮೂನೆಗಳು ಇಂಗ್ಲೆಂಡ್‌ಗೆ ಆಗಮಿಸಿದಾಗ, ೧೭೭೦ ರಲ್ಲಿ ಅದನ್ನು ಜೋಸೆಫ್ ಪ್ರಿಸ್ಟ್ಲೆ ಪರಿಶೀಲಿಸಿದರು. ಅದು ಹಾಳೆಯ ಮೇಲಿನ ಪೆನ್ಸಿಲ್ ಗುರುತುಗಳನ್ನು ಅಳಿಸಲು ಹೆಚ್ಚು ಉತ್ತಮವಾಗಿರುವುದು ಕಂಡುಬಂದಿತು, ಆದ್ದರಿಂದಾಗಿ ರಬ್ಬರ್ ಎಂಬ ಹೆಸರು. ನಂತರ ಇದು ನಿಧಾನವಾಗಿ ಇಂಗ್ಲೆಂಡ್‌ನಾದ್ಯಂತ ಹಬ್ಬಿತು.

ದಕ್ಷಿಣ ಅಮೆರಿಕ ೧೯ನೇ ಶತಮಾನದ ಲೇಟೆಕ್ಸ್ ರಬ್ಬರ್‌ನ ನಿಯಮಿತ ಪ್ರಮಾಣದ ಮುಖ್ಯ ಮೂಲವಾಗಿತ್ತು. ಆದಾಗ್ಯೂ ೧೮೭೬ ರಲ್ಲಿ, ಹೆನ್ರಿ ವಿಕ್‌ಹಾಮ್ ಬ್ರೆಜಿಲ್‌ನಿಂದ ಸಾವಿರಾರು ಪ್ಯಾರಾ ರಬ್ಬರ್ ಮರದ ಬೀಜಗಳನ್ನು ಸಂಗ್ರಹಿಸಿ ನಂತರ ಅವುಗಳನ್ನು ಇಂಗ್ಲೆಂಡ್‌ನ ಕ್ಯೂ ಗಾರ್ಡನ್ಸ್‌ನಲ್ಲಿ ನಾಟಿ ಮಾಡಿದರು. ಸಸಿಗಳನ್ನು ನಂತರ ಸಿಲೋನ್ (ಶ್ರೀಲಂಕಾ), ಇಂಡೋನೇಷಿಯಾ, ಸಿಂಗಾಪುರ್ ಮತ್ತು ಬ್ರಿಟಿಷ್ ಮಲಯಾಗೆ ಕಳುಹಿಸಲಾಯಿತು. ಮಲಯಾ (ಇದೀಗ ಮಲೇಷಿಯಾ) ನಂತರ ರಬ್ಬರ್‌ನ ಅತ್ಯಂತ ದೊಡ್ಡ ಉತ್ಪಾದಕವಾಯಿತು.[] ಸುಮಾರು ೧೦೦ ವರ್ಷಗಳ ಹಿಂದೆ, ಆಫ್ರಿಕಾದಲ್ಲಿನ ಕಾಂಗೊ ಮುಕ್ತ ರಾಜ್ಯವೂ ನೈಸರ್ಗಿಕ ರಬ್ಬರ್ ಲೇಟೆಕ್ಸ್‌ನ ಪ್ರಮುಖ ಮೂಲವಾಗಿತ್ತು, ಇಲ್ಲಿ ಸಾಮಾನ್ಯವಾಗಿ ಬಲವಂತವಾಗಿ ಕಾರ್ಮಿಕರಿಂದ ಸಂಗ್ರಹಿಸಲಾಗುತ್ತಿತ್ತು. ಲೈಬೀರಿಯಾ ಮತ್ತು ನೈಜೀರಿಯಾ ಸಹ ರಬ್ಬರ್‌ನ ಉತ್ಪಾದನೆಯನ್ನು ಪ್ರಾರಂಭಿಸಿದವು.

ಭಾರತದಲ್ಲಿ, ನೈಸರ್ಗಿಕ ರಬ್ಬರ್‌ನ ವಾಣಿಜ್ಯ ಕೃಷಿಯನ್ನು ಬ್ರಿಟಿಷ್ ಪ್ಲ್ಯಾಂಟರ್‌ಗಳು ಪರಿಚಯಿಸಿದರು. ಆದಾಗ್ಯೂ ಭಾರತದಲ್ಲಿ ವಾಣಿಜ್ಯ ಮಟ್ಟದಲ್ಲಿ ಬೆಳೆಯಲು ೧೮೭೩ ನಷ್ಟು ಮೊದಲೇ ಕಲ್ಕತ್ತಾದ ಸಸ್ಯವನಗಳಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಯಿತು. ಭಾರತದಲ್ಲಿ ಮೊದಲ ವಾಣಿಜ್ಯ ಹೀವಿಯಾ ಸಸಿ ನೆಡುತೋಪುಗಳನ್ನು ೧೯೦೨ ರಲ್ಲಿ ಕೇರಳದ ತತ್ತೇಕಾಡುವಿನಲ್ಲಿ ಸ್ಥಾಪಿಸಲಾಯಿತು. ೧೯ನೇ ಶತಮಾನದಲ್ಲಿ ಮತ್ತು ೨೦ ನೇ ಶತಮಾನದ ಪ್ರಾರಂಭದಲ್ಲಿ, ಇದನ್ನು "ಭಾರತದ ರಬ್ಬರ್" ಎಂದು ಕರೆಯಲಾಯಿತು. ಕೆಲವು ರಬ್ಬರ್ ನೆಡುತೋಪುಗಳನ್ನು ಬ್ರಿಟೀಷರು ಪಾಕಿಸ್ತಾನದಲ್ಲಿಯೂ ಸಹ ಪ್ರಾರಂಭಿಸಿದರು.

ಗುಣಲಕ್ಷಣಗಳು

ಬದಲಾಯಿಸಿ
 
ರಬ್ಬರ್ ಲೇಟೆಕ್ಸ್

ರಬ್ಬರು ಭೌತಿಕ ಮತ್ತು ರಾಸಾಯನಿಕ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತದೆ. ರಬ್ಬರಿನ ಒತ್ತಡ- ಕೃಷ್ಟಿಯ ವರ್ತನೆಯು ಮುಲ್ಲಿನ್ಸ್ ಪರಿಣಾಮ, ಪೇಯನ್ ಪರಿಣಾಮವನ್ನು ಪ್ರದರ್ಶಿಸುತ್ತದೆ ಮತ್ತು ಹಲವುವೇಳೆ ಇದನ್ನು ಅತಿಪ್ರತ್ಯಾಸ್ಥ ಎಂದು ಅನುಕರಿಸಲಾಗುತ್ತದೆ. ರಬ್ಬರು ಕೃಷ್ಟಿ ಸ್ಫಟಿಕೀಕರಿಸುತ್ತದೆ.

ನೈಸರ್ಗಿಕ ರಬ್ಬರಿನಲ್ಲಿ ಓಜೋನ್ ಕಿರಣಗಳಿಂದ ಬಿರುಕುಗಳುಂಟಾಗುತ್ತದೆ, ಏಕೆಂದರೆ ಪ್ರತಿಯೊಂದು ಆವರ್ತಕ ಘಟಕದಲ್ಲಿ ದ್ವಿಬಂಧ ಇರುವುದು.

ಸ್ಥಿತಿಸ್ಥಾಪಕ ಸಾಮರ್ಥ್ಯ ರಬ್ಬರಿನ ವೈಶಿಷ್ಟ್ಯ. 0-100C ಉಷ್ಣತೆ ಮಿತಿಯಲ್ಲಿ ಗಡಸಾಗುವುದು. 500C ಮೀರಿ ಕಾಸಿದರೆ ಮೆತ್ತಗಾಗಿ ಸುಮಾರು 190-2000C ಮಿತಿಯಲ್ಲಿ ಕಾಸಿದಾಗ ತನ್ನ ಥರ್ಮೊಪ್ಲ್ಯಾಸ್ಟಿಕ್ ಗುಣವನ್ನು ಕಳೆದುಕೊಂಡು ಬಲಯುತವಾಗುವುದು; ಸ್ಥಿತಿಸ್ಥಾಪಕ ಸಾಮರ್ಥ್ಯ ಹೆಚ್ಚುವುದು. ವಲ್ಕನೀಕೃತ ಮೆದುರಬ್ಬರನ್ನು ಇದರ ಉದ್ದದ ೭-೧೦ ಪಟ್ಟು ಎಳೆದು ಬಿಟ್ಟರೆ ತನ್ನ ಪೂರ್ವಸ್ಥಿತಿಗೇ ಮರಳುತ್ತದೆ. ನೈಸರ್ಗಿಕ ರಬ್ಬರ್‌ನ ಒಂದು ಚದರ ಸೆಂಟಿಮೀಟರ್ ತುಂಡು ೨೭೫-೩೫೦ ಕೆಜಿ ಭಾರ ಭರಿಸಬಲ್ಲದು. ಇದಕ್ಕೆ ನೀರು ಅಂಟಿ ಒದ್ದೆಯಾಗುವುದಿಲ್ಲ. ಇದರ ಮೂಲಕ ಅನಿಲಗಳು ಹಾಯವು. ರಬ್ಬರ್ ವಿದ್ಯುನ್ನಿರೋಧಕ. ವಾಸ್ತವವಾಗಿ ಎಬೊನೈಟ್ ಒಂದು ಉತ್ತಮ ಪರಾವೈದ್ಯುತ (ಡೈಎಲೆಕ್ಟ್ರಿಕ್).

ರಬ್ಬರ್ ರಾಸಾಯನಿಕವಾಗಿ ಐಸೊಪ್ರೀನ್‌ನ (C2H8) ಪಾಲಿಮರ್. ಸಹಸ್ರಾರು ಅಣುಗಳು (೪೦-೮೦] ಸಾವಿರ ಎಂದು ಅಂದಾಜು) ನೇರ ಸರಣಿಯಾಗಿ ಹೆಣೆದುಕೊಂಡು ಮೈದಳೆದಿರುವ ಒಂದು ಬೃಹದಣುವೇ ಐಸೊಪ್ರೀನ್. ರಬ್ಬರ್ ದೈತ್ಯಾಣುವಿನ ಎಡ ಬಲ ತುದಿಗಳಲ್ಲಿರುವ ಪರಮಾಣು ಗುಚ್ಛಗಳ ನಿಖರಚಿತ್ರ ಇನ್ನೂ ಅಲಭ್ಯ. ಆರ್ಗ್ಯಾನಿಕ್ ದ್ರಾವಕಗಳಾದ ಬೆನ್‌ಜೀನ್, ಕ್ಲೋರೊಫಾರಮ್, ಕಾರ್ಬನ್ ಟೆಟ್ರಕ್ಲೋರೈಡ್, ಈಥರ್ ಮೊದಲಾದವುಗಳಲ್ಲಿ ರಬ್ಬರ್ ವಿಲೀನವಾಗಿ ಸ್ನಿಗ್ಧರಾಶಿಯಾಗುವುದು. ಈ ಸ್ಥಿತಿಯಲ್ಲಿ ಅದನ್ನು ಸಂಪೀಡನದಿಂದ ಯಾವ ರೂಪಕ್ಕಾದರೂ ತರಬಹುದು. ಉತ್ಪನ್ನದ ರೂಪರೇಷೆ ಶಾಶ್ವತವಾಗಿರುತ್ತದೆ.

ದ್ರಾವಣಗಳು

ಬದಲಾಯಿಸಿ

ರಬ್ಬರಿಗೆ ಎರಡು ಪ್ರಮುಖ ದ್ರಾವಕಗಳಿರುತ್ತವೆ: ಟರ್ಪೆಂಟೈನ್ ಮತ್ತು ನಾಫ್ತಾ (ಪೆಟ್ರೋಲಿಯಂ). ಫ್ರಾಂಚೈಸ್ ಫ್ರೆನ್ಸ್ ಕಂಡುಹಿಡಿದಾಗಿನಿಂದಲೂ ಮೊದಲಿನದು ೧೭೬೪ ರಿಂದ ಬಳಕೆಯಲ್ಲಿದೆ. ೧೭೭೯ರಲ್ಲಿ ರಬ್ಬರಿನ ದ್ರಾವಕವಾಗಿ ನಾಫ್ತಾವನ್ನು ಕಂಡುಹಿಡಿದಿದ್ದರ ಕೀರ್ತಿಯನ್ನು ಜಿವ್ವೊನ್ನಿ ಫ್ಯಾಬ್ರೊನ್ನಿಗೆ ಸಲ್ಲಿಸಲಾಗುತ್ತದೆ. ರಬ್ಬರು ಸುಲಭವಾಗಿ ಕರಗುವುದಿಲ್ಲವಾದ್ದರಿಂದ, ಇದನ್ನು ದ್ರವದಲ್ಲಿ ಅದ್ದುವುದಕ್ಕೆ ಮೊದಲು ವಸ್ತುವನ್ನು ನಯವಾಗಿ ಛಿದ್ರ ಛಿದ್ರ ಮಾಡಿ ವಿಭಜಿಸಲಾಗುತ್ತದೆ.

ಇದನ್ನು ಸಂಗ್ರಹಣಾ ಜಾಗದಿಂದ ರವಾನಿಸುವಾಗ ಕಚ್ಚಾ ಲೇಟೆಕ್ಸ್‌ನ ಘನೀಕರಣವನ್ನು ತಡೆಯಲು ಅಮೋನಿಯಾ ದ್ರಾವಣವನ್ನು ಸಹ ಬಳಸಬಹುದು.

ರಾಸಾಯನಿಕ ರಚನಾಂಶಗಳು

ಬದಲಾಯಿಸಿ

ಲೇಟೆಕ್ಸ್ ಎಂಬುದು ಐಸೋಪ್ರೀನ್‌ನ ನೈಸರ್ಗಿಕ ಪಾಲಿಮರ್ ಆಗಿದೆ (ಬಹುತೇಕ ವೇಳೆ ಸಿಸ್-1,4-ಪಾಲಿಐಸೋಪ್ರೀನ್). ಇದರ ಅಣುತೂಕ 100,000 ರಿಂದ 1,000,000 ವರೆಗೆ ಇರುವುದು. ಸಾಮಾನ್ಯವಾಗಿ, ಕಡಿಮೆ ಶೇಕಡಾವಾರು ಪ್ರಮಾಣದಲ್ಲಿ (5% ವರೆಗಿನ ಒಣ ದ್ರವ್ಯರಾಶಿ) ಇತರ ವಸ್ತುಗಳು, ಅಂದರೆ ಪ್ರೋಟೀನ್‌ಗಳು, ಕೊಬ್ಬುಯುಕ್ತ ಆಮ್ಲಗಳು, ರಾಳಗಳು ಮತ್ತು ಅಸಂಘಟಿತ ವಸ್ತುಗಳು (ಉಪ್ಪುಗಳು) ನೈಸರ್ಗಿಕ ರಬ್ಬರ್‌ನಲ್ಲಿ ಇರುತ್ತವೆ. ಪಾಲಿಐಸೊಪ್ರೀನ್ ಅನ್ನು ಸಹ ಕೃತಕ ರೂಪದಲ್ಲಿ ರಚಿಸಲಾಗುತ್ತದೆ. ಕೆಲವು ಬಾರಿ ಇದನ್ನು "ಕೃತಕ ನೈಸರ್ಗಿಕ ರಬ್ಬರ್" ಎಂದು ಉಲ್ಲೇಖಿಸಲಾಗುವುದು.

ಕೆಲವು ನೈಸರ್ಗಿಕ ರಬ್ಬರ್ ಮೂಲಗಳನ್ನು ಗುಟ್ಟಾ-ಪೆರ್ಚಾ ಎಂದು ಹೇಳಲಾಗುವುದು. ಇವು ಟ್ರ್ಯಾನ್-1,4-ಪಾಲಿಐಸೊಪ್ರೀನ್‍ನ್ನು ಹೊಂದಿರುತ್ತದೆ. ಇದು ಒಂದು ರಾಚನಿಕ ಐಸೋಮರ್ ಆಗಿದ್ದು ಹೋಲುವ, ಆದರೆ ತದ್ರೂಪವಾದ ಗುಣಲಕ್ಷಣಗಳನ್ನು ಹೊಂದಿರುವುದಿಲ್ಲ.

ನೈಸರ್ಗಿಕ ರಬ್ಬರು ಎಲಾಸ್ಟೋಮರ್ ಮತ್ತು ಥರ್ಮೋಪ್ಲಾಸ್ಟಿಕ್ ಆಗಿದೆ. ಆದರೆ, ರಬ್ಬರು ವಲ್ಕನೀಕರಣವಾಗುತ್ತಾ ಹೋದಂತೆ ಇದು ಉಷ್ಣಭದ್ರಿತವಾಗುತ್ತದೆ. ದೈನಂದಿನ ಬಳಕೆಯ ಬಹುತೇಕ ರಬ್ಬರನ್ನು ಎರಡರ ಗುಣಲಕ್ಷಣಗಳನ್ನು ಹಂಚಿಕೊಳ್ಳುವ ಮಟ್ಟದವರೆಗೆ ವಲ್ಕನೀಕರಿಸಲಾಗುತ್ತದೆ; ಅಂದರೆ, ಇದನ್ನು ಬಿಸಿಮಾಡಿ ತಂಪುಮಾಡಿದಾಗ, ಇದರ ಗುಣ ತಗ್ಗುತ್ತದೆ ಆದರೆ ಹಾಳಾಗುವುದಿಲ್ಲ.

ಸ್ಥಿತಿಸ್ಥಾಪಕತ್ವ

ಬದಲಾಯಿಸಿ

ಬಹುತೇಕ ಸ್ಥಿತಿಸ್ಥಾಪಕತ್ವ ಹೊಂದಿರುವ ವಸ್ತುಗಳಲ್ಲಿ, ಉದಾ. ಸ್ಪ್ರಿಂಗ್‌ಗಳಿಗೆ ಬಳಸಲಾದ ಲೋಹಗಳು, ಸ್ಥಿತಿಸ್ಥಾಪಕತ್ವ ಗುಣವು ಬಂಧ ವಿರೂಪಗಳಿಂದ ಉಂಟಾಗುತ್ತದೆ. ಶಕ್ತಿಯನ್ನು ಹೆಚ್ಚು ಅನ್ವಯಿಸಿದಾಗ, ಬಂಧದ ಅಳತೆಗಳು (ಕನಿಷ್ಠ ಶಕ್ತಿ) ಸಮತೋಲನ ಸ್ಥಿತಿಯಿಂದ ವಿಪಥಗೊಳ್ಳುತ್ತವೆ ಮತ್ತು ಕೃಷ್ಟಿ ಶಕ್ತಿಯು ವಿದ್ಯುತ್ ಸ್ಥಾಯಿರೀತ್ಯ ಸಂಗ್ರಹವಾಗುತ್ತದೆ. ರಬ್ಬರು ಅದೇ ರೀತಿಯಲ್ಲಿ ತನ್ನಲ್ಲಿನ ಗುಣಲಕ್ಷಣಗಳನ್ನು ತೋರಿಸಿಕೊಳ್ಳುತ್ತವೆ ಎಂದು ಭಾವಿಸಲಾಗುತ್ತದೆ, ಆದರೆ ಇದು ಕಳಪೆ ವಿವರಣೆಯೆಂದು ಗೊತ್ತಾಗಿದೆ. ರಬ್ಬರು ಕುತೂಹಲಕಾರಿಯಾದ ವಸ್ತುವಾಗಿದೆ ಏಕೆಂದರೆ, ಲೋಹಗಳಿಂದ ಭಿನ್ನವಾಗಿ, ಕೃಷ್ಟಿ ಶಕ್ತಿಯು ಉಷ್ಣರೀತ್ಯ ಸಂಗ್ರಹವಾಗಿರುತ್ತದೆ. ಹಾಗೆಯೇ, ಹೆಚ್ಚು ಬಲವನ್ನು ಹಾಕಿದಾಗ ನೈಸರ್ಗಿಕ ರಬ್ಬರು ಎಷ್ಟು ಹಿಗ್ಗುತದೆಯೆಂದರೆ, ಕಾರ್ಪೆಟ್‌ನ್ನು ಹೋಲುವ ಮೇಲ್ಮೈ ಮೇಲಿದ್ದಾಗ, ಅದನ್ನು ಮೇಲ್ಮೈನಿಂದ ಎಳೆಯುವುದು ಕಷ್ಟವಾಗುತ್ತದೆ. ಅದು ಅಂಟಿಕೊಂಡಿರುತ್ತದೆ.

ಅದರ ಸಡಿಲವಾದ ಸ್ಥಿತಿಯಲ್ಲಿ, ರಬ್ಬರು ಉದ್ದವಾಗಿ ಕೂಡಿರುತ್ತದೆ. ಪಾಲಿಮರ್ ಸರಪಣಿಯಿಂದ ಸುರುಳಿಯಂತೆ ಕೆಲವು ಬಿಂದುಗಳಲ್ಲಿ ಒಳಸಂಪರ್ಕವನ್ನು ಹೊಂದಿರುತ್ತದೆ. ಸಂಪರ್ಕಗಳ ನಡುವೆ, ಪ್ರತಿ ಮಾನೋಮರ್ ಅದರ ನೆರೆಯದರ ಸುತ್ತ ಮುಕ್ತವಾಗಿ ತಿರುಗಬಲ್ಲದು, ಪ್ರತಿ ವಿಭಾಗಕ್ಕೆ ಹೆಚ್ಚು ಸಂಖ್ಯೆಯ ಜ್ಯಾಮಿತಿಗಳನ್ನು ಪಡೆಯಲು ಸ್ವಾತಂತ್ರ್ಯ ಕೊಡುತ್ತದೆ, ಸ್ಥಿರ ಬಿಂದುಗಳಿಗೆ ಲಗತ್ತಾದ ಬಹಳ ಸಡಿಲವಾದ ಹಗ್ಗದಂತೆ. ಕೋಣೆಯ ಉಷ್ಣಾಂಶದಲ್ಲಿ ರಬ್ಬರ್ ಸಾಕಷ್ಟು ಚಲನಶಕ್ತಿಯನ್ನು ಸಂಗ್ರಹಿಸಿರುತ್ತದೆ ಈ ಮೂಲಕ ಸರಪಳಿಯ ಪ್ರತಿಯೊಂದು ವಿಭಾಗವೂ ಅವ್ಯವಸ್ಥಿತವಾಗಿ ಓಲಾಡುತ್ತದೆ, ಮೇಲಿನ ಹಗ್ಗದ ತುಂಡನ್ನು ಬಿರುಸಾಗಿ ಅಲ್ಲಾಡಿಸಿದಾಗ ಆಗುವಂತೆ. ರಬ್ಬರ್‌ನ ಎಂಟ್ರೋಪಿ ಮಾದರಿಯನ್ನು ೧೯೮೪ ರಲ್ಲಿ ವೆರ್ನರ್ ಖುನ್ ಅಭಿವೃದ್ಧಿಪಡಿಸಿದರು.

ರಬ್ಬರನ್ನು ಎಳೆದಾಗ, "ಹಗ್ಗದ ಸಡಿಲವಾದ ತುಂಡುಗಳು" ಬಿಗಿಯಾಗಿರುತ್ತವೆ ಮತ್ತು ಇನ್ನೂ ಮುಂದೆ ಓಲಾಡಲು ಸಾದ್ಯವಾಗುವುದಿಲ್ಲ. ಅವುಗಳ ಚಲನಶಕ್ತಿಯು ಹೆಚ್ಚುವರಿ ಉಷ್ಣವಾಗಿ ಹೊರಬರುತ್ತದೆ. ಹಾಗಾಗಿ, ಎಂಟ್ರೋಪಿ ಸಡಿಲ ಸ್ಥಿತಿಯಿಂದ ಎಳೆದ ಸ್ಥಿತಿಗೆ ಹೋಗುವಾಗ ಕಡಿಮೆಯಾಗುತ್ತದೆ ಮತ್ತು ಸಡಿಲವಾಗುವಾಗ ಇದು ಹೆಚ್ಚುತ್ತದೆ. ಎಂಟ್ರೋಪಿಯಲ್ಲಿನ ಈ ಬದಲಾವಣೆಯನ್ನು ಈ ರೀತಿಯೂ ವಿವರಿಸಬಹುದಾಗಿದೆ, ಒಂದು ನಿರ್ದಿಷ್ಟ ಉಷ್ಣಾಂಶದಲ್ಲಿ, ಸರಪಣಿಯ ಬಿಗಿಯಾದ ಭಾಗವು ಕಡಿಮೆ ವಿಧಗಳಲ್ಲಿ (W) ಮಡಚಬಲ್ಲದು (ಎನ್‌ಬಿ. ಎಂಟ್ರೋಪಿಯನ್ನು S=k*ln(W) ಅಂತೆಯೂ ಸಹ ವಿವರಿಸಬಹುದಾಗಿದೆ). ಎಳೆಯಲ್ಪಟ್ಟ ರಬ್ಬರ್ ಬ್ಯಾಂಡ್‍ನ ಸಡಿಲಿಕೆ ಎಂಟ್ರೋಪಿಯ ಹೆಚ್ಚಳದಿಂದ ಚಾಲಿತವಾಗಿದೆ ಮತ್ತು ಒತ್ತಡದ ಅನುಭವವು ಸ್ಥಾಯೀವಿದ್ಯುತ್‍ರೀತ್ಯ ಇರುವುದಿಲ್ಲ, ಬದಲಿಗೆ ವಸ್ತುವಿನ ಉಷ್ಣ ಶಕ್ತಿಯು ಚಲನಶಕ್ತಿಗೆ ಪರಿವರ್ತಿತವಾಗುವುದರಿಂದ ಆಗಿದೆ. ರಬ್ಬರ್‌ನ ಸಡಿಲಿಕೆಯು ಅಂತರುಷ್ಣಕವಾಗಿದೆ, ಮತ್ತು ಈ ಕಾರಣಕ್ಕಾಗಿ ಎಳೆಯಲ್ಪಟ್ಟ ತುಂಡಿನಿಂದ ವಿನಿಯೋಗಿಸಲ್ಪಟ್ಟ ಒತ್ತಡವು ಉಷ್ಣಾಂಶದೊಂದಿಗೆ ಹೆಚ್ಚಾಗುತ್ತದೆ. (ಉದಾಹರಣೆಗೆ ಲೋಹಗಳು ಉಷ್ಣಾಂಶ ಹೆಚ್ಚಿದಂತೆ ಮೆತುವಾಗುತ್ತವೆ). ಸಂಕೋಚನದ ಸಮಯದಲ್ಲಿ ವಸ್ತುವು ಸ್ಥಿರೋಷ್ಣ ತಣ್ಣಗಾಗುವಿಕೆಗೆ ಒಳಗಾಗುತ್ತದೆ. ರಬ್ಬರ್‌ನ ಈ ಗುಣವನ್ನು ಎಳೆದ ರಬ್ಬರ್ ಬ್ಯಾಂಡ್ ಅನ್ನು ನಿಮ್ಮ ತುಟಿಗಳಿಗೆ ಹಿಡಿದಿಟ್ಟುಕೊಳ್ಳುವ ಮೂಲಕ ಮತ್ತು ಅದನ್ನು ಸಡಿಲಿಸುವುದರಿಂದ ಇದನ್ನು ಸುಲಭವಾಗಿ ಪರಿಶೀಲಿಸಬಹುದಾಗಿದೆ. ರಬ್ಬರ್ ಬ್ಯಾಂಡ್‌ನ ವಿಸ್ತರಣೆಯು ಆದರ್ಶ ಅನಿಲದ ಸಂಕೋಚನಕ್ಕೆ ಒಂದು ರೀತಿಯಲ್ಲಿ ಸಮನಾಗಿದೆ, ಮತ್ತು ಸಡಿಲಿಸುವಿಕೆಯು ಅದರ ವಿಸ್ತರಣೆಗೆ ಸಮನಾಗಿದೆ. ಸಂಕೋಚನಗೊಂಡ ಅನಿಲವೂ "ಸ್ಥಿತಿಸ್ಥಾಪಕ" ಗುಣಲಕ್ಷಣಗಳನ್ನು ಪ್ರದರ್ಶಿಸುತ್ತದೆ ಎಂಬುದನ್ನು ಗಮನಿಸಿ, ಉದಾಹರಣೆಗೆ ಗಾಳಿ ಊದಲಾದ ಕಾರ್ ಟೈರಿನ ಒಳಗೆ. ವಿಸ್ತರಣೆಯು ಸಂಕೋಚನಕ್ಕೆ ಸಮನಾಗಿದೆ ಎಂಬ ವಾಸ್ತವಾಂಶವು ಅಂತರ್ಬೋಧೆಗೆ ವಿರುದ್ಧವಾಗಿದೆ ಎಂದು ತೋರುತ್ತದೆ, ಆದರೆ ರಬ್ಬರ್ ಅನ್ನು ಒಂದು-ಆಯಾಮದ ಅನಿಲ ದಂತೆ ವೀಕ್ಷಿಸಿದರೆ ಇದು ಸರಿ ಎಂದು ಕಂಡುಬರುತ್ತದೆ. ವಿಸ್ತರಿಸುವಿಕೆಯು ಸರಪಳಿಯ ಪ್ರತಿಯೊಂದು ವಿಭಾಗಕ್ಕೆ ಲಭ್ಯವಿರುವ "ಅಂತರ" ವನ್ನು ಕಡಿಮೆ ಮಾಡುತ್ತದೆ.

ರಬ್ಬರ್ ಅನ್ನು ವಲ್ಕನೀಕರಣಗೊಳಿಸುವುದರಿಂದ ಸರಪಳಿಗಳ ನಡುವೆ ಹೆಚ್ಚಿನ ಡೈಸಲ್ಫೈಡ್ ಬಂಧಗಳು ರಚನೆಯಾಗುತ್ತವೆ, ಆದ್ದರಿಂದ ಸರಪಣಿಯ ಪ್ರತಿಯೊಂದು ಮುಕ್ತ ವಿಭಾಗದ ಉದ್ದವನ್ನು ಕಡಿಮೆಗೊಳಿಸುತ್ತದೆ. ಪರಿಣಾಮವೇನೆಂದರೆ ಸರಪಣಿಗಳು ನೀಡಿರುವ ಕೃಷ್ಟಿಯ ಅಳತೆಗೆ ಹೆಚ್ಚು ತ್ವರಿತವಾಗಿ ಬಿಗಿಯಾಗುತ್ತವೆ, ಈ ಮೂಲಕ ಸ್ಥಿತಿಸ್ಥಾಪಕ ಬಲವನ್ನು ಸ್ಥಿರವಾಗಿ ಇರಿಸಿಕೊಳ್ಳುತ್ತದೆ ಮತ್ತು ರಬ್ಬರ್ ಅನ್ನು ಗಡುಸುಗೊಳಿಸುತ್ತದೆ ಮತ್ತು ಕಡಿಮೆ ವಿಸ್ತರಣೆಗೊಳ್ಳುವಂತೆ ಮಾಡುತ್ತದೆ.

ಗಾಜು ಪರಿವರ್ತನೆ ಉಷ್ಣಾಂಶದಿಂದ ಕಡಿಮೆಗೆ ತಾಪಮಾನವನ್ನು ಇಳಿಸಿದಾಗ, ಭಾಗಶಃ-ದ್ರವರೂಪದ ಸರಪಣಿ ಭಾಗಗಳು ನಿಗದಿತ ಜ್ಯಾಮಿತಿಗಳಿಗೆ "ಘನೀಕರಿಸುತ್ತವೆ" ಮತ್ತು ರಬ್ಬರ್ ತನ್ನ ಸ್ಥಿತಿಸ್ಥಾಪಕ ಗುಣಲಕ್ಷಣಗಳನ್ನು ಹಠಾತ್ತಾಗಿ ಕಳೆದುಕೊಳ್ಳುತ್ತದೆ, ಆದರೆ ಪ್ರಕ್ರಿಯೆಯನ್ನು ಹಿಂತಿರುಗಿಸಬಹುದಾಗಿರುತ್ತದೆ. ಈ ಗುಣವನ್ನು ರಬ್ಬರ್ ಹೆಚ್ಚಿನ ಎಲ್ಯಾಸ್ಟೋಮರ್‌ಗಳೊಂದಿಗೆ ಹಂಚಿಕೊಳ್ಳುತ್ತದೆ. ಬಹಳ ಕಡಿಮೆ ತಾಪಮಾನದಲ್ಲಿ, ರಬ್ಬರ್ ಸಾಮಾನ್ಯವಾಗಿ ದೃಢವಾಗಿರುತ್ತದೆ; ಇದನ್ನು ಎಳೆದಾಗ ಅಥವಾ ವಿಸ್ತರಿಸಿದಾಗ ಚೂರುಗಳಾಗಿ ಒಡೆಯುತ್ತದೆ. ಈ ಕ್ರಾಂತಿ ತಾಪಮಾನದಿಂದಾಗಿ ಹಿಮ ಟೈರ್‌ಗಳಿಗೆ ಸಾಮಾನ್ಯ ಟೈರುಗಳಿಗಿಂತ ತೆಳುವಾದ ರಬ್ಬರ್ ಅನ್ನು ಬಳಸಲು ಕಾರಣವಾಗಿದೆ. ವಿಫಲವಾಗುತ್ತಿದ್ದ ರಬ್ಬರ್ ಅದರ ಕ್ರಾಂತಿ ತಾಪಮಾನಕ್ಕಿಂತ ಕಡಿಮೆ ತಾಪಮಾನಕ್ಕೆ ಇಳಿದಿದ್ದು ಒ-ರಿಂಗ್ ಚ್ಯಾಲೆಂಜರ್ ವಿಪತ್ತಿಗೆ ಕಾರಣವಾಗಿರಬಹುದು. ವಿಪತ್ತು ಅಸಾಮಾನ್ಯವಾದ ಶೀತ ದಿನದಂದು ಸಂಭವಿಸಿತು.

ಪ್ರಸ್ತುತ ಮೂಲಗಳು

ಬದಲಾಯಿಸಿ

೨೦೦೫ ರಲ್ಲಿ ಸುಮಾರು ೨೧ ಮಿಲಿಯನ್ ಟನ್‌ಗಳಷ್ಟು ರಬ್ಬರ್ ಅನ್ನು ತಯಾರಿಸಲಾಯಿತು ಅದರಲ್ಲಿ ೪೨% ನೈಸರ್ಗಿಕವಾದದ್ದು. ತಯಾರಿಸಿದ ಹೆಚ್ಚಿನ ಪ್ರಮಾಣವು ಕೃತಕ ಬಗೆಯಾಗಿರುವುದರಿಂದ ಅದನ್ನು ಪೆಟ್ರೋಲಿಯಂನಿಂದ ಪಡೆದುಕೊಂಡಿರುವುದರಿಂದ, ನೈಸರ್ಗಿಕ ರಬ್ಬರ್‌ನ ಬೆಲೆಯನ್ನೂ ಬಹಳ ದೊಡ್ಡ ಮಟ್ಟಿಗೆ ಚಾಲ್ತಿಯಲ್ಲಿರುವ ಜಾಗತಿಕ ಕಚ್ಚಾ ತೈಲದ ಬೆಲೆಯ ಮೇಲೆ ನಿಗದಿಪಡಿಸಲಾಗುತ್ತದೆ.[][] ಏಷಿಯಾ ಇಂದು ನೈಸರ್ಗಿಕ ರಬ್ಬರ್‌ನ ಮುಖ್ಯ ಮೂಲವಾಗಿದೆ, ೨೦೦೫ ರಲ್ಲಿ ಉತ್ಪಾದನೆಯ ಸುಮಾರು 94% ರಷ್ಟು ರಚಿಸಿತ್ತು. ಮೂರು ಅತಿ ಹೆಚ್ಚಿನ ತಯಾರಿಕೆಯ ರಾಷ್ಟ್ರಗಳಲ್ಲಿ (ಇಂಡೋನೇಷಿಯಾ, ಮಲೇಷಿಯಾ ಮತ್ತು ಥಾಯ್ಲೆಂಡ್) ಒಟ್ಟಿಗೆ ಸುಮಾರು 72% ರಷ್ಟು ನೈಸರ್ಗಿಕ ರಬ್ಬರ್ ಅನ್ನು ತಯಾರಿಸಲಾಯಿತು.

 
ಅತಿದೊಡ್ಡ ನೆಡುತೋಪುಗಳಲ್ಲಿ ಸಾಮಾನ್ಯವಾಗಿ ರಬ್ಬರ್‌ನ ಕೃಷಿ ಮಾಡಲಾಗಿದೆ. ಭಾರತದ, ಕೇರಳದಲ್ಲಿನ ನೆಡುತೋಪುಗಳಲ್ಲಿ ಲೇಟೆಕ್ಸ್ ಸಂಗ್ರಹಿಸಲು ತೆಂಗಿನಕಾಯಿಯ ಚಿಪ್ಪುಗಳ ಬಳಕೆಯನ್ನು ನೋಡಿ

ರಬ್ಬರ್ ಲೇಟೆಕ್ಸ್ ಅನ್ನು ರಬ್ಬರ್ ಮರಗಳಿಂದ ಬೇರ್ಪಡಿಸಲಾಗುವುದು. ರಬ್ಬರ್ ಮರಗಳ ಜೀವಿತಾವಧಿಯು ಸುಮಾರು ೩೨ ವರ್ಷಗಳಾಗಿವೆ – 7ವರ್ಷಗಳವರೆಗೆ ಅಪಕ್ವವಾದ ಹಂತ ಮತ್ತು ಸುಮಾರು ೨೫ವರ್ಷಗಳವರೆಗೆ ಉತ್ಪಾದನೆಯ ಹಂತ.

ಗಿಡಕ್ಕೆ ಮಣ್ಣಿನ ಅಗತ್ಯವು ಸಾಮಾನ್ಯವಾಗಿ ಹೆಚ್ಚಾಗಿ ಒಣಹವೆಯ ವಾತಾವರಣವಿರಬೇಕು ಲ್ಯಾಟರೈಟ್, ಜಂಬುಮಣ್ಣಿನ ಪ್ರಕಾರಗಳು, ಸೆಡಿಮೆಂಟರಿ ಪ್ರಕಾರಗಳು, ಜಂಬುಮಣ್ಣು ಅಲ್ಲದ ಕೆಂಪು ಅಥವಾ ಮೆಕ್ಕಲು ಮಣ್ಣನ್ನು ಹೊಂದಿರಬೇಕು.

ರಬ್ಬರ್ ಮರಗಳ ಬೆಳವಣಿಗೆಗೆ ಪ್ರಶಸ್ತವಾದ ಹವಾಮಾನವೆಂದರೆ (ಎ) ಸುಮಾರು 250 ಸೆಮೀ ನಷ್ಟು ಮಳೆಯು ಯಾವುದೇ ಗುರುತಿಸಲಾಗದ ಒಣ ವಾತಾವರಣವಿಲ್ಲದೆ ಮತ್ತು ವರ್ಷಕ್ಕೆ ಕನಿಷ್ಠ 100 ಮಳೆಯ ದಿನಗಳು (ಬಿ) ಉಷ್ಣಾಂಶವು ಮಾಸಿಕ ಸರಾಸರಿ 25°ಸೆ ರಿಂದ 28°ಸೆ ನೊಂದಿಗೆ ಸುಮಾರು 20°ಸೆ ಯಿಂದ 34°ಸೆ ನ ವ್ಯಾಪ್ತಿಯಲ್ಲಿರಬೇಕು (ಸಿ) ಹೆಚ್ಚು ಹವಾಮಾನ ತೇವಾಂಶ ಸುಮಾರು ೮೦% (ಡಿ) ಪ್ರಕಾಶಮಾನವಾದ ಸೂರ್ಯನ ಬೆಳಕು ಸುಮಾರು ವರ್ಷಕ್ಕೆ 2000 ಗಂಟೆಗಳು ವರ್ಷಾದ್ಯಂತ ದಿನಕ್ಕೆ ೬ ಗಂಟೆಯ ದರದಲ್ಲಿ ಮತ್ತು (ಇ) ಹೆಚ್ಚು ತೀವ್ರವಾದ ಗಾಳಿ ಇಲ್ಲದಿರುವುದು.

ವಾಣಿಜ್ಯಿಕ ನೆಡುವಿಕೆಗಾಗಿ ಹೆಚ್ಚು ಇಳುವರಿ ನೀಡುವ ಅಬೀಜ ಸಂತಾನಗಳನ್ನು ಅಭಿವೃದ್ಧಿಪಡಿಸಲಾಯಿತು. ಈ ಅಬೀಜ ಸಂತಾನಗಳನ್ನು ಉತ್ತಮ ಸ್ಥಿತಿಗಳಲ್ಲಿ ಬೆಳೆಸಿದಾಗ, ಒಂದು ವರ್ಷಕ್ಕೆ ಒಂದು ಹೆಕ್ಟೇರ್‌ಗೆ ೨೦೦೦ ಕಿಲೋಗ್ರಾಂಗಳ ಒಣ ರಬ್ಬರ್‌ಗಿಂತಲೂ ಹೆಚ್ಚಿನ ಇಳುವರಿಯನ್ನು ನೀಡಿದವು.

ಸಂಗ್ರಹ

ಬದಲಾಯಿಸಿ
 
ರಬ್ಬರ್ ಸಾಗುವಳಿ ಪ್ರಕ್ರಿಯೆಯಲ್ಲಿ ಶ್ರೀಲಂಕಾದ ಮಹಿಳೆ

ಮರದ ಕಾಂಡದಿಂದ 3-4 ಅಡಿ ಎತ್ತರದಲ್ಲಿ ತೊಗಟೆಯನ್ನು ತೆಳುವಾಗಿ ಹೆರೆದು, ಕಾಂಡದ ಸುತ್ತಳತೆಯ ಅರ್ಧಭಾಗದಷ್ಟನ್ನು 300 ಕೋನದಲ್ಲಿ ಕತ್ತರಿಸಲಾಗುವುದು. ಮುಂಜಾನೆ ಸಸ್ಯಕ್ಷೀರ ಸರಾಗವಾಗಿ ಸ್ರವಿಸುವುದರಿಂದ ಸೂರ್ಯೋದಯ ಕಾಲಕ್ಕೆ ಈ ಕೆಲಸ ಪ್ರಶಸ್ತವೆನಿಸುತ್ತದೆ. ಸಾಮಾನ್ಯವಾಗಿ ವರ್ಷಕ್ಕೆ ಎರಡರಿಂದ ಆರು ಬಾರಿ ಸಸ್ಯಕ್ಷೀರವನ್ನು ತೆಗೆಯುತ್ತಾರೆ. ಅನಂತರ ಗಿಡಕ್ಕೆ ಕೆಲವು ತಿಂಗಳ ವಿಶ್ರಾಂತಿ. ಹೀಗೆ 25-30 ವರ್ಷಗಳ ತನಕ ರಬ್ಬರ್ ಗಿಡ ಸಸ್ಯಕ್ಷೀರವನ್ನು ಒದಗಿಸಬಲ್ಲದು.

ತೆಂಗಿನಕಾಯಿ ಹೇರಳವಾಗಿ ಬೆಳೆಯುವಂತಹ ಕೇರಳದಂತಹ ಸ್ಥಳಗಳಲ್ಲಿ, ತೆಂಗಿನ ಅರ್ಧ ಚಿಪ್ಪನ್ನು ಲೇಟೆಕ್ಸ್‌ನ ಸಂಗ್ರಹಕ್ಕೆ ಬಳಸಲಾಗುತ್ತದೆ ಆದರೆ ಹೊಳಪು ಮೈಯುಳ್ಳ ಕುಂಬಾರ ಸಾಮಾನುಗಳು ಅಥವಾ ಅಲ್ಯುಮಿನಿಯಂ ಅಥವಾ ಪ್ಲ್ಯಾಸ್ಟಿಕ್ ಕಪ್‌ಗಳನ್ನು ಹೆಚ್ಚು ಸಾಮಾನ್ಯವಾಗಿ ಬಳಸಲಾಗುತ್ತದೆ. ಮರವನ್ನು ಸುತ್ತುವರೆದ ತಂತಿ ಕಪ್‌ಗಳಿಗೆ ಆಧಾರವಾಗುತ್ತದೆ. ಈ ತಂತಿ ಸ್ಪ್ರಿಂಗ್ ಅನ್ನೂ ಹೊಂದಿರುತ್ತದೆ. ಈ ಮೂಲಕ ಮರ ಬೆಳೆದಂತೆ ಅದು ಅಗಲಗೊಳ್ಳುತ್ತದೆ. ಲೇಟೆಕ್ಸ್ ಕಪ್‌ನಲ್ಲಿ ಬೀಳುವಂತೆ ಅದನ್ನು ತೊಗಟೆಗೆ ಅಂಟಿಸಲಾಗಿದ್ದು "ಮೂತಿ"ಯನ್ನು ಗ್ಯಾಲ್ವನೀಕರಿಸಲಾಗಿರುತ್ತದೆ. ಮುಂಜಾನೆ ಮರದ ಆಂತರಿಕ ಒತ್ತಡವು ಹೆಚ್ಚಾಗಿರುವಾಗ ಒಸರುವಿಕೆಯು ಸಾಮಾನ್ಯವಾಗಿ ಪ್ರಾರಂಭಗೊಳ್ಳುತ್ತದೆ. ಉತ್ತಮವಾಗಿ ಒಸರುವ ಮರವು ಪ್ರಮಾಣಿತ ಅರ್ಧ-ಸುರುಳಿ ವ್ಯವಸ್ಥೆಯಲ್ಲಿ ಪ್ರತಿ 20 ಸೆಕೆಂಡುಗಳಿಗೆ ಒಸರಬಹುದಾಗಿದೆ, ಮತ್ತು ಸಾಮಾನ್ಯ ದೈನಂದಿನ "ಕಾರ್ಯ" ದ ಪ್ರಮಾಣವು 450 ರಿಂದ 650 ಮರಗಳನ್ನು ಒಳಗೊಂಡಿರುತ್ತವೆ. ಮರಗಳಿಂದ ಸಾಮಾನ್ಯವಾಗಿ ಪರ್ಯಾಯವಾಗಿ ಅಥವಾ ಮೂರನೇ ದಿನ ರಸ ತೆಗೆಯಲಾಗುತ್ತದೆ, ಆದಾಗ್ಯೂ ಸಮಯ, ಅಳತೆ ಮತ್ತು ಕತ್ತರಿಸುವಿಕೆಯ ಸಂಖ್ಯೆಯಲ್ಲಿ ಹಲವಾರು ವ್ಯತ್ಯಾಸಗಳಿರುತ್ತವೆ. 25 - 40% ಒಣ ರಬ್ಬರ್ ಅನ್ನು ಹೊಂದಿರುವ ಲೇಟೆಕ್ಸ್ ತೊಗಟೆಯಲ್ಲಿರುತ್ತದೆ, ಆದ್ದರಿಂದ ಸಂಗ್ರಹಿಸುವವರು ಮರವನ್ನು ನೇರವಾಗಿ ಕತ್ತರಿಸುವುದನ್ನು ತಪ್ಪಿಸಬೇಕು ಇಲ್ಲವಾದರೆ ಬೆಳೆಯುವ ಕ್ಯಾಂಬಿಯಂ ಪದರವು ಹಾನಿಗೊಳಗಾಗಿ ಮೇಲಿನ ತೊಗಟೆಯು ತೀವ್ರವಾಗಿ ಹಾನಿಗೊಳಗಾಗುತ್ತದೆ, ನಂತರ ರಸ ತೆಗೆಯಲು ಕಷ್ಟವಾಗುತ್ತದೆ. ಪ್ಯಾನಲ್ ಅನ್ನು ಎರಡು ಬಾರಿ ಕಚ್ಚು ಮಾಡುವುದು ಸಾಮಾನ್ಯವಾಗಿದೆ, ಮರದ ಜೀವಿತಾವಧಿಯಲ್ಲಿ ಕೆಲವು ಬಾರಿ ಮೂರು ಬಾರಿ. ಮರದ ಜೀವಿತಾವಧಿಯು ಕಚ್ಚನ್ನು ಎಷ್ಟು ಉತ್ತಮವಾಗಿ ಮಾಡಲಾಗುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ, ನಿರ್ಣಾಯಕ ಅಂಶವೆಂದರೆ ತೊಗಟೆಯ ಬಳಕೆ. ಪರ್ಯಾಯ ದಿನದಂದು ರಸ ತೆಗೆಯುವುದರಿಂದ ವರ್ಷಕ್ಕೆ 25 ಸೆಮೀ (ಲಂಬವಾಗಿ) ತೊಗಟೆಯ ಬಳಕೆಯು ಮಲೇಷಿಯಾದಲ್ಲಿ ಒಂದು ಪ್ರಮಾಣಿತ ಅಳತೆಯಾಗಿದೆ. ತೊಗಟೆಯಲ್ಲಿರುವ ಲೇಟೆಕ್ಸ್ ನಾಳಗಳು ಬಲಕ್ಕೆ ಜೋಡಣೆಯಾಗಿರುತ್ತವೆ. ಈ ಕಾರಣಕ್ಕಾಗಿ, ರಸ ತೆಗೆಯಲು ಮಾಡಿದ ಕಚ್ಚುಗಳು ಸಾಮಾನ್ಯವಾಗಿ ಹೆಚ್ಚಿನ ನಾಳಗಳನ್ನು ಕತ್ತರಿಸಲು ಎಡಕ್ಕೆ ಮೇಲೇರುತ್ತವೆ.

ಮರಗಳು ಲೇಟೆಕ್ಸ್ ಅನ್ನು ಸುಮಾರು ನಾಲ್ಕು ಗಂಟೆಗಳ ಕಾಲ ಒಸರುತ್ತವೆ, ಕಚ್ಚಿನ ಮೇಲೆ ಲೇಟೆಕ್ಸ್ ಸ್ವಾಭಾವಿಕವಾಗಿ ಹೆಪ್ಪುಗಟ್ಟುವ ಮೂಲಕ ಪ್ರಕ್ರಿಯೆ ನಿಲ್ಲುತ್ತದೆ, ಈ ಮೂಲಕ ಲೇಟೆಕ್ಸ್ ನಾಳಗಳು ತೊಗಟೆಯಲ್ಲಿ ನಿರ್ಬಂಧಿತವಾಗುತ್ತವೆ. ಕಚ್ಚು ಮಾಡುವವರು ಸಾಮಾನ್ಯವಾಗಿ ಕಚ್ಚು ಮಾಡುವ ಕೆಲಸವನ್ನು ಮುಗಿಸಿದ ನಂತರ ವಿಶ್ರಾಂತಿ ಪಡೆಯುತ್ತಾರೆ ಮತ್ತು ಭೋಜನ ಸ್ವೀಕರಿಸುತ್ತಾರೆ, ನಂತರ ಸುಮಾರು ಮಧ್ಯಾಹ್ನಕ್ಕೆ ಲೇಟೆಕ್ಸ್ ಸಂಗ್ರಹವನ್ನು ಪ್ರಾರಂಭಿಸುತ್ತಾರೆ. ಕೆಲವು ಮರಗಳು ಸಂಗ್ರಹದ ನಂತರ ಒಸರಲು ಮುಂದುವರಿಸುತ್ತವೆ. ಈ ಮೂಲಕ ಕಡಿಮೆ ಪ್ರಮಾಣದ ಮುಂದಿನ ರಸ ಸಂಗ್ರಹಕ್ಕೆ ಕಾರಣವಾಗುತ್ತದೆ. ಕಚ್ಚು ಮಾಡಿದಲ್ಲಿ ಹೆಪ್ಪುಗಟ್ಟುವ ಲೇಟೆಕ್ಸ್ ಅನ್ನು ಮರದ ಲೇಸ್ ಎಂದು ಸಹ ಸಂಗ್ರಹಿಸಲಾಗುತ್ತದೆ. ಮರದ ಲೇಸ್ ಮತ್ತು ಕಪ್ ಮುದ್ದೆ ಒಟ್ಟಿಗೆ ಉತ್ಪಾದಿಸಿದ ಒಣ ರಬ್ಬರ್‌ನ 10 -20% ನಷ್ಟನ್ನು ರಚಿಸುತ್ತದೆ.

ಲೇಟೆಕ್ಸ್ ಅನ್ನು ಹೆಚ್ಚು ಸಮಯದವರೆಗೆ ಕಪ್‌ನಲ್ಲಿ ಇರಿಸಿದರೆ ಅದು ಹೆಪ್ಪುಗಟ್ಟುತ್ತದೆ. ಲೇಟೆಕ್ಸ್ ಅನ್ನು ಹೆಪ್ಪುಗಟ್ಟುವುದಕ್ಕೂ ಮೊದಲೇ ಸಂಗ್ರಹಿಸಬೇಕು. ಒಣ ರಬ್ಬರ್‌ನ ತಯಾರಿಕೆಗೆ ಸಂಗ್ರಹಿಸಿದ ಲೇಟೆಕ್ಸ್ ಅನ್ನು ಹೆಪ್ಪುಗಟ್ಟುವಿಕೆ ತೊಟ್ಟಿಗಳಿಗೆ ವರ್ಗಾಯಿಸಲಾಗುತ್ತದೆ ಅಥವಾ ಅಮೋನೀಕರಣಕ್ಕಾಗಿ ಜರಡಿಯುಳ್ಳ ಗಾಳಿ ಮುಕ್ತ ಧಾರಕಗಳಿಗೆ ವರ್ಗಾಯಿಸಲಾಗುವುದು. ಲೇಟೆಕ್ಸ್ ಅನ್ನು ಹೆಚ್ಚು ಕಾಲ ಕಲಿಲವಾದ ಸ್ಥಿತಿಯಲ್ಲಿರಿಸಲು ಅಮೋನಿಯೇಷನ್ ಅಗತ್ಯವಾಗಿದೆ.

ಲೇಟೆಕ್ಸನ್ನು ತೊಟ್ಟಿಗಳಿಗೆ ಸುರಿದು ಸಮ ಪ್ರಮಾಣದಲ್ಲಿ ನೀರನ್ನು ಸೇರಿಸುತ್ತಾರೆ. ಗರಣಿಗಟ್ಟಿಸಲು ಅಸಿಟಿಕ್ ಆಮ್ಲ, ಫಾರ್ಮಿಕ್ ಆಮ್ಲ ಅಥವಾ ಸೋಡಿಯಮ್ ಸಿಲಿಕೊಫ್ಲೂರೈಡ್ ಸೇರಿಸುವುದು ವಾಡಿಕೆ. ಆಗ ಸಸ್ಯಕ್ಷೀರ ಒತ್ತರಿಸುತ್ತದೆ. ಇದನ್ನು ಸಂಗ್ರಹಿಸಿದ 24 ಗಂಟೆಯೊಳಗೆ ಅದನ್ನು ಗರಣೆಗಟ್ಟಿಸಬೇಕು. ಇಲ್ಲದಿದ್ದರೆ ಅದು ಹುಳಿಹಿಡಿದು ವಿಭಜನೆ ಹೊಂದುತ್ತದೆ. ಗರಣೆಗಟ್ಟಿಸುವ ತೊಟ್ಟಿಗಳಲ್ಲಿ ಅಲ್ಯೂಮಿನಿಯಮ್ ವಿಭಾಜಕಗಳಿರುತ್ತವೆ. ಇವನ್ನು ಬೇಕೆನಿಸಿದಾಗ ದ್ರವದಲ್ಲಿ ಅದ್ದಬಹುದು. ಆಗ ರಬ್ಬರ್ ಮೇಲೇರಿ ಬಂದು ವಿಭಾಜಕಗಳ ನಡುವೆ ಫಲಕಗಳ ರೂಪದಲ್ಲಿ ಸಂಗ್ರಹವಾಗುವುದು. ಇವನ್ನು ಹೊರ ತೆಗೆದು, ತೊಳೆದು ಲೋಹದ ಸಿಲಿಂಡರುಗಳ ನಡುವೆ ಹಿಸುಕುವರು. ಬರುವ ರಬ್ಬರ್ ಹಾಳೆಗಳ ದಪ್ಪ 0.125 ಅಂಗುಲದಷ್ಟಿರುತ್ತದೆ. ಇವನ್ನು ಬೇಕಾದ ಆಕಾರಕ್ಕೆ ಕತ್ತರಿಸಿ ಹೊಗೆಗೂಡಿನಲ್ಲಿ ಒಂದು ವಾರದ ತನಕ ತೂಗು ಹಾಕುತ್ತಾರೆ.

ಗರಣೆಗಟ್ಟಿಸುವ ಹಂತದಲ್ಲಿ ಆಮ್ಲಕ್ಕೆ ಸ್ವಲ್ಪಮಟ್ಟಿನ ಸೋಡಿಯಮ್ ಬೈಸಲ್ಫೈಟ್ ಸೇರಿಸಿದರೆ ರಬ್ಬರಿಗೆ ತಿಳಿಹಳದಿ ಬಣ್ಣ ಬರುವುದು. ನೈಸರ್ಗಿಕ ರಬ್ಬರ್ ಸಸ್ಯಕ್ಷೀರಕ್ಕೆ ಅಮೋನಿಯ ದ್ರಾವಣ ಸೇರಿಸುವುದು ರೂಢಿ. ಇದು ರಕ್ಷಕವಾಗಿ ವರ್ತಿಸುತ್ತದೆ ಮತ್ತು ಗರಣೆಗಟ್ಟಿಸುವ ತನಕ ಸಸ್ಯಕ್ಷೀರ ಕಲಿಲಸ್ಥಿತಿಯಲ್ಲೇ ಉಳಿಯುವಂತೆ ನೋಡಿಕೊಳ್ಳುತ್ತದೆ. ಇತ್ತೀಚಿಗೆ ಅಮೋನಿಯ ಬದಲು ಫಾರ್ಮಾಲ್ಡಿಹೈಡ್ ಮತ್ತು ಪೊಟ್ಯಾಸಿಯಮ್ ಹೈಡ್ರಾಕ್ಸೈಡ್‌ಗಳನ್ನು ಸೇರಿಸುವುದು ವಾಡಿಕೆ.

ಲೇಟೆಕ್ಸ್ ಅನ್ನು ಸಾಮಾನ್ಯವಾಗಿ ಅದ್ದಿದ ಸಾಮಗ್ರಿಗಳ ಉತ್ಪಾದನೆಗಾಗಿ ಲೇಟೆಕ್ಸ್ ಸಾರವಾಗಿ ಸಂಸ್ಕರಿಸಲಾಗುತ್ತದೆ ಅಥವಾ ಅದನ್ನು ಫಾರ್ಮಿಕ್ ಆಮ್ಲ ಬಳಸಿಕೊಂಡು ನಿಯಂತ್ರಿತವಾಗಿ, ಶುಭ್ರ ಸ್ಥಿತಿಗಳಲ್ಲಿ ಹೆಪ್ಪುಗಟ್ಟಿಸಲಾಗುವುದು. ಹೆಪ್ಪುಗಟ್ಟಿದ ಲೇಟೆಕ್ಸ್ ಅನ್ನು ನಂತರ ಹೆಚ್ಚಿನ ಗುಣಮಟ್ಟದ ತಾಂತ್ರಿಕವಾಗಿ ನಿರ್ದಿಷ್ಟಪಡಿಸಿದ ಬ್ಲಾಕ್ ರಬ್ಬರ್‌ಗಳಂತೆ ಟಿಎಸ್ಆರ್3ಎಲ್ ಅಥವಾ ಟಿಎಸ್‌ಆರ್‌ಸಿವಿ ಯಂತೆ ಸಂಸ್ಕರಿಸಲಾಗುವುದು ಅಥವಾ ರಿಬ್ ಮಾಡಿದ ಸ್ಮೋಕ್ ಶೀಟ್ ಗ್ರೇಡ್‌ಗಳಾಗಿ ತಯಾರಿಸಲು ಬಳಸಲಾಗುವುದು.

ರಬ್ಬರು ಸಂಸ್ಕರಣದಲ್ಲಿ ಜಗಿಯು (ಮ್ಯಾಸ್ಟಿಕೇಟಿಂಗ್) ಹಂತ ಮುಖ್ಯ. ಈ ಘಟ್ಟದಲ್ಲಿ ಸಮಾಂತರವಾಗಿ ತಿರುಗುತ್ತಿರುವ ಎರಡು ಕಬ್ಬಿಣದ ರೋಲರುಗಳ ನಡುವೆ ರಬ್ಬರ್ ತುಂಡುಗಳನ್ನು ಒತ್ತಡದಲ್ಲಿ ಅರೆಯಲಾಗುವುದು. ಆಗ ಒಂದು ರೋಲರಿಗೆ ರಬ್ಬರಿನ ಹಾಳೆ ಅಂಟಿಕೊಳ್ಳುತ್ತದೆ. ಹೀಗೆ ಅರೆಯಲ್ಪಟ್ಟ ರಬ್ಬರಿಗೆ ಬೇಕಾದ ರಂಗುಗಳನ್ನು ಸೇರಿಸುತ್ತಾರೆ. ಇದು ಸಂಯೋಜನಾ (ಕಾಂಪೌಂಡಿಂಗ್) ಹಂತ. ಬಟ್ಟೆ ಮೊದಲಾದವುಗಳಿಗೆ ರಬ್ಬರ್ ಲೇಪಿಸುವ ವಿಧಾನಕ್ಕೆ ಕ್ಯಾಲೆಂಡರಿಂಗ್ ಇಂದು ಹೆಸರು. ರಬ್ಬರ್ ಟ್ಯೂಬುಗಳನ್ನು ಮಾಡಲು ಎಕ್ಸ್‌ಟ್ರೂಡರ್ ಎಂಬ ಯಂತ್ರ ಬಳಸುತ್ತಾರೆ.

ನೈಸರ್ಗಿಕವಾಗಿ ಹೆಪ್ಪುಗಟ್ಟಿದ ರಬ್ಬರನ್ನು (ಕಪ್ ಮುದ್ದೆ) ಟಿಎಸ್‌ಆರ್10 ಮತ್ತು ಟಿಎಸ್‌ಆರ್20 ಗುಣಮಟ್ಟದ ರಬ್ಬರ್‌ಗಳನ್ನು ತಯಾರಿಸಲು ಬಳಸಲಾಗುತ್ತದೆ. ರಬ್ಬರ್ ಅನ್ನು ಈ ಗುಣಮಟ್ಟಗಳಿಗೆ ಸಂಸ್ಕರಿಸುವುದು ಮುಖ್ಯವಾಗಿ ಗಾತ್ರ ಕಡಿಮೆಗೊಳಿಸುವುದು ಮತ್ತು ಕಲುಷಿತವಾಗಿರುವುದ್ನು ತೆಗೆದುಹಾಕಲು ಸ್ವಚ್ಛಗೊಳಿಸುವ ಪ್ರಕ್ರಿಯೆ ಮತ್ತು ಅಂತಿಮ ಹಂತದ ಒಣಗುವಿಕೆಗಾಗಿ ವಸ್ತುವನ್ನು ಸಿದ್ಧಗೊಳಿಸುವುದಾಗಿದೆ.

ಒಣಗಿದ ವಸ್ತುವನ್ನು ನಂತರ ಉಂಡೆಗಳಂತೆ ಮತ್ತು ಹಲಗೆಗಳಂತೆ ಮಾಡಿ ರವಾನಿಸಲಾಗುವುದು.

ರಬ್ಬರಿಗೆ ಕೂಡಿಸಲಾಗುವ ಇತರ ಪದಾರ್ಥಗಳು

ಬದಲಾಯಿಸಿ

೧. ಫಿಲ್ಲರ್‌ಗಳು: ಇವು ಬಲವರ್ಧಕಗಳು. ರಬ್ಬರಿಗೆ ಗಡಸುತನ ಮತ್ತು ಘರ್ಷಣೆ, ಉಷ್ಣತೆ ಮತ್ತು ರಾಸಾಯನಿಕಗಳ ಪ್ರಭಾವವನ್ನು ಎದರುರಿಸುವ ಸಾಮರ್ಥ್ಯವನ್ನು ನೀಡುತ್ತದೆ. ವೈದ್ಯುತಗುಣಗಳನ್ನು ಸುಧಾರಿಸುತ್ತದೆ. ಬಳಕೆಯಲ್ಲಿರುವ ಫಿಲ್ಲರುಗಳಲ್ಲಿ ಮುಖ್ಯವಾದವು; ಬರೈಟಿಸ್ (ನೈಸರ್ಗಿಕ ಬೇರಿಯಮ್ ಸಲ್ಫೇಟ್) ಕಲ್ನಾರಿನ ಪುಡಿ, ಗಟ್ಟಿಮಣ್ಣು ಫ್ಯಾಕ್ಟಿಸ್ (ಕೆಲವು ಸಸ್ಯತೈಲಗಳೊಡನೆ ಗಂಧಕ ವರ್ತಿಸಿದಾಗ ಉಂಟಾಗುವ ರಬ್ಬರಿನಂಥ ಪದಾರ್ಥ), ಟಾಲ್ಕ್ (ಜಲಸಂಯೋಜಿತ ಮೆಗ್ನೀಸಿಯಮ್ ಕಾರ್ಬೊನೇಟ್). ಕ್ಯಾಲ್ಸಿಯಮ್ ಸಿಲಿಕೇಟ್ ಮತ್ತು ಸಿಲಿಕಾನ್ ಡೈಆಕ್ಸೈಡ್ ಸೇರಿಸಿದರೆ ರಬ್ಬರ್ ಎರಡಕ್ಕೂ ಇಂಗಾಲಮಸಿಯನ್ನು (ಕಾರ್ಬನ್ ಬ್ಲ್ಯಾಕ್) ಸೇರಿಸುವುದು ಅನಿವಾರ್ಯ.

೨. ಬಣ್ಣಗಳು: ಹಿಂದೆ ರಬ್ಬರಿಗೆ ಬಣ್ಣಕೊಡಲು ಕಬ್ಬಿಣದ ಆಕ್ಸೈಡುಗಳು, ಸತುವಿನ ಆಕ್ಸೈಡ್, ಸತುವಿನ ಸಲ್ಫೈಡ್ ಮತ್ತಿ ಲಿಥೂಪೋನ್ (ಬೇರಿಯಮ್) ಸಲ್ಫೇಟ್ ಮತ್ತು ಸತುವಿನ ಸಲ್ಫೈಡ್‌ಗಳ ನಿಕಟಮಿಶ್ರಣ ಸೇರಿಸುತ್ತಿದ್ದರು. ಈಗ ಉತ್ಕೃಷ್ಟ ಬಿಳಿಯ ರಂಗು ಎನಿಸಿಕೊಂಡಿರುವ ಟೈಟೇನಿಯಮ್ ಡೈಆಕ್ಸೈಡ್ ಮತ್ತು ಆರ್ಗ್ಯಾನಿಕ್ ಮೂಲದ ಥ್ಯಾಲೊ ಸಯನೈನ್ ಬಣ್ಣಗಳನ್ನು ಅಳವಡಿಸುವುದು ಪದ್ಧತಿ. ಬಣ್ಣಗಳನ್ನು ಆಯ್ಕೆಮಾಡುವಾಗ ಅವುಗಳಿಗೂ ಮತ್ತು ರಬ್ಬರಿನಲ್ಲಿರುವ ಇತರ ಕಚ್ಚಾ ಪದಾರ್ಥಗಳಿಗೂ ನಡುವೆ ಜರುಗಬಹುದಾದ ರಾಸಾಯನಿಕ ಪ್ರತಿಕ್ರಿಯೆಗಳನ್ನು ಗಮನಿಸುವುದು ಅಗತ್ಯ.

೩. ನಮ್ಯಕಗಳು (ಪ್ಲ್ಯಾಸ್ಟಿಸೈಸರ್ಸ್) ಮತ್ತು ಮೆದುಕಾರಕಗಳು (ಸಾಫನರ್ಸ್): ರಬ್ಬರ್ ಉದ್ಯಮದ ಆದಿಕಾಲದಿಂದಲೂ ನಾನಾ ಬಗೆಯ ಸಸ್ಯ ಮತ್ತು ಪ್ರಾಣಿ ತೈಲಗಳು, ಉತ್ಕರ್ಷಿತ ಪೆಟ್ರೋಲಿಯಮ್ ಶೇಷವಸ್ತುಗಳು, ಕೊಬ್ಬಿನ ಆಮ್ಲಗಳು ಅಥವಾ ಅವುಗಳ ಸತುವಿನ ಲವಣಗಳು, ಮೇಣಗಳು, ಡಾಂಬರು ಮತ್ತು ಅಂಟುಗಳನ್ನು ಸೇರಿಸುವಂಥ ಪರಿಪಾಠವಿದೆ. ಇದರಿಂದ ರಬ್ಬರಿನ ಸಂಸ್ಕರಣಕ್ಕೆ ಅನುಕೂಲ ಒದಗುತ್ತದೆ. ಸಂಶ್ಲೇಷಿತ ರಬ್ಬರಿಗೆ ಕಲ್ಲಿದ್ದಲ ಶುಷ್ಕಾಸವನದಿಂದ ದೊರೆಯುವ ಕೆಲವು ಅಂಟುಗಳನ್ನು ಸೇರಿಸಿದರೆ ಅದು ಬಲು ಮೃದುವಾಗುತ್ತದೆ.

೪. ವಲ್ಕನೈಸೇಷನ್ ಉತ್ತೇಜಕಗಳು: ಇವು ವಲ್ಕನೈಸೇಷನ್ ಕ್ರಿಯೆಯನ್ನು ಚುರುಕುಗೊಳಿಸುವುದಲ್ಲದೆ ಕ್ರಿಯೆ ಕಡಿಮೆ ಉಷ್ಣತೆಯಲ್ಲಿ ಜರುಗಲು ನೆರವಾಗುವುವು. ಉತ್ಪನ್ನದ ಗುಣಮಟ್ಟವೂ ಸುಧಾರಿಸುತ್ತದೆ. ಇವುಗಳಲ್ಲಿ ಥಯೂರಮ್‌ಗಳು ಡೈಥಯೊಕಾರ್ಬಮೇಟುಗಳು, ಸತುವಿನ ಆಲ್ಯೈಲ್ ಕ್ಸ್ಯಾಂತೇಟುಗಳು, ನೈಟ್ರೊಸೋಡಿಮೀಥೈಲ್ ಅನಿಲಿನ್, ಡೈಫೀನೈಲ್ ಗ್ವಾನಿಡಿನ್, ಮರ್‌ಕ್ಯಾಪ್ಟೊ ಬೆನ್‌ಜೋಥಯೊಜೋಲ್ ಮುಖ್ಯವಾದವು. ಇವುಗಳೊಡನೆ ಸತುವಿನ ಆಕ್ಸೈಡ್ ಮತ್ತು ಸ್ಟಿಯರಿಕ್ ಆಮ್ಲಗಳಿದ್ದರೆ ಹೆಚ್ಚು ಪರಿಣಾಮಕಾರಿ.

೫. ಉತ್ಕರ್ಷಣ ವಿರೋಧಿಗಳು ಮತ್ತು ಆಯುರ್ವರ್ಧಕಗಳು: ಭೂಮಿಯ ವಾಯುಮಂಡಲದಲ್ಲಿರುವ ಆಕ್ಸಿಜನ್ ರಬ್ಬರಿನ ಮೇಲೆ ಬೀರುವ ದುಷ್ಪರಿಣಾಮವನ್ನು ಕುಂಠಿತಗೊಳಿಸುವುದು ಇವುಗಳ ಕೆಲಸ. ಇದರ ಸಲುವಾಗಿ ಅಲ್ಡಾಲ್-ಆಲ್ಫ-ನ್ಯಾಫ್ತೈಲ್ ಅಮೀನ್, ಫೀನೈಲ್-ಬೀಟ-ನ್ಯಾಫ್ತೈಲ್ ಅಮೀನ್, ಡೈ-ಬೀಟ-ನ್ಯಾಫ್ತೈಲ್-ಪ್ಯಾರಾ-ಫಿನಿಲೀನ್ ಡಯಮೀನ್ ಮತ್ತು ಪಾಲಿಮರೀಕೃತ ಟ್ರೈಮೀಥೈಲ್ ಡೈಹೈಡ್ರೊಕ್ಟಿನೊಲಿನ್ ಉಪಯೋಗಿಸುತ್ತಾರೆ. ಕಾರು, ಲಾರಿ, ಬಸ್ಸು ಮೊದಲಾದ ಸಾರಿಗೆ ವಾಹನಗಳ ಟೈರುಗಳಿಗೆ ಇಂಥ ರಬ್ಬರು ಅಗತ್ಯ.

೬. ನೂಲುಗಳು: ಹತ್ತಿ, ರೇಯಾನ್ ಮತ್ತು ನೈಲಾನ್‌ಗಳನ್ನೊಳಗೊಂಡ ರಬ್ಬರಿನಿಂದ ವಾಹನಗಳ ಟೈರುಗಳು, ಪಾದರಕ್ಷೆಗಳು ಮತ್ತು ತೇವನಿರೋಧಕ ಉಡುಪುಗಳು (ರೇನ್ ಕೋಟು, ಟಾರ್ಪಾಲಿನ್‌ಗಳು) ಇತ್ಯಾದಿಗಳನ್ನು ತಯಾರಿಸುವುದಿದೆ.

ಉಪಯೋಗಗಳು

ಬದಲಾಯಿಸಿ
 
ಫ್ಲಾಷ್‍ಗಳನ್ನು ತೆಗೆದುಹಾಕುವ ಮುನ್ನ ರಬ್ಬರ್‌ನ ಸಂಕೋಚನ ಮೂಲಕ ಅಚ್ಚು ಹಾಕಿದ (ವಲ್ಕನೀಕರಿಸಿದ) ಬೂಟುಗಳು

ರಬ್ಬರ್‌ನ ಬಳಕೆಯು ವ್ಯಾಪಕವಾಗಿದೆ, ಗೃಹಬಳಕೆಯಿಂದ ಹಿಡಿದು ಕೈಗಾರಿಕಾ ಉತ್ಪನ್ನಗಳವರೆಗೆ ವ್ಯಾಪ್ತಿಯನ್ನು ಹೊಂದಿದೆ, ಮಧ್ಯಮ ಹಂತದಲ್ಲಿ ತಯಾರಿಕಾ ಹರಿವನ್ನು ಅಥವಾ ಅಂತಿಮ ಉತ್ಪನ್ನಗಳಿಗೆ ಪ್ರವೇಶಿಸುವುದು. ಟೈರ್‌ಗಳು ಮತ್ತು ಟ್ಯೂಬ್‌ಗಳು ರಬ್ಬರ್‌ನ ಅತಿ ದೊಡ್ಡ ಬಳಕೆದಾರವಾಗಿವೆ. ಉಳಿದ 44% ಅನ್ನು ಸಾಮಾನ್ಯ ರಬ್ಬರ್ ವಸ್ತುಗಳ (ಜಿಆರ್‌ಜಿ) ವಲಯಕ್ಕೆ ತೆಗೆದುಕೊಳ್ಳಲಾಗುತ್ತದೆ, ಅದರಲ್ಲಿ ಟೈರ್‌ಗಳು ಮತ್ತು ಟ್ಯೂಬ್‌ಗಳು ಬಿಟ್ಟು ಉಳಿದೆಲ್ಲವೂ ಒಳಗೊಂಡಿರುತ್ತವೆ.

ಪೂರ್ವ ಇತಿಹಾಸದ ಬಳಕೆಗಳು

ಬದಲಾಯಿಸಿ

ರಬ್ಬರ್ ಅನ್ನು ಮೊದಲಿಗೆ ಒಲ್‌ಮೆಕ್ಸ್‌ರಿಂದ ಬಳಸಲಾಗಿತ್ತು, ಅವರು ಶತಮಾನಗಳ ನಂತರ ಕ್ರಿ.ಪೂ. ೧೬೦೦ರಲ್ಲಿ ಹೀವಿಯಾ ಮರದಿಂದ ನೈಸರ್ಗಿಕ ಲೇಟೆಕ್ಸ್‌ನ ಜ್ಞಾನವನ್ನು ಪ್ರಾಚೀನ ಮಾಯನ್ನರಿಗೆ ರವಾನಿಸಿದರು. ಆಟ ಆಡುವುದಕ್ಕಾಗಿ ಚೆಂಡು ತಯಾರಿಸಲು ಅವರು ಸಂಗ್ರಹಿಸಿದ ಲೇಟೆಕ್ಸ್ ಅನ್ನು ಕುದಿಸುತ್ತಿದ್ದರು.

ತಯಾರಿಕೆ

ಬದಲಾಯಿಸಿ

ರಬ್ಬರ್‌ನ ಇತರ ಮುಖ್ಯವಾದ ಬಳಕೆ ಎಂದರೆ ಬಾಗಿಲು ಮತ್ತು ಕಿಟಕಿಗಳ ಬಳಕೆಗಾಗಿ, ನೀರ್ಕೊಳವೆಗಳು, ಬೆಲ್ಟ್‌ಗಳು, ಚಾಪೆ ಸಾಮಗ್ರಿ, ನೆಲಹಾಸುಗಳು ಮತ್ತು ಮೋಟಾರು ವಾಹನ ಕೈಗಾರಿಕೆಯಲ್ಲಿನ "ಬಾನೆಟ್‌ನ ಕೆಳಗಿನ" ಉತ್ಪನ್ನಗಳು ಎಂದು ತಿಳಿಯಲಾಗಿರುವ ಡ್ಯಾಂಪನರ್‌ಗಳು (ಕಂಪನವಿರೋಧಿ ಆಧಾರಗಳು) ಇತರ ಬಳಕೆಗಳು. ಕೈಗವಸುಗಳು (ವೈದ್ಯಕೀಯ, ಗೃಹೋಪಯೋಗಿ ಮತ್ತು ಕೈಗಾರಿಕೆ) ಮತ್ತು ಆಟಿಕೆ ಬಲೂನುಗಳೂ ಸಹ ರಬ್ಬರ್‌ನ ದೊಡ್ಡ ಬಳಕೆದಾರರಾಗಿವೆ, ಆದಾಗ್ಯೂ ಅದರಲ್ಲಿ ಬಳಸಲಾದ ರಬ್ಬರ್‌ನ ಪ್ರಕಾರವು ಸಾಂದ್ರೀಕರಿಸಿದ ಲೇಟೆಕ್ಸ್ ಆಗಿದೆ. ಹಲವಾರು ಉತ್ಪಾದನಾ ಕೈಗಾರಿಕೆಗಳಲ್ಲಿ ಮತ್ತು ಉತ್ಪನ್ನಗಳಲ್ಲಿ ಅಂಟುವಸ್ತುಗಳಾಗಿ ರಬ್ಬರ್ ಅನ್ನು ಪರಿಣಾಮಕಾರಿಯಾಗಿ ಬಳಸಲಾಗುತ್ತದೆ, ಆದಾಗ್ಯೂ ಎರಡು ಮುಖ್ಯವಾಗಿ ಗಮನಿಸಬೇಕಾದ ಅಂಶಗಳೆಂದರೆ ಕಾಗದ ಮತ್ತು ನೆಲಹಾಸು ಕೈಗಾರಿಕೆಗಳು. ರಬ್ಬರ್ ಅನ್ನು ಸಾಮಾನ್ಯವಾಗಿ ರಬ್ಬರ್ ಬ್ಯಾಂಡ್‌ಗಳು ಮತ್ತು ಪೆನ್ಸಿಲ್ ಎರೇಜ಼ರ್‌ಗಳನ್ನು ಮಾಡಲು ಸಹ ಬಳಸಲಾಗುತ್ತದೆ.

ಜವಳಿ ಉಪಯೋಗಗಳು

ಬದಲಾಯಿಸಿ

ಹೆಚ್ಚುವರಿಯಾಗಿ, ನಾರಿನಂತೆ ತಯಾರಿಸಲಾದ ರಬ್ಬರ್ ಅನ್ನು ಕೆಲವು ಬಾರಿ ಎಲಾಸ್ಟಿಕ್ ಎಂತಲೂ ಕರೆಯಲಾಗುತ್ತದೆ, ಇದು ಜವಳಿ ಉದ್ಯಮದಲ್ಲಿ ಮಹತ್ವಪೂರ್ಣ ಮೌಲ್ಯವನ್ನು ಹೊಂದಿದೆ ಮುಖ್ಯವಾಗಿ ಇದರ ಉತ್ತಮವಾದ ವಿಸ್ತಾರಗೊಳ್ಳುವಿಕೆ ಮತ್ತು ಸ್ವಸ್ಥಿತಿಗೆ ಬರುವಿಕೆ ಗುಣಲಕ್ಷಣಗಳಿಂದ. ಈ ಉದ್ದೇಶಗಳಿಗಾಗಿ, ತಯಾರಿಸಿದ ರಬ್ಬರ್ ನಾರನ್ನು ನಿಸ್ಸರಿತ ಗುಂಡಗಿನ ನಾರು ಅಥವಾ ಆಯತಾಕಾರದ ನಾರುಗಳಾಗಿ ಮಾಡಲಾಗುತ್ತದೆ. ನಿಸ್ಸರಿತ ಪದರಗಳಿಂದ ಪಟ್ಟಿಗಳನ್ನು ಕತ್ತರಿಸಲಾಗುತ್ತದೆ. ಕಡಿಮೆ ಬಣ್ಣ ಸ್ವೀಕರಣೆಯ, ಸ್ಪರ್ಶ ಮತ್ತು ಗೋಚರತೆಯ ಕಾರಣದಿಂದ, ರಬ್ಬರ್ ನಾರನ್ನು ಮತ್ತೊಂದು ನಾರಿನಿಂದ ಮುಚ್ಚಲಾಗಿರುತ್ತದೆ ಅಥವಾ ಬಟ್ಟೆಗೆ ಇತರ ಹೆಣಿಗೆಗಳೊಂದಿಗೆ ನೇರವಾಗಿ ಹೊಲಿಯಲಾಗಿರುತ್ತದೆ. 1900 ರ ದಶಕದ ಪ್ರಾರಂಭದಲ್ಲಿ, ಉದಾಹರಣೆಗೆ, ರಬ್ಬರ್ ನೂಲುಗಳನ್ನು ಒಳಗಟ್ಟು ಬಟ್ಟೆಗಳಲ್ಲಿ ಬಳಸಲಾಗುತ್ತಿತ್ತು. ರಬ್ಬರ್ ಅನ್ನು ಜವಳಿ ತಯಾರಿಕೆಯಲ್ಲಿ ಈಗಲೂ ಬಳಸಲಾಗುತ್ತದಾದರೂ, ಇದರ ಕಡಿಮೆ ದೃಢತೆಯು ಕಡಿಮೆಭಾರದ ಉಡುಪುಗಳಲ್ಲಿ ಇದರ ಬಳಕೆಯನ್ನು ಸೀಮಿತಗೊಳಿಸುತ್ತದೆ ಏಕೆಂದರೆ ಲೇಟೆಕ್ಸ್ ಉತ್ಕರ್ಷಕ ಪದಾರ್ಥಗಳಿಗೆ ಪ್ರತಿರೋಧಕತಾ ಸಾಮರ್ಥ್ಯವನ್ನು ಹೊಂದಿಲ್ಲ ಮತ್ತು ಹಳೆಯದಾದಂತೆ, ಸೂರ್ಯನ ಬೆಳಕು, ಎಣ್ಣೆ, ಮತ್ತು ಬೆವರುವಿಕೆಯಿಂದಾಗಿ ಹಾನಿಗೊಳಗಾಗುತ್ತದೆ. ಈ ನ್ಯೂನತೆಗಳನ್ನು ಹೋಗಲಾಡಿಸುವಲ್ಲಿ ಹಾದಿಯನ್ನು ಪಡೆಯಲು, ಜವಳಿ ಉದ್ಯಮವು ನಿಯೋಪ್ರೇನ್‌ನತ್ತ (ಕ್ಲೋರೋಪ್ರೇನ್‌ನ ಪಾಲಿಮರ್ ರೂಪ) ವಾಲಿದೆ. ಇದು ಒಂದು ಪ್ರಕಾರದ ಕೃತಕ ರಬ್ಬರ್. ಅಲ್ಲದೆ ಹೆಚ್ಚು ಸಾಮಾನ್ಯವಾಗಿ ಬಳಸಲಾದ ಮತ್ತೊಂದು ಎಲ್ಯಾಸ್ಟೋಮರ್ ನಾರಿನತ್ತ ವಾಲಿದೆ, ಅದೆಂದರೆ ಸ್ಪ್ಯಾಂಡೆಕ್ಸ್ (ಎಲ್ಯಾಸ್ಟೆನ್ ಎಂದೂ ಹೇಳಲಾಗುವುದು), ಏಕೆಂದರೆ ಇವುಗಳ ಸಾಮರ್ಥ್ಯ ಮತ್ತು ಬಾಳಿಕೆ ರಬ್ಬರ್‌‍ಗಿಂತ ಉತ್ಕೃಷ್ಟವಾಗಿದೆ.

ವಲ್ಕನೀಕರಣ

ಬದಲಾಯಿಸಿ

ನೈಸರ್ಗಿಕ ರಬ್ಬರ್ ಅನ್ನು ಯಾವಾಗಲೂ ವಲ್ಕನೀಕರಣಗೊಳಿಸಲಾಗುವುದು. ಈ ಪ್ರಕ್ರಿಯೆಯಲ್ಲಿ ರಬ್ಬರ್ ಅನ್ನು ಬಿಸಿ ಮಾಡಲಾಗುವುದು ಮತ್ತು ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಲು ಮತ್ತು ಅದು ಹಾಳಾಗದಂತೆ ತಪ್ಪಿಸಲು ಸಲ್ಫರ್, ಪೆರಾಕ್ಸೈಡ್ ಅಥವಾ ಪಿಸ್ಪೆನಾಲ್ ಅನ್ನು ಸೇರಿಸಲಾಗುತ್ತದೆ. ವಲ್ಕನೀಕರಣದ ಬೆಳವಣಿಗೆಯನ್ನು ಹೆಚ್ಚು ನಿಕಟವಾಗಿ 1839 ರಲ್ಲಿ ಚಾರ್ಲೆಸ್ ಗುಡ್‌ಇಯರ್ ನೊಂದಿಗೆ ಸಂಬಂಧಿಸಿದೆ.[] ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ಇಂಗಾಲದ ಕಪ್ಪು ಬಣ್ಣವನ್ನು ರಬ್ಬರ್‌ಗೆ ಸೇರ್ಪಡೆಯಾಗಿ ಹೆಚ್ಚಾಗಿ ಬಳಸಲಾಗುತ್ತಿತ್ತು, ವಿಶೇಷವಾಗಿ ವಾಹನ ಟೈರ್‌ಗಳಲ್ಲಿ ಇದನ್ನು ಬಳಸಲಾಗುತ್ತದೆ.[][೧೦]

ಕಳಪೆಯಿಂದ ರಬ್ಬರ್ ಸಂಪಾದನೆ

ಬದಲಾಯಿಸಿ

ಪ್ರಪಂಚಾದ್ಯಂತ ಪ್ರತಿವರ್ಷ ಲಕ್ಷಾಂತರ ಟನ್‌ಗಳಷ್ಟು ಚೂರು ಪಾರು ರಬ್ಬರ್ ಶೇಖರವಾಗುತ್ತಿದೆ. ಇದರಿಂದಲೂ ರಬ್ಬರ್ ಸಂಪಾದಿಸುವ ಪ್ರಯತ್ನಗಳು ನಡೆಯುತ್ತಿವೆ. ಇದೊಂದು ಲಾಭದಾಯಕ ಉದ್ಯಮ. ನಿರುಪಯೋಗಿ ಟೈರುಗಳು, ಟ್ಯೂಬುಗಳು, ಪಾದರಕ್ಷೆಗಳು ಇತ್ಯಾದಿಗಳನ್ನು ತುಂಡರಿಸಿ, ಅರೆದು, ಕ್ಷಾರೀಯ ವಿಧಾನದಿಂದ ಸಂಸ್ಕರಿಸಲಾಗುವುದು. ಕಚ್ಚಾವಸ್ತುವಿನಲ್ಲಿ ನೂಲುಗಳಿದ್ದರೆ ಅದನ್ನು ಹೀಟರ್ ವಿಧಾನಕ್ಕೆ ಈಡು ಮಾಡುತ್ತಾರೆ. ಅನಂತರ ಉತ್ಪನ್ನವನ್ನು ಸಾಂಪ್ರದಾಯಿಕ ವಿಧಾನಗಳಿಂದ ಸಂಸ್ಕರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು.

ಫೋಮ್ ರಬ್ಬರ್

ಬದಲಾಯಿಸಿ

ಇದನ್ನು ಸ್ಪಂಜ್ ರಬ್ಬರ್ ಎಂದೂ ಕರೆಯುವುದುಂಟು. ಇದು ಕೇವಲ ನೊರೆಗೂಡಿಸಿದ ರಬ್ಬರ್ ಲೇಟೆಕ್ಸ್ (ಸಸ್ಯಕ್ಷೀರ). ಇದಕ್ಕೆ ಹಾಕುವ ಮಾಮೂಲು ಪದಾರ್ಥಗಳ ಜೊತೆಗೆ ಸಾಬೂನು ಮತ್ತು ಸೋಡಿಯಮ್ ಸಿಲಿಕೊಫಪ್ಲೊರೈಡ್, ಪಾಲಿವೀನೈಲ್ ಮೀಥೈಲ್ ಈಥರ್ ಅಥವಾ ಅಮೋನಿಯಮ್ ಸತುವಿನ ಸಂಯುಕ್ತಗಳಂಥ ಜೆಲ್‌ಜನಕಗಳನ್ನು ಕೂಡಿಸಿ ಯಾಂತ್ರಿಕವಾಗಿ ನೊರೆಯೆಬ್ಬಿಸುತ್ತಾರೆ. ಉತ್ಪನ್ನದಲ್ಲಿರುವುದು 85% ವಾಯು; 15% ಮಾತ್ರ ರಬ್ಬರ್. ಇದನ್ನು ಎರೆಕಹುಯಿದು, ವಲ್ಕನೈಸ್ ಮಾಡಿ ವಿದ್ಯುದ್ವಿಧಾನದಿಂದ ಒಣಗಿಸಲಾಗುವುದು. ಪರ್ಯಾಯವಾಗಿ ಸಸ್ಯಕ್ಷೀರಕ್ಕೆ ಹೈಡ್ರೊಜನ್ ಪರಾಕ್ಸೈಡ್ ಮತ್ತು ಜೀವಂತ ಯೀಸ್ಟ್ ಸೇರಿಸಬಹುದು. ಅದರಲ್ಲಿರುವ ಕೆಟಲೇಸ್ ಎಂಬ ಕಿಣ್ವ ಹೈಡ್ರೊಜನ್ ಪರಾಕ್ಸೈಡನ ವಿಭಜನೆಯನ್ನು ಚುರುಕುಗೊಳಿಸಿ, ಅದರಿಂದ ಬಿಡುಗಡೆಯಾದ ಆಕ್ಸಿಜನ್ ನೊರೆಯನ್ನು ಬಡಿದೆಬ್ಬಿಸುತ್ತದೆ. ನೊರೆಯನ್ನು ಶೈತ್ಯೀಕರಿಸಿ, ಕಾರ್ಬನ್ ಡೈಆಕ್ಸೈಡ್‌ನಿಂದ ಗರಣೆಗಟ್ಟಿಸಿ ತೇವಸ್ಥಿತಿಯಲ್ಲೇ ವಲ್ಕನೈಸ್ ಮಾಡುತ್ತಾರೆ.

ಫೋಮ್ ರಬ್ಬರಿನಿಂದ ಮಾಡಿದ ಹಾಸಿಗೆ, ದಿಂಬು, ಸೋಫಾ, ವಾಹನದ ಪೀಠಗಳು ಮತ್ತು ಚಿತ್ರಮಂದಿರಗಳಲ್ಲಿ ಆಸನಗಳಿಗೆ ಅಳವಡಿಸಿರುವ ಮೆತ್ತೆಗಳು ಇತ್ಯಾದಿ ಚಿರಪರಿಚಿತ.

ಅಲರ್ಜಿ ಪ್ರತಿಕ್ರಿಯೆಗಳು

ಬದಲಾಯಿಸಿ

ಕೆಲವು ಜನರು ತೀವ್ರವಾದ ಲೇಟೆಕ್ಸ್ ಅಲರ್ಜಿಯನ್ನು ಹೊಂದಿರುತ್ತಾರೆ, ಮತ್ತು ಕೆಲವು ನೈಸರ್ಗಿಕ ಲೇಟೆಕ್ಸ್ ಉತ್ಪನ್ನಗಳಿಗೆ ಒಡ್ಡಿಕೊಳ್ಳುವುದರಿಂದ ಅಂದರೆ ಲೇಟೆಕ್ಸ್ ಕೈಗವಸುಗಳು ತೀವ್ರಗ್ರಾಹಿತೆಯ ಆಘಾತ ಊಂಟಾಗಬಹುದು. ಗ್ವಾಯೂಲಿ ಲೇಟೆಕ್ಸ್ ಕನಿಷ್ಠತಮವಾಗಿ ಅಲರ್ಜಿಕವಾಗಿದೆ ಮತ್ತು ಇದನ್ನು ಅಲರ್ಜಿ ಉಂಟುಮಾಡುವ ಹೀವಿಯಾ ಲೇಟೆಕ್ಸ್‌ಗೆ ಬದಲಿಯಾಗಿ ತರಲು ಸಂಶೋಧನೆ ನಡೆಸಲಾಗುತ್ತಿದೆ.[೧೧] ರಸ ತೆಗೆಯಬಲ್ಲ ಹೆವಿಯಾ ಮರಗಳಿಗೆ ಭಿನ್ನವಾಗಿ, ಈ ಚಿಕ್ಕ ಪೊದೆಗಳನ್ನು ಇಡಿಯಾಗಿ ಕಟಾವು ಮಾಡಬೇಕು ಮತ್ತು ಲೇಟೆಕ್ಸ್ ಅನ್ನು ಪ್ರತಿಯೊಂದು ಕೋಶದಿಂದ ತೆಗೆಯಬೇಕು. ಹೀವಿಯಾ ಲೇಟೆಕ್ಸ್‌ನಲ್ಲಿ ಆಂಟಿಜೆನಿಕ್ ಪ್ರೋಟೀನ್‌ನ ಪ್ರಮಾಣವನ್ನು ಕಡಿಮೆ ಮಾಡಲು ರಾಸಾಯನಿಕ ಪ್ರಕ್ರಿಯೆಗಳನ್ನು ಸಹ ಬಳಸಲಾಗುತ್ತದೆ, ಇದರಿಂದ ಪರ್ಯಾಯ ಹೀವಿಯಾ ಆಧಾರಿತ ವಸ್ತುಗಳು ಸಿಗುತ್ತವೆ ಉದಾ. ವೈಟೆಕ್ಸ್ ನೈಸರ್ಗಿಕ ರಬ್ಬರ್ ಲೇಟೆಕ್ಸ್. ಇವು ಸಂಪೂರ್ಣವಾಗಿ ಕನಿಷ್ಠತಮ ಅಲರ್ಜಿಕವಾಗಿಲ್ಲವಾದರೂ, ಲೇಟೆಕ್ಸ್ ಅಲರ್ಜಿಕಗಳಿಗೆ ಕಡಿಮೆ ಒಡ್ಡಿಕೆಯನ್ನು ನೀಡುತ್ತವೆ.

ಕೆಲವು ಅಲರ್ಜಿಕ ಪ್ರತಿಕ್ರಿಯೆಗಳು ಲೇಟೆಕ್ಸ್‌ನಿಂದ ಇರುವುದಿಲ್ಲ ಬದಲಾಗಿ ಲೇಟೆಕ್ಸ್ ಅನ್ನು ಬಟ್ಟೆಯಾಗಿ, ಕೈಗವಸುಗಳು, ಫೋಮ್ ಮುಂತಾದವುಗಳಾಗಿ ಸಂಸ್ಕರಿಸುವಾಗ ಬಳಸಲಾಗುವ ಇತರ ಸಾಮಗ್ರಿಗಳ ಉಳಿಕೆಯಿಂದಾಗಿ ಉಂಟಾಗಬಹುದಾಗಿದೆ. ಈ ಅಲರ್ಜಿಗಳನ್ನು ಸಾಮಾನ್ಯವಾಗಿ ಬಹು ರಾಸಾಯನಿಕ ಸೂಕ್ಷ್ಮತೆ (ಎಂಸಿಎಸ್) ಎಂದು ಉಲ್ಲೇಖಿಸಲಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1.   Dunstan, Wyndham Rowland (1911). "Rubber" . In Chisholm, Hugh (ed.). Encyclopædia Britannica. Vol. 23 (11th ed.). Cambridge University Press. p. 795. {{cite encyclopedia}}: Cite has empty unknown parameters: |HIDE_PARAMETER= and |separator= (help)
  2. Burns, Bill. "The Gutta Percha Company". History of the Atlantic Cable & Undersea Communications. Retrieved 2009-02-14.
  3. Heinz-Hermann Greve "Rubber, 2. Natural" in Ullmann's Encyclopedia of Industrial Chemistry, 2000, Wiley-VCH, Weinheim. doi:10.1002/14356007.a23_225
  4. ೪.೦ ೪.೧ ಶೀರ್ಷಿಕೆಯಿಲ್ಲದ ದಾಖಲೆ
  5. Jackson, Joe (2008). The Thief at the End of the World. Viking. ISBN 9780670018536.
  6. "Overview of the Causes of Natural Rubber Price Volatility". En.wlxrubber.com. 2010-02-01. Archived from the original on 26 May 2013. Retrieved 2013-03-21.
  7. "Statistical Summary of World Rubber Situation" (PDF). International Rubber Study Group. December 2018. Archived (PDF) from the original on 5 February 2019. Retrieved 5 February 2019.
  8. ಸ್ಲಾಕ್, ಚಾರ್ಲ್ಸ್. "ನೊಬೆಲ್ ಓಬೆಷನ್: ಚಾರ್ಲ್ಸ್ ಗುಡ್‌ಇಯರ್, ಥಾಮಸ್ ಹ್ಯಾನ್‌ಕಾಕ್, ಮತ್ತು ಅತಿದೊಡ್ಡ ಕೈಗಾರಿಕಾ ರಹಸ್ಯದ 19ನೇ ಶತಕ". ಹೈಪರಿಯನ್ 2002. ಐಎಸ್‌ಬಿಎನ್ 0195182014
  9. Schuster, Jens; Lutz, Johannes; Shaik, Yousuf Pasha; Yadavalli, Venkat Reddy (2022-10-01). "Recycling of fluoro-carbon-elastomers – A review". Advanced Industrial and Engineering Polymer Research. Recycling of Rubbers (in ಇಂಗ್ಲಿಷ್). 5 (4): 248–254. doi:10.1016/j.aiepr.2022.08.002. ISSN 2542-5048. S2CID 251658624.
  10. Asaro, Lucia; Gratton, Michel; Seghar, Saïd; Aït Hocine, Nourredine (2018-06-01). "Recycling of rubber wastes by devulcanization". Resources, Conservation and Recycling (in ಇಂಗ್ಲಿಷ್). 133: 250–262. doi:10.1016/j.resconrec.2018.02.016. ISSN 0921-3449. S2CID 115671283.
  11. "New Type of Latex Glove Cleared". Food and Drug Administration.
  • ಬ್ರೈಡ್‌ಸನ್ ಅವರಿಂದರಬ್ಬರಿ ಸಾಮಾಗ್ರಿಗಳು ಮತ್ತು ಅದರ ಅಂಶಗಳು
  • ಮೌರೀಸ್ ಮಾರ್ಟಿನ್ ಅವರಿಂದರಬ್ಬರ್ ತಂತ್ರಜ್ಞಾನ

Hobhouse, Henry (2003, 2005). Seeds of Wealth: Five Plants That Made Men Rich. Shoemaker & Hoard. pp. 125–185. ISBN 1-59376-089-2. {{cite book}}: Check date values in: |date= (help)

ಗ್ರಂಥಸೂಚಿ

ಬದಲಾಯಿಸಿ

ಬಾಹ್ಯ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ರಬ್ಬರು&oldid=1211464" ಇಂದ ಪಡೆಯಲ್ಪಟ್ಟಿದೆ
  NODES
Intern 1
languages 1